ಎಡಪಂಥೀಯ ಪುಸ್ತಕ ಮಳಿಗೆಗಳ ಮೇಲೆ ರಾಜ್ಯ ಸರಕಾರದಿಂದ ಮತ್ತು ಪುಂಡರ ಪಡೆಗಳಿಂದ ನಡೆದ ದಾಳಿಗಳ ನಂತರ ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲಿಮಾ ನಸ್ರೀನ್ರವರ ಟಿಪ್ಪಣಿಗೆ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತಗೊಂಡಿವೆ. ದುರ್ಗಾ ಪೂಜೆಯ ಸಮಯದಲ್ಲಿ ಮಾತ್ರ ಪುಸ್ತಕದ ಅಂಗಡಿಗಳನ್ನು ಹಾಕಲಾಗುತ್ತದೆ ಎಂಬ ನಸ್ರೀನ್ ಅವರ ಹೇಳಿಕೆಯನ್ನು ಅಲ್ಲಗಳೆಯುವ ಹಲವಾರು ಸಾಮಾಜಿಕ ಜಾಲತಾಣ ಪೋಸ್ಟ್ ಗಳು ಮತ್ತು ಸುದ್ದಿ ವರದಿಗಳನ್ನು ‘ಆಲ್ಟ್ ನ್ಯೂಸ್’ ಕಂಡುಕೊಂಡಿದೆ. ಇದಲ್ಲದೆ, ಎಡಪಂಥೀಯ ಪುಸ್ತಕ ಮಳಿಗೆಗಳಲ್ಲಿ ನಾಸ್ತಿಕತೆಯನ್ನು ಪ್ರಚಾರ ಮಾಡುವ ಪುಸ್ತಕಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ ಎಂಬ ನಸ್ರೀನ್ ಪ್ರತಿಪಾದನೆಯೂ ಸತ್ಯದೂರವಾದದ್ದು ಎಂದು ‘ಆಲ್ಟ್ ನ್ಯೂಸ್’ ಕೊಟ್ಟಿರುವ ಉದಾಹರಣೆಗಳು ಸ್ಪಷ್ಟಗೊಳಿಸುತ್ತವೆ. ದುರ್ಗಾಪೂಜೆ ಸಂದರ್ಭದಲ್ಲಿ ಎಡಪಕ್ಷಗಳ ಪುಸ್ತಕ ಮಳಿಗೆಗಳು ವ್ಯಾಪಕವಾಗಿ ಕಾಣುತ್ತವೆ. ಏಕೆಂದರೆ ದುರ್ಗಾಪೂಜೆ ಕನಿಷ್ಟ ಐದು ದಿನಗಳ ಕಾಲ ಪಂಡಾಲುಗಳನ್ನು ಹಾಕಿ ನಡೆಸುವ ರಾಜ್ಯವ್ಯಾಪಿ ಉತ್ಸವ, ಈದ್ ಅಥವ ಕ್ರಿಸ್ಮಸ್ ಆಚರಣೆಗಳಲ್ಲಿ ಪಂಡಾಲುಗಳಿರುತ್ತವೆಯೇ? ಹೆಚ್ಚೆಂದರೆ ಒಂದೆರಡು ಗಂಟೆಗಳ ಕಾಲವಷ್ಠೆ ಮಸೀದಿ ಅಥವ ಚರ್ಚ್ಗಳ ಬಳಿ ಜನಸಂದಣಿ ಇರುತ್ತದೆ, ನಂತರ ಆಚರಣೆ ಅವರವರ ಮನೆಗಳಲ್ಲೇ ನಡೆಯುತ್ತದೆ. ಎಡಪಂಥೀಯರ ಪುಸ್ತಕ ಮಳಿಗೆಗಳ ಮೇಲೆ ಬಿಜೆಪಿ ಗೂಂಡಾಗಳ ಗೂಂಡಾಗಿರಿಯನ್ನು ಆಕೆ ಪ್ರತಿಪಾದಿಸುತ್ತಾರೆಯೇ, ಸಮರ್ಥಿಸುತ್ತಾರೆಯೇ? ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವರು ಟಿಪ್ಪಣಿ ಮಾಡಿದ್ದಾರೆ.
ಅಕ್ಟೋಬರ್ 20 ರಂದು ತಮ್ಮ ಫೇಸ್ಬುಕ್ನಲ್ಲಿ ಅವರು “ಪಶ್ಚಿಮ ಬಂಗಾಳದಲ್ಲಿ ಎಡಪಂಥೀಯರು ದುರ್ಗಾ ಪೂಜೆಯ ಸಂದರ್ಭದಲ್ಲಿ ಪುಸ್ತಕ ಮಳಿಗೆಗಳನ್ನು ಏರ್ಪಡಿಸುತ್ತಾರಾದರೂ, ಕ್ರಿಸ್ಮಸ್ ಮತ್ತು ಈದ್ನಂತಹ ಇತರ ಧಾರ್ಮಿಕ ಹಬ್ಬಗಳ ಸಮಯದಲ್ಲಿ ಇಂತಹ ಮಳಿಗೆಗಳು ಕಂಡುಬರುವುದಿಲ್ಲ. ಇತರ ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ‘ನಾಸ್ತಿಕತೆಯನ್ನು’ ಬಿಂಬಿಸುವ ಪುಸ್ತಕಗಳನ್ನು ಮಾರಾಟ ಮಾಡದಿರಲು ಎಡಪಂಥೀಯರು ಏಕೆ ನಿರ್ಧರಿಸುತ್ತಾರೆ ಮತ್ತು ಬದಲಾಗಿ ಕೇವಲ ಹಿಂದೂ ಹಬ್ಬದ ಸಂದರ್ಭದಲ್ಲಿ ಮಾತ್ರ ಅಂತಹ ಪುಸ್ತಕಗಳನ್ನು ಏಕೆ ಪ್ರಚಾರ ಮಾಡುತ್ತಾರೆ” ಎಂದು ಅವರು ಪ್ರಶ್ನಿಸಿದರು.
ಮುಂದುವರೆದು ಅವರು ತಮ್ಮ ಪೋಸ್ಟಿನಲ್ಲಿ ಅವರು ಹೀಗೆ ಬರೆದಿದ್ದರು :“ಒಬ್ಬರು ಹೀಗೆ ಕೇಳಿದರು: ‘ಈದ್ ಹಬ್ಬದ ದಿನ ಈದ್ಗಾ ಬಳಿ ಮುಸ್ಲಿಮರಿಗೆ, ಎಡಪಂಥೀಯರು ನಾಸ್ತಿಕತೆಯ ಕುರಿತಾದ ಪುಸ್ತಕಗಳನ್ನು ಮಾರಾಟ ಮಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ? ಅಥವಾ ಕ್ರಿಸ್ಮಸ್ ದಿನದಂದು ಪ್ರಾರ್ಥನೆಗೆ ಬರುವ ಜನರಿಗೆ, ರಿಚರ್ಡ್ ಡಾಕಿನ್ಸ್ ಅಥವಾ ಕ್ರಿಸ್ಟೋಫರ್ ಹಿಚೆನ್ಸ್ (ದೇವರು ಮತ್ತು ನಾಸ್ತಿಕವಾದದ ಬಗೆಗೆ ಪುಸ್ತಕಗಳನ್ನು ಬರೆದವರು) ಅವರ ಪುಸ್ತಕಗಳನ್ನು ಅವರು ಮಾರಾಟ ಮಾಡುವುದನ್ನು ನೋಡಿದ್ದೀರಾ? ಹಾಗಾದರೆ, ಸಹಜವಾಗಿಯೇ ಒಂದು ಪ್ರಶ್ನೆ ಉದ್ಭವಿಸುತ್ತದೆ: ಹಿಂದೂ ದುರ್ಗಾ ಪೂಜಾ ಪೆಂಡಾಲ್ಗಳಲ್ಲಿಯೇ ಅವರು ಏಕೆ ನಾಸ್ತಿಕತೆಯ ಪುಸ್ತಕಗಳನ್ನು ಮಾರಾಟ ಮಾಡಲು ಬಯಸುತ್ತಾರೆ?’ ಈ ಪ್ರಶ್ನೆಗೆ ಕೋಲ್ಕತ್ತಾದ ಎಡಪಂಥೀಯರ ಬಳಿ ಏನಾದರೂ ಉತ್ತರವಿದೆಯೇ?”
ಈ ಪೋಸ್ಟ್ 7,000ಕ್ಕೂ ಹೆಚ್ಚು ಲೈಕ್ಗಳನ್ನು ಹಾಗೂ 1,300ಕ್ಕೂ ಹೆಚ್ಚು ಮರುಹಂಚಿಕೆಗಳನ್ನು (reshares) ಪಡೆದುಕೊಂಡು ಗಮನಾರ್ಹ ಪ್ರಚಾರ ಕಂಡಿದೆ.. ಆದರೆ ಈ ಫೇಸ್ಬುಕ್ ಪೋಸ್ಟಿನ ಕಾಮೆಂಟ್ ವಿಭಾಗವನ್ನು ಅವರು ನಿಷ್ಕ್ರಿಯಗೊಳಿಸಿದ್ದರು.
ಆದರೂ, ಕಮೆಂಟ್ಗಳಿಂದ ತಪ್ಪಿಸಿಕೊಳ್ಳಲಾಗಿಲ್ಲ. ಏಕೆಂದರೆ ಅವರ ಟಿಪ್ಪಣಿ ಅರೆಸತ್ಯಗಳು/ಸುಳ್ಳುಗಳು ಮತ್ತು ಬಂಗಾಳದ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅಜ್ಞಾನ/ಅರೆಜ್ಞಾನದ ಅಥವ ಅಂತಹ ನಟನೆಯ ಪ್ರದರ್ಶನವೇ ಆಗಿತ್ತು. ಇಲ್ಲಿ ಮೂರು ಅಂಶಗಳನ್ನು ಗಮನಿಸಬೇಕು ಮುಖ್ಯವಾಗಿ ಬಂಗಾಳದ ಸಾಂಸ್ಕೃತಿಕ ಪರಂಪರೆಯಲ್ಲಿ ದುರ್ಗಾಪೂಜೆಯ ವಿಶಿಷ್ಟ ಸ್ಥಾನ; ಎರಡನೆಯದಾಗಿ, ಎಡಪಂಥೀಯರು ದಶಕಗಳಿಂದ ನಡೆಸಿಕೊಂಡು ಬಂದಿರುವ ಪುಸ್ತಕ ಮೇಳಗಳ ಸ್ವರೂಪ ಮತ್ತು ಮೂರನೆಯದಾಗಿ, ಎಡಪಂಥೀಯರ, ಅದರಲ್ಲೂ ಕಮ್ಯುನಿಸ್ಟರ ವಿರುದ್ಧ ಹಿಂದುತ್ವ ಮಂದಿಯ ಅಪಪ್ರಚಾರ ಇಸ್ಲಾಂ ಧರ್ಮದ ‘ನಂಬಿಕೆಗಳು’ ಅಥವಾ ‘ಸಿದ್ಧಾಂತ’ಗಳನ್ನು ಟೀಕಿಸಿ ಬರೆದಿದ್ದಕ್ಕಾಗಿ ತೀವ್ರ ಪ್ರತಿಭಟನೆಗಳು ಮತ್ತು ಪ್ರಾಣ ಬೆದರಿಕೆಗಳನ್ನು ಎದುರಿಸಿ, 1994ರಲ್ಲಿ ಬಾಂಗ್ಲಾದೇಶವನ್ನು ತೊರೆದು ದೇಶಭ್ರಷ್ಟ ಜೀವನ ನಡೆಸುತ್ತಿರುವ ನಸ್ರೀನ್, 2007ರಲ್ಲಿ ಕೋಲ್ಕತ್ತಾವನ್ನು ತೊರೆಯಬೇಕಾಯಿತು. ಅವರ ಆತ್ಮಚರಿತ್ರೆ ‘ದ್ವಿಖಂಡಿತೊ’ (Dwikhandito) ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ಆಗ ಅಧಿಕಾರದಲ್ಲಿದ್ದ ಸಿಪಿಐ(ಎಂ) ನೇತೃತ್ವದ ಎಡರಂಗ ಸರ್ಕಾರದ ಮೇಲೆ ಉಂಟಾದ ಒತ್ತಡದಿಂದಾಗಿ ಅವರು ಕೋಲ್ಕತ್ತಾ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಂ) ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರಗಳು ಸತತವಾಗಿ ಅಧಿಕಾರದಲ್ಲಿದ್ದ ಅವಧಿಯಲ್ಲಿ, ಸುಮಾರು 19 ವರ್ಷಗಳ ಕಾಲ ಅವರಿಗೆ ಅಲ್ಲಿಗೆ ಮರಳಲು ಸಾಧ್ಯವಾಗಲಿಲ್ಲ. ಆದರೆ, 2026ರ ಜುಲೈನಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ನಸ್ರೀನ್ ಕೋಲ್ಕತ್ತಾಗೆ ಮರಳಿದರು. ಈ ಸಂದರ್ಭದಲ್ಲಿ, ಬಲಪಂಥೀಯ ಬಿಜೆಪಿ-ಆರ್ಎಸ್ಎಸ್ ವಲಯದ ಕೆಲವರು ಅವರನ್ನು ಸಾರ್ವಜನಿಕವಾಗಿ ಸ್ವಾಗತಿಸಿ, ಸಂಭ್ರಮಿಸಿದರು.
ಈ ಹಿನ್ನೆಲೆಯಲ್ಲಿ, ಎಡಪಕ್ಷಗಳು ನಾಸ್ತಿಕತೆಯನ್ನು ಆಯ್ದು ಪ್ರಚಾರ ಮಾಡುತ್ತಿವೆ ಎಂದು ಬಿಂಬಿಸುವಂತಹ ಇಂತಹ ಪ್ರಶ್ನೆಯೊಂದನ್ನು ಆಕೆ ತನ್ನ ಇತ್ತೀಚಿನ ಫೇಸ್ಬುಕ್ ಪೋಸ್ಟ್ನಲ್ಲಿ ಎತ್ತಿದ್ದಾರೆ. ಅಕ್ಟೋಬರ್ 17 ರಂದು ಜಾಧವ್ಪುರದ ‘8ಬಿ’ ಬಸ್ ನಿಲ್ದಾಣದ ಬಳಿ ಎಡಪಕ್ಷಗಳು ಸ್ಥಾಪಿಸಿದ್ದ ಕೆಲವು ಪುಸ್ತಕದ ಅಂಗಡಿಗಳನ್ನು ರಾಜ್ಯ ಅಧಿಕಾರಿಗಳು ಧ್ವಂಸಗೊಳಿಸಿದ ಅಥವಾ ಹಾನಿಗೊಳಿಸಿದ ಬೆನ್ನಲ್ಲೇ ಆಕೆಯ ಈ ಹೇಳಿಕೆ ಹೊರಬಿದ್ದಿದೆ.
ಈದ್ ಹಬ್ಬದ ದಿನ ಈದ್ಗಾ ಬಳಿ ಮುಸ್ಲಿಮರಿಗೆ, ಎಡಪಂಥೀಯರು ನಾಸ್ತಿಕತೆಯ ಕುರಿತಾದ ಪುಸ್ತಕಗಳನ್ನು ಮಾರಾಟ ಮಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ ಎಂಬ ನಸ್ರೀನ್ರವರ ಪ್ರಶ್ನೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹುಸಿ(ಫೇಕ್) ಸುದ್ದಿಗಳ ವಸ್ತುನಿಷ್ಟ ಪರಿಶೀಲನೆಗೆ ಹೆಸರಾದ ʼಆಲ್ಟ್ ನ್ಯೂಸ್ʼ ಕಂಡುಹಿಡಿದ ಸಂಗತಿಗಳು ತಸ್ಲೀಮಾ ಅವರ ನೈಜ ಬಂಡವಾಳವನ್ನು ಹೊರತಂದಿವೆ. ಈಕೆ ಬಿಜೆಪಿ ಯ ಹಂಗಿಗಾಗಿ ಇಂತಹ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆಯೇ ಎಂಬ ಪ್ರಶ್ನೆ ಸಹಜವಾಗಿ ಎದ್ದಿದೆ.

ದುರ್ಗಾ ಪೂಜೆಯ ಸಮಯದಲ್ಲಿ ಮಾತ್ರ ಪುಸ್ತಕದ ಅಂಗಡಿಗಳನ್ನು ಹಾಕಲಾಗುತ್ತದೆ ಎಂಬ ನಸ್ರೀನ್ ಅವರ ಹೇಳಿಕೆಯನ್ನು ಅಲ್ಲಗಳೆಯುವ ಹಲವಾರು ಸಾಮಾಜಿಕ ಜಾಲತಾಣ ಪೋಸ್ಟ್ ಗಳು ಮತ್ತು ಸುದ್ದಿ ವರದಿಗಳನ್ನು ‘ಆಲ್ಟ್ ನ್ಯೂಸ್’ ಕಂಡುಕೊಂಡಿದೆ.
ಕೋಲ್ಕತ್ತಾದಲ್ಲಿ ಕ್ರಿಸ್ಮಸ್ ಆಚರಿಸಲಾಗುವ ‘ಪಾರ್ಕ್ ಸ್ಟ್ರೀಟ್’ ಬಳಿ, ‘ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ'(ಎಸ್ಎಫ್ಐ) ಮತ್ತು ‘ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ'(ಡಿವೈಎಫ್ಐ) ಕಳೆದ ಕನಿಷ್ಠ 10 ವರ್ಷಗಳಿಂದ ಪುಸ್ತಕ ಮಳಿಗೆಯನ್ನು ಆಯೋಜಿಸುತ್ತಾ ಬಂದಿವೆ. ಪ್ರಮುಖ ಎಡಪಂಥೀಯ ನಾಯಕ ಬಿಮನ್ ಬೋಸ್ ಕೂಡ ಈ ಮಳಿಗೆಗೆ ಭೇಟಿ ನೀಡಿದ್ದಾರೆ. ಎಸ್ಎಫ್ಐ, ಡಿವೈಎಫ್ಐ, ಸಿಪಿಐ(ಎಂ) ಮತ್ತು ಇತರ ಸಂಬಂಧಿತ ಸಂಘಟನೆಗಳ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಈ ಪುಸ್ತಕ ಮಳಿಗೆಯ ಬಗ್ಗೆ ಪ್ರಸ್ತಾಪಿಸಲಾಗಿದೆ ಹಾಗೂ ಮಾಧ್ಯಮಗಳಲ್ಲೂ ಇದರ ಕುರಿತು ವರದಿಗಳು ಬಂದಿವೆ. ‘ದಿ ಟೆಲಿಗ್ರಾಫ್’ ಪತ್ರಿಕೆಯು 2016ರಲ್ಲಿ ಪಾರ್ಕ್ ಸ್ಟ್ರೀಟ್ನಲ್ಲಿ ಈ ಪುಸ್ತಕ ಮಳಿಗೆಯನ್ನು ಸ್ಥಾಪಿಸಿರುವ ಬಗ್ಗೆ ಮೊದಲ ಬಾರಿಗೆ ವರದಿ ಮಾಡಿತ್ತು. ಇದಲ್ಲದೆ, 2017, 2022 ಮತ್ತು 2024ರ ಸಾಲಿನ ಮಳಿಗೆಗಳ ಚಿತ್ರಗಳನ್ನು ‘ಆಲ್ಟ್ ನ್ಯೂಸ್’ ಪತ್ತೆಹಚ್ಚಿದೆ.
ಅದೇ ರೀತಿ, ಕೋಲ್ಕತ್ತಾದ ಖಿದರ್ಪುರ ಪ್ರದೇಶದಲ್ಲಿರುವ ಎಸ್ಎಫ್ಐ-ಡಿವೈಎಫ್ಐ ಸ್ಥಳೀಯ ಸಮಿತಿಗಳು ಈ ವರ್ಷದ ಈದ್ ಹಬ್ಬದ ಸಂದರ್ಭದಲ್ಲಿ ಪುಸ್ತಕ ಮಳಿಗೆಯೊಂದನ್ನು ಆಯೋಜಿಸಿದ್ದವು. ಖಿದರ್ಪುರವು ಐತಿಹಾಸಿಕವಾಗಿ ಗಮನಾರ್ಹ ಸಂಖ್ಯೆಯ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶವಾಗಿದೆ. ಈ ಪುಸ್ತಕ ಮಳಿಗೆಯನ್ನು ಎರಡು ದಿನಗಳ ಕಾಲ ನಡೆಸಲಾಯಿತು ಮತ್ತು ಇದರ ಬಗ್ಗೆ ಸಿಪಿಐ(ಎಂ) ಕೋಲ್ಕತ್ತಾ ಪೋರ್ಟ್ ಅಸೆಂಬ್ಲಿ ಸಮಿತಿಯ ಫೇಸ್ಬುಕ್ ಪುಟದಲ್ಲಿಯೂ ಪ್ರಕಟಿಸಲಾಗಿದೆ.

ಇದನ್ನೂ ಓದಿ : ಸೌಜನ್ಯ ಕೇಸ್ ಮರುತನಿಖೆಗೆ ಬಿಗ್ ಟ್ವಿಸ್ಟ್: ಎಸ್ಐಟಿ ಮುಖ್ಯಸ್ಥ ಸ್ಥಾನದಿಂದ ಹಿಂದೆ ಸರಿದ ಐಜಿಪಿ ಶಶಿಕುಮಾರ್!
ಇದಲ್ಲದೆ, ಎಡಪಂಥೀಯ ಪುಸ್ತಕ ಮಳಿಗೆಗಳಲ್ಲಿ ನಾಸ್ತಿಕತೆಯನ್ನು ಪ್ರಚಾರ ಮಾಡುವ ಪುಸ್ತಕಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ ಎಂಬ ನಸ್ರೀನ್ ಪ್ರತಿಪಾದನೆಯೂ ಸತ್ಯದೂರವಾದದ್ದು. ಇಂತಹ ನೂರಾರು ಮಳಿಗೆಗಳಿಂದ ಪುಸ್ತಕಗಳನ್ನು ಖರೀದಿಸಿದವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಚಿತ್ರಗಳು, ಅಲ್ಲಿ ವಿವಿಧ ಪ್ರಕಾರಗಳಿಗೆ ಸೇರಿದ ವೈವಿಧ್ಯಮಯ ಪುಸ್ತಕಗಳು ಮಾರಾಟವಾಗುತ್ತಿರುವುದನ್ನು ಸ್ಪಷ್ಟವಾಗಿ ತೋರಿಸುತ್ತವೆ.’ಆಲ್ಟ್ ನ್ಯೂಸ್’ ಕೊಟ್ಟಿರುವ ಈ ಕೆಳಗಿನ ಉದಾಹರಣೆಗಳು ಇದನ್ನು ಸ್ಪಷ್ಟಗೊಳಿಸುತ್ತವೆ.
- ‘ಆಲ್ಟ್ ನ್ಯೂಸ್’ ವರದಿಗಾರರೊಬ್ಬರು ಜಾಧವ್ಪುರ 8ಬಿ ಬಸ್ ನಿಲ್ದಾಣದ ಬಳಿ ಸ್ಥಾಪಿಸಲಾಗಿದ್ದ ಸಿಪಿಐ(ಎಂ) ಪುಸ್ತಕ ಮಳಿಗೆಗೆ ಭೇಟಿ ನೀಡಿದರು. ಅಲ್ಲಿ ಬಂಗಾಳಿ ಸಾಹಿತ್ಯ ಕೃತಿಗಳು, ಕವಿತೆಗಳು ಮತ್ತು ಇತಿಹಾಸಕ್ಕೆ ಸಂಬಂಧಿಸಿದ ಪುಸ್ತಕಗಳು ಸೇರಿದಂತೆ ವೈವಿಧ್ಯಮಯ ಪುಸ್ತಕಗಳು ಲಭ್ಯವಿದ್ದವು.ಈ ಮಳಿಗೆಯಲ್ಲಿ ರಾಮಕೃಷ್ಣ ಮತ್ತು ವಿವೇಕಾನಂದರ ಕುರಿತಾದ ಪುಸ್ತಕಗಳೂ ಇದ್ದವು.
- ಸಿಪಿಐ(ಎಂ) ನಾಯಕ ಶತರೂಪ್ ಘೋಷ್ ಅವರು, ತಮ್ಮ ಮಳಿಗೆಗೆ ಭೇಟಿ ನೀಡಿದ ಮಹಿಳೆಯೊಬ್ಬರನ್ನು ಸಂದರ್ಶಿಸಿ ವಿಡಿಯೋವೊಂದನ್ನು ಮಾಡಿದರು. ಆ ಮಹಿಳೆ ತನ್ನನ್ನು ಆಧ್ಯಾತ್ಮಿಕ ನಾಯಕ ಲಲ್ಲನ್ ಫಕೀರ್ ಅವರ ಅನುಯಾಯಿ ಎಂದು ಪರಿಚಯಿಸಿಕೊಂಡರು.ವಿಡಿಯೋದಲ್ಲಿ, ತಾವು ಖರೀದಿಸಿದ ಪುಸ್ತಕಗಳ ಬಗ್ಗೆ ಅವರು ವಿವರಿಸಿದರು; ಇವುಗಳಲ್ಲಿ ಲಲ್ಲನ್ ಫಕೀರ್, ನಿತ್ಯಾನಂದ ಮಹಾಪ್ರಭು ಮುಂತಾದ ಹಿಂದೂ ಆಧ್ಯಾತ್ಮಿಕ ನಾಯಕರ ಕುರಿತಾದ ಪುಸ್ತಕಗಳು ಹಾಗೂ ಅಡುಗೆಗೆ ಸಂಬಂಧಿಸಿದ ಪುಸ್ತಕವೊಂದು ಕೂಡ ಇದ್ದವು.
- 8ಬಿ ಪುಸ್ತಕ ಮಳಿಗೆಯ ಉಸ್ತುವಾರಿ ವಹಿಸಿಕೊಂಡಿರುವ ಸಿಪಿಐ(ಎಂ) ನಾಯಕ ಸುದೀಪ್ ಸೇನ್ಗುಪ್ತಾ ಅವರು, ಆ ಮಳಿಗೆಯ ಚಿತ್ರಗಳನ್ನು ನಿಯಮಿತವಾಗಿ ತಮ್ಮ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಮಾಡುತ್ತಿದ್ದರು.ಅಂತಹ ಒಂದು ಚಿತ್ರದಲ್ಲಿ, ವೈದ್ಯ ಡಾ. ಅರ್ಜುನ್ ದಾಸ್ಗುಪ್ತಾ ಅವರು ಸ್ವಾಮಿ ವಿವೇಕಾನಂದರ ಕುರಿತಾದ ಪುಸ್ತಕವೊಂದನ್ನು ಹಾಗೂ ಎರಡನೆಯ ಮಹಾಯುದ್ಧದ ಕುರಿತಾದ ಮತ್ತೊಂದು ಪುಸ್ತಕವನ್ನು ಹಿಡಿದುಕೊಂಡಿರುವುದು ಕಂಡುಬಂದಿತು.
- ದಾಸ್ಗುಪ್ತ ಅವರ ಪ್ರಕಾರ, ಎಡಪಂಥೀಯ ಪುಸ್ತಕಗಳಲ್ಲದೆ, ಈ ಮಳಿಗೆಗಳಲ್ಲಿ ಬಂಕಿಮಚಂದ್ರ ಚಟ್ಟೋಪಾಧ್ಯಾಯರ ‘ಆನಂದಮಠ’ದಂತಹ ಪುಸ್ತಕಗಳೂ ಇವೆ.”ನನ್ನ ಕುಟುಂಬದವರು ಜಾಧವ್ಪುರದ 8ಬಿ (8B) ಮಳಿಗೆಯ ಬಳಿ ತೆಗೆಸಿಕೊಂಡಿದ್ದ ಕೆಲವು ಹಳೆಯ ಚಿತ್ರಗಳನ್ನು ನೋಡುತ್ತಿದ್ದಾಗ, ನನ್ನ ಹಿಂದೆ ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಪುಸ್ತಕಗಳು ಕಾಣಿಸಿದವು. ಅವರ ಕೃತಿಗಳಲ್ಲಿ ‘ಆನಂದಮಠ’ವೂ ಸೇರಿದೆ, ಇದರಲ್ಲಿ ‘ವಂದೇ ಮಾತರಂ’ ಗೀತೆಯಿದೆ. ಹೀಗಾಗಿ, ಈ ಮಳಿಗೆಗಳಲ್ಲಿ ಕೇವಲ ನಾಸ್ತಿಕತೆಯನ್ನು ಬಿಂಬಿಸುವ ಪುಸ್ತಕಗಳು ಮಾತ್ರ ಮಾರಾಟವಾಗುತ್ತವೆ ಎಂಬುದು ಸತ್ಯವಲ್ಲ. ಈ ಮಳಿಗೆಗಳು ಬಂಗಾಳದ ಸಂಸ್ಕೃತಿಯ ಭಾಗವಾಗಿವೆ; ಪುಸ್ತಕಗಳನ್ನು ಪ್ರೀತಿಸುವ ಪ್ರತಿಯೊಬ್ಬರೂ ಇವುಗಳನ್ನು ಮುಚ್ಚಿಸುವ ಪ್ರಯತ್ನಗಳ ವಿರುದ್ಧ ಧ್ವನಿ ಎತ್ತಬೇಕು” ಎಂದು ದಾಸ್ಗುಪ್ತ ಹೇಳಿದರು.
“ನಾವು ಬಂಗಾಳಿಗಳು, ಪುಸ್ತಕವೊಂದು ಇಸ್ಕಾನ್ (ISKCON) ಮಳಿಗೆಯಲ್ಲಿ ಮಾರಾಟವಾಗಲಿ ಅಥವಾ ಸಿಪಿಐ(ಎಂ) ಮಳಿಗೆಯಲ್ಲಿ ಮಾರಾಟವಾಗಲಿ, ಪುಸ್ತಕವನ್ನು ಕೇವಲ ಪುಸ್ತಕವಾಗಿಯೇ ನೋಡುತ್ತೇವೆ. ನಮಗೆ ಪುಸ್ತಕಗಳೆಂದರೆ ಅಚ್ಚುಮೆಚ್ಚು, ಹಾಗಾಗಿ ಪುಸ್ತಕಗಳನ್ನು ಮಾರಾಟ ಮಾಡುವ ಯಾವುದೇ ಮಳಿಗೆಯ ಸುತ್ತಲೂ ನಾವು ಸಹಜವಾಗಿಯೇ ಜಮಾಯಿಸುತ್ತೇವೆ. ನಾವು ಚಿಕ್ಕವರಿದ್ದಾಗ, ಇಂತಹ ಮಳಿಗೆಗಳ ಮೂಲಕವೇ ನಮ್ಮಲ್ಲಿ ಅನೇಕರಿಗೆ ಜಗತ್ತಿನ ಶ್ರೇಷ್ಠ ಪುಸ್ತಕಗಳ ಪರಿಚಯವಾಯಿತು. ನಿಕೊಲಾಯ್ ಒಸ್ಟ್ರೋವ್ಸ್ಕಿ ಅವರ ‘ಹೌ ದ ಸ್ಟೀಲ್ ವಾಸ್ ಟೆಂಪರ್ಡ್’ (How the Steel Was Tempered) ಕೃತಿಯ ಬಂಗಾಳಿ ಅನುವಾದವಾದ ‘ಇಸ್ಪಾತ್’ ಎಂಬ ಪುಸ್ತಕವನ್ನು ನನ್ನ ತಂದೆ ನನಗೆ ಖರೀದಿಸಿಕೊಟ್ಟಿದ್ದು ನನಗೆ ಇನ್ನೂ ಚೆನ್ನಾಗಿ ನೆನಪಿದೆ. ನನ್ನಂತೆಯೇ ಸಾವಿರಾರು ಜನರಿಗೆ ಇಂತಹದೇ ನೆನಪುಗಳಿರಬಹುದು ಎಂದು ನಾನು ಭಾವಿಸುತ್ತೇನೆ,” ಎಂದು ಅವರು ಹೇಳಿದರು.
- ಅದೇ ರೀತಿ, ದುರ್ಗಾ ಪೂಜೆಯ ಸಂದರ್ಭದಲ್ಲಿ ಸಿಪಿಐ(ಎಂ)ನ ರಾಶ್ಬಿಹಾರಿ-1 ಪ್ರದೇಶ ಸಮಿತಿಯು ಕಾಳಿಘಾಟ್ ದೇವಾಲಯದ ಬಳಿ ಪುಸ್ತಕ ಮಳಿಗೆಯೊಂದನ್ನು ಸ್ಥಾಪಿಸಿತ್ತು.ಈ ಮಳಿಗೆಯ ಚಿತ್ರಗಳಲ್ಲಿ, ‘ಠಾಕುರ್ಮಾರ್ ಝುಲಿ’ಯಂತಹ ಬಂಗಾಳಿ ಮಕ್ಕಳ ಸಾಹಿತ್ಯ ಕೃತಿಗಳಿಂದ ಹಿಡಿದು, ಬಿಭೂತಿಭೂಷಣ ಬಂದೋಪಾಧ್ಯಾಯರ ‘ಇಚ್ಛಾಮತಿ’, ಬಂಕಿಮ ಚಂದ್ರ ಚಟರ್ಜಿಯವರ ‘ಕಪಾಲಕುಂಡಲ’, ಹಾಗೂ ಶರತ್ ಚಂದ್ರ ಚಟ್ಟೋಪಾಧ್ಯಾಯರ ‘ಗೃಹದಾಹ’ ಮತ್ತು ‘ದೇವದಾಸ್’ನಂತಹ ಸಾಹಿತ್ಯ ಕೃತಿಗಳ ರಾಶಿಗಳನ್ನು ಕಾಣಬಹುದು.ಅಲ್ಲದೆ, ಮಾ ಶಾರದಾ ಅವರ ಕುರಿತಾದ ಪುಸ್ತಕಗಳು ಮತ್ತು ರವೀಂದ್ರನಾಥ ಟಾಗೋರ್ ಅವರು ಬರೆದ ಪುಸ್ತಕಗಳು ಕೂಡ ಈ ಮಳಿಗೆಯಲ್ಲಿ ಇದ್ದವು.

ಮೇಲಿನ ಉದಾಹರಣೆಗಳು ನಸ್ರೀನ್ ಹೇಳಿಕೆಯು ಸುಳ್ಳು ಎಂದು ತೋರಿಸುತ್ತವೆ.
ಗೋಸುಂಬೆತನದ ಪ್ರದರ್ಶನ
ನಿಜಸಂಗತಿಯೆಂದರೆ, ನಸ್ರೀನ್ ರವರು ಪಶ್ಚಿಮ ಬಂಗಾಳದಲ್ಲಿ ತನಗೆ ಅವಕಾಶ ನೀಡಿದ ಈಗಿನ ಆಳುವ ಪಕ್ಷವನ್ನು ಖುಶಿಪಡಿಸಲು ಅದರ ಸುಳ್ಳುಗಳನ್ನು ಪುನರುಚ್ಚರಿಸಿದ್ದಾರೆ, ಈ ಸಂದರ್ಭದಲ್ಲಿ, ಆ ಪಕ್ಷ ಹಿಂದುತ್ವದ ವಿರುದ್ಧ ಬರೆಯುವ ಲೇಖಕರಿಗೂ ತನಗೆ ನೀಡಿದ ಸ್ವಾಗತವನ್ನೇ ನೀಡುತ್ತಿದ್ದರೇ ಎಂದು ಪ್ರಶ್ನಿಸಿಕೊಳ್ಳದಿರುವುದು ಅವರ ಬೌದ್ಧಿಕತೆಯ ಬಗ್ಗೆ ಬಹಳಷ್ಟನ್ನು ಹೇಳುತ್ತದೆ ಎಂದು ಒಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಮಾರ್ಮಿಕವಾಗಿ ಟಿಪ್ಪಣಿ ಮಾಡಿದ್ದಾರೆ.
“ನನಗೆ ಅವರ ಪ್ರಶ್ನೆಯ ತರ್ಕವೇ ಅರ್ಥವಾಗುತ್ತಿಲ್ಲ. ಆಕೆಗೆ ತನ್ನನ್ನು ಬಂಗಾಳದಿಂದ ಹೊರಕಳಿಸಿದ್ದಕ್ಕೆ ಸಿಪಿಐ(ಎಂ) ಬಗ್ಗೆ ಸಿಟ್ಟಿರಬಹುದು. ಆ ಬಗ್ಗೆ ಸೂಕ್ತ ತಾರ್ಕಿಕ ಅಂಶಗಳೊಂದಿಗೆ ಮಾತಾಡಲು ಆಕೆ ಸ್ವತಂತ್ರರು. ಹಾಗಂತ ಒಂದು ಮೂಲಭೂತವಾದದ ವಿರುದ್ಧ ಹೋರಾಟ ಮತ್ತೊಂದು ಮೂಲಭೂತವಾದದ ಆಟದ ದಾಳವಾಗುವ ಮೂಲಕ ಸಾಧ್ಯವೇ? ಎಡಪಂಥೀಯರ ಪುಸ್ತಕ ಮಳಿಗೆಗಳ ಮೇಲೆ ಬಿಜೆಪಿ ಗೂಂಡಾಗಳ ಗೂಂಡಾಗಿರಿಯನ್ನು ಆಕೆ ಪ್ರತಿಪಾದಿಸುತ್ತಾರೆಯೇ, ಸಮರ್ಥಿಸುತ್ತಾರೆಯೇ? ತನ್ನ ಪಟ್ಟಭದ್ರ ಹಿತಕ್ಕಾಗಿ ಒಂದು ಪಕ್ಷಕ್ಕೆ ಬೆಣ್ಣೆ ಹಾಕುವ ವ್ಯಕ್ತಿ ಎಂತಹ ಸಾಹಿತಿಯಾಗಿರಲು ಸಾಧ್ಯ? “ ಎಂದು ಇನ್ನೊಬ್ಬರು ಟಿಪ್ಪಣಿ ಮಾಡಿದ್ದಾರೆ.
“ನಿಜ, ದುರ್ಗಾಪೂಜೆ ಅಥವ ʼಶರದೋತ್ಸವʼದ ಸಂದರ್ಭದಲ್ಲಿ ಎಡಪಕ್ಷಗಳ ಪುಸ್ತಕ ಮಳಿಗೆಗಳು ವ್ಯಾಪಕವಾಗಿ ಕಾಣುತ್ತವೆ. ಏಕೆಂದರೆ ದುರ್ಗಾಪೂಜೆ ಕನಿಷ್ಟ ಐದು ದಿನಗಳ ಕಾಲ ಪಂಡಾಲುಗಳನ್ನು ಹಾಕಿ ನಡೆಸುವ ರಾಜ್ಯವ್ಯಾಪಿ ಉತ್ಸವ, ಈದ್ ಅಥವ ಕ್ರಿಸ್ಮಸ್ ಆಚರಣೆಗಳಲ್ಲಿ ಪಂಡಾಲುಗಳಿರುತ್ತವೆಯೇ? ಹೆಚ್ಚೆಂದರೆ ಒಂದೆರಡು ಗಂಟೆಗಳ ಕಾಲವಷ್ಠೆ ಮಸೀದಿ ಅಥವ ಚರ್ಚ್ಗಳ ಬಳಿ ಜನಸಂದಣಿ ಇರುತ್ತದೆ, ನಂತರ ಆಚರಣೆ ಅವರವರ ಮನೆಗಳಲ್ಲೇ ನಡೆಯುತ್ತದೆ. ಹಾಗೆ ನೋಡಿದರೆ, ಕಾಳೀ ಪೂಜೆ, ಲಕ್ಷ್ಮೀ ಪೂಜೆ ಮುಂತಾದ ಹಿಂದೂ ಆಚರಣೆಗಳಲ್ಲಿ ಕೂಡ ʼಶರದೋತ್ಸವʼದಂತೆ ವ್ಯಾಪಕವಾಗಿ ಪುಸ್ತಕ ಮಳಿಗೆಗಳನ್ನು ಹಾಕವುದಿಲ್ಲವಲ್ಲ” ಎಂದು ಮತ್ತೊಬ್ಬರು ನಸ್ರೀನ್ ಮತ್ತು ಹಿಂದುತ್ವ ಮಂದಿಯ ಪ್ರತಿಪಾದನೆಗಳ ನಿಜಸ್ವರೂಪದ ಬಗ್ಗೆ ಟಿಪ್ಪಣಿ ಮಾಡಿದ್ದಾರೆ.
ಇಷ್ಟೇ ಅಲ್ಲ, ಚಿತ್ರನಟ-ನಿರ್ದೇಶಕ ಆಮಿರ್ ಖಾನ್ ಅಳಿಯ ಇಮ್ರಾನ್ ಖಾನ್ ಈಗ ಭಾರತೀಯ ಪೌರನಲ್ಲವಾದ್ದರಿಂದ ಆತ ಜಂತರ್ ಮಂತರ್ನಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ ದೇಶ ಬಿಟ್ಟು ಹೋಗುವಂತೆ ಆದೇಶಿಸಲಾಯಿತು. ಹಾಗಿರುವಾಗ ಬಾಂಗ್ಲಾದೇಶೀ ತಸ್ಲಿಮಾ ನಸ್ರೀನ್ ನಮ್ಮ ಆಂತರಿಕ ವಿಷಯಗಳಲ್ಲಿ ಮೂಗು ತೂರಲು ಏಕೆ ಬಿಡುತ್ತಿದ್ದೀರಿ ಎಂಬ ಪ್ರಶ್ನೆಯನ್ನು ಆಳುವ ಪಕ್ಷಕ್ಕೆ ಇನ್ನೊಬ್ಬರು ಕೇಳಿದ್ದಾರೆ.
ಈ ನಡುವೆ ರಾಜ್ಯ ಸರಕಾರದ ಬುಲ್ ಡೋಜರುಗಳು ಮತ್ತು ಅದರ ಪುಂಡಪಡೆಗಳ ಧಾಂಧಲೆಗಳ ಹೊರತಾಗಿಯೂ ಈ ಬಾರಿ ಸಿಪಿಐ(ಎಂ)ನ ಈ ಪುಸ್ತಕ ಮಳಿಗೆಗಳು ದಾಖಲೆ ಮಾರಾಟ ನಡೆಸಿವೆ ಎಂದು ಹಿರಿಯ ಸಿಪಿಐ(ಎಂ) ಮುಖಂಡ ಸುಜಾನ್ ಚಕ್ರವರ್ತಿ ಹೇಳಿದ್ದಾರೆ. ರಾಜ್ಯಾದ್ಯಂತ ಸುಮಾರು ೧೦೦೦ ತಾತ್ಕಾಲಿಕ ಮಳಿಗೆಗಳನ್ನು ಹಾಕಲಾಗಿತ್ತು. ಇವುಗಳಲ್ಲಿ ೨೯೨ ಮಳಿಗೆಗಳ ಮೇಲೆ ದಾಳಿಗಳು ನಡೆದವು. ಆದರೂ ಕೇವಲ ೧೨ ಜಿಲ್ಲೆಗಳಿಂದ ಬಂದ ವರದಿಗಳ ಪ್ರಕಾರ ೧ ಕೋಟಿ ರೂ.ಗಳಿಗಿಂತಲೂ ಹೆಚ್ಚು ದಾಖಲೆ ಮಾರಾಟ ನಡೆದಿದೆ. ಇನ್ನೂ ೧೧ ಜಿಲ್ಲೆಗಳಿಂದ ವರದಿಗಳು ಬರಬೇಕಾಗಿವೆ ಎಂದು ಅವರು ಹೇಳಿದ್ದಾರೆ.
(ಸಂಗ್ರಹ: ಜಿಎಸ್ಮಣಿ)
ಇದನ್ನೂ ನೋಡಿ : ಸೌಜನ್ಯ ಪ್ರಕರಣ | ಹೊಸ ಎಸ್ಐಟಿ ಮೇಲೆ ನಂಬಿಕೆಯಿಲ್ಲ! ನವೀನ್ ಸೂರಿಂಜೆ ಹೀಗೆ ಹೇಳಿದ್ದು ಯಾಕೆ? Janashakthi Media
