ಸತ್ಯಪಾಲ್ ಮಾಲಿಕ್ ಸಂದರ್ಶನ – ಥಾಪರ್ ಜತೆ (ದಿ ವೈರ್ ನಲ್ಲಿ ಪ್ರಕಟವಾದ್ದು) ಭಾಗ 5 : ರಿಲಯನ್ಸ್ ಇನ್ಶೂರೆನ್ಸ್, ಭ್ರಷ್ಟಾಚಾರ

ಅನುವಾದ : ಅಬ್ದುಲ್ ರಹಮಾನ್ ಪಾಷಾ

ದಿ ವೈರ್ (THE WIRE ) ಪೋರ್ಟಲ್‌ಗಾಗಿ, ಕರಣ್ ಥಾಪರ್,  ಆಗಸ್ಟ್ ೨೦೧೮ರಿಂದ  ಅಕ್ಟೋಬರ್ ೨೦೧೯ರ ವರೆಗೆ  ಕಾಶ್ಮೀರದ ಕೊನೆಯ ರಾಜ್ಯಪಾಲರಾಗಿದ್ದ ಸತ್ಯ ಪಾಲ್ ಮಲಿಕ್ ರೊಂದಿಗೆ ಮಾಡಿದ ಸಂದರ್ಶನದ ಸಂಕ್ಷಿಪ್ತ ಪಠ್ಯ.  ಈಗಾಗಲೇ ಭಾಗ-1 ರಲ್ಲಿ ಪೀಠಿಕೆ, 2ರಲ್ಲಿ ಕಾಶ್ಮೀರದ ವಿಧಾನಸಭೆ ವಿಸರ್ಜನೆ,ಭಾಗ 3ರಲ್ಲಿ ಫುಲ್ವಾಮಾ ದುರ್ಘಟನೆ,  ಭಾಗ 4ರಲ್ಲಿ ‘ಅನುಚ್ಛೇದ ೩೭೦ರ ರದ್ದತಿ’ ಕುರಿತ ಸಂದರ್ಶನದ ಭಾಗಗಳು ಇವೆ. ಈ ಭಾಗ 5ರಲ್ಲಿ ‘ರಿಲಯನ್ಸ್ ಇನ್ಶೂರೆನ್ಸ್, ಭ್ರಷ್ಟಾಚಾರ’ ಕುರಿತ ಸಂದರ್ಶನದ ಭಾಗ (ಇತರ ಭಾಗಗಳು ಮುಂದಿನ ಕಂತುಗಳಲ್ಲಿ) 

ಕರಣ್: ನೀವು ನೀಡಿದ ಸಂದರ್ಶನದಲ್ಲಿ, ರಿಲಯನ್ಸ್ ಇನ್ಶೂರೆನ್ಸ್ ಕಂಪನಿ ಕಾಶ್ಮೀರದಲ್ಲಿ ಹೇಗೆ ಒಂದು ಇನ್ಶೂರೆನ್ಸ್ ಸ್ಕೀಮನ್ನು ಆರಂಭಿಸಬೇಕು ಎಂದು ಕೊಂಡಿತ್ತು ಎನ್ನುವುದರ ಬಗ್ಗೆ ಮಾತಾಡಿದ್ದಿರಿ. ಅದಕ್ಕೆ ಅನುಮೋದನೆಯನ್ನು ಪಡೆಯಲು ರಾಮ್ ಮಾಧವ್ ನಿಮ್ಮ ಬಳಿ ಬಂದಿದ್ದರು ಎಂದಿದ್ದಿರಿ, ಅವರು ಬೆಳಿಗ್ಗೆ ೭ ಗಂಟೆಗೆ ನಿಮ್ಮ ಮನೆಗೆ ಬಂದಿದ್ದರು, ನೀವು ಆ ಹೊತ್ತಿಗೆ ನೀವು ಇನ್ನೂ ಸ್ನಾನವನ್ನೂ ಮಾಡಿರಲಿಲ್ಲ ಎಂದೂ ಹೇಳಿದ್ದಿರಿ.

ಮಲಿಕ್: ಹೌದು, ನಾನು ಸ್ನಾನ ಮಾಡಿರಲಿಲ್ಲ. ಸ್ನಾನ ಮಾಡದೇ ನಾನು ಯಾರನ್ನೂ ಭೇಟಿಯಾಗುವುದಿಲ್ಲ. ಆದರೆ, ಅವರನ್ನು ಭೇಟಿ ಮಾಡಬೇಕಾಗಿ ಬಂತು.

ಕರಣ್: ಅವರನ್ನು ಭೇಟಿಯಾದಿರಿ. ಅವರು  ನಿಮಗೆ ಅವರ ಯೋಜನೆಗೆ ಅನುಮೋದನೆಯನ್ನು ನೀಡುವಂತೆ ಕೇಳಿದರು, ನೀವು ಹೇಳಿದಿರಿ, ‘ನಾನು ತಪ್ಪು ಕೆಲಸ ಮಾಡುವುದಿಲ್ಲ.’ ಎಂದು. ಅವರು ನಿಮ್ಮಿಂದ ಏನು ತಪ್ಪು ಕೆಲಸ ಮಾಡಿಸಬೇಕು ಅಂದುಕೊಂಡಿದ್ದರು?

ಮಲಿಕ್: ನಿನ್ನೆ ಅವರ ಒಂದು ನೋಟೀಸ್ ಕೂಡ ಬಂದಿದೆ.

ಕರಣ್: ಹೌದು, ಪತ್ರಿಕೆಗಳಲ್ಲಿಯೂ ಬಂದಿದೆ, ಅವರು ನಿಮ್ಮನ್ನು ಮಾನಹಾನಿಗಾಗಿ ಮುಕದ್ದಮೆಯನ್ನೂ ಹೂಡುವವರಿದ್ದಾರೆ.

ಮಲಿಕ್: ಅವರು ಮೊದಲು ರಾಜಭವನಕ್ಕೆ ಏನು ಮಾಡಲು ಹೋಗಿದ್ದರು ಎಂದು ಹೇಳಲಿ. ರಾಜಭವನ್‌ಗೆ ಗೋಹತ್ಯ ವಿಚಾರದಲ್ಲಿ ಮಾತಾಡಲು ಹೋಗಿದ್ದರು, ಈ ವಿಚಾರವನ್ನು ಹೊರತುಪಡಿಸಿ. ನಾವು ಅದನ್ನು ಒಂದು ದಿನ ಮುಂಚಿತವಾಗಿ ಮುಗಿಸಿದ್ದೆವು. ಇವರು ಬೆಳಿಗ್ಗೆ ಬೆಳಿಗ್ಗೆ ಬಂದುಬಿಟ್ಟರು. ನಾನು ಭೇಟಿಯಾದೆ, ಹೇಳಿ ಏನಾಗಬೇಕು ಎಂದು ಹೇಳಿದೆ. ಇನ್ಶೂರೆನ್ಸ್ ವಿಚಾರ ಮುಗಿಸಿದಿರಾ ಎಂದು ಕೇಳಿದರು, ಹಾಂ ಮುಗಿಸಿದ್ದೇನೆ ನಿಮಗೆ ಈಗಾಗಲೇ ಪತ್ರ ಹೋಗಿರಬಹುದು. ಇದನ್ನು ಕೇಳಿ ರಾಮ್ ಮಾಧವ್‌ ಅವರು ಅಪ್‌ಸೆಟ್ ಆದರು.

ಕರಣ್: ರಿಲಯನ್ಸ್ ನವರು ಜಾರಿಗೆ ತರಬೇಕು ಅಂದು ಕೊಂಡಿದ್ದ ಆ ಇನ್ಶೂರೆನ್ಸ್ ಯೋಜನೆಯನ್ನು ನೀವು ಏಕೆ ರದ್ದು ಮಾಡಿದಿರಿ?

ಮಲಿಕ್: ಅದಕ್ಕೆ ಸರಕಾರದ ಉದ್ಯೋಗಿಗಳಲ್ಲಿ ಬಹಳ ವಿರೋಧ ಉಂಟಾಯಿತು. ಪ್ರತಿ ವರ್ಷ ಪ್ರತಿ ಉದ್ಯೋಗಿ ೮,೫೦೦ ರೂಪಾಯಿ ಕೊಡಬೇಕಾಗಿತ್ತು. ನಿವೃತ್ತ ಉದ್ಯೋಗಿಗಳು ೨೦,೦೦೦ಕ್ಕಿಂತಲೂ ಹೆಚ್ಚು ಕೊಡಬೇಕಾಗಿತ್ತು. ನಾನೆಂದೆ, ದೆಹಲಿಯಲ್ಲಿ ಸಿಜಿಎಚ್‌ಎಸ್ ನಲ್ಲಿ ನಾವು ಏನೂ ಕೊಡುವ ಅಗತ್ಯ ಇರಲ್ಲ. ಇಲ್ಯಾಕೆ ಕೊಡುತ್ತಾರೆ? ಇದಲ್ಲದೇ, ಈ ಸ್ಕೀಮಿನಲ್ಲಿ ಪಟ್ಟಿ ಮಾಡಲಾಗಿದ್ದ ೫-೬ ಆಸ್ಪತ್ರೆಗಳು ಥರ್ಡ್ ರೇಟ್ ಆಸ್ಪತ್ರೆ ಆಗಿದ್ದವು. ಆಸ್ಪತ್ರೆನೂ ಚೆನ್ನಾಗಿಲ್ಲ, ಚಿಕಿತ್ಸೆಯೂ ಒಳ್ಳೆಯದು ಸಿಗಲ್ಲ, ದುಡ್ಡೂ ಕೊಡಬೇಕು… ನಾನೆಂದೆ ಇದನ್ನು ಸಿಜಿಎಚ್‌ಎಸ್ ಮಾದರಿಯಲ್ಲಿ ಮಾಡಿ ಎಂದೆ.

ಕರಣ್: ರಾಮ್ ಮಾಧವ್ ಅವರ ಪ್ರಕಾರ ಈ ಬಗ್ಗೆ ನೀವು ನಿಮ್ಮ ಅಭಿಪ್ರಾಯವನ್ನು ಬದಲಾಯಿಸ ಬೇಕಾಗಿತ್ತು.

ಮಲಿಕ್: ಅದು ಸಾಧ್ಯವೇ ಇರಲಿಲ್ಲ, ಬಿಡಿ. ಪಿ.ಎಂ. ಹೇಳಿದ್ದರೂ ನಾನು ಈ ಯೋಜನೆಗೆ ಒಪ್ಪಿಗೆ ನೀಡುತ್ತಿರಲಿಲ್ಲ. ,, ,, ,, ಹೈಡಲ್ ಪಾಸ್ ಯೋಜನೆ ಮತ್ತು ಮತ್ತು ಈ ವಿಮೆ ಯೋಜನೆ- ಈ ಎರಡೂ ಡೀಲುಗಳಲ್ಲಿ ತಲಾ ಒಂದೂವರೆ ಕೋಟಿ ರೂಪಾಯಿ ಒಳಗೊಂಡಿದೆ ಎಂದು ನಾನು ಸಂದರ್ಶನದಲ್ಲಿ ಹೇಳಿದ್ದೆ. .. .. ನಾನು ಅನುಮೋದಿಸಿದ್ದರೆ ಮರುದಿನವೇ ಅದು ನನಗೆ ಸಿಗುತ್ತಿತ್ತು. ಆದರೆ ನಾನು ಈ ಎರಡೂ ಯೋಜನೆಗಳನ್ನು ರದ್ದುಪಡಿಸಿದೆ.

ಕರಣ್: ಸಿಬಿಐನವರು ನಿಮಗೆ ಈ ಕುರಿತು ಕೇಳಿದಾಗ ನೀವು, ‘ಅವರು ಪ್ರಧಾನ ಮಂತ್ರಿಯವರ ಜನ’ ಎಂದಿದ್ದೀರಿ. ಅಂದರೆ, ಇದರಲ್ಲಿ ಮೋದಿಯವರು ಇನ್‌ವಾಲ್ವ್ ಆಗಿದ್ದಾರೆ ಅನ್ನೋದು ನಿಮ್ಮ ಅಭಿಪ್ರಾಯವೇ?

ಮಲಿಕ್: ನಾನು ಹೇಳಿದ್ದು, ಇದರಲ್ಲಿ ಒಳಗೊಂಡಿರುವ ಎಲ್ಲರೂ ಮೋದಿಯವರ ನಿಕಟವರ್ತಿಗಳಾಗಿ ಎಂದು. ಒಬ್ಬರು ಮಣಿ, ಇನ್ನೊಬ್ಬರು ರಾಮ್ ಮಾಧವ್, ಇನ್ನೊಬ್ಬರು ಇದ್ದರು, ನಾನು ಪ್ರಧಾನ ಮಂತ್ರಿಯವರನ್ನು ಭೇಟಿ ಆಗುವುದಕ್ಕೆ ಹೋದಾಗಲೆಲ್ಲ, ನೀವು ಹಸೀಬ್ ದ್ರಾಬೂ ಅವರನ್ನು ಭೇಟಿ ಆದಿರೋ ಇಲ್ಲವೋ ಎಂದು ಕೇಳುತ್ತಿದ್ದರು. ೨-೩ ಬಾರಿ ನಾನು ಇಲ್ಲ, ಭೇಟಿಯಾಗಿಲ್ಲ ಅಂತಲೇ ಹೇಳಿದೆ. ನಂತರ ಒಂದು ದಿನ ನಾವು ಅವರನ್ನು ಕರೆಸಿಕೊಂಡೆ. ಹಸೀನ್ ದ್ರಾಬು, ಮಹಬೂಬಾ ಅವರ ಸರಕಾರದಲ್ಲಿ ಹಣಕಾಸು ಮಂತ್ರಿಯಾಗಿದ್ದರು, ಜೆ.ಕೆ.ಬ್ಯಾಂಕಿನಲ್ಲಿಯೂ ಇದ್ದರು. ಒಬ್ಬ ವ್ಹೀಲರ್ ಡೀಲರ್, ಈಗ ಅವರು ಬಾಂಬೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ, ಅವರು ನನ್ನನ್ನು ನೋಡಲು ಬಂದಾಗ, ನೀವು ನಮ್ಮ ಹೈಡಲ್ ಯೋಜನೆಯನ್ನು ಕ್ಯಾನ್ಸಲ್ ಮಾಡಿದ್ದೀರಿ, ಇರಲಿ, ನಾವು ಎಲ್ಲಿಂದಾದರೂ ಅದನ್ನು ಮಾಡಿಸಿಕೊಳ್ಳುತ್ತೇವೆ.. ಬಹುಶಃ ಅವರು ಅದನ್ನು ಬೇರೆ ಕಡೆಯಿಂದ ಅನುಮೋದನೆ ಮಾಡಿಸಿಯೂ ಮಾಡಿಸಿಕೊಂಡರು.

ನಂತರ ನಾನು ಪಿಎಂ ಅವರಿಗೆ ಹೇಳಿದೆ ನೀವು ಹೇಳಿದ ಹಾಗೆ ಹಸೀಬ್ ದ್ರಾಬೂ ಅವರನ್ನು ಭೇಟಿಯಾದೆ. ಅವರು ದಲಾಲಿಯ ಕೆಲಸ ತೆಗೆದುಕೊಂಡು ಬಂದಿದ್ದರು. ಆದ್ದರಿಂದ ನಾನು ಒಪ್ಪಲಿಲ್ಲ ಎಂದು ಹೇಳಿದ್ದಕ್ಕೆ, ಪಿ.ಎಂ. ಅವರು, ಇಲ್ಲ ನೀವು ಮಾಡಿದ್ದು ಸರಿಯೇ ಎಂದರು.

ಕರಣ್: ನಿಮ್ಮ ಪ್ರಕಾರ ಹಸೀನ್ ದ್ರಾಬು, ರಾಮ್ ಮಾಧವ್. ಅಂಬಾನಿ ಇವರೆಲ್ಲಾ ಪ್ರಧಾನಿಗೆ ತುಂಬಾ ನಿಕಟವಾಗಿದ್ದಾರೆ.

ಮಲಿಕ್: ಆಫ್ಕೋರ್ಸ್

ಕರಣ್ ಥಾಪರ್-ಸತ್ಪಾಲ್ ಮಲಿಕ್ ಇಡೀ (ಇಂಗ್ಲಿಷ್) ಸಂದರ್ಶನದ ಇಡೀ ವೀಡಿಯೋ ಲಿಂಕ್:

ಕರಣ್: ಇದರಲ್ಲಿ ಪ್ರಧಾನಿಯವರೂ ಇನ್‌ವಾಲ್ವ್ ಆಗಿದ್ದರಾ?

ಮಲಿಕ್: ನೋಡಿ, ನಾನು ಸೇಫ್ಲೀ ಹೇಳಬಲ್ಲೆ, ಪ್ರಧಾನ ಮಂತ್ರಿಯವರಿಗೆ ಭ್ರಷ್ಟಾಚಾರದಿಂದ ಯಾವುದೇ ದ್ವೇಷ ಇಲ್ಲ. ಇದಕ್ಕೆ ಬಹಳ ದೊಡ್ಡ ಪುರಾವೆ ಎಂದರೆ, ನಾನು ಗೋವಾದಲ್ಲಿ ಆಕ್ಷೇಪಿಸಿದ್ದೆ, ತಳಮಟ್ಟದಲ್ಲಿ ಭ್ರಷ್ಟಾಚಾರ ನಡೆಯಿತ್ತಿದೆ ಎಂದು ದೂರಿದ್ದೆ. ಅವರು ಮಾರನೇ ದಿನ ಖುದ್ದು ಫೋನ್ ಮಾಡಿ ಹೇಳಿದರು, ಸತ್ಪಾಲ್ ಭಾಯಿ ನಿಮಗೆ ಸಿಕ್ಕಿರುವ ಮಾಹಿತಿ ತಪ್ಪಾಗಿದೆ. ನಿಮಗೆ ಹೇಗೆ ಗೊತ್ತಾಯಿತು ಎಂದು ಕೇಳಿದಾಗ, ನಾನು ಯಾರಿಂದ ಮಾಹಿತಿ ಪಡೆದಿದ್ದೆ ಎಂದು ಹೇಳಿದೆ. ಈಗ ಖುದ್ದು ಮುಖ್ಯ ಮಂತ್ರಿಯ ನಿವಾಸದಲ್ಲಿ ಕುಳಿತು ದುಡ್ಡು ತೆಗೆದುಕೊಳ್ಳುತ್ತಿದ್ದಾನೆ. ಅಂತಿಮವಾಗಿ ಒಂದು ವಾರದಲ್ಲಿ ನನ್ನನ್ನು ಅಲ್ಲಿಂದ ವರ್ಗಾವಣೆ ಮಾಡಿಬಿಟ್ಟರು. ಅಂದಾಗ, ಪಿ.ಎಂ.ಅವರು ಭ್ರಷ್ಟಾಚಾರದ ವಿರುದ್ಧ ಇದ್ದಾರೆ ಎಂದು ನಾನು ಹೇಗೆ ನಂಬಲಿ?

ನಾನು ಇಂಥ ಅನೇಕ ಪ್ರಕರಣಗಳನ್ನು ಹೇಳಬಲ್ಲೆ. ಒಬ್ಬ ವ್ಯಕ್ತಿಯ ಕುರಿತು ನಾನು ಹೇಳಿದೆ. ಜಿತೇಂದ್ರನ ಕಛೇರಿಯಿಂದ ಒಂದು ಫೋನ್ ಕರೆ ಹೋಗುತ್ತೆ. ನಮ್ಮ ಮಂತ್ರಿಯವರನ್ನು ಸಂಪರ್ಕ ಮಾಡಿ ಎಂದು, ನಾನೆಂದೆ ನಿಮ್ಮ ಕಛೇರಿಯ ಹೆಸರು ಬಳಕೆಯಾಗುತ್ತಿದೆ. ಅವರು ಅಮಿತ್ ಶಾ ಅವರಿಗೆ ಹೇಳಿದರು, ಅಮಿತ್ ಶಾ ಅವರು ನನ್ನನ್ನು ವಿಚಾರಿಸಿದರು. ನಾನು, ಹೌದು. ಖಂಡಿತ ಇದು ನಿಜ ಎಂದೆ. ಇದನ್ನು ನನ್ನ ಮುಖ್ಯ ಕಾರ್ಯದರ್ಶಿಯೂ ಹೇಳಿದ್ದರು, ಬೇಕಾದರೆ ಅವರನ್ನು ಕೇಳಿ. ಆದರೆ ಜಿತೇಂದ್ರ ಸಿಂಗ್ ಎಲ್ಲಿರಬೇಕೋ ಅಲ್ಲೇ ಇದ್ದರು. ಹೀಗಿರುವಾಗ, ಭ್ರಷ್ಟಾಚಾರ ಇಲ್ಲ ಎಂದು ನಾನು ಹೇಗೆ ನಂಬಲಿ?

ಕರಣ್: ಅಚ್ಚರಿಯ ಸಂಗತಿ ಎಂದರೆ ಪ್ರಧಾನಿಯವರು ಪ್ರತಿ ದಿನ ಕಾಂಗ್ರೆಸ್ಸನ್ನು ಭಷ್ಟಾಚಾರಕ್ಕಾಗಿ ಆರೋಪಿಸುತ್ತಲೇ ಇರುತ್ತಾರೆ. ಬೇರೆ ಪಕ್ಷಗಳನ್ನು ಆರೋಪಿಸುತ್ತಿರುತ್ತಾರೆ. ಪ್ರತಿಯೊಂದು ರ‍್ಯಾಲಿಯಲ್ಲಿಯೂ ಅವರು ಆಣೆ ಇಟ್ಟು ಹೇಳುತ್ತಿದ್ದಾರೆ, ನಾನು ಭ್ರಷ್ಟಾಚಾರವನ್ನು ನಿರ್ಮೂಲನ ಮಾಡುತ್ತೇನೆ ಎಂದು, ಆದರೆ, ನೀವನ್ನುತ್ತೀರಿ ಅವರ ಮೂಗಿನ ಕೆಳಗಡೆಯೇ ಭ್ರಷ್ಟಾಚಾರ ನಡೆಯುತ್ತಿದೆ ಅಂದ ಹಾಗಾಯ್ತು?

ಮಲಿಕ್: ಅವರು ಭ್ರಷ್ಟಾಚಾರವನ್ನು ತೊಡೆದು ಹಾಕಿರುವ ಒಂದಾದರೂ ಪ್ರಕರಣವನ್ನು ಹೇಳಲಿ. ನಾನು ಯಾವುದರ ಬಗ್ಗೆ ಅವರ ಬಳಿ ದೂರಿತ್ತೆನೋ ಅಂಥ ಎರಡು ನಿರ್ದಿಷ್ಟ ಪ್ರಕರಣಗಳ ಬಗ್ಗೆ ಹೇಳುತ್ತಾ ಇದ್ದೇನೆ. ಮತ್ತು ಎರಡು ನೂರಕ್ಕೆ ನೂರು ಕರೆಕ್ಟ್. .. ಗೋವಾದಲ್ಲಿ ಮಕ್ಕಳಿಗೆ ಕೇಳಿನೋಡಿ, ಗೋವಾದ ಮುಖ್ಯ ಮಂತ್ರಿ ಎಂಥವರು ಎಂದು.

ಕರಣ್: ನೀವು ಗೋವಾದ ಭ್ರಷ್ಟಾಚಾರದ ಕುರಿತು ಪ್ರಧಾನಿಗೆ ದೂರಿದ್ದಕ್ಕೆ ನಿಮ್ಮನ್ನು ಒಂದು ವಾರದ ಒಳಗೆ ಅಲ್ಲಿಂದ ವರ್ಗಾವಣೆ ಮಾಡಲಾಯಿತು?

ಮಲಿಕ್: ಅಲ್ಲಿಂದ ತೆಗೆದು ಹಾಕಿದರು, ಅಲ್ಲಿನ ಮೂರು ಜನ ಶ್ರೇಷ್ಠ ಲೋಕಗಾಯಕರು, ಅವರು ರಾಜಭವನದ ಎದುರು ನಿಂತು ನನ್ನ ಪರವಾಗಿ ಹಾಡುಗಳನ್ನು ಹಾಡಿದರು. ಒಬ್ಬ ರಾಜ್ಯಪಾಲರ ಸಂದರ್ಭದಲ್ಲಿ ಹೀಗೆ ಯಾವಾಗಲೂ ಆಗುವುದಿಲ್ಲ. ಆಲ್ಲಿ, ನನ್ನ ಪರವಾಗಿ ರ‍್ಯಾಲಿ ತೆಗೆಯಲಾಯಿತು. ನಾನು ಆದಷ್ಟು ಬೇಗ ಅಲ್ಲಿಂದ ಹೊರಟು ಹೋಗುವಂತೆ ಆದೇಶಿಸಲಾಯಿತು. ಆ ಹೊತ್ತಿಗೆ ಗೋವಾದಿಂದ ಯಾವುದೇ ವಿಮಾನ ಇರಲಿಲ್ಲ.  ಒಂದು ಹಳೆಯ ಹರಕಲು ಮುರುಕಲು ವಿಮಾನ ಅಲ್ಲಿತ್ತು. ಅದರಲ್ಲಿ ನಾನು ಹೊರಟು ಹೋದೆ.

ಕರಣ್: ಅಂದರೆ ಕೇಂದ್ರವು ನಿಮ್ಮನ್ನು ಗೋವಾದಿಂದ ಹೊರಗೆ ಕಳಿಸಲು ಎಷ್ಟೊಂದು ಅವಸರದಲ್ಲಿತ್ತು ಎಂದರೆ ವಿಶೇಷ ವಿಮಾನವನ್ನು ಮಾಡಿ ನಿಮ್ಮನ್ನು ಅಲ್ಲಿಂದ ಕಳಿಸಲಾಯಿತು?

ಮಲಿಕ್: ಇದಕ್ಕೆ ಕಾರಣ ಇತ್ತು. ಅಲ್ಲಿ ಜನರ ಭಾವನೆಗಳು ಉದ್ದೀಪನಗೊಂಡಿದ್ದವು. ಅವು ನನ್ನ ಪರವಾಗಿ ಇದ್ದವು, ನಾನು ಜನಪ್ರಿಯನಾಗುತ್ತಿದ್ದೆ. .. ನಾನು ಹೇಳಿದ್ದೆ..ಇಂತಿಂತ ಮಾರ್ಗಗಳಲ್ಲಿ ಸಾರಿಗೆ ವಾಹನಗಳನ್ನು ಅನುಮತಿಸಬೇಡಿ, ಅಲ್ಲಿ ಕರೋನಾ ಹರಡುವ ಸಂಭವವಿದೆ ಎಂದು ಹೇಳಿದ್ದೆ. ಆದರೆ ಮುಖ್ಯಮಂತ್ರಿ ಅದನ್ನು ತಡೆಯಲಿಲ್ಲ, ಏಕೆಂದರೆ, ಅವರು ಆ ವಾಹನದವರಿಂದ ಹಣವನ್ನು ಪಡೆಯುತ್ತಿದ್ದರು. ಇಂಥ ಹಲವಾರು ಸಂಗತಿಗಳಿದ್ದವು, ಜನರಿಗೆ ನಾನು ಅವರ ಪರವಾಗಿದ್ದೇನೆ ಎಂದು ಅನ್ನಿಸತೊಡಗಿತ್ತು.

ಕರಣ್: ಇದೆಲ್ಲವನ್ನೂ ಜನ ಆಲಿಸುತ್ತಾರೆ, ಸರಕಾರವೂ ಆಲಿಸುತ್ತದೆ, ಪ್ರಧಾನಿಯವರ ಕಿವಿಯವರೆಗೆ ತಲುಪಲುಬಹುದು.

ಮಲಿಕ್: ಒಂದು ಗಂಟೆಯ ಒಳಗೆ ತಲುಪುತ್ತದೆ.

ಕರಣ್: ಈ ಕುರಿತು ನಿಮಗೆ ಏನಾದರೂ ಚಿಂತೆ, ಆತಂಕ ಇದೆಯೇ?

ಮಲಿಕ್: ನಾನೊಬ  ಫಕೀರ್ ಆದ್ಮಿ. ನನ್ನದೇನು ಮಾಡಿಕೊಳ್ಳಬಲ್ಲರು, ಹೆಚ್ಚೆಂದರೆ ಜೈಲಿಗೆ ಕಳಿಸಬಹುದು. ನಾನು ಬಹಳ ಬಾರಿ ಜೈಲಿಗೆ ಹೋಗಿದ್ದೇನೆ. ಕಾಶ್ಮೀರದ ಕುರಿತು ಮಾತಾಡುವುದು ಬೇಡ ಎಂದು ನನಗೆ ಬಹಳ ಕಠಿಣವಾಗಿ ಸೂಚನೆ ನೀಡಲಾಗಿತ್ತು. ಗೋವದಲ್ಲಿದ್ದಾಗ ಅವರು ಒಮ್ಮೆ  ಫೋನ್ ಮಾಡಿ, ಏನು ಮತ್ತೆ ನೀವು ಕಾಶ್ಮೀರದ ಬಗ್ಗೆ ಮಾತಾಡಿದ್ದೀರಿ,  ನೀವು ಇನ್ನೊಮ್ಮೆ ಕಾಶ್ಮೀರದ ಬಗ್ಗೆ ಮಾತಾಡಿದರೆ ನಾನು ಎಂದಿಗೂ ನಿಮ್ಮನ್ನು ಭೇಟಿ ಮಾಡುವುದಿಲ್ಲ ಎಂದು ಹೇಳಿದ್ದರು.

ಕರಣ್: ಈಗ ನೀವು ಮುಕ್ತವಾಗಿ ಹೇಳಿದ್ದೀರಿ.

ಮಲಿಕ್: ಯಾಕೆ ಹೇಳಬಾರದು? ನಿಮಗೆ ಅಚ್ಚರಿ ಎನ್ನಿಸಬಹುದು, ಕಾಶ್ಮೀರದ ಸಲಹಾ ಸಮಿತಿ ಬರೆದಿತ್ತು, ಇವರಿಗೆ ಪಾಕಿಸ್ತಾನದಿಂದ ಗಂಭೀರವಾದ ಅಪಾಯ ಇದೆ, ಇವರಿಗೆ ಮನೆ ಸಿಗಬೇಕು, ಝೆಡ್ ಮಟ್ಟದ ಭದ್ರತೆ ಸಿಗಬೇಕು ಎಂದು, ಆದರೆ ಸಿಕ್ಕಿದ್ದೇನು? ನಾನು ಈಗ ಬಾಡಿಗೆ ಮನೆಯಲ್ಲಿದ್ದೇನೆ, ನನ್ನ ಮನೆ ಎದುರು ಒಬ್ಬ ಸಿಪಾಯಿ ಮಾತ್ರ ಇರ್ತಾನೆ. ಇದು ಸ್ಥಿತಿ.

ಕರಣ್: ಅನುಚ್ಛೇದ ೩೭೦ನ್ನು ರದ್ದುಗೊಳಿಸಿದಾಗ ನೀವು ಕಾಶ್ಮೀರದ ರಾಜ್ಯಪಾಲರಾಗಿದ್ದಿರಿ ಎನ್ನುವ ಹಿನ್ನೆಲೆಯಲ್ಲಿ ನಿಮಗೆ ಗಂಭೀರವಾದ ಅಪಾಯವಿತ್ತು, ಆದರೂ ನಿಮಗೆ ಸೂಕ್ತವಾದ ಭದ್ರತೆಯನ್ನು ಸರಕಾರ ನೀಡಲಿಲ್ಲ? ಇದು ಸರಕಾರದ ಅಸಡ್ಡೆಯಲ್ಲವೇ?

ಮಲಿಕ್: ಸರಕಾರ ಬಯಸುವುದೇ ಈ ಹಾಳಾದವನನ್ನು ಯಾರಾದರೂ ಹೊಡೆದುಹಾಕಲಿ ಎಂದು.

ಕರಣ್: ಇವತ್ತಿನ ಈ ಸಂದರ್ಶನದ ನಂತರ ಮೋದಿಯವರು ನಿಮ್ಮ ಮೇಲೆ ಬಹಳವೇ ಕೋಪಮಾಡಿಕೊಳ್ಳುತ್ತಾರೆ.

ಮಲಿಕ್: ಎಷ್ಟಾದರೂ ಕೋಪಿಸಿಕೊಳ್ಳಲಿ, ಸತ್ಯ ಸತ್ಯವೇ.

Donate Janashakthi Media

Leave a Reply

Your email address will not be published. Required fields are marked *