ದೇಶ ಸ್ವತಂತ್ರಗೊಂಡು 76 ವರ್ಷಗಳಾದರೂ ಅಟೆಂಡರ್ ಹುದ್ದೆ ಸಿಗದ ಸಮುದಾಯಗಳಿವೆ: ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್

ನಾಗಮೋಹನದಾಸ್

ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ 2015ರಲ್ಲಿ ನಡೆಸಲಾದ ಜಾತಿ ಸಮೀಕ್ಷೆಗಳ ಬಗ್ಗೆ ಚರ್ಚೆಗಳು ಜೋರಾಗಿ ಪ್ರಾರಂಭವಾಗಿದ್ದವು. ಅಷ್ಟೆ ಅಲ್ಲದೆ, ಹಲವು ಸಮುದಾಯಗಳು ಸಮೀಕ್ಷೆಯನ್ನು ಸ್ವೀಕರಿಸುವಂತೆ ಮುಖ್ಯಮಂತ್ರಿ ಅವರೊಂದಿ ಮನವಿ ಸಲ್ಲಿಸುತ್ತಲೆ ಬಂದಿವೆ. ಅದಕ್ಕೆ ಮುಖ್ಯಮಂತ್ರಿ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಮೀಕ್ಷೆಯನ್ನು ಸ್ವೀಕರಿಸಿ, ಅದರ ಅಂಕಿಅಂಶಗಳ ಆಧಾರದ ಮೇಲೆ ವಿವಿಧ ಸಮುದಾಯಗಳಿಗೆ ಸೌಲಭ್ಯಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಈ ನಡುವೆ ಬಿಹಾರದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆಯ ಎಲ್ಲಾ ಮಾಹಿತಿಯನ್ನು ಸರ್ಕಾರವು ಸಾರ್ವಜನಿಕಗೊಳಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶುಕ್ರವಾರ ಘೋಷಿಸಿದ್ದಾರೆ.

ಜಾತಿ ಸಮೀಕ್ಷೆಯ ಬಗ್ಗೆ ಹೇಳಿಕೆ ನೀಡಿರುವ ನಿತೀಶ್ ಕುಮಾರ್‌ ಅವರು, “ಬಿಹಾರದ ಜಾತಿ ಸಮೀಕ್ಷೆಯು ದೇಶಕ್ಕೆ ಮಾದರಿಯಾಗಲಿದ್ದು, ದೇಶದ ಇತರ ರಾಜ್ಯಗಳು ಇದನ್ನು ಅನುಸರಿಸುತ್ತವೆ. ಹಿಂದೆ, ರಾಜಸ್ಥಾನ ಮತ್ತು ಕರ್ನಾಟಕ ಸರ್ಕಾರಗಳು ಜಾತಿ ಆಧಾರಿತ ಸಮೀಕ್ಷೆಗಳನ್ನು ನಡೆಸಿದ್ದವು. ಆದರೆ ಅವುಗಳ ಡೇಟಾವನ್ನು ಸಾರ್ವಜನಿಕಗೊಳಿಸಲಿಲ್ಲ” ಎಂದು ನಿತೀಶ್‌ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಮೀಸಲಾತಿಗೆ ಸಂಬಂಧಿಸಿದ ಪ್ರಶ್ನೆ-1 : ನ್ಯಾ.ಹೆಚ್‌.ಎನ್‌. ನಾಗಮೋಹನ್ ದಾಸ್‌ ಅವರ “ಮೀಸಲಾತಿ – ಭ್ರಮೆ ಮತ್ತು ವಾಸ್ತವ” ಆಯ್ದ ಭಾಗ

ಬಿಹಾರದ ಜಾತಿ ಸಮೀಕ್ಷೆಗೆ ಕೇಂದ್ರದ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿ ಸುಪ್ರೀಂಕೋರ್ಟ್‌ನಲ್ಲಿ ಮಧ್ಯಪ್ರವೇಶ ಮಾಡಿದರೂ ಅವರ ಪ್ರಯತ್ನ ಸಫಲವಾಗಿರಲಿಲ್ಲ. ಸುಪ್ರಿಂಕೋರ್ಟ್‌ ಕೂಡಾ ಸಮೀಕ್ಷೆಗೆ ಗ್ರೀನ್ ಸಿಗ್ನಲ್ ನೀಡಿದ್ದರಿಂದ ಬಿಹಾರ ಸರ್ಕಾರ ಹೊನೆಯ ಹಂತರ ಸಮೀಕ್ಷೆಯನ್ನು ಮುಗಿಸಿದೆ.

ಜಾತಿ ಸಮೀಕ್ಷೆ ಎಂದರೇನು? ಜಾತಿಗಣತಿಗೂ ಜಾತಿ ಸಮೀಕ್ಷೆಗೂ ವ್ಯತ್ಯಾಸವೇನು? ಈ ರೀತಿಯ ಸಮೀಕ್ಷೆಗಳಿಂದ ಪ್ರಯೋಜನಗಳೇನು? ಇದಕ್ಕೆ ವಿರೋಧ ಯಾಕೆ? ಇದರಿಂದ ಯಾರಿ ಲಾಭವಾಗುತ್ತದೆ? ಯಾಕಾಗಿ ಈ ಸಮೀಕ್ಷೆಗಳನ್ನು ಮಾಡಲಾಗುತ್ತದೆ? ಎಂಬ ಎಲ್ಲಾ ಪ್ರಶ್ನೆಗಳಿಗೆ ಸಂವಿದಾನ ತಜ್ಞರಾಗಿರುವ ಹೈಕೋರ್ಟ್‌ನ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರು ಉತ್ತರಿಸಿದ್ದಾರೆ.

  • ಜಾತಿಸಮೀಕ್ಷೆ ಹಾಗೂ ಗಣತಿಗೂಬೇರೆ ಬೇರೆಯೆ? ಜಾತಿ ಸಮೀಕ್ಷೆಗಳೆಂದರೇನು?

ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್: ಜಾತಿ ಸಮೀಕ್ಷೆಗಳು ಮತ್ತು ಜಾತಿಗಣತಿ ಎರಡೂ ಬೇರೆ ಬೇರೆ. ಜಾತಿಗಣತಿ ಸೇರಿದಂತೆ ಜನಗಣತಿ ಮಾಡಲು ಕೇಂದ್ರ ಸರ್ಕಾರಕ್ಕೆ ಮಾತ್ರವೆ ಅಧಿಕಾರವಿದೆ. ರಾಜ್ಯ ಸರ್ಕಾರಕ್ಕೆ ಈ ಅಧಿಕಾರ ಇಲ್ಲ. ಆದರೆ ಕೆಲವು ರಾಜ್ಯಗಳು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಗಳು ನಡೆಸಿವೆ ಇದನ್ನೆ ಜಾತಿ ಸಮೀಕ್ಷೆಗಳು ಎಂದು ಕರೆಯುತ್ತಾರೆ. ಕೇರಳದಲ್ಲಿ ಇದನ್ನು ಬಹಳ ಹಿಂದೆಯೆ ಮಾಡಲಾಗಿತ್ತು. ಕರ್ನಾಟಕದಲ್ಲಿ ಹಿಂದುಳಿದ ವರ್ಗ ಆಯೋಗಕ್ಕೆ ಈ ಜವಾಬ್ದಾರಿ ವಹಿಸಿತ್ತು. ತನ್ನ ಜವಾಬ್ದಾರಿಯನ್ನು ಆಯೋಗ ಮಾಡಿದೆಯಾದರೂ, ಸರ್ಕಾರ ಈ ವರದಿಯನ್ನು ಇನ್ನೂ ಸ್ವೀಕರಿಸಿಲ್ಲ. ಇದೀಗ ಸಿದ್ದರಾಮಯ್ಯ ಸರ್ಕಾರ ವರದಿಯನ್ನು ಸ್ವೀಕರಿಸುತ್ತೇವೆ ಎಂದು ಈಗ ಹೇಳುತ್ತಿದೆ.

  • ಬಿಹಾರದಲ್ಲಿ ನಡೆಯುತ್ತಿರುವ ಸಮೀಕ್ಷೆ ಮತ್ತು ಕರ್ನಾಟಕದ ಸಮೀಕ್ಷೆಗಳು ಒಂದೇ ರೀತಿಯದ್ದೆ? ಅದು ಜಾತಿಗಣತಿಯೆ ಅಥವಾ ಜಾತಿ ಸಮೀಕ್ಷೆಯೆ?

ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್: ಬಿಹಾರದಲ್ಲಿ ನಡೆಯುತ್ತಿರುವ ಮತ್ತು ಕರ್ನಾಟಕದಲ್ಲಿ ಈಗಾಗಲೆ ನಡೆದ ಸಮೀಕ್ಷೆ ಎರಡು ಒಂದೇ ರೀತಿಯದ್ದಾಗಿದೆ. ಇದ್ಯಾವುದೂ ಜಾತಿಗಣತಿಯೂ ಅಲ್ಲ, ಜನಗಣತಿಯೂ ಅಲ್ಲ. ಸೆನ್ಸಸ್ (ಗಣತಿ) ಬೇರೆ, ಸರ್ವೇ (ಸಮೀಕ್ಷೆ) ಬೇರೆಯಾಗಿದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರವು ಹಿಂದುಳಿದ ವರ್ಗಕ್ಕೆ ಸಮೀಕ್ಷೆ ನಡೆಸುವಂತೆ ಕೇಳಿಕೊಂಡಿತ್ತು. ಆದರೆ ಈ ಸಮೀಕ್ಷೆಯನ್ನು ರಾಜಕೀಯ ಒತ್ತಡದ ಕಾರಣಕ್ಕೆ ಸ್ವೀಕಾರ ಮಾಡಿಲ್ಲ. ಇದೀಗ ಸಿದ್ದರಾಮಯ್ಯ ಸರ್ಕಾರ ವರದಿಯನ್ನು ಸ್ವೀಕರಿಸುತ್ತೇವೆ ಎಂದು ಹೇಳುತ್ತಿದೆ. ನವೆಂಬರ್ ಒಳಗಡೆ ಈ ಸಮೀಕ್ಷೆಯನ್ನು ಸರ್ಕಾರಕ್ಕೆ ಮಂಡಿಸುತ್ತೇವೆ ಎಂದು ಹೇಳಿದ್ದಾರೆ.

ಕರ್ನಾಟಕದ ಮಾದರಿಯಲ್ಲೆ ಬಿಹಾರದಲ್ಲೂ ಸಮೀಕ್ಷೆ ಮಾಡಬೇಕು ಎಂದು ಸರ್ಕಾರ ಹೊರಟಿದೆ. ಅದಕ್ಕಾಗಿ 500 ಕೋಟಿ ಖರ್ಚು ಕೂಡಾ ಮಾಡಿದೆ. ಅದರ ವಿರುದ್ಧ ಅಲ್ಲಿ ಕೂಡಾ ಅನೇಕ ಒತ್ತಡಗಳು ಬಂದಿವೆ. ನಂತರ ಅದು ನ್ಯಾಯಾಲಯದ ಮೆಟ್ಟಿಲು ಕೂಡಾ ಏರಿದೆ. ಸುಪ್ರೀಂ ಕೋರ್ಟ್‌ ಈ ಸಮೀಕ್ಷೆ ನಡೆಸಬಹುದು ಎಂದು ಹೇಳಿದೆ.

ಇದನ್ನೂ ಓದಿ: ʻಒಳ ಮೀಸಲಾತಿʼ ಮತ್ತು ದಲಿತರು: ಸಾಧಕ ಬಾಧಕಗಳು

  • ಜಾತಿ ಸಮೀಕ್ಷೆ ಮಾಡುವ ಉದ್ದೇಶ ಮತ್ತು ಪ್ರಯೋಜನಗಳೇನು?

ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್: ಇಂತಹ ಸಮೀಕ್ಷೆಗಳ ಅವಶ್ಯಕತೆಯಿದೆ ತುಂಬಾ ಇವೆ. ಇದರಿಂದಾಗಿ ನಮ್ಮ ಸಮಾಜದ ಸ್ಥಿತಿಗತಿಗಳ ಮಾಹಿತಿ ನಮಗೆ ಸಿಗುತ್ತದೆ. ದೇಶ ಸ್ವತಂತ್ರಗೊಂಡು ಇಷ್ಟು ವರ್ಷಗಳಾದರೂ ಯಾವ ಸಮುದಾಯದಲ್ಲಿ ಎಷ್ಟು ಅಕ್ಷರಸ್ಥರಿದ್ದಾರೆ, ಅವರ ಮಾನವಿಕ ಅಭಿವೃದ್ಧಿ ಹೇಗಿದೆ, ರಾಜಕೀಯ ಪ್ರಾತಿನಿಧ್ಯ ಎಷ್ಟಿದೆ, ಆಡಳಿತದಲ್ಲಿ ಅವರ ಭಾಗವಹಿಸುವಿಕೆ ಹೇಗಿದೆ ಎಂಬ ಸಮಗ್ರ ಮಾಹಿತಿ ದೊರೆಯುತ್ತದೆ. ಈ ಮಾಹಿತಿ ಆಧಾರದ ಮೇಲೆ ಮುಂದೆ ಏನು ಮಾಡಬೇಕು ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿದೆ.

ಉದಾಹರಣೆಗೆ ಪಾರ್ಲಿಮೆಂಟ್, ಅಸೆಂಬ್ಲಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಎಸ್ಸಿ ಎಸ್‌ಟಿ ಸಮುದಾಯಗಳಿಗೆ ಮೀಸಲಾಯಿತಿದೆ. ಇಷ್ಟೆಲ್ಲಾ ಇದ್ದರೂ ಈ ಸಮುದಾಯಗಳ ಒಳಗೆ ಇರುವ ಸಣ್ಣ ಸಮುದಾಯಗಳಿಗೆ ಈವರೆಗೆ ಒಂದು ಗ್ರಾಮ ಪಂಚಾಯತ್‌ನ ಸದಸ್ಯರಾಗಲೂ ಸಾಧ್ಯವಾಗಿಲ್ಲ. ಅಲ್ಲಿನ ಬಲಿಷ್ಠರೆ ಅದನ್ನು ಕಬಳಿಸುತ್ತಿದ್ದಾರೆ. ಈ ಸಣ್ಣ ಸಮುದಾಯಗಳಿಗೆ ಯಾವ ರೀತಿಯಲ್ಲಿ ಪ್ರಾತಿನಿಧ್ಯ ನೀಡಬಹುದು ಎಂಬ ತೀರ್ಮಾನಕ್ಕೆ ಬರಲು ಈ ರೀತಿಯ ಸಮೀಕ್ಷೆಗಳು ಸಹಾಯ ಮಾಡುತ್ತಿದೆ.

ಈ ಸಮೀಕ್ಷೆಗಳು ಕರಾರುಕ್ಕಾಗಿ ಮತ್ತು ವೈಜ್ಞಾನಿಕವಾಗಿರಬೇಕು. ಅವೈಜ್ಞಾನಿಕ ಮತ್ತು ಕರಾರುವಕ್ಕಾಗಿ ಇಲ್ಲದೆ ಸಮೀಕ್ಷೆಗಳು ನಡೆಸಿದರೆ ಅದರಿಂದ ಪ್ರಯೋಜನ ಸಾಧ್ಯವಿಲ್ಲ. ಕರಾರುಕ್ಕಾಗಿ ಮತ್ತು ವೈಜ್ಞಾನಿಕವಾಗಿ ನಡೆಸಿದ ಸಮೀಕ್ಷೆಗಳನ್ನು ಸರ್ಕಾರ ಪಡೆದರೆ ಅದರ ಆಧಾರದಲ್ಲಿ ಸರ್ಕಾರಗಳು ಯಾವ ಸಮುದಾಯ ಅಭಿವೃದ್ಧಿಯಾಗಿವೆ ಹಾಗೂ ಯಾವ ಸಮುದಾಯ ಅಭಿವೃದ್ಧಿ ಆಗಿಲ್ಲ ಎಂಬುವುದು ತಿಳಿಯುತ್ತದೆ. ಇದರ ಆಧಾರದಲ್ಲಿ ಸರ್ಕಾರಗಳು  ಅಭಿವೃದ್ಧಿ ಹೊಂದದ ಸಮುದಾಯಗಳಿಗೆ ಕಾರ್ಯಕ್ರಮ ರೂಪಿಸಬಹುದಾಗಿದೆ.

ಇಂತಹ ವಿಚಾರಗಳಿಗೆ ಈ ಸಮೀಕ್ಷೆಗಳು ಸರ್ಕಾರಗಳಿಗೆ ಸಹಾಯ ಮಾಡುತ್ತವೆ. ಹೀಗಾಗಿ ಕರ್ನಾಟಕ ಸರ್ಕಾರ ಹಿಂದುಳಿದ ಆಯೋಗದಿಂದ ವರದಿ ಪಡೆದು, ಅದು ವೈಜ್ಞಾನಿಕವಾಗಿ ನಡೆಸಲಾಗಿದೆಯೆ ಎಂಬ ಬಗ್ಗೆ ಪರೀಕ್ಷೆ ನಡೆಸಿ ಸರಿಯಾಗಿದ್ದರೆ ಅದನ್ನು ಸ್ವೀಕಾರ ಮಾಡಿ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ.

ಇದನ್ನೂ ಓದಿ: ದಲಿತ ಸಾಂಸ್ಕೃತಿಕ ಪ್ರತಿರೋಧ; ಜನರ ಸಮಸ್ಯೆಗಳಿಗೆ ಜನಪರ ಹೋರಾಟಗಳೇ ಮದ್ದು: ನ್ಯಾ. ನಾಗಮೋಹನದಾಸ್

  • ಜನಗಣತಿ ಜೊತೆಗೆ ಜಾತಿಗಣತಿ ಮಾಡಬಹುದಲ್ಲವೆ? ಜಾತಿಗಣತಿ ಮಾಡುವುದಕ್ಕೆ ಕೇಂದ್ರ ಹಿಂದೇಟು ಆಗುತ್ತಿದೆಯೆ?

ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್: ಬ್ರಿಟೀಷರ ಕಾಲದಿಂದಲೂ 10 ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುತ್ತಿರುವ ಜನಗಣತಿಯನ್ನು 2021ರಲ್ಲಿ ಕೇಂದ್ರ ಸರ್ಕಾರ ನಡೆಸಬೇಕಿತ್ತು. ಆದರೆ ಕೊರೊನಾ ಕಾರಣಕ್ಕೆ ಜನಗಣತಿ ನಡೆದಿರಲಿಲ್ಲ. ಈ ಬಾರಿ ಜನಗಣತಿ ಜೊತೆಗೆ ಜಾತಿಗಣತಿ ಕೂಡಾ ನಡೆಸಿ ಎಂಬ ಒತ್ತಾಯ ಕೇಳಿಬಂದಿದೆ. ಈಗಾಗಲೆ ತಡವಾಗಿದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಜಾತಿಗಣತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಜಾತಿಗಣತಿಯ ಅವಶ್ಯಕತೆಯಿಲ್ಲ ಎಂದು ಕೇಂದ್ರ ಭಾವಿಸಿರಬಹುದು. ಆದರೆ ಕೇಂದ್ರದ ಈ ನಡೆ ಸರಿಯಾದ ನಡೆಯಲ್ಲ ಮತ್ತು ಸ್ವೀಕಾರ್ಹವಲ್ಲ.

ಬ್ರಿಟೀಷರ ಕಾಲದಲ್ಲಿ ಗಣತಿ ಪ್ರಾರಂಭವಾದಗಿನಿಂದ 1931ರವರೆಗೆ ಜನಗಣತಿ ಮತ್ತು ಜಾತಿ ಗಣತಿ ನಡೆದಿತ್ತು. ಆದರೆ ಇದರ ನಂತರ ಬರಿ ಜನಗಣತಿ ನಡೆಯಿತೆ ಹೊರತು ಜಾತಿಗಣತಿ ನಡೆದಿಲ್ಲ. ಸ್ವಾತಂತ್ಯ್ರ ಬಂದ ನಂತರ ಜನಗಣತಿಯನ್ನಷ್ಟೆ ಮುಂದುವರೆಸಿದ್ದರೆ ವಿನಃ, ಜಾತಿಗಣತಿ ನಡೆಸಿಲ್ಲ. ಆದರೆ ಎಸ್ಸಿ ಎಸ್ಟಿ ಸಮುದಾಯಗಳನ್ನಷ್ಟೆ ಜಾತಿಗಣತಿ ನಡೆಸಲಾಗಿತ್ತು. ಉಳಿದ ಸಮುದಾಯದ ಜಾತಿಗಣತಿ ನಡೆಸಿಲ್ಲ. ಈಗಲೂ ಜಾತಿಗಣತಿ ನಡೆಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡವಿದೆ, ಆದರೆ ಅವರು ಮನಸ್ಸು ಮಾಡುತ್ತಿಲ್ಲ.

  • ಜಾತಿಗಣತಿಗೆ ವಿರೋಧ ಯಾಕೆ? ಇದು ಬೇರೆ ಸಮುದಾಯವನ್ನು ಗುರಿ ಮಾಡುತ್ತದೆಯೆ?

ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್: ನನ್ನ ಅಭಿಪ್ರಾಯ ಹೇಳಬೇಕೆಂದರೆ ಜಾತಿಗಣತಿ ಹಾಗೂ ಜನಗಣತಿ ನಡೆಯಬೇಕಿದೆ. ಇಲ್ಲಿ ಯಾರೂ ಭಯಪಡಬೇಕಾದ ಅವಶ್ಯಕತೆಯಿಲ್ಲ ಹಾಗೂ ಇದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತದೆ ಎಂದು ನನಗೆ ಅನಿಸುವುದಿಲ್ಲ. ಅದರ ಬದಲಾಗಿ ಸಮಾಜದ ವಾಸ್ತವ ಸತ್ಯ ಏನೆಂದು ನಮಗೆ ಗೊತ್ತಾಗುತ್ತದೆ. ದೇಶ ಸ್ವತಂತ್ರಗೊಂಡು 76 ವರ್ಷಗಳಾದರೂ ಹಲವು ಸಮುದಾಯಗಳಿಗೆ ಕನಿಷ್ಠ ಒಂದು ಅಟೆಂಡರ್ ಹುದ್ದೆ, ಪಂಚಾಯತ್ ಸದಸ್ಯರಾಗಲು ಸಾಧ್ಯವಾಗಿಲ್ಲ. ಕಡಿಮೆ ಜನಸಂಖ್ಯೆಯ ಕಾರಣಕ್ಕೆ ಈ ಸಮುದಾಯಗಳಿಗೆ ಶತಮಾನಗಳು ಕಳೆದರೂ ಪ್ರಾತಿನಿಧ್ಯ ಸಿಗಲು ಸಾಧ್ಯವಿಲ್ಲ. ನಾವು ಅವರ ಹಿತವನ್ನೂ ಕಾಪಾಡಬೇಕಲ್ಲವೆ?

ಇದನ್ನೂ ಓದಿ: ಮೀಸಲಾತಿ ಪ್ರಮಾಣದ ಹೆಚ್ಚಳ: ಮುಂದಿನ ಪ್ರಶ್ನೆಗಳು

  • ಮೀಸಲಾತಿಯ ಮರು ಹಂಚಿಕೆ ಆಗಬೇಕಿದೆಯೆ? ಒಳ ಮೀಸಲಾತಿ ಸಾಧ್ಯತೆ ಸಾಧ್ಯವೆ? 

ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್: ರಾಜ್ಯದಲ್ಲಿ ಮೀಸಲಾತಿಗೆ 100 ವರ್ಷಗಳ ಇತಿಹಾಸವಿದೆ. ಆದರೆ ಮೀಸಲಾತಿಯಿದ್ದರೂ ಪ್ರಾತಿನಿಧ್ಯ ಸಿಗದ ಸಮುದಾಯಗಳಿಗೆ ಸರ್ಕಾರ ಏನಾದರೂ ಮಾಡಬೇಕಲ್ಲವೆ. ಇರುವ ಮೀಸಲಾತಿಯಲ್ಲಿ ಈ ಅವಕಾಶ ವಂಚಿತ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗದೆ ಒಳಮೀಸಲಾತಿ ಮೂಲಕ ಅವರಿಗೆ ಪ್ರಾತಿನಿಧ್ಯ ನೀಡಬೇಕಲ್ಲವೆ?. ಈ ಸಮಸ್ಯೆಯನ್ನು ನಾವಿಂದು ಚರ್ಚೆ ಮಾಡದೆ ಇದ್ದರೆ ಹೇಗೆ? ನಾನು ನೀಡಿದ ವರದಿಯಲ್ಲೂ ಒಳಮೀಸಲಾತಿ ನೀಡುವ ಬಗ್ಗೆ ಶಿಫಾರಸ್ಸು ಮಾಡಿದ್ದೆ. ಜೊತೆಗೆ ಅದನ್ನು ತರಾತುರಿಯಲ್ಲಿ ಮಾಡುವುದು ಬೇಕಿಲ್ಲ, ಅದಕ್ಕಾಗಿ ಒಂದು ಸಮಿತಿ ಅಥವಾ ಆಯೋಗವನ್ನು ಮಾಡಿ ದತ್ತಾಂಶ ಸಂಗ್ರಹ ಮಾಡಬೇಕಿದ್ದು ಈ ದತ್ತಾಂಶ ಇಟ್ಟುಕೊಂಡು ವೈಜ್ಞಾನಿಕ ವರ್ಗೀಕರಣ ಮಾಡಬೇಕಿದೆ ಎಂದು ಹೇಳಿದ್ದೆ.

ಎಸ್‌ಸ್ಸಿ ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡುವ ಆಯೋಗವನ್ನು ಮುನ್ನಡೆಸಿದೆ. ಈ ಆಯೋಗದ ಮೂಲಕ ಎಸ್ಸಿಗಳಿಗೆ 15% ಇದ್ದ ಮೀಸಲಾತಿಯನ್ನು 17% ಹೆಚ್ಚಳ ಮಾಡಿ ಎಂದು ಹಾಗೂ ಎಸ್‌ಟಿಗಳಿಗೆ 3% ಇದ್ದ ಮೀಸಲಾತಿಯನ್ನು 7% ಹೆಚ್ಚಳ ಮಾಡಿ ಎಂದು ಶಿಫಾರಸ್ಸು ಮಾಡಿದ್ದೆ. ನನ್ನ ಈ ವರದಿಯನ್ನು ಕರ್ನಾಟಕದ ಸರ್ವ ಪಕ್ಷದ ಸಭೆಯಲ್ಲಿ ಹಾಗೂ ಸದನದಲ್ಲಿ ಮಸೂದೆಯಾಗಿ ಅದು ಅಂಗೀಕಾರವಾಯಿತು. ಅದು ಈಗ ಅನುಷ್ಠಾನದಲ್ಲಿದೆ.

ಇಷ್ಟೆ ಅಲ್ಲದೆ ಆದ್ಯತೆಯ ಮೇಲೆ ಮೀಸಲಾತಿ ನೀಡಬೇಕು ಎಂದು ಕೂಡಾ ಹೇಳಿದ್ದೆ. ಉದಾಹರಣೆಗೆ; ಸಮುದಾಯವೊಂದು 75 ವರ್ಷಗಳಿಂದ ಮೀಸಲಾತಿ ಅನುಭವಿಸಿಕೊಂಡು ಬಂದಿದ್ದರೆ ಮತ್ತು ಈ ಜಾತಿ 2% ಇದ್ದರೆ ಅವರಿಗೆ 1.75% ಮೀಸಲಾತಿ ನೀಡಬೇಕು ಹಾಗೂ 75 ವರ್ಷಗಳಲ್ಲಿ ಯಾವುದೆ ಮೀಸಲಾತಿ ಪಡೆಯದ ಸಮುದಾಯವೊಂದರ ಜನಸಂಖ್ಯೆ 1% ಇದ್ದರೂ ಅವರಿಗೆ 1.25 ಮೀಸಲಾತಿ ನೀಡಬೇಕು. ಇದನ್ನು ನಾನು ಆದ್ಯತೆಯ ಮೇಲೆ ಮೀಸಲಾತಿ ನೀಡಿ ಎಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೆ. ಸರ್ಕಾರ ಇದನ್ನು ಒಪ್ಪಿಕೊಂಡಿದೆ ಆದರೆ ಜಾರಿ ಮಾಡಬೇಕಷ್ಟೆ.

ಬಿಹಾರ ಸರ್ಕಾರ ಜಾತಿ ಸಮೀಕ್ಷೆಯನ್ನು ಸಾರ್ವಜನಿಕಗೊಳಿಸುತ್ತಿದೆ ಹಾಗೂ ಐತಿಹಾಸಿಕ ಎಂದು ಕರೆದಿದೆ, ನಿಮ್ಮ ಅಭಿಪ್ರಾಯವೇನು?

ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್: ಸಾರ್ವಜನಿಕರಿಗೆ ಲಭ್ಯವಾಗುವುದು ಎಂದರೆ ಸರ್ಕಾರ ವರದಿಯನ್ನು ಸ್ವೀಕರಿಸುವುದಾಗಿದೆ. ಬಿಹಾರದ ಮಟ್ಟಿಗೆ ಇದೊಂದು ಐತಿಹಾಸಿಕ ನಿರ್ಧಾರವಾಗಲಿದೆ. ಆದರೆ ಕೇರಳದಲ್ಲಿ ಈಗಾಗಲೆ ಈ ರೀತಿಯ ಸಮೀಕ್ಷೆಗಳು ನಡೆದಿವೆ. ಕರ್ನಾಟಕದಲ್ಲಿ ಸಮೀಕ್ಷೆ ನಡೆದರೂ ಸರ್ಕಾರ ಅದನ್ನು ಪಡೆಯದ ಕಾರಣಕ್ಕೆ ಅದು ಬೆಳಕಿಗೆ ಬಂದಿಲ್ಲ. ಬಿಹಾರಕ್ಕೆ ಇದು ಐತಿಹಾಸಿಕವಾಗಲಿದೆಯೆ ಹೊರತು ರಾಷ್ಟ್ರಮಟ್ಟದಲ್ಲಿ ಇದೇನು ಹೊಸ ವಿಚಾರವಲ್ಲ. ಮೊದಲು ಸರ್ಕಾರ ಅದನ್ನು ಪಡೆದು ಸಮೀಕ್ಷೆ ವೈಜ್ಞಾನಿಕವಾಗಿ ನಡೆದಿದೆಯೆ ಎಂದು ಪರೀಕ್ಷೆ ಮಾಡಿ ಅದನ್ನು ಒಪ್ಪಬೇಕಿದೆ. ನಂತರ ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಿ ಅದನ್ನು ಗಜೆಟ್ ನೋಟಿಫಿಕೇಷನ್ ಮಾಡಬೇಕು. ಅದರ ಆಧಾರ ಮೇಲೆ ಕಲ್ಯಾಣ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಬೇಕಿದೆ.

ವಿಡಿಯೊ ನೋಡಿ: ಪರ್ಯಾಯ ಕೃಷಿ ಧೋರಣೆಗಳು:ಭೂಮಿ ಹಕ್ಕು ನಿಜವಾದ ಸ್ವಾತಂತ್ರ್ಯ – ಯು. ಬಸವರಾಜ Janashakthi Media

Donate Janashakthi Media

Leave a Reply

Your email address will not be published. Required fields are marked *