ಪ್ರೀತಿಯ ಕನ್ನಡದ ಮೇಷ್ಟ್ರು, ಹಿರಿಯ ವಿದ್ವಾಂಸರಾದ ಪ್ರೊ. ಕೆ.ವಿ. ನಾರಾಯಣ ಅವರು ನಮ್ಮನ್ನೆಲ್ಲ ಅಗಲಿದ್ದಾರೆ ಎಂಬ ಸುದ್ದಿ ಇಂದು ಬೆಳಗಿನ ಜಾವ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಾಗ ಮನಸ್ಸು ತೀವ್ರ ದುಃಖಕ್ಕೆ ಒಳಗಾಯಿತು. ಆತ್ಮೀಯ ಗೆಳೆಯರ ದೂರವಾಣಿ ಕರೆಗಳ ಮೂಲಕವೂ ಈ ನೋವಿನ ಸುದ್ದಿ ದೃಢಪಟ್ಟಾಗ, ಮನಸ್ಸಿನೊಳಗೆ ಮೂಡಿದ ದುಃಖವನ್ನು ಮಾತುಗಳಲ್ಲಿ ವ್ಯಕ್ತಪಡಿಸುವುದು ಕಷ್ಟವಾಯಿತು. ಆತ್ಮೀಯರ ನೋವಿನ ಮಾತುಗಳಿಗೆ ನನ್ನ ನೋವೂ ಸೇರಿಕೊಂಡು, ಕೊನೆಗೆ ಕಣ್ಣೀರಿನ ಮೌನವಾಗಿ ಉಳಿಯಿತು. ಜ್ಞಾನ
ಎನ್. ಚಿನ್ನಸ್ವಾಮಿ ಸೋಸಲೆ
ಪ್ರೊ. ಕೆ.ವಿ. ನಾರಾಯಣ ಅವರು ನನ್ನ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪ್ಲಾಪುರದವರು ಎಂಬುದು ನನಗೆ ವಿಶೇಷ ಆತ್ಮೀಯತೆಯ ಸಂಗತಿ. ವಿದ್ವತ್ಲೋಕದಲ್ಲಿ ‘ಕೆ.ವಿ.ಎನ್.’ ಎಂದೇ ಚಿರಪರಿಚಿತರಾಗಿದ್ದ ಅವರು ನಮ್ಮೆಲ್ಲರ ಪಾಲಿಗೆ ಪ್ರೀತಿಯ ಮೇಷ್ಟ್ರು. ಜ್ಞಾನ, ಪಾಂಡಿತ್ಯ, ಭಾಷೆಯ ಮೇಲಿನ ಹಿಡಿತ, ವೈಚಾರಿಕ ಸ್ಪಷ್ಟತೆ ಮತ್ತು ಸರಳ ವ್ಯಕ್ತಿತ್ವದ ಮೂಲಕ ಅನೇಕ ತಲೆಮಾರುಗಳ ಮೇಲೆ ಪ್ರಭಾವ ಬೀರಿದ ಮಹಾನ್ ಚೇತನ.
1990ರಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಆಶಯಗಳನ್ನು ಸಾಕಾರಗೊಳಿಸುವ ಉದ್ದೇಶದಿಂದ ಸ್ಥಾಪನೆಯಾದ ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಬೆಳವಣಿಗೆಯಲ್ಲಿ ಪ್ರೊ. ಚಂದ್ರಶೇಖರ ಕಂಬಾರರಷ್ಟೇ ಮಹತ್ವದ ಪಾತ್ರ ವಹಿಸಿದವರು ಪ್ರೊ. ಕೆ.ವಿ. ನಾರಾಯಣ. ಕನ್ನಡ ವಿಶ್ವವಿದ್ಯಾಲಯದ ಪರಿಕಲ್ಪನೆ, ಅದರ ಶೈಕ್ಷಣಿಕ ಸ್ವರೂಪ, ಆಡಳಿತಾತ್ಮಕ ವ್ಯವಸ್ಥೆ ಮತ್ತು ಬೌದ್ಧಿಕ ಬೆಳವಣಿಗೆಯ ಹಿಂದೆ ಇವರಂತಹ ಹಿರಿಯ ವಿದ್ವಾಂಸರ ದೂರದೃಷ್ಟಿ ಹಾಗೂ ಪರಿಶ್ರಮವಿದೆ. ಅವರು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆಯೇ ಇಂದು ಕನ್ನಡ ವಿಶ್ವವಿದ್ಯಾಲಯ ತನ್ನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಸ್ತಿತ್ವವನ್ನು ಗಟ್ಟಿಯಾಗಿ ಉಳಿಸಿಕೊಂಡಿದೆ.
1997ರಲ್ಲಿ ನಾನು ಕನ್ನಡ ವಿಶ್ವವಿದ್ಯಾಲಯಕ್ಕೆ ಅಧ್ಯಾಪಕನಾಗಿ ಸೇರಿದಾಗಿನಿಂದ ಪ್ರೊ. ಕೆ.ವಿ. ನಾರಾಯಣ ಅವರ ಮಾರ್ಗದರ್ಶನ ಮತ್ತು ಒಡನಾಟ ನನಗೆ ದೊರೆಯಿತು. ನನಗೆ ಹಾಗೂ ನನ್ನ ಕೆಲವು ಸಹೋದ್ಯೋಗಿಗಳಿಗೆ ಅವರು ಜ್ಞಾನದ ದಾರಿಯನ್ನು ತೋರಿದ ಹಿರಿಯ ಗುರುಗಳು. ಅವರ ಮಾತಿನ ನಿಖರತೆ, ವಿಚಾರಗಳ ಸ್ಪಷ್ಟತೆ, ವಿಶ್ಲೇಷಣೆಯ ಕ್ರಮಬದ್ಧತೆ ಮತ್ತು ತಾರ್ಕಿಕ ನಿರೂಪಣೆ ನಮಗೆಲ್ಲ ಆದರ್ಶವಾಗಿದ್ದವು.
ಕನ್ನಡ ವಿಶ್ವವಿದ್ಯಾಲಯದಲ್ಲಿ ದೀರ್ಘಕಾಲ ಕುಲಸಚಿವರಾಗಿ, ಅಧ್ಯಯನಾಂಗದ ನಿರ್ದೇಶಕರಾಗಿ ಹಾಗೂ ನಾಲ್ಕು ಬಾರಿ ಹಂಗಾಮಿ ಕುಲಪತಿಗಳಾಗಿ ಅವರು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ವಿಶ್ವವಿದ್ಯಾಲಯದ ಆಡಳಿತಾತ್ಮಕ ವ್ಯವಸ್ಥೆ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಅವರು ನೀಡಿದ ಕೊಡುಗೆ ಅನನ್ಯವಾದುದು. ಪ್ರೊ. ಚಂದ್ರಶೇಖರ ಕಂಬಾರರು ಹಾಗೂ ಪ್ರೊ. ಕೆ.ವಿ. ನಾರಾಯಣ ಅವರು ರೂಪಿಸಿದ ಅಧಿನಿಯಮಗಳು ಮತ್ತು ಪರಿನಿಯಮಗಳು ವಿಶ್ವವಿದ್ಯಾಲಯದ ಸಾಂಸ್ಥಿಕ ಗಟ್ಟಿತನಕ್ಕೆ ಪ್ರಮುಖ ಆಧಾರಗಳಾಗಿವೆ. ಹೀಗಾಗಿ ಕನ್ನಡ ವಿಶ್ವವಿದ್ಯಾಲಯದ ಇತಿಹಾಸವನ್ನು ದಾಖಲಿಸುವಾಗ ಕೆ.ವಿ. ನಾರಾಯಣ ಅವರ ಹೆಸರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಮೇಷ್ಟ್ರು ಕೇವಲ ಆಡಳಿತಗಾರರಾಗಿರಲಿಲ್ಲ. ಅವರು ಅತ್ಯುತ್ತಮ ಸಾಹಿತಿ, ಭಾಷಾವಿಜ್ಞಾನಿ, ವಿಮರ್ಶಕ ಮತ್ತು ವೈಚಾರಿಕ ಚಿಂತಕರಾಗಿದ್ದರು. ವೈಜ್ಞಾನಿಕ ಮನೋಭಾವದ ವಿಶ್ಲೇಷಣೆ, ವಸ್ತುನಿಷ್ಠ ದೃಷ್ಟಿಕೋನ ಹಾಗೂ ಖಚಿತವಾದ ತರ್ಕಬದ್ಧ ಮಾತುಗಳು ಅವರ ವ್ಯಕ್ತಿತ್ವದ ವಿಶೇಷತೆಗಳಾಗಿದ್ದವು. ಅವರ ಸಾಹಿತ್ಯವನ್ನು ಓದುತ್ತಾ, ಅವರ ಮಾತುಗಳನ್ನು ಆಲಿಸುತ್ತಾ ನಮ್ಮ ಚಿಂತನೆ ಮತ್ತು ಬರವಣಿಗೆಯನ್ನು ಪರಿಷ್ಕರಿಸಿಕೊಂಡವರು ನಾವು.
ನಾನು ಚರಿತ್ರೆಯ ವಿದ್ಯಾರ್ಥಿ. ಸಾಹಿತ್ಯದ ಮೂಲಕ ಚರಿತ್ರೆಯನ್ನು ನೋಡುವ, ಗ್ರಹಿಸುವ ಮತ್ತು ವಿಶ್ಲೇಷಿಸುವ ವಸ್ತುನಿಷ್ಠ ವಿಧಾನವನ್ನು ನನಗೆ ಪರಿಚಯಿಸಿದವರಲ್ಲಿ ಕೆ.ವಿ.ಎನ್. ಮೇಷ್ಟ್ರು ಪ್ರಮುಖರು. ಸಾಹಿತ್ಯ ಮತ್ತು ಚರಿತ್ರೆಯ ನಡುವಿನ ಸಂಬಂಧವನ್ನು ಅವರು ವಿವರಿಸುತ್ತಿದ್ದ ರೀತಿ ನನ್ನ ವೈಚಾರಿಕ ಬೆಳವಣಿಗೆಯ ಮೇಲೆ ಗಾಢವಾದ ಪ್ರಭಾವ ಬೀರಿದೆ.
ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಳವಾದ ಚಿಂತನೆಗಳ ಹಿನ್ನೆಲೆಯಲ್ಲಿ ಕನ್ನಡ ನಾಡಿನ ದಲಿತ ಸಮುದಾಯದ ಇತಿಹಾಸ, ಬದುಕು, ಹೋರಾಟ ಮತ್ತು ಸಾಮಾಜಿಕ ಸ್ಥಿತಿಗತಿಗಳ ಕುರಿತು ನಾನು ರಚಿಸಿದ ಸಾಹಿತ್ಯ ಹಾಗೂ ಚಿಂತನಾತ್ಮಕ ಕೃತಿಗಳನ್ನು ಮೇಷ್ಟ್ರು ಬಹಳ ಪ್ರೀತಿಯಿಂದ ಮೆಚ್ಚಿಕೊಂಡಿದ್ದರು. ಆಧುನಿಕ ಮೈಸೂರು ಸಂಸ್ಥಾನದ ರೂವಾರಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲಘಟ್ಟದಲ್ಲಿ ದಲಿತರ ಸ್ಥಿತಿಗತಿಗಳ ಕುರಿತು ನಾನು ಬರೆದ ಕೃತಿಗಳನ್ನೂ ಅವರು ಮೆಚ್ಚಿ ಆಶೀರ್ವದಿಸಿದ್ದರು. ಅವರ ಮೆಚ್ಚುಗೆಯ ಮಾತುಗಳು ಮತ್ತು ಆಶೀರ್ವಾದ ನನ್ನ ಸಾಹಿತ್ಯಿಕ ಹಾಗೂ ಸಂಶೋಧನಾತ್ಮಕ ಬದುಕಿಗೆ ದೊಡ್ಡ ಪ್ರೇರಣೆಯಾಗಿದ್ದವು. ಜ್ಞಾನ
ಇದನ್ನೂ ಓದಿ: ʼಉತ್ತರ-ದಕ್ಷಿಣ ಸಿನಿಮಾ ರಂಗದ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಬೇಡಿ’; ಜಾನ್ವಿ-ರಾಧಿಕಾ ಹೇಳಿಕೆ ವಿರುದ್ಧ ನಟಿ ರೆಜಿನಾ ಕೆಂಡ
ಮೇಷ್ಟ್ರು ಕೇವಲ ಆಡಳಿತಗಾರರಾಗಿರಲಿಲ್ಲ. ಅವರು ಅತ್ಯುತ್ತಮ ಸಾಹಿತಿ, ಭಾಷಾವಿಜ್ಞಾನಿ, ವಿಮರ್ಶಕ ಮತ್ತು ವೈಚಾರಿಕ ಚಿಂತಕರಾಗಿದ್ದರು. ವೈಜ್ಞಾನಿಕ ಮನೋಭಾವದ ವಿಶ್ಲೇಷಣೆ, ವಸ್ತುನಿಷ್ಠ ದೃಷ್ಟಿಕೋನ ಹಾಗೂ ಖಚಿತವಾದ ತರ್ಕಬದ್ಧ ಮಾತುಗಳು ಅವರ ವ್ಯಕ್ತಿತ್ವದ ವಿಶೇಷತೆಗಳಾಗಿದ್ದವು. ಅವರ ಸಾಹಿತ್ಯವನ್ನು ಓದುತ್ತಾ, ಅವರ ಮಾತುಗಳನ್ನು ಆಲಿಸುತ್ತಾ ನಮ್ಮ ಚಿಂತನೆ ಮತ್ತು ಬರವಣಿಗೆಯನ್ನು ಪರಿಷ್ಕರಿಸಿಕೊಂಡವರು ನಾವು.
ನಾನು ಚರಿತ್ರೆಯ ವಿದ್ಯಾರ್ಥಿ. ಸಾಹಿತ್ಯದ ಮೂಲಕ ಚರಿತ್ರೆಯನ್ನು ನೋಡುವ, ಗ್ರಹಿಸುವ ಮತ್ತು ವಿಶ್ಲೇಷಿಸುವ ವಸ್ತುನಿಷ್ಠ ವಿಧಾನವನ್ನು ನನಗೆ ಪರಿಚಯಿಸಿದವರಲ್ಲಿ ಕೆ.ವಿ.ಎನ್. ಮೇಷ್ಟ್ರು ಪ್ರಮುಖರು. ಸಾಹಿತ್ಯ ಮತ್ತು ಚರಿತ್ರೆಯ ನಡುವಿನ ಸಂಬಂಧವನ್ನು ಅವರು ವಿವರಿಸುತ್ತಿದ್ದ ರೀತಿ ನನ್ನ ವೈಚಾರಿಕ ಬೆಳವಣಿಗೆಯ ಮೇಲೆ ಗಾಢವಾದ ಪ್ರಭಾವ ಬೀರಿದೆ.
ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಳವಾದ ಚಿಂತನೆಗಳ ಹಿನ್ನೆಲೆಯಲ್ಲಿ ಕನ್ನಡ ನಾಡಿನ ದಲಿತ ಸಮುದಾಯದ ಇತಿಹಾಸ, ಬದುಕು, ಹೋರಾಟ ಮತ್ತು ಸಾಮಾಜಿಕ ಸ್ಥಿತಿಗತಿಗಳ ಕುರಿತು ನಾನು ರಚಿಸಿದ ಸಾಹಿತ್ಯ ಹಾಗೂ ಚಿಂತನಾತ್ಮಕ ಕೃತಿಗಳನ್ನು ಮೇಷ್ಟ್ರು ಬಹಳ ಪ್ರೀತಿಯಿಂದ ಮೆಚ್ಚಿಕೊಂಡಿದ್ದರು. ಆಧುನಿಕ ಮೈಸೂರು ಸಂಸ್ಥಾನದ ರೂವಾರಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲಘಟ್ಟದಲ್ಲಿ ದಲಿತರ ಸ್ಥಿತಿಗತಿಗಳ ಕುರಿತು ನಾನು ಬರೆದ ಕೃತಿಗಳನ್ನೂ ಅವರು ಮೆಚ್ಚಿ ಆಶೀರ್ವದಿಸಿದ್ದರು. ಅವರ ಮೆಚ್ಚುಗೆಯ ಮಾತುಗಳು ಮತ್ತು ಆಶೀರ್ವಾದ ನನ್ನ ಸಾಹಿತ್ಯಿಕ ಹಾಗೂ ಸಂಶೋಧನಾತ್ಮಕ ಬದುಕಿಗೆ ದೊಡ್ಡ ಪ್ರೇರಣೆಯಾಗಿದ್ದವು.
ನವಕರ್ನಾಟಕ ಪ್ರಕಾಶನದಿಂದ ನನ್ನ ಸಂಪಾದನೆ ಮತ್ತು ರಚನೆಯಲ್ಲಿ ಪ್ರಕಟಗೊಂಡ ‘ಕರ್ನಾಟಕದ ಸಮಗ್ರ ದಲಿತ ಚರಿತ್ರೆ’ ಕೃತಿಯನ್ನು ಮೇಷ್ಟ್ರು ಓದಿ, ನನ್ನ ಕೆಲಸದ ಕುರಿತು ಸುದೀರ್ಘವಾದ ಮೆಚ್ಚುಗೆಯ ಪತ್ರ ಬರೆದಿದ್ದರು. ಒಬ್ಬ ಹಿರಿಯ ವಿದ್ವಾಂಸ ನನ್ನ ಪರಿಶ್ರಮವನ್ನು ಗುರುತಿಸಿ ಬರೆದ ಆ ಪತ್ರ ನನಗೆ ದೊಡ್ಡ ಪ್ರಶಸ್ತಿಗಿಂತಲೂ ಮಿಗಿಲಾದ ಗೌರವವನ್ನು ತಂದುಕೊಟ್ಟಿತು. ಅವರ ಪ್ರೋತ್ಸಾಹದ ಆ ಪತ್ರವನ್ನು ನನ್ನ ಬದುಕಿನ ಅಮೂಲ್ಯ ಸ್ಮರಣೆಯಾಗಿ ಇಂದಿಗೂ ಕಾಪಾಡಿಕೊಂಡಿದ್ದೇನೆ.
ಕನ್ನಡ ನಾಡಿನ ವರನಟ ಡಾ. ರಾಜಕುಮಾರ್ ಅವರ ಕನ್ನಡ ಭಾಷೆಯ ಸೊಗಸು, ಸ್ಪಷ್ಟ ಉಚ್ಚಾರಣೆ, ಕನ್ನಡತನದ ಅಭಿವ್ಯಕ್ತಿ ಮತ್ತು ಭಾಷೆಯ ಭಾವಕ್ಕೆ ತಕ್ಕಂತೆ ಅಭಿನಯಿಸುವ ಅಪೂರ್ವ ಕಲೆಯನ್ನು ಮೇಷ್ಟ್ರು ಅಪಾರವಾಗಿ ಪ್ರೀತಿಸುತ್ತಿದ್ದರು. ಡಾ. ರಾಜಕುಮಾರ್ ಅವರ ಕುರಿತು ಅವರು ಬರೆದ ಸಾಹಿತ್ಯ ಮತ್ತು ಮಾತನಾಡಿದ ಮಾತುಗಳಲ್ಲಿ ಅವರ ಕನ್ನಡ ಪ್ರೀತಿ ಹಾಗೂ ಕಲಾವಿದನ ಕುರಿತ ಗೌರವ ವಿಶಿಷ್ಟವಾಗಿ ವ್ಯಕ್ತವಾಗುತ್ತಿತ್ತು.
ಕನ್ನಡ ಭಾಷಾ ಅಧ್ಯಯನಕ್ಕೆ ಪ್ರೊ. ಕೆ.ವಿ. ನಾರಾಯಣ ಅವರು ನೀಡಿದ ಕೊಡುಗೆ ಅಪಾರ. ಕನ್ನಡ ಭಾಷಾ ವಿಶ್ವಕೋಶ, ಕನ್ನಡದ ಕೃಷಿ ಪದಕೋಶ ಸೇರಿದಂತೆ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ವಿವಿಧ ಆಯಾಮಗಳಿಗೆ ಸಂಬಂಧಿಸಿದ ಅವರ ಕೆಲಸಗಳು ಮಹತ್ವದ ಆಕರಗಳಾಗಿವೆ. ತಮ್ಮ ಸಮಗ್ರ ಬರಹಗಳನ್ನು ಸಂಗ್ರಹಿಸಿ ಪ್ರಕಟಿಸಿದ ‘ತುಂಡು ಮೇವು’ ಸಂಪುಟಗಳು ಅವರ ವೈಚಾರಿಕ ವ್ಯಾಪ್ತಿ, ಭಾಷಾ ಪಾಂಡಿತ್ಯ ಮತ್ತು ಬರವಣಿಗೆಯ ವೈವಿಧ್ಯಕ್ಕೆ ಸಾಕ್ಷಿಯಾಗಿವೆ. ಕನ್ನಡ ಭಾಷಾಶಾಸ್ತ್ರ ಮತ್ತು ಸಾಹಿತ್ಯ ಅಧ್ಯಯನ ಮಾಡುವವರಿಗೆ ಇವೆಲ್ಲವೂ ಅಮೂಲ್ಯ ಆಕರಗಳಾಗಿವೆ.
ಅವರ ಸಾಹಿತ್ಯ ಮತ್ತು ಶೈಕ್ಷಣಿಕ ಸಾಧನೆಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಗೌರವಗಳು ಸಂದಿವೆ. ಕರ್ನಾಟಕ ಸರ್ಕಾರದ ಕುವೆಂಪು ಭಾಷಾ ಭಾರತಿ ಕೇಂದ್ರದ ಅಧ್ಯಕ್ಷರಾಗಿ ಕೂಡ ಅವರು ಆದರ್ಶಪ್ರಾಯವಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಅವರ ನಿಜವಾದ ಸಾಧನೆ ಪ್ರಶಸ್ತಿ-ಪುರಸ್ಕಾರಗಳಲ್ಲಷ್ಟೇ ಸೀಮಿತವಾಗಿಲ್ಲ; ಅವರಿಂದ ರೂಪುಗೊಂಡ ವಿದ್ಯಾರ್ಥಿಗಳು, ಸಂಶೋಧಕರು, ಅಧ್ಯಾಪಕರು ಮತ್ತು ಚಿಂತಕರ ತಲೆಮಾರುಗಳಲ್ಲಿ ಅವರ ಜ್ಞಾನದ ಬೆಳಕು ಮುಂದುವರಿಯುತ್ತಿದೆ.
ದಲಿತ ಸಾಹಿತ್ಯ ಮತ್ತು ದಲಿತ ಚಳವಳಿಯ ಮೊದಲ ತಲೆಮಾರಿನ ಪ್ರಮುಖ ಕೊಂಡಿಯಾಗಿದ್ದ ಕವಿ ಪ್ರೊ. ಸಿದ್ದಲಿಂಗಯ್ಯ ಅವರು ಎಂ.ಎ. ಪದವಿ ಅಧ್ಯಯನ ಮಾಡುವ ಸಂದರ್ಭದಲ್ಲಿ ಕೆ.ವಿ.ಎನ್. ಮೇಷ್ಟ್ರು ಅವರ ಗುರುಗಳಾಗಿದ್ದರು. 1974ರಲ್ಲಿ ಸಿದ್ದಲಿಂಗಯ್ಯ ಅವರ ಮೊದಲ ಕವನ ಸಂಕಲನ ‘ಹೊಲೆಮಾದಿಗರ ಹಾಡು’ ಪ್ರಕಟಗೊಳ್ಳುವಲ್ಲಿ ಪ್ರೊ. ಕೆ.ವಿ. ನಾರಾಯಣ ಅವರ ಪಾತ್ರ ಮಹತ್ವದ್ದಾಗಿತ್ತು. ದಲಿತ ಸಾಹಿತ್ಯದ ಬೆಳವಣಿಗೆ ಮತ್ತು ದಲಿತ ಚಳವಳಿಯ ವೈಚಾರಿಕ ನೆಲೆಗಳ ಕುರಿತು ಅವರು ತೋರಿದ ಆಸಕ್ತಿ ಹಾಗೂ ಮಾರ್ಗದರ್ಶನ ಗಮನಾರ್ಹವಾದುದು.
ದಲಿತ ಸಾಹಿತ್ಯ ಮತ್ತು ಚಳವಳಿಯ ಕುರಿತು ಅವರು ಹೊಂದಿದ್ದ ಈ ಆಳವಾದ ತಿಳಿವಳಿಕೆ ನನ್ನಂತಹ ಕಿರಿಯರು ಆ ದಿಕ್ಕಿನಲ್ಲಿ ಕೆಲಸ ಮಾಡಲು ಪ್ರೇರಣೆಯಾಯಿತು. ನನ್ನ ಸಾಹಿತ್ಯಿಕ ಮತ್ತು ಸಂಶೋಧನಾತ್ಮಕ ಪ್ರಯತ್ನಗಳನ್ನು ಅವರು ಸದಾ ಪ್ರೀತಿಯಿಂದ ಗಮನಿಸುತ್ತಿದ್ದರು.
ಇತ್ತೀಚೆಗೆ ಕನ್ನಡ ವಿಶ್ವವಿದ್ಯಾಲಯದ ದಲಿತ ಸಂಸ್ಕೃತಿ ಅಧ್ಯಯನ ಪೀಠ ಹಾಗೂ ಒನಕೆ ಓಬವ್ವ ಅಧ್ಯಯನ ಕೇಂದ್ರದ ಮೂಲಕ ನನ್ನ ಸಂಪಾದನೆ ಮತ್ತು ರಚನೆಯಲ್ಲಿ ಪ್ರಕಟಗೊಂಡ ದುಡಿಯುವ ಜನರ ಬದುಕು, ಸಂಸ್ಕೃತಿ ಮತ್ತು ಹೋರಾಟಗಳನ್ನು ಪ್ರತಿನಿಧಿಸುವ ಕೃತಿಗಳನ್ನು ಕಂಡು ಅವರು ಬಹಳ ಸಂತಸ ವ್ಯಕ್ತಪಡಿಸಿದ್ದರು. ದೂರವಾಣಿ ಮೂಲಕ ಸುದೀರ್ಘವಾಗಿ ಮಾತನಾಡಿ ನನ್ನ ಕೆಲಸವನ್ನು ಮೆಚ್ಚಿ ಆಶೀರ್ವದಿಸಿದ್ದರು. ಅವರ ಆ ಮಾತುಗಳು ನನ್ನ ಅಗಲಿದ ತಂದೆ-ತಾಯಿಯವರ ಪ್ರೀತಿ ಮತ್ತು ಆಶೀರ್ವಾದವನ್ನು ನೆನಪಿಸಿದವು.
ಎರಡು ತಿಂಗಳ ಹಿಂದಷ್ಟೇ ನಮ್ಮ ವಿಶ್ವವಿದ್ಯಾಲಯದ ಅಧ್ಯಯನಾಂಗದ ನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಂಡ ಸಂದರ್ಭದಲ್ಲಿ ಅವರ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆಯಬೇಕೆಂಬ ಉದ್ದೇಶದಿಂದ ದೂರವಾಣಿ ಮೂಲಕ ಮಾತನಾಡಿದ್ದೆ. ಅದೇ ಅವರೊಂದಿಗೆ ನಾನು ನಡೆಸಿದ ಕೊನೆಯ ಮಾತುಕತೆಯಾಗುತ್ತದೆ ಎಂದು ಕನಸಿನಲ್ಲಿಯೂ ಭಾವಿಸಿರಲಿಲ್ಲ. ಅಂದು ನನ್ನಂತಹ ಕಿರಿಯ ಸಹೋದರನಿಗೆ ಅವರು ತೋರಿದ ಪ್ರೀತಿ, ವಿಶ್ವಾಸ ಮತ್ತು ನೀಡಿದ ಆಶೀರ್ವಾದದ ಮಾತುಗಳು ನನ್ನ ಬದುಕಿನ ಕೊನೆಯವರೆಗೂ ಅಮೂಲ್ಯ ನೆನಪಾಗಿ ಉಳಿಯಲಿವೆ.
ಮೇಷ್ಟ್ರು ಅವರೊಂದಿಗೆ ಕಳೆದ ಆತ್ಮೀಯ ಕ್ಷಣಗಳು, ಅವರಿಂದ ಕಲಿತ ಪಾಠಗಳು, ಅವರು ನೀಡಿದ ಮಾರ್ಗದರ್ಶನ ಮತ್ತು ನನ್ನ ಬರವಣಿಗೆಯನ್ನು ಪ್ರೀತಿಯಿಂದ ಮೆಚ್ಚಿದ ನೆನಪುಗಳು ಎಂದಿಗೂ ಮಾಸುವುದಿಲ್ಲ. ವ್ಯಕ್ತಿಗಳು ನಮ್ಮಿಂದ ದೂರವಾಗಬಹುದು; ಆದರೆ ಅವರು ನೀಡಿದ ಜ್ಞಾನ, ಚಿಂತನೆ, ಪ್ರೀತಿ ಮತ್ತು ಪ್ರೇರಣೆ ನಮ್ಮ ಬದುಕಿನ ಭಾಗವಾಗಿ ಶಾಶ್ವತವಾಗಿ ಉಳಿಯುತ್ತವೆ. ಇಂತಹ ಹಿರಿಯರ ಬದುಕು ಮತ್ತು ಸಾಧನೆಗಳು ನಮ್ಮ ವೈಯಕ್ತಿಕ ನೆನಪುಗಳಷ್ಟೇ ಅಲ್ಲ, ನಮ್ಮ ಕಾಲದ ಶೈಕ್ಷಣಿಕ ಮತ್ತು ಸಾಮಾಜಿಕ ಇತಿಹಾಸದ ಅವಿಭಾಜ್ಯ ಭಾಗಗಳೂ ಆಗಿವೆ.
ಅಂಬೇಡ್ಕರ್ ಅವರು ಪ್ರತಿಪಾದಿಸಿದ ಇತಿಹಾಸದ ಅರಿವು ಮತ್ತು ಇತಿಹಾಸವನ್ನು ಮರೆಯದಿರುವ ಅಗತ್ಯ ಇಲ್ಲಿ ಮತ್ತೆ ನೆನಪಾಗುತ್ತದೆ. ಇತಿಹಾಸವನ್ನು ನೆನಪಿಟ್ಟುಕೊಳ್ಳುವ ಸಮಾಜಕ್ಕಷ್ಟೇ ಹೊಸ ಇತಿಹಾಸವನ್ನು ನಿರ್ಮಿಸುವ ಶಕ್ತಿ ಇರುತ್ತದೆ. ಕೆ.ವಿ.ಎನ್. ಮೇಷ್ಟ್ರು ಅವರ ಬದುಕು, ಸಾಧನೆ ಮತ್ತು ಚಿಂತನೆಗಳನ್ನು ನೆನಪಿಸಿಕೊಳ್ಳುವುದು ಎಂದರೆ ಕನ್ನಡದ ಜ್ಞಾನ ಪರಂಪರೆಯನ್ನು, ವೈಚಾರಿಕತೆಯನ್ನು ಮತ್ತು ಮಾನವೀಯ ಮೌಲ್ಯಗಳನ್ನು ಗೌರವಿಸಿದಂತೆಯೇ ಸರಿ.
ಪ್ರೀತಿಯ ಕೆ.ವಿ.ಎನ್. ಮೇಷ್ಟ್ರೇ,
ನಿಮ್ಮ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ, ಕನ್ನಡ ವಿಶ್ವವಿದ್ಯಾಲಯಕ್ಕೆ, ಭಾಷಾ ಅಧ್ಯಯನ ಕ್ಷೇತ್ರಕ್ಕೆ, ದಲಿತ ಸಾಹಿತ್ಯ ಮತ್ತು ಚಳವಳಿಗೆ ಹಾಗೂ ನಿಮ್ಮನ್ನು ಪ್ರೀತಿಸುವ ನಮ್ಮೆಲ್ಲರಿಗೂ ತುಂಬಲಾರದ ನಷ್ಟ.
ನೀವು ಕಲಿಸಿದ ಪಾಠಗಳು, ತೋರಿದ ದಾರಿ, ನೀಡಿದ ಪ್ರೋತ್ಸಾಹ ಮತ್ತು ಹರಸಿದ ಆಶೀರ್ವಾದಗಳು ನಮ್ಮೊಳಗೆ ಸದಾ ಜೀವಂತವಾಗಿರುತ್ತವೆ. ನಿಮ್ಮ ಜ್ಞಾನ ಮತ್ತು ಚಿಂತನೆಗಳ ಬೆಳಕು ಮುಂದಿನ ತಲೆಮಾರುಗಳಿಗೂ ದಾರಿದೀಪವಾಗಿರಲಿ. ನಿಮ್ಮ ನೆನಪುಗಳಿಗೆ ಗೌರವಪೂರ್ವಕ ನಮನಗಳು. ನಿಮ್ಮ ಆದರ್ಶಗಳಿಗೆ ನಮ್ಮ ಗೌರವಪೂರ್ಣ ಶರಣು.
ಇದನ್ನೂ ನೋಡಿ : ಎಸ್ಐಆರ್ ರದ್ದತಿಗೆ ಪಟ್ಟು: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ‘ಇಂಡಿಯಾ’ ಕೂಟದಿಂದ ಬೃಹತ್ ಪ್ರತಿಭಟನೆ Janashakthi
