ಚೆನ್ನೈ : ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥ ಸಂಚಲನಕ್ಕೆ ಸುಪ್ರೀಂ ಕೋರ್ಟ್‌ನಿಂದ ಹಸಿರು ನಿಶಾನೆ ಸಿಕ್ಕಿದ ಬೆನ್ನಲ್ಲೇ ತಮಿಳುನಾಡಿನಾದ್ಯಂತ 45 ಸ್ಥಳಗಳಲ್ಲಿ ಆರ್ ಎಸ್ ಎಸ್ ಪಥ ಸಂಚಲನ ನಡೆಯಿತು.
ಪಥ ಸಂಚಲನವು ತನ್ನ ನಿಯಮಿತ ತರಬೇತಿಯ ಭಾಗವಾಗಿದೆ ಎಂದು ಆರ್ ಎಸ್ ಎಸ್ ಹೇಳಿದೆ. ಆರ್ ಎಸ್ ಎಸ್ ಸ್ವಯಂಸೇವಕರು ಬಿಳಿ ಬಣ್ಣದ ಅಂಗಿ ಮತ್ತು ಖಾಕಿ ಪ್ಯಾಂಟ್ ಧರಿಸಿ ಪಾಲ್ಗೊಂಡಿದ್ದರು. ಪಥ ಸಂಚಲನ ನಡೆಯುವ ಮಾರ್ಗದ ಉದ್ದಕ್ಕೂ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ಪಥ ಸಂಚಲನ ಶಾಂತಿಯುತವಾಗಿ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಚೆನ್ನೈ, ಮದುರೈ, ಕಾಂಚಿಪುರಂ ಮತ್ತು ಚೆಂಗಲ್‌ಪೇಟೆ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಈ ಪಥಸಂಚಲನದಲ್ಲಿ ಕೇಂದ್ರ ಸಚಿವ ಎಲ್. ಮುರುಗನ್ ಪಾಲ್ಗೊಂಡರು. ಆರ್ ಎಸ್ ಎಸ್ ಗೆ ರಾಜ್ಯದಲ್ಲಿ ಪಥಸಂಚಲನ ನಡೆಸಲು ಅನುಮತಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್, ಇದೇ ಏಪ್ರಿಲ್ 11ರಂದು ಎತ್ತಿಹಿಡಿದಿದೆ.
ಇದನ್ನೂ ಓದಿ : ದೇಶಕ್ಕೆ ಆರ್ಎಸ್ಎಸ್ನವರ ಕೊಡುಗೆ ನಗಣ್ಯ, ಅವರಿಗೆ ಸಮಾಜದಲ್ಲಿ ಬದಲಾವಣೆ ಬೇಕಿಲ್ಲ: ಸಿದ್ಧರಾಮಯ್ಯ
ದಿನಗೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿರುವ ವೃತ್ತಿಪರರು, ಕೈಗಾರಿಕೆ, ಕಚೇರಿಗಳು ಹಾಗೂ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಸ್ವಯಂಸೇವಕರಾಗಿ ಉತ್ತಮ ತರಬೇತಿ ಪಡೆದು, ಈ ಸಂಘಟನೆಯ ಸದಸ್ಯರಾಗಿದ್ದಾರೆ ಎಂದು ಆರ್ ಎಸ್ ಎಸ್ ಹೇಳಿಕೆಯಲ್ಲಿ ತಿಳಿಸಿದೆ.