ಬೆಂಗಳೂರು :ಟೌನ್ ಹಾಲ್ ಹೋರಾಟದ ಸಂಕೇತ, ಇಲ್ಲಿ ಜನರ ಸಮಸ್ಯೆಗಳ ಧ್ವನಿಯಾಗಿ ನಡೆಯುವ ಹೋರಾಟಗಳಿಗೆ ಆಧ್ಯತೆ ಸಿಗಬೇಕು, ಬಣ್ಣದ ಅಲಂಕಾರಗಳಿಗಲ್ಲ ಎಂದು ರಂಗಕರ್ಮಿ ಬಿ. ಸುರೇಶ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಿಐಟಿಯು ಬೆಂಗಳೂರು ಉತ್ತರ, ದಕ್ಷಿಣ, ರಾಮನಗರ ಜಿಲ್ಲೆಗಳು ಆಯೋಜಿಸಿದ್ದ 78ನೇ ಸ್ವಾತಂತ್ರ್ಯೋತ್ಸವದ ಅಹೋರಾತ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಹೋರಾಟದ ಮೂಲಕ ನಾವು ಸ್ವಾತಂತ್ರ್ಯ ಪಡೆದೆವು, ಸ್ವಾತಂತ್ರ್ಯೋತ್ಸವ ಆಚರಣೆಗೂ ಹೋರಾಟ ಮಾಡಬೇಕಿದೆ. ಇಂತಹ ಕಾರ್ಯಕ್ರಮಗಳನ್ನು ಹತ್ತಿಕ್ಕುವ ಸರ್ಕಾರಕ್ಕೆ ಜನಪರ ಚಳುವಳಿ ತಕ್ಕಪಾಠ ಕಲಿಸುತ್ತವೆ ಎಂದರು.
“ಟೌನ್ ಹಾಲ್ ಮುಂಭಾಗ ಹೋರಾಟ ಮಾಡಬಾರದು” ಎಂದು ಸರ್ಕಾರ ಹೇರಿರುವ ನಿಷೇಧವನ್ನು ಹಿಂಪಡೆಯಬೇಕು ಎಂಬ ಹಕ್ಕೋತ್ತಾಯವನ್ನು ನಾನು ಮಂಡಿಸುತ್ತಿದ್ದೇನೆ. ಹೋರಾಟದ ಮೂಲಕವೇ ಟೌನ್ ಹಾಲ್ ಮುಂಭಾಗ 78ನೇ ಸ್ವಾತಂತ್ರ್ಯೋತ್ಸವ ಅಹೋರಾತ್ರಿ ಕಾರ್ಯಕ್ರಮ ಆಯೋಜಿಸಿರುವ ಕಾರ್ಮಿಕರು, ರೈತರು, ವಿದ್ಯಾರ್ಥಿ, ಮಹಿಳಾ ಸಂಘಟನೆಗಳಿಗೆ ಅಭಿನಂದನೆ ತಿಳಿಸಿದರು.
ಇನ್ನೂ 22 ವರ್ಷ ಕಳೆದರೆ 100ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತೇವೆ, ಆದರೆ ಮೂಲಭೂತವಾದ ಸ್ವಾತಂತ್ರ್ಯ ಎಂಬ ನಿರ್ವಚನಕ್ಕೆ ತಕ್ಕಂತೆ ನಮಗೆ ಸ್ವಾತಂತ್ರ್ಯ ಸಿಕ್ಕೆದೆಯೆ ಎಂಬ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟ, ದೇಶದಲ್ಲಿ ಈಗಲೂ ಶೋಷಿತರ ಮೇಲೆ, ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಸಾಕ್ಷಿಯಾಗಿದೆ. ಪ್ರತಿದಿನ ನೆಮ್ಮದಿಯಾಗಿ ಬದುಕಲು ಎರಡು ಹೊತ್ತಿನ ಊಟ, ಮಕ್ಕಳಿಗೆ ಉಚಿತ ಶಿಕ್ಷಣ , ಓದಿಗೆ ತಕ್ಕಂತೆ ಉದ್ಯೋಗ, ಆರೋಗ್ಯ, ಆರ್ಥಿಕ ಸಮಾನತೆ ಎಲ್ಲಿಯವರೆಗೆ ಸಾಧ್ಯವಾಗುವುದಿಲ್ಲವೋ ಅಲ್ಲಿಯವರಿಗೆ ಸ್ವಾತಂತ್ರ್ಯಕ್ಕೆ ಅರ್ಥ ಬರುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸಿಐಟಿಯು ರಾಷ್ಟ್ರೀಯ ಉಪಾಧ್ಯಕ್ಷ ಕೆ.ಎನ್ ಉಮೇಶ್, ಸಿಐಟಿಯು ರಾಜ್ಯ ಪ್ರಧಾನಕಾರ್ಯದರ್ಶಿ ಮೀನಾಕ್ಷಿಸುಂದರಂ, ಪ್ರಾಂತರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು. ಬಸವರಾಜ, ಪ್ರಾಂತ ಕೃಷಿಕೂಲಿಕಾರ ಸಂಘಟನೆಯ ಮಾಜಿ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ, ದಲಿತ ಹಕ್ಕುಗಳ ಸಮಿತಿಯ ರಾಜ್ಯಾಧ್ಯಕ್ಷ ಗೋಪಾಲಕೃಷ್ಣ ಅರಳಹಳ್ಳಿ,
ರಾಜ್ಯ ಮುಖಂಡರಾದ ಬಿ.ಎನ್. ಮಂಜುನಾಥ್, ಎನ್, ಪ್ರತಾಪಸಿಂಹ, ಕೆ.ಮಹಾಂತೇಶ್, ಮುನಿರಾಜು, ಲಿಂಗರಾಜ, ಬಿ.ಬಿ.ರಾಘವೇಂದ್ರ, ಲೀಲಾವತಿ, ಕೆ.ಎಸ್.ಲಕ್ಷ್ಮಿ, ಗೌರಮ್ಮ, ಕೆ.ಎಸ್. ವಿಮಲಾ, ದೇವಿ, ಭೀಮನಗೌಡ, ಟಿ.ಸುರೇಂದ್ರರಾವ್,ಟಿ ಯಶವಂತ್, ಗುಂಡಣ್ಣ, ಸೂರಜ್, ಸುಹಾಸ್ ಸೇರಿದಂತೆ ನೂರಾರು ಜನರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕಾರ್ಮಿಕ ನಾಯಕ ಎಚ್.ಎನ್ ಗೋಪಾಲಗೌಡ ಇದ್ದರು.
ಸಾಂಸ್ಕೃತಿಕ ಕಾರ್ಯಕ್ರಮ :ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಹಿಂದೂಸ್ತಾನಿ ಗಾಯಕ ಇನ್ಸಾಫ್ ಹೊಸಪೇಟೆ ಸಂವಿಧಾನ ಪ್ರಸ್ತಾವನೆ ಹಾಡಿನ ಮೂಲಕ ಚಾಲನೆ ನೀಡಿದರು. ಶಾಲಾ ಮಕ್ಕಳು ನೃತ್ಯದ ಮೂಲಕ ಸ್ವಾತಂತ್ರ್ಯ ಹೋರಾಟವನ್ನು ಮೆಲುಕು ಹಾಕಿದರು. ಕಾರ್ಮಿಕರು ಕ್ರಾಂತಿಗೀತೆಗಳ ಮೂಲಕ ಸ್ವಾತಂತ್ರ್ಯೋತ್ಸವಕ್ಕೆ ಮೆರಗು ತಂದರು.
ಪೋಲಿಸರಿಂದ ಅಡ್ಡಿ : ಟೌನ್ ಹಾಲ್ ಮುಂಭಾಗ ಸ್ವಾತಂತ್ರ್ಯ ದಿನಾಚರಣೆ ಮಾಡಬೇಡಿ ಎಂದು ಪೊಲೀಸರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಮುಂದಾದರು. ನಾವು 10 ವರ್ಷಗಳಿಂದ ಇಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಆಯೋಜಿಸಿಕೊಂಡು ಬಂದಿದ್ದೇವೆ. ಈ ಬಾರಿಯೂ, ಪ್ರತಿವರ್ಷವೂ ಆಚರಿಸುತ್ತೇವೆ ಎಂದು ಪಟ್ಟು ಹಿಡಿದು ಘೋಷಣೆ ಮೊಳಗಿಸಿದ ನಂತರ ಪೊಲೀಸರು ಸುಮ್ಮನಾದರು.