ಎರಡನೇ ಸುತ್ತಿನ ಸಭೆ ನಡೆದು ಒಂದು ತಿಂಗಳೊಳಗೆ ‘ಇಂಡಿಯಾ’ ಮೈತ್ರಿಯು 26 ಪಕ್ಷಗಳ ಒಕ್ಕೂಟವಾಗಿ ಬೆಳೆದಿದೆ
ನವದೆಹಲಿ: ವಿಪಕ್ಷಗಳ ರಾಷ್ಟ್ರಮಟ್ಟದ ಒಕ್ಕೂಟವಾದ ‘ಇಂಡಿಯಾ’ದ ಮೂರನೇ ನಿರ್ಣಾಯಕ ಸಭೆ ಮುಂಬೈನಲ್ಲಿ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ನಡೆಯಲಿದೆ. ಈ ವೇಳೆ ವಿರೋಧ ಪಕ್ಷದ ಮೈತ್ರಿಯು ಬೆಳೆಯಲಿದ್ದು, ಸಭೆಯಲ್ಲಿ ಮಹಾರಾಷ್ಟ್ರ ಶೆಟ್ಕರಿ ದಳ ಭಾಗವಹಿಸುತ್ತದೆ ಎಂದು ವಿಪಕ್ಷದ ಮೂಲಗಳು ತಿಳಿಸಿವೆ. ಜೂನ್ 23 ರಂದು ಪಾಟ್ನಾದಲ್ಲಿ ನಡೆದ ಮೊದಲ ಸಭೆಯಲ್ಲಿ 16 ಪಕ್ಷಗಳು ಭಾಗವಹಿಸಿದ್ದವು.
ಜುಲೈ 17 ಮತ್ತು 18 ರಂದು ಬೆಂಗಳೂರಿನಲ್ಲಿ ಎರಡನೇ ಸುತ್ತಿನ ಸಭೆ ನಡೆದು ಒಂದು ತಿಂಗಳೊಳಗೆ ಮೈತ್ರಿಯು 26 ಪಕ್ಷಗಳ ಒಕ್ಕೂಟವಾಗಿ ಬೆಳೆದಿದೆ. ಮೂರನೇ ಸಭೆಯಲ್ಲಿ ಮತ್ತೊಂದು ಪಕ್ಷವು ಸೇರ್ಪಡೆಯಾಗುತ್ತಿದೆ. ಜೊತೆಗೆ, ಈ ಸಭೆಯಲ್ಲಿ ಒಕ್ಕೂಟದ ಉಪಸಮಿತಿ ಮತ್ತು ರಾಜ್ಯ ಮಟ್ಟದಲ್ಲಿ ನಡೆಸುವ ಸಾರ್ವಜನಿಕ ಸಭೆಗಳ ಬಗ್ಗೆಯೂ ನಿರ್ಣಯವನ್ನು ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಎದುರಿಸಲು ಉಪಸಮಿತಿಯ ರಚನೆ ನೆರವಾಗಲಿದೆ ಎಂದು ವಿಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ದೇಶ ಸ್ವತಂತ್ರಗೊಂಡು 76 ವರ್ಷಗಳಾದರೂ ಅಟೆಂಡರ್ ಹುದ್ದೆ ಸಿಗದ ಸಮುದಾಯಗಳಿವೆ: ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್
ಮುಂಬೈ ಸಭೆಯಲ್ಲಿ ಮೈತ್ರಿಕೂಟದ ರಾಷ್ಟ್ರೀಯ ಸಂಚಾಲಕರ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ಆದಾಗ್ಯೂ, ರಾಷ್ಟ್ರೀಯ ಸಂಚಾಲಕ ಹುದ್ದೆಯ ಬದಲು, ಬಹು ಪಕ್ಷಗಳ ಉಪಸಮಿತಿ ರಚಿಸಿದರೆ ಈ ಸ್ಥಾನವನ್ನು ನಿಭಾಯಿಸಲಿದೆ ಎಂದು ಅನೇಕ ನಾಯಕರ ಅಭಿಪ್ರಾಯವಾಗಿದೆ. ಹೀಗಾದರೆ ಕಾರ್ಯಕ್ರಮಗಳನ್ನು ನಿರ್ಧರಿಸಲು ಮತ್ತು ಪಕ್ಷಗಳ ನಡುವೆ ಸಮನ್ವಯ ಸಾಧಿಸುವ ಪ್ರಮುಖ ಪಾತ್ರವನ್ನು ಇದು ವಹಿಸುತ್ತದೆ ಎಂದು ಪ್ರತಿಪಾದಿಸಲಾಗಿದೆ.
ಕಾಂಗ್ರೆಸ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಶಿವಸೇನೆ (ಯುಬಿಟಿ) ನೇತೃತ್ವದ ಮಹಾ ವಿಕಾಸ್ ಅಘಾಡಿ ಆಯೋಜಿಸುತ್ತಿರುವ ಮೂರನೇ ಸಭೆಯಲ್ಲಿ ಎಲ್ಲಾ ಪಕ್ಷಗಳ ಸಾಮಾನ್ಯ ಕಾರ್ಯಕ್ರಮದ ಕರಡು ಮತ್ತು ‘ಇಂಡಿಯಾ’ ಮೈತ್ರಿಯ ಲೋಗೋವನ್ನು ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಕನಿಷ್ಠ 80 ನಾಯಕರು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಭೆಯಲ್ಲಿ ರಾಜಕೀಯ ವಿಷಯಗಳ ಜೊತೆಗೆ ಹಣದುಬ್ಬರ, ನಿರುದ್ಯೋಗದಂತಹ ರಾಷ್ಟ್ರೀಯ ವಿಷಯಗಳ ಕುರಿತು ಬಿಜೆಪಿಯನ್ನು ಗುರಿ ಮಾಡುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ಎದುರಿಸಲು ಮಾರ್ಗಸೂಚಿಯನ್ನು ಸಿದ್ಧಪಡಿಸುವುದು ಮೊದಲ ಆದ್ಯತೆಯಾಗಿರುವುದರಿಂದ ಪ್ರಧಾನಿ ಅಭ್ಯರ್ಥಿ ಮತ್ತು ಸೀಟು ಹಂಚಿಕೆಯ ನಿರ್ಧಾರ ಬಗ್ಗೆಗಿನ ಚರ್ಚೆಗಳು ನಂತರದ ಹಂತದಲ್ಲಿ ಬರಲಿದೆ. ಈ ಹಂತದಲ್ಲಿ ಪ್ರಧಾನ ಮಂತ್ರಿ ಹುದ್ದೆಯ ಕುರಿತು ಚರ್ಚೆ ನಡೆಸುವ ಬದಲು 2024 ರ ಲೋಕಸಭೆಯ ಪ್ರಚಾರಕ್ಕೆ ವೇದಿಕೆ ರಚಿಸುವುದು ಹೆಚ್ಚು ಮುಖ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಡಿಯೊ ನೋಡಿ: ಸೌಜನ್ಯ ಪ್ರಕರಣ : SIT ತನಿಖೆಗೆ ಆಗ್ರಹಿಸಿ ಆಗಸ್ಟ್ 28ಕ್ಕೆ ಚಲೋ ಬೆಳ್ತಂಗಡಿ Janashakthi Media