ಇನ್ನು ಮುಂದೆ ನವಂಬರ್ 8: ನೋಟುರದ್ಧತಿ ದಿನಾಚರಣೆ?

ಕೊನೆಗೂ ದೇಶದ ಸರ್ವೋಚ್ಚ ನ್ಯಾಯಾಲಯ ಎನ್‌ಡಿಎ-1ಸರಕಾರದ ನೋಟುರದ್ದತಿಗೆ ಹಾಕಿದ್ದ ಸವಾಲುಗಳ ಬಗ್ಗೆ 6 ವರ್ಷಗಳ ನಂತರ ಒಂದು ತೀರ್ಪು ನೀಡಿದೆ. ಅದು ಈ ಕ್ರಮ ಕಾನೂನುಬಾಹಿರವಾಗಿಲ್ಲ ಅಥವ ಅದರಲ್ಲಿ ದೋಷವೇನೂ ಇಲ್ಲ ಎಂದು 4:1 ಬಹುಮತದಿಂದ ಹೇಳಿರುವ ತೀರ್ಪು.

ಆಳುವ ಪಕ್ಷದ ಮುಖಂಡರು ತಕ್ಷಣವೇ ಇದನು ಸ್ವಾಗತಿಸುತ್ತ, ಪ್ರಧಾನ ಮಂತ್ರಿಗಳ “ಐತಿಹಾಸಿಕ” ಕ್ರಮವನ್ನು ದೇಶದ ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ ಎಂದು ಆನಂದತುಂದಿಲರಾಗಿ ಹೇಳುತ್ತಿದ್ದಾರೆ. ಅದು ರಾಷ್ಟ್ರೀಯ ಹಿತದೃಷ್ಟಿಯಿಂದ ಕೈಗೊಂಡ ಕ್ರಮವಾಗಿತ್ತು ಎಂದಿರುವ ಮಾಜಿ ಕಾನೂನುಮಂತ್ರಿಗಳು ಮುಂದುವರೆದು, ರಾಹುಲ್ ಗಾಂಧಿಯವರು ಈಗ ಇದರ ವಿರುದ್ಧ ಪ್ರಚಾರ ಮಾಡಿದ್ದಕ್ಕೆ ಕ್ಷಮೆ ಕೇಳುತ್ತಾರೆಯೇ ಎಂದೂ ಕೇಳಿದ್ದಾರೆ.

ಬಹುಮತ ಮತ್ತು ಭಿನ್ನಮತ-ಕೆಲವು ಗಮನಾರ್ಹ ಅಂಶಗಳು

ಆದರೆ ಸುಪ್ರಿಂ ಕೋರ್ಟಿನ ತೀರ್ಪು ಸರ್ವಾನುಮತದ ತೀರ್ಪು ಅಲ್ಲ ಎಂಬ ಕಾರಣಕ್ಕಷ್ಟೇ ಗಮನಾರ್ಹವಲ್ಲ.

ಬಹುಮತದ ತೀರ್ಪು 8 ನವಂಬರ್ 2016 ರಂದು ಸರಕಾರ ಕೈಗೊಂಡ ಕ್ರಮ ಕಾನೂನುಬಾಹಿರವೇನೂ ಆಗಿರಲಿಲ್ಲ ಅಥವ ಅಥವ ಅದರಲ್ಲಿ ಕಾನೂನಿನ ದೋಷವೇನೂ ಇರಲಿಲ್ಲ ಎಂದೇನೋ ಹೇಳಿದೆ.. “ಆದರೆ. ಯಾವ ಉದ್ದೇಶದಿಂದ ಸರಕಾರ ನೋಟುರದ್ಧತಿ ಕ್ರಮವನ್ನು ತಂದಿತೋ ಅದು ಈಡೇರಿದೆಯೇ ಅಥವ ಪ್ರತ್ಯಕ್ಷ ಅಥವ ಪರೋಕ್ಷ ಪ್ರಯೋಜನಗಳನ್ನು ತಂದಿದೆಯೇ ಎಂಬ ಪ್ರಶ್ನೆಗೆ ನಾವು ಹೋಗ ಬಯಸುವುದಿಲ್ಲ. ಆ ಪ್ರಶ್ನೆಯನ್ನು ಪರಿಶೀಲಿಸುವ ಪರಿಣತಿ ನಮಗಿಲ್ಲ. ಅದು ಪರಿಣತರ ಕ್ಷೇತ್ರದಲ್ಲಿದ್ದರೇ ಒಳ್ಳೆಯದು” ಎಂದು ಹೇಳಿರುವುದನ್ನೂ ಗಮನಿಸಬೇಕಾಗುತ್ತದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಇಂತಹ ಕ್ರಮ ಅಗತ್ಯವಾಗಿತ್ತೇ, ಅಥವ ಇದಕ್ಕಿಂತ ಉತ್ತಮ ಪರ್ಯಾಯಗಳಿದ್ದವೇ ಎಂಬುದನ್ನು ಸಂಬಂಧಪಟ್ಟ ಪರಿಣಿತರೇ ಹೇಳಬೇಕು ಎಂದಷ್ಟೇ ಹೇಳುತ್ತದೆ ಬಹುಮತದ ತೀರ್ಪು.

ಇದನ್ನು ಓದಿ: ನೋಟು ರದ್ದತಿ ನಿರ್ಧಾರ ಸಂಸತ್ತಿನ ಕಾಯಿದೆ ಮೂಲಕ ಕಾರ್ಯಗತಗೊಳಿಸಬೇಕಿತ್ತು: ನ್ಯಾ. ಬಿ.ವಿ.ನಾಗರತ್ನ

ಇನ್ನೊಂದೆಡೆಯಲ್ಲಿ, ಭಿನ್ನಮತದ ತೀರ್ಪಂತೂ ನವಂಬರ್ 8,2016ರಂದು ಆರ್‌ಬಿಐ ಕಾಯ್ದೆಯ ವಿಭಾಗ 26(2)ರ ಅಡಿಯಲ್ಲಿ ಹೊರಡಿಸಿದ ಅಧಿಸೂಚನೆ ಕಾನೂನಾತ್ಮಕವಾಗಿಲ್ಲ, ಇದನ್ನೊಳಗೊಂಡ 2016ರ ಸುಗ್ರೀವಾಜ್ಞೆ ಮತ್ತು 2017ರ ಕಾಯ್ದೆ ಕೂಡ ಕಾನೂನಾತ್ಮಕವಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಅಲ್ಲದೆ, ಈ ಕ್ರಮ ನಿರೀಕ್ಷಿಸಿದಷ್ಟು ಪರಿಣಾಮಕಾರಿಯಾಗಿರಲಿಕ್ಕಿಲ್ಲ, ಏಕೆಂದರೆ, ರದ್ದಾದ ನೋಟುಗಳಲ್ಲಿ 98%ದಷ್ಟು ವಿನಿಮಯಗೊಂಡುವು, ಅಲ್ಲದೆ, ಹೆಚ್ಚಿನ ಮೌಲ್ಯದ ಅಂದರೆ 2000ರೂ.ನ ನೋಟುಗಳನ್ನು ಬಿಡುಗಡೆ ಮಾಡಲಾಯ್ತು. ಅದೇನೇ ಇರಲಿ, ಇದರಿಂದ ಆರ್‌ಬಿಐ ಕಾಯ್ದೆ, 1934ರ ಆಧಾರದಲ್ಲಿ ಮಾಡಿರುವ ನೋಟುರದ್ಧತಿ ಕಾನೂನುಬಾಹಿರ ಎಂಬ ತೀರ್ಮಾನ ಬದಲಾಗುವುದಿಲ್ಲ ಎಂದು ತೀರ್ಪು ಹೇಳಿದೆ.

ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಎರಡೂ ತೀರ್ಪುಗಳಲ್ಲಿ, ರಿಝರ್ವ್ ಬ್ಯಾಂಕ್ ಈ ವಿಷಯವನ್ನು ಕೂಲಂಕುಷವಾಗಿ ಪರೀಕ್ಷಿಸಲಿಲ್ಲ, 24 ಗಂಟೆಗಳೊಳಗೆ ಸರಕಾರದ ನಿರ್ಧಾರಕ್ಕೆ ರಬ್ಬರ್ ಸ್ಟಾಂಪ್ ಆಗಿದೆ ಎಂದು ಕೂಡ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಒಪ್ಪಿಕೊಂಡಿರುವುದನ್ನು ಕಾಣಬಹುದು ಎನ್ನುತ್ತಾರೆ ವಿಶ್ಲೇಷಕರು. ಭಿನ್ನಮತದ ತೀರ್ಪಂತೂ, ರಿಜರ್ವ್ ಬ್ಯಾಂಕ್ ಸ್ವತಂತ್ರವಾಗಿ ಯೋಚಿಸಲಿಲ್ಲ, ಅದಕ್ಕೆ ಅದರ ಬಳಿ ಸಮಯವೂ ಇರಲಿಲ್ಲ ಎಂದು ನೇರವಾಗಿಯೇ ಹೇಳಿದೆ.

ನೋಟುರದ್ಧತಿಯ ಕ್ರಮಕ್ಕೆ ಮೂರು ಆಯಾಮಗಳಿವೆ- ಕಾನೂನಾತ್ಮಕ , ರಾಜಕೀಯ ಮತ್ತು ಆರ್ಥಿಕ. ಸುಪ್ರಿಂ ಕೋರ್ಟ್ ಕಾನೂನಾತ್ಮಕ ಅಂಶವನ್ನು ಮಾತ್ರ ಪರಿಗಣಿಸಿದೆ.

ಇದನ್ನು ಓದಿ: ನೋಟುರದ್ಧತಿ ಅಫಿಡವಿಟ್‌ಗಳು: ಸರಕಾರ ಮತ್ತು ಆರ್‌ಬಿಐ ಸರ್ವೋಚ್ಚ ನ್ಯಾಯಾಲಯಕ್ಕೆ ಹೇಳದಿರುವುದೆಷ್ಟು?

ರಾಜಕೀಯ ಆಯಾಮವೆಂದರೆ, ಅದರಿಂದಾಗಿ ಜನರು ತಮ್ಮದೇ ಹಣ ಪಡೆಯಲು ಅನಂತ ಸಾಲುಗಳಲ್ಲಿ ಪಟ್ಟ ಪಾಡು, ಸುಮಾರು 80 ಜನರ ಸಾವು, ಲಕ್ಷಾಂತರ ಜನಗಳ ಜೀವನೋಪಾಯಕ್ಕೆ ಉಂಟಾದ ಧಕ್ಕೆ, ಆರ್ಥಿಕ ಆಯಾಮವೆಂದರೆ, ಅದು ಅರ್ಥವ್ಯವಸ್ಥೆಯ ಮೇಲೆ, ಮುಖ್ಯವಾಗಿ ಕಿರು ಉತ್ಪಾದನೆ, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಮೇಲೆ ಉಂಟುಮಾಡಿದ ಗಂಭೀರ ದುಷ್ಪರಿಣಾಮ.

ಈ ಬಗ್ಗೆ ಸುಪ್ರಿಂ ಕೋರ್ಟಿನ ತೀರ್ಪಿನಿಂದ ಯಾವ ಉತ್ತರವೂ ಸಿಕ್ಕಿಲ್ಲ. ಸಿಗುವಂತೆಯೂ ಇರಲಿಲ್ಲ. ಏಕೆಂದರೆ ಅದೇ ತೀರ್ಪು ಕೂಡ ಹೇಳಿರುವಂತೆ ಈ ಉತ್ತರಗಳನ್ನು ಸಂಬಂಧಪಟ್ಟ ಪರಿಣಿತರಿಂದಲೇ ಪಡೆಯಬೇಕು. ಪರಿಣಿತರು ಈ ಮೊದಲೇ  ಉತ್ತರ ಕೊಟ್ಟಿದ್ದಾರೆ- ಅದೆಂದರೆ, ಇದೊಂದು ಅನಗತ್ಯವಾದ ವಿನಾಶಕಾರೀ ಕ್ರಮವಾಗಿತ್ತು ಎಂದು.

ಹೀಗಿರುವಾಗ ಆಳುವ ಪಕ್ಷದ ಮುಖಂಡರ ವಿಜಯೋತ್ಸವದ ಮಾತುಗಳು ವಿಚಿತ್ರವೇ ಸರಿ. ಅವರು ಇದನ್ನು ನಿಜವಾಗಿ ಒಂದು ವಿಜಯ ಎಂದು ಭಾವಿಸುವುದಾದರೆ, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿಯವರು ಟಿಪ್ಪಣಿ ಮಾಡಿರುವಂತೆ-ಬಿಜೆಪಿ ನೋಟುರದ್ಧತಿ ದಿನಾಚರಣೆ ಏಕೆ ನಡೆಸುತ್ತಿಲ್ಲ? ಅಥವ ಈ ವರ್ಷದಿಂದ ಅದನ್ನೂ ಆರಂಭಿಸುವ ಧೈರ್ಯವನ್ನು ಈ ಬಹುಮತದ ತೀರ್ಪು ಅವರಿಗೆ ನೀಡಿದೆಯೇ?

“ನೋಟುರದ್ಧತಿ ಬಹಳ ಉತ್ತಮ-ಅರ್ಥವ್ಯವಸ್ಥೆಗೆ ಸಾರ್!” “ಅದನ್ನು ಇನ್ನೊಮ್ಮೆ ಮಾಡೋಣ!” – ವ್ಯ್ರಂಗ್ಯಚಿತ್ರ ಕೃಪೆ:ಅಲೋಕ್ ನಿರಂತರ್

ಪ್ರತಿಯೊಂದು ಉದಾತ್ತ ಧ್ಯೇಯದಲ್ಲೂ ಅದರ ಹುತಾತ್ಮರಿರುತ್ತಾರೆ’?!

ಈ ಬಹುಮತದ ಮತ್ತು ಭಿನ್ನಮತದ ತೀರ್ಪುಗಳನ್ನು ಆಳವಾದ ವಿಶ್ಲೇಷಣೆಗೆ ಒಳಪಡಿಸಿರುವ ಒಬ್ಬ ವಿಶ್ಲೇಷಕರು ಬಹುಮತದ ತೀರ್ಪು ಸರಕಾರದ ತರ್ಕಗಳನ್ನು ಸಮರ್ಥಿಸಲು ರಿಜರ್ವ್ ಬ್ಯಾಂಕನ್ನು ಒಮ್ಮೆ ಮೇಲ್ದರ್ಜೆಗೇರಿಸಿದರೆ, ಕೆಲವೊಮ್ಮೆ ಕೆಳದರ್ಜೆಗಿಳಿಸುವ “ಅನುಕೂಲಸಿಂಧು ಸಂವಿಧಾನಾತ್ಮಕತೆ’ಯನ್ನು ಪ್ರದರ್ಶಿಸುವಂತೆ ಕಾಣುತ್ತದೆ ಎಂದಿದ್ದಾರೆ. ಅದರ ತೀರ್ಪಿನ 259 ಪುಟಗಳಲ್ಲಿ ಬಹುಪಾಲನ್ನು ಸರಕಾರದ ತರ್ಕಗಳನ್ನು ಪುನರುಚ್ಚರಿಸಲು ಮತ್ತು ಅದನ್ನು ಒಪ್ಪಲು ಕಳೆದಿದೆ. ಇದರಿಂದಾಗಿ ಸರಕಾರದ ಮತ್ತು ಆರ್‌ಬಿಐನ ಅಫಿಡವಿಟ್‌ಗಳಲ್ಲಿ ಕಾಣುವ ವಿರೋಧಾಭಾಸ ಬಹುಮತದ ತೀರ್ಪಿನಲ್ಲೂ ಬಿಂಬಿತವಾಗಿದೆ ಎಂದು ಅವರು ಹೇಳುತ್ತಾರೆ(ಗೌತಮ್ ಭಾಟಿಯಾ, ದಿ ವೈರ್, ಜನವರಿ 3).

ಇದನ್ನು ಓದಿ: ನೋಟುರದ್ಧತಿಯ ಪಿಡುಗು: ಸರ್ಕಾರದ ಅಜ್ಞಾನ + ದುರಹಂಕಾರದ ದುಷ್ಫಲ

ನೋಟುರದ್ದತಿ ಕ್ರಮದಿಂದಾಗಿ ಜನರು ಬಹಳಷ್ಟು ಸಂಕಟಗಳಿಗೀಡಾದರು ಎಂಬ ಅರ್ಜಿದಾರರ ತರ್ಕವನ್ನು ತಳ್ಳಿಹಾಕುತ್ತ ಬಹುಮತದ ತೀರ್ಪು ‘ಪ್ರತಿಯೊಂದು ಉದಾತ್ತ ಧ್ಯೇಯದಲ್ಲೂ ಅದರ ಹುತಾತ್ಮರಿರುತ್ತಾರೆ’ ಎಂಬ ಮಾತನ್ನು ಉಲ್ಲೇಖಿಸುತ್ತದೆ.

ಹಾಗಿದ್ದರೆ, “ಈ ಕ್ರಮದಿಂದಾಗಿ ಪ್ರಾಣ ಕಳಕೊಂಡವರು ನೋಟುರದ್ಧತಿ ಎಂಬ ಮಹಾನ್ ಧರ್ಮದ ಸೇವಾರ್ಥ ಮಹಾನ್ ತ್ಯಾಗಮಾಡಿದರು. ಅವರು ಸತ್ತದ್ದು ಪ್ರಭುತ್ವದ, ಮತ್ತು ಆಡಳಿತದ ವಿಫಲತೆಯಿಂದಲ್ಲ. ಹೀಗೆ ಹೇಳುವಲ್ಲಿ ಬಹುಮತದ ತೀರ್ಪು ಮಾನವ ಜೀವದ ಬಗ್ಗೆ ನಿರ್ದಯತೆ ಮತ್ತು ಉಪೇಕ್ಷೆಯನ್ನಷ್ಟೇ ಪ್ರದರ್ಶಿಸಿಲ್ಲ, ಸತ್ತವರಿಗೆ ಘನತೆಯನ್ನೂ ನಿರಾಕರಿಸುತ್ತದೆ, ಅವರು ಹೇಗೆ ಸತ್ತರು, ಏಕೆ ಸತ್ತರು ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳದೆ ಅವರನ್ನು ಹುತಾತ್ಮಗಿರಿಯ ಚಿಂದಿಯಾದ ಬಾವುಟದಲ್ಲಿ ಸುತ್ತಿಡಲು ಪ್ರಯತ್ನಿಸುತ್ತದೆ. ಈ ಪ್ರಕರಣ ಎಬ್ಬಿಸಿದ ಧೂಳು ಚದುರಿದ ಎಷ್ಟೋ ಕಾಲದ ನಂತರ, ನೋಟುರದ್ದತಿಯೇ ಒಂದು ನೆನಪಾಗಿ ಬಿಟ್ಟ ಎಷ್ಟೋ ಕಾಲದ ನಂತರವೂ ಈ ಸಾಲು ನ್ಯಾಯಾಂಗದ ಚರಿತ್ರೆಯ ಮೇಲೆ ಒಂದು ಅಳಿಸಲಾಗದ ಕಳಂಕವಾಗಿ ಉಳಿಯುತ್ತದೆ” ಎಂದು ಈ ಬಗ್ಗೆ ಟಿಪ್ಪಣಿ ಮಾಡುತ್ತ ಗೌತಮ್ ಭಾಟಿಯ ನೋವಿನಿಂದ ಹೇಳುತ್ತಾರೆ.

“ನಿಮ್ಮ ಲೈಸೆನ್ಸ್ ಸಕ್ರಮವಾಗಿದೆ” – ವ್ಯ್ರಂಗ್ಯಚಿತ್ರ ಕೃಪೆ: ಸತೀಶ ಆಚಾರ್ಯ

ನಿಜವಾಗಿಯೂ “ಸಮಂಜಸ ನಂಟು” ಇತ್ತೇ?

ಬಹುಮತದ ತೀರ್ಪು ಪ್ರಾಥಮಿಕವಾಗಿ ನೋಟು ರದ್ಧತಿ ಕ್ರಮವು ಅದು ಸಾಧಿಸಲು ಉದ್ದೇಶಿಸಿದ್ದ ಗುರಿಗಳೊಂದಿಗೆ `ಸಮಂಜಸವಾದ ಸಂಬಂಧವನ್ನು’ ಹೊಂದಿದೆ ಎಂಬ ಪ್ರಮೇಯವನ್ನು ಆಧರಿಸಿದೆ. ಉದ್ದೇಶವನ್ನು ಸಾಧಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದು ಪ್ರಸ್ತುತವಲ್ಲ ಎಂದಿದೆ. ಭಿನ್ನ ಮತದ ತೀರ್ಪು ಈ ನೋಟುರದ್ಧತಿ ನಿರ್ಧಾರದಲ್ಲಿ `ಸದುದ್ದೇಶ’ ಇತ್ತು ಮತ್ತು ಚೆನ್ನಾಗಿ ಯೋಚಿಸಿದ್ದಾಗಿತ್ತು  ಎಂದು ತರ್ಕಿಸುತ್ತದೆ, ಆದರೆ ಕಾನೂನು ದೃಷ್ಟಿಯಿಂದ ದೋಷಯುಕ್ತವಾಗಿದೆ ಎಂದಿದೆ.  ಆದ್ದರಿಂದ, ಅಪೇಕ್ಷಣೀಯ ಗುರಿಗಳನ್ನು ಸಾಧಿಸಲು ನೋಟು ರದ್ಧತಿಯನ್ನು  ಜಾರಿಗೊಳಿಸಲಾಗಿದೆ ಎಂದು ಎರಡೂ ತೀರ್ಪುಗಳು ಸೂಚಿಸುತ್ತವೆ.

ಇದನ್ನು ಓದಿ: ನೋಟು ರದ್ದತಿಗೆ ಐದು ವರ್ಷ: ಸಾಧಿಸಿದ್ದು ಮಾತ್ರ ಲಕ್ಷ ಲಕ್ಷ ಉದ್ಯೋಗ ನಷ್ಟ

ಆದರೆ ಇದರಲ್ಲೇ ಅಸಮಂಜಸತೆ ಇದೆ ಎನ್ನುತ್ತಾರೆ ಕಪ್ಪುಹಣದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಪ್ರೊ. ಅರುಣ್‍ ಕುಮಾರ್ (ದಿ ಲೀಫ್‍ಲೆಟ್, ಜನವರಿ 5).  ಗುರಿಗಳನ್ನು ಸಾಧಿಸಲಾಗಿದೆಯೇ , ಅಥವ ಹೇಳಲಾದ ಗುರಿಗಳನ್ನು ಸಾಧಿಸುವುದು ಸಾಧ್ಯವಿತ್ತೇ ಎಂಬ ವಿಷಯದ ಪರಿಶೀಲನೆ ಮಾಡಬೇಕು ಎಂಬುದನ್ನು ಎರಡೂ ತೀರ್ಪುಗಳು ಪರಿಗಣಿಸಲಿಲ್ಲ. ಹೀಗಿರುವಾಗ,  ಸಮಂಜಸವಾದ ಸಂಬಂಧವಿತ್ತುಎಂದೋ,  ಅಥವಾ ನಿರ್ಧಾರವು ಸದುದ್ದೇಶದಿಂದ ಕೂಡಿತ್ತು ಎಂದೋ ಹೇಗೆ ತೀರ್ಮಾನಿಸಬಹುದು ಎಂದು ಅವರು ಕೇಳುತ್ತಾರೆ. ಗುರಿಗಳನ್ನು ಸಾಧಿಸಲಾಗದಿದ್ದರೆ ಮತ್ತು ಗುರಿಗಳನ್ನು ಸಾಧಿಸುವುದು ಸಾಧ್ಯವಿರಲಿಲ್ಲ  ಎಂಬುದು ತಜ್ಞರ ಅಭಿಪ್ರಾಯವಾಗಿದ್ದರೆ, ಸಮಂಜಸತೆ ಅಥವಾ ಸದುದ್ದೇಶದ ತೀರ್ಮಾನಕ್ಕೆ ಬರಲು  ಸಾಧ್ಯವಿಲ್ಲ ಎಂದು ಮುಂದುವರೆದು ಅವರು ಹೇಳುತ್ತಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ನಿಜ, ಕಪ್ಪು ಹಣವನ್ನು ತಡೆಯುವುದು ಬಹುಮುಖ್ಯ.  ಆದರೆ  ಅದಕ್ಕೆ  ಕರೆನ್ಸಿ ನೋಟನ್ನು `ಅಮಾನ್ಯ’ಗೊಳಿಸುವುದರಿಂದ,  ಅಥವ ಒಟ್ಟಾರೆಯಾಗಿ ನೋಟುರದ್ಧತಿಯ ಧೋರಣೆಯಿಂದೇನೂ ಸಹಾಯ ಸಿಗುವುದಿಲ್ಲ ಎಂಬುದು ತಿಳಿದಿರುವ ಸಂಗತಿ. ಅಲ್ಲದೆ, ಆ ಕ್ರಮವನ್ನು  ಹಠಾತ್ತನೆ ಮಾಡಿದರೆ ಅರ್ಥವ್ಯವಸ್ಥೆಯಲ್ಲಿ ಹಣದ ಕೊರತೆ ಉಂಟಾಗಿ ವಹಿವಾಟು ಸ್ಥಗಿತಗೊಂಡು ಬಿಕ್ಕಟ್ಟು ಉಂಟಾಗುತ್ತದೆ ಎಂಬುದೂ ಗೊತ್ತಿರುವ ಸಂಗತಿಯೇ.  ಹೀಗಾಗಿ, ನೋಟು ರದ್ಧತಿಯ ಕ್ರಮದಲ್ಲಿ `ಸಮಂಜಸ ನಂಟು’  ಅಥವ ‘ಸದುದ್ದೇಶ’ ಇತ್ತು ಎಂದು ಹೇಳುವುದೇ ಸಮಂಜಸವಲ್ಲದ ವಿಷಯ ಎಂದು ಪ್ರೊ. ಅರುಣ್‍ ಕುಮಾರ್ ಹೇಳುತ್ತಾರೆ.

Donate Janashakthi Media

Leave a Reply

Your email address will not be published. Required fields are marked *