ಹೈದರಾಬಾದ್: ವೈಎಸ್‌ಆರ್‌ಟಿಪಿ ಪಕ್ಷದ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಮುಂಬರುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬೇಷರತ್ ಬೆಂಬಲ ನೀಡುವ ಮೂಲಕ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ “ಅರಾಜಕ” ಆಡಳಿತವನ್ನು ಸೋಲಿಸಲು ತಾನು ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮತ್ತು ಸಿ.ಎಂ. ಕೆಸಿಆರ್ ವಿರುದ್ಧ ಮತಗಳನ್ನು ವಿಭಜಿಸಲು ಬಯಸುವುದಿಲ್ಲ ಎಂದು ಶರ್ಮಿಳಾ ಅವರು ಹೇಳಿದ್ದಾರೆ. ಶರ್ಮಿಳಾ ಅವರು ಇತ್ತೀಚೆಗೆ ತೆಲಂಗಾಣ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು.
ಇದನ್ನೂ ಓದಿ: ಎಲ್ಲೆಡೆ ಆತಂಕ ಸೃಷ್ಟಿಸುತ್ತಿರುವ ಝೀಕಾ ವೈರಸ್; ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ
“ರಾಜ್ಯದಲ್ಲಿ ಕೆಸಿಆರ್ ವಿರುದ್ಧ ಪ್ರಬಲವಾದ ಆಡಳಿತ ವಿರೋಧಿ ಅಲೆ ಇದೆ. ಅದು ಈಗ ಕೆಸಿಆರ್ ಸರ್ಕಾರ ಪತನವಾಗುವ ಮಟ್ಟಕ್ಕೆ ತಲುಪಿದೆ. ಈಗ ಕೆಸಿಆರ್ ವಿರೋಧಿ ಮತ ಒಡೆದರೆ ಅವರು ಮತ್ತೆ ಸಿಎಂ ಆಗುತ್ತಾರೆ. ಕೆಸಿಆರ್ ವಿರೋಧಿ ಮತವನ್ನು ವಿಭಜಿಸಬೇಡಿ ಎಂದು ಹಲವು ಬುದ್ಧಿಜೀವಿಗಳು ಮತ್ತು ಮಾಧ್ಯಮ ಮುಖ್ಯಸ್ಥರು ನಮಗೆ ವಿನಂತಿಸಿದ್ದಾರೆ. ಕೆಸಿಆರ್ ಅವರನ್ನು ಸೋಲಿಸುವ ವಿಶ್ವಾಸವಿದೆ ಎಂದಿರುವ ಕಾಂಗ್ರೆಸ್ ನಾಯಕರಿಗೆ ಅಡ್ಡಿಯಾಗುವುದು ಸರಿಯೆ?” ಎಂದು ಅವರು ಪ್ರಶ್ನಿಸಿದರು.
ಅಖಂಡ ಆಂಧ್ರಪ್ರದೇಶದ ಮಾಜಿ ಕಾಂಗ್ರೆಸ್ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಪುತ್ರಿಯಾಗಿರುವ ಶರ್ಮಿಳಾ ಅವರು, ವಿಭಜಿತ ಆಂಧ್ರಪ್ರದೇಶ ಸಿ.ಎಂ. ಜಗನ್ ಮೋಹನ್ ರೆಡ್ಡಿ ಅವರ ಸಹೋದರಿಯಾಗಿದ್ದಾರೆ. ಅಕ್ಟೋಬರ್‌ನಲ್ಲಿ ಶರ್ಮಿಳಾ ಅವರು ತಮ್ಮ ಪಕ್ಷ ವೈಎಸ್‌ಆರ್‌ಟಿಪಿ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ ಎಂದು ಘೋಷಿಸಿದ್ದರು.
ವೈಎಸ್‌ಆರ್‌ಟಿಪಿಯನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಲಾಗುತ್ತದೆ ಎಂಬ ಬಗ್ಗೆ ತುಂಬಾ ಸಮಯದಿಂದ ಊಹಾಪೋಹ ಹರಡಿತ್ತು. ಈ ನಡುವೆ ಅವರು ಚುನಾವಣೆ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದರು. ಶರ್ಮಿಳಾ ಅವರು ಪಲೈರ್ ಕ್ಷೇತ್ರದಿಂದ ಮತ್ತು ಅವರ ತಾಯಿ ವೈ.ಎಸ್. ವಿಜಯಮ್ಮ ಅವರು ಸಿಕಂದರಾಬಾದ್‌ನಿಂದ ಸ್ಪರ್ಧಿಸುವ ನಿರೀಕ್ಷೆ ಇತ್ತು.
ವಿಡಿಯೊ ನೋಡಿ: ‘ತುಘಲಕ್’ ನಾಟಕವನ್ನು ಕಟ್ಟಿ ಕೊಟ್ಟಿದ್ದರ ಹಿಂದೆ ರೋಚಕ ಕಥೆ ಇದೆ – ಡಾ. ಶ್ರೀಪಾಧ್ ಭಟ್ Janashakthi Media