ಮೈಸೂರು : ಕುಖ್ಯಾತ ಕ್ರಿಮಿನಲ್, ರಾಜಕಾರಣಿಗಳು, ಅಧಿಕಾರಿಗಳ ಅಪ್ತ ಸಖನೆಂದು ಗುರುತಿಸಿಕೊಂಡಿರುವ ಮೈಸೂರಿನ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಎಲ್ಲಿದ್ದಾನೆ ಎಂಬುದು ಸರಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಗೊತ್ತಿದೆ ಎಂದು ಒಡನಾಡಿ ಸಂಸ್ಥೆಯ ಸಂಸ್ಥಾಪಕ ಕೆ ವಿ ಸ್ಟ್ಯಾನ್ಲೀ ಆರೋಪಿಸಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ರವಿ ವಿರುದ್ಧ ದೂರು ದಾಖಲಾದಾಗ, ಇದಕ್ಕೆ ಪ್ರತಿಯಾಗಿ ರಾಜರಾಜೇಶ್ವರಿ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಲೋಹಿತ್ ಅವರು ಮಂಜುನಾಥನನ್ನು ಕರೆಸಿಕೊಂಡು ಒಂದು ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ ಎಂದು ಮಾಧ್ಯಮಗಳಿಗೆ ದಾಖಲೆ ಬಿಡುಗಡೆ ಮಾಡಿದ್ದಾರೆ.
ತಾನೊಬ್ಬ ಬಿಜೆಪಿ ಕಾರ್ಯಕರ್ತ, ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರಿ ನೌಕರರ ವರ್ಗಾವಣೆ ಮಾಡಿಸಿದ್ದು ನಿಜ. ವೇಶ್ಯಾವಾಟಿಕೆ ದಂಧೆಯ ಆರೋಪವಿರುವುದು ನಿಜ ಎಂದೆಲ್ಲ ಲಿಖಿತವಾಗಿ ಒಪ್ಪಿಕೊಂಡಿದ್ದಾನೆ ಎಂದು ಸ್ಯಾಂಟ್ರೋ ರವಿಯ ತಪ್ಪೊಪ್ಪಿಗೆ ಪತ್ರದ ಪ್ರತಿಯೊಂದನ್ನು ತಮ್ಮ ಕೈಯಲ್ಲಿ ಹಿಡಿದಿದ್ದ ಸ್ಟ್ಯಾನ್ಲೀ ಅದೊಂದು ಸರ್ಕಾರೀ ದಾಖಲೆ ಅಂತ ಹೇಳಿದರು. ತಪ್ಪೊಪ್ಪಿಗೆ ಪತ್ರದಲ್ಲಿ ಏನಿದೆ ಎಂಬುದನ್ನು ಅವರು ವಿವರಿಸಿದರು.
ಸ್ಯಾಂಟ್ರೋ ರವಿ ತಪ್ಪೊಪ್ಪಿಗೆ ಪತ್ರದಲ್ಲಿ ವಿವರ ಈ ರೀತಿ ಇದೆ.
1) ನಾನು ಮೈಸೂರಿನಲ್ಲಿ ವಾಸವಾಗಿದ್ದಾಗ 2005ರಲ್ಲಿ ಇಲವಾಲ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ವೇಶ್ಯಾವಾಟಿಕೆ ದಂಧೆಯ ದೂರು ದಾಖಲಾಗಿತ್ತು. ಅದರ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
2) ನಾನು 2-3 ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಬಿಜೆಪಿ ಪಕ್ಷದ ಸಂಸದರು, ಶಾಸಕರು, ರಾಜಕೀಯ ವ್ಯಕ್ತಿಗಳು ಪರಿಚಯ ಆಗಿರುತ್ತಾರೆ.
3) ನಾನು ರಾಜಕೀಯ ಸಂಬಂಧಗಳನ್ನು ಬಳಸಿಕೊಂಡು ರಾಜ್ಯ ಗುಪ್ತವಾರ್ತೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಜೆ.ಕೆ. ಸುಬ್ರಹ್ಮಣ್ಯ ಅವರನ್ನು ಚನ್ನರಾಯ ಪಟ್ಟಣ ಸರ್ಕಲ್‌ಗೆ, ಹಲಸೂರಿನಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ರವಿ ಅವರನ್ನು ಮಳವಳ್ಳಿ ಠಾಣೆಗೆ ವರ್ಗಾವಣೆ ಮಾಡಿಸಿದ್ದೇನೆ. ಇವರು ನಾನು ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿರುವಾಗ ಪರಿಚಯ ಆದವರು.
4) ಗೃಹ ಸಚಿವರ ಆಪ್ತ ಸಹಾಯಕ, ಸ್ನೇಹಿತರ ಮೂಲಕವೂ ವರ್ಗಾವಣೆಗೆ ನೆರವು ಸಿಕ್ಕಿದೆ. ಡಿಜಿ ಮತ್ತು ಐಜಿಪಿ ಕಚೇರಿ ಅಧಿಕಾರಿಗಳಿಂದಲೂ ಸಾಥ್ ಸಿಕ್ಕಿದೆ ಎಂದು ಹೇಳಿರುವ ರವಿ ತಾನು ಕರೆ ಮಾಡಿದ್ದ ಮೊಬೈಲ್ ನಂಬರ್, ಚಾಟ್ ಸಹಿತ ಎಲ್ಲವನ್ನೂ ಒಪ್ಪಿಕೊಂಡಿದ್ದಾನೆ.
ಇಷ್ಟೆಲ್ಲ ಗಂಭೀರ ಹೇಳಿಕೆಗಳಿದ್ದರೂ ಪೊಲೀಸರು ಮಾತ್ರ ಅವನ್ನು ಸುಮ್ಮನೆ ಬಿಟ್ಟು ಕಳುಹಿಸಿದ್ದಾರೆ. ಈಗ ಅವನೆಲ್ಲಿ, ಅವನೆಲ್ಲಿ ಎಂದು ಹುಡುಕುವ ನಾಟಕ ಮಾಡುತ್ತಿದ್ದಾರೆ ಎಂದು ಕೆ ವಿ ಸ್ಟ್ಯಾನ್ಲೀ ಆರೋಪಿಸಿದ್ದಾರೆ.