“ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮಾಜಿ ರಾಜ್ಯಪಾಲ ಶ್ರೀ . ಸತ್ಯಪಾಲ್ ಮಲಿಕ್ ಎತ್ತಿರುವ ಎಲ್ಲಾ ಗಂಭೀರ ಆರೋಪಗಳ ಬಗ್ಗೆ ಮೋದಿ ಸರ್ಕಾರವು ಸ್ಪಷ್ಟಗೊಳಿಸಬೇಕು, ಅವಕ್ಕೆಲ್ಲ ಉತ್ತರಿಸಬೇಕು” ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಆಗ್ರಹಿಸಿದೆ. “40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಕುರಿತಂತೆ ಆರೋಪಗಳು ನಮ್ಮ ದೇಶದ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ. ನಮ್ಮ ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವಲ್ಲಿ ಯಾವುದೇ ಲೋಪವಾಗುವುದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಪೊಲಿಟ್‍ಬ್ಯುರೊ ಹೇಳಿದೆ. ಇದು ಸರಕಾರದ ತಪ್ಪಿನಿಂದಾಗಿ ಸಂಭವಿಸಿರುವ ದುರಂತ, ಸಿಆರ್ ಪಿ ಎಫ್ ನವರು ಕೇಳಿದಂತೆ ದಳದ ಸದಸ್ಯರನ್ನು ಸಾಗಿಸಲು ಐದು ವಿಮಾನಗಳನ್ನು ಕೊಟ್ಟಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಪ್ರಧಾನ ಮಂತ್ರಿಗಳಿಗೆ ಹೇಳಿದಾಗ ಅವರು ಈಗ ಈ ಬಗ್ಗೆ ಸುಮ್ಮನಿರಿ ಎಂದು ಹೇಳಿದುದಾಗಿ ಪ್ರಖ್ಯಾತ ಪತ್ರಕರ್ತ ಕರಣ್ ಥಾಪರ್ ರೊಂದಿಗೆ ಸಂದರ್ಶನದಲ್ಲಿ ಸತ್ಯಪಾಲ್ ಮಲಿಕ್ ಅವರು ಹೇಳಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದು. ತನಗೆ ಅಷ್ಟು ಹೊತ್ತಿಗೆ ಗೊತ್ತಾಗಿ ಹೋಗಿತ್ತು, ಈ ಎಲ್ಲಾ ದೋಷ ಪಾಕಿಸ್ತಾನದ ಕಡೆಗೆ ತಿರುಗಿಸಬೇಕಾಗಿತ್ತು, ಆದ್ದರಿಂದ ಮಾತಾಡುವುದು ಬೇಡ ಎಂದು ಹೇಳಲಾಗಿತ್ತು ಎಂದೂ ಮಲಿಕ್ ಹೇಳಿದ್ದಾರೆ. ಈ ಘಟನೆಗೆ ಪ್ರತೀಕಾರವೆಂದು ಮುಂದೆ ಬಾಲಾಕೋಟ್ ವಿಮಾನ ದಾಳಿ ನಡೆಸಿ ಅದನ್ನು 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಳಸಿಕೊಂಡದ್ದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬಹುದು. “ಸಂವಿಧಾನದ 370 ಮತ್ತು 35 ಎ ಕಲಮುಗಳನ್ನು ರದ್ದುಗೊಳಿಸಿದ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ರಾಜ್ಯವನ್ನು ವಿಸರ್ಜಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಿದ್ದಕ್ಕೆ ಸಂಬಂಧಿಸಿದ ಆರೋಪಗಳು ಕೂಡ ಅಷ್ಟೇ ಗಂಭೀರವಾಗಿವೆ” ಎಂದೂ ಸಿಪಿಐ(ಎಂ) ಪೊಲಿಟ್‍ಬ್ಯುರೊ ಆತಂಕ ವ್ಯಕ್ತಪಡಿಸಿದೆ. ಆಗ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯಿದ್ದು, ಅಲ್ಲಿಯ ಆಡಳಿತಕ್ಕೆ ಪೂರ್ಣ ಹೊಣೆಗಾರರಿದ್ದ ರಾಜ್ಯಪಾಲರಿಗೂ ಹಿಂದಿನ ರಾತ್ರಿಯ ವರೆಗೂ ಇದರ ಸುಳಿವಿರಲಿಲ್ಲ ಎಂದು ಈ ಸಂದರ್ಶನದಿಂದ ಈಗ ತಿಳಿದು ಬಂದಿದೆ. ಅಲ್ಲದೆ ಪ್ರಧಾನಿಗಳಿಗೆ ಕಾಶ್ಮೀರದ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ, ಅದನ್ನು ಪಡೆದುಕೊಳ್ಳಬೇಕು ಎಂದನಿಸದಷ್ಟು ದರ್ಪ ಅವರಲ್ಲಿದ್ದಂತಿತ್ತು ಎಂದೂ ಸತ್ಪಾಲ್ ಮಲಿಕ್ ಸಂದರ್ಶನದಲ್ಲಿ ಸೂಚಿಸಿದ್ದಾರೆ ಎಂಬುದನ್ನು ಕೂಡ ಇಲ್ಲಿ ಗಮನಿಸಬಹುದು. “ಈ ವಿಷಯಗಳ ಬಗ್ಗೆ ಮೋದಿ ಸರ್ಕಾರದ ಮೌನವು ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಭಾರತದ ಐಕ್ಯತೆ ಮತ್ತು ಸಮಗ್ರತೆ ಕುರಿತಂತೆ ಬಹಳ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಸಾಂವಿಧಾನಿಕ ಪಾವಿತ್ರ್ಯದ ಹಿತದೃಷ್ಟಿಯಿಂದ ಮೋದಿ ಸರ್ಕಾರ ಈ ಆರೋಪಗಳಿಗೆ ಉತ್ತರಿಸಬೇಕು. ಮೋದಿ ಸರ್ಕಾರ ಮೌನವಾಗಿರಲು ಸಾಧ್ಯವಿಲ್ಲ” ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಮುಂದುವರೆದು ಹೇಳಿದೆ.