ಚೆನ್ನೈಯಲ್ಲಿ ಭಾರಿ ಮಳೆ, ಹಲವೆಡೆ ನೆರೆ: ಶಾಲೆ–ಕಾಲೇಜುಗಳಿಗೆ ರಜೆ, ವಿಮಾನ ಹಾರಾಟ ಸ್ಥಗಿತ

ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಜನರ ರಕ್ಷಣೆಗಾಗಿ ಎನ್‌ಡಿಆರ್‌ಎಫ್ ತಂಡ ಸಹ ನಿಯೋಜನೆ ಮಾಡಲಾಗಿದೆ.

ತಮಿಳುನಾಡು ರಾಜ್ಯದಲ್ಲಿ ಭಾರಿ ಮಳೆ ಅವಾಂತರ ಸೃಷ್ಟಿಸಿದ  ಹಿನ್ನಲೆಯಲ್ಲಿ ತಮಿಳುನಾಡು ಸರ್ಕಾರ ಜನರ ರಕ್ಷಣೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಎರಡು ದಿನಗಳ ಕಾಲ ಚೆನ್ನೈ ಸೇರಿದಂತೆ 3 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದೀಪಾವಳಿ ಹಬ್ಬಕ್ಕೆ ಹೊರಗಡೆ ಹೋದವರು ಚೆನ್ನೈಗೆ ವಾಪಸ್ ಆಗುವುದನ್ನು ಒಂದು ದಿನ ಮುಂದೂಡಿ ಎಂದು ಮನವಿ ಮಾಡಲಾಗಿದೆ.

ಮಹಾಮಳೆಗೆ ಚೆನ್ನೈ ಮಹಾನಗರ ತತ್ತರಿಸಿಹೋಗಿದೆ. ಕಳೆದ 12 ಗಂಟೆಯ ಅವಧಿಯಲ್ಲಿ ಚೆನ್ನೈನಲ್ಲಿ ಭಾರಿ ಮಳೆಯಾದ ಪರಿಣಾಮ ಜನಜೀವನ ಬಹುತೇಕ ಅಸ್ತವ್ಯಸ್ತಗೊಂಡಿದೆ. ಚೆನ್ನೈ ಮಹಾನಗರದ ರಸ್ತೆಗಳು ಕೆರೆಗಳಂತಾಗಿವೆ. ವಾಹನ ಸವಾರರು, ನಿವಾಸಿಗಳು ಪರದಾಟ ನಡೆಸಿದ್ದಾರೆ. ಡ್ಯಾಂಗಳು ಭರ್ತಿಯಾಗಿದ್ದು, ಜಲಾಶಯಗಳಿಂದ ನೀರನ್ನು ಹೊರಬಿಡಲಾಗಿದೆ. ಭಾನುವಾರ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಖಾಸಗಿ ಕಂಪನಿಗಳು ರಜೆ ಘೋಷಣೆ ಮಾಡುವಂತೆ ಅಥವ ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ನೀಡುವಂತೆ ಸೂಚನೆ ನೀಡಿದ್ದಾರೆ. ಸೋಮವಾರ ಹಲವು ಸರ್ಕಾರಿ ಕಚೇರಿಗಳು ಮುಚ್ಚಿರಲಿವೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಮಳೆ ಸುರಿಯುತ್ತಿದೆ. 6 ವರ್ಷಗಳ ಬಳಿಕ ತಮಿಳುನಾಡಿನಲ್ಲಿ ಈ ಪ್ರಮಾಣದಲ್ಲಿ ಮಳೆಯಾಗಿದೆ. ಹಲವೆಡೆ ನಗರಗಳು ಜಲಾವೃತಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಅಂದಿನ ಮಳೆಗಿಂತ ಈಗ ಅರ್ಧದಷ್ಟು ಮಳೆ ಸುರಿದಿದ್ದು, ಆದರೂ ನಗರ ಜಲಾವೃತವಾಗಿದ್ದು, ಜನತೆ ಪರದಾಡಿದ್ದಾರೆ. ನಗರಕ್ಕೆ ಸಂಬಂಧಿಸಿದ 3 ಜಲಾಶಯಗಳು ಭರ್ತಿ ಆಗಿದ್ದು, ನೀರು ಹೊರಬಿಡಲು ನಿರ್ಧರಿಸಲಾಗಿದೆ. ಇದೇ ವೇಳೆ ಚೆನ್ನೈ ಸನಿಹದ ಕಾಂಚೀಪುರಂ ಹಾಗೂ ತಿರುವಳ್ಳೂರು ಜಿಲ್ಲೆಗಳಲ್ಲಿ ಕೂಡ ಭಾರಿ ವರ್ಷಧಾರೆ ಸಂಭವಿಸಿದೆ.

ಭಾರತೀಯ ಹವಾಮಾನ ಇಲಾಖೆ ಸೋಮವಾರ ಸಹ ಮಳೆ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಿದೆ. ಚೆನ್ನೈ, ತಿರುವಳ್ಳೂರು, ಕಾಂಚಿಪುರಂ, ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಮಹಾಮಳೆಗೆ ಚೆನ್ನೈ ಮಹಾನಗರ ಸ್ತಬ್ಧವಾಗಿದ್ದು, ಏರ್ಪೋರ್ಟ್ ರನ್ ವೇ ಬಂದ್ ಮಾಡಿ, ಲೋಕಲ್ ಟ್ರೈನ್ ಗಳನ್ನು ನಿಲ್ಲಿಸಲಾಗಿದೆ.

“ಚಂಡಮಾರುತದ ಪರಿಚಲನೆಯು ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಪಕ್ಕದ ಸಮಭಾಜಕ ಹಿಂದೂ ಮಹಾಸಾಗರದ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 4.5 ಕಿಮೀ ವರೆಗೆ ವಿಸ್ತರಿಸಿದೆ. ಇದರ ಪ್ರಭಾವದ ಅಡಿಯಲ್ಲಿ, ಆಗ್ನೇಯ ಬಂಗಾಳ ಕೊಲ್ಲಿ ಮತ್ತು ನೆರೆಹೊರೆಯಲ್ಲಿ 09 ನವೆಂಬರ್ 2021 ರ ಸುಮಾರಿಗೆ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ಐಎಮ್‌ಡಿ ಹೇಳಿದೆ. ಭಾರೀ ಮಳೆ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಪ್ರವಾಹ ಪೀಡಿತ ಪ್ರದೇಶಗಳ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಜಲಾವೃತವಾಗಿರುವ 14 ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜನರ ಸ್ಥಳಾಂತರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *