ಸ್ವಾಮೀಜಿಗಳು ವ್ಯಾಪಾರಿಗಳಾಗಿದ್ದು, ಮಠಗಳು ವಾಣಿಜ್ಯ ಕೇಂದ್ರಗಳಾಗಿವೆ: ಖ್ಯಾತ ಸಾಹಿತಿ ಅರವಿಂದ ಮಾಲಗತ್ತಿ

ದಲಿತ ಹಕ್ಕುಗಳ ಸಮಿತಿ(ಡಿಎಚ್ಎಸ್)ಯ ದಲಿತ ಹಕ್ಕೋತ್ತಾಯ ರಾಜ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಾಹಿತಿ ಅರವಿಂದ ಮಾಲಗತ್ತಿ

ಬೆಂಗಳೂರು: ಸ್ವಾಮೀಜಿಗಳು ವ್ಯಾಪಾರಿಗಳಾಗಿದ್ದು, ಮಠಗಳು ವಾಣಿಜ್ಯ ಕೇಂದ್ರಗಳಾಗಿವೆ. ಈ ಎಲ್ಲಾ ಜಾತಿಗಳ ಸ್ವಾಮಿಜಿಗಳಿಗೆ ಜಾತಿ ತಾರತಮ್ಯ ಬೇಕಾಗಿದ್ದು, ಹಾಗಾಗಿಯೇ ಕೋಲು ಮುಟ್ಟಿದ್ದಕ್ಕೆ, ಆರತಿತಟ್ಟೆ ಮುಟ್ಟಿದ್ದಕ್ಕೆ ದಲಿತರ ಮೇಲೆ ಹಲ್ಲೆಗಳಾಗುತ್ತಿವೆ ಎಂದು ಖ್ಯಾತ ಸಾಹಿತಿ ಅರವಿಂದ ಮಾಲಗತ್ತಿ ಸೋಮವಾರ ಹೇಳಿದರು. ಅವರು ನಗರದ ಗಾಂಧಿ ಭವನದಲ್ಲಿ ನಡೆದ ದಲಿತ ಹಕ್ಕುಗಳ ಸಮಿತಿ (ಡಿಎಚ್ಎಸ್)ಯ ದಲಿತ ಹಕ್ಕೋತ್ತಾಯ ರಾಜ್ಯ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಮಾವೇಶವನ್ನು ಡೊಳ್ಳು ಬಡಿಯುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅರವಿಂದ ಮಾಲಗತ್ತಿ ಅವರು, “ರಾಜ್ಯದಲ್ಲಿ ಸರ್ಕಾರ ಬದಲಾಗಿದೆಯೇ ಹೊರತು, ಸಾಮಾಜಿಕ ಚಿಂತನೆ ಬದಲಾಗಿಲ್ಲ. ಗೋ ಹತ್ಯೆ ನಿಷೇಧ ಕಾಯ್ದೆ ಮತ್ತು ಮತಾಂತರ ನಿಷೇಧ ಕಾಯ್ದೆ ಎರಡು ರದ್ದು ಮಾಡಬೇಡಿ ಎಂಬ ಬೇಡಿಕೆ ಮಠಾಧೀಶರು ಮಾಡುತ್ತಿದ್ದಾರೆ. ಇಂದಿನ ಮಠಾಧೀಶರು ತಮ್ಮ ಜಾತಿಗೆ ಸೀಮಿತವಾಗಿ ಮಾತಾಡುತ್ತಾರೆ. ಇವರೆಲ್ಲ ತಮ್ಮ ಖಾವಿ ಕಳಚಿಟ್ಟು ಮಾತಾಡಬೇಕಿದೆ” ಎಂದು ಹೇಳಿದರು.

ಇದನ್ನೂ ಓದಿ: ದಲಿತ ಬಾಲಕನಿಗೆ ದಂಡ ಪ್ರಕರಣ: ವಿವಿಧ ಪ್ರಗತಿಪರ ಸಂಘಟನೆಗಳಿಂದ ‘ಉಳ್ಳೇರಹಳ್ಳಿ ಚಲೋ’

“ಸರ್ಕಾರ ಬದಲಾಗಿದೆಯೇ ಹೊರತು, ಸಾಮಾಜಿಕ ಚಿಂತನೆ ಬದಲಾಗಿಲ್ಲ. ರಾಜಕೀಯ ಬದಲಾವಣೆ ಬಂದ ಕೂಡಲೇ ಎಲ್ಲವೂ ಬದಲಾಗಿ ಬಿಡುವುದಿಲ್ಲ. ಬಿಜೆಪಿ ಸೋಲಿನಿಂದಾದ ರಾಜಕೀಯ ಬದಲಾವಣೆಯಿಂದ ನೆಮ್ಮದಿಯ ಬದುಕು ಬದುಕುವಂತಾಗಿದೆ. ಆದರೆ ಬಿಜೆಪಿ ಕೋಮುವಾದಿ ಮೌಲ್ಯವನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡೇ ಮಾಡುತ್ತದೆ” ಎಂದು ಮಾಲಗತ್ತಿ ಅವರು ಎಚ್ಚರಿಸಿದರು.

ಸ್ವಾಮೀಜಿಗಳು ವ್ಯಾಪಾರಿಗಳಾಗಿದ್ದು, ಮಠಗಳು ವಾಣಿಜ್ಯ ಕೇಂದ್ರಗಳಾಗಿವೆ:ಖ್ಯಾತ ಸಾಹಿತಿ ಅರವಿಂದ ಮಾಲಗತ್ತಿ | Swamijis are traders and Mathas are centers of commerce: Famous author Aravinda Malagatti
ಹಕ್ಕೋತ್ತಾಯ ರಾಜ್ಯ ಸಮಾವೇಶಕ್ಕೆ ಸೇರಿದ್ದ ಪ್ರತಿನಿಧಿಗಳು

“ಗೋಹತ್ಯೆ ನಿಷೇಧದ ಪರಿಣಾಮವಾಗಿ ವ್ಯವಸ್ಥೆ ಹದಗೆಟ್ಟಿದೆ. ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಅನೈತಿಕ ಪೊಲೀಸ್‌ಗಿರಿ ನಡೆಯುತ್ತಿದೆ. ಅನೈತಿಕ ಪೊಲೀಸ್‌ಗಿರಿಯನ್ನು ಉಚ್ಛಾಟನೆ ಮಾಡದೆ ದಲಿತರ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ‘ಗೋವನ್ನು ಸಾಕುವ ರೈತನೇ ಅದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾನೆ. ಅದನ್ನು ಆತನಿಗೆ ಬಿಟ್ಟು ಬಿಡಿ’ ಎಂಬ ಕುವೆಂಪು ಮಾತು ನೆನಪಿಡಬೇಕು” ಎಂದು ಹೇಳಿದರು.

“2017-20 ಅವಧಿಯಲ್ಲಿ 347 ಪೌರ ಕಾರ್ಮಿಕರು ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ರಾಜ್ಯ ಸರ್ಕಾರ 90 ಜನರು ಸತ್ತಿದ್ದಾರೆ ಎಂದು ಹೇಳುತ್ತಿದೆ. ಟ್ರಾಫಿಕ್ ನಿಯಂತ್ರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಸ್ತೆ, ಪ್ಲೈಓವರ್ ಮಾಡುವ ಸರ್ಕಾರಕ್ಕೆ ಅಲ್ಲೆ ಇರುವ ಚರಂಡಿ ವ್ಯವಸ್ಥೆಯ ವಿಚಾರದಲ್ಲಿ ಯೋಚನೆ ಮಾಡುವುದಿಲ್ಲ. ಚರಂಡಿ ಸ್ವಚ್ಛ ಮಾಡಲು ತಂತ್ರಜ್ಞಾನವನ್ನು ಇನ್ನೂ ಬಳಸಿಕೊಂಡಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಭೂ ಸ್ವಾಧೀನ ಪಡಿಸುವ ಕಾಯ್ದೆ ತಂದು ದಲಿತರ ಭೂಮಿ ವಶಕ್ಕೆ ಪಡೆಯುತ್ತಿದ್ದಾರೆ. ಇದು ಹಿಮ್ಮುಖ ಚಲನೆ ಅಲ್ಲದೆ ಬೇರೇನಲ್ಲ. ಬಿಜೆಪಿ ಸರ್ಕಾರಕ್ಕೆ ಸಂವಿಧಾನದ ಮೇಲೆ ಗೌರವ ಇದ್ದರೆ ಅಂಬೇಡ್ಕರ್ ಅವನ ಕನಸಾದ ಸರ್ಕಾರಿ ಸಮಾಜವಾದದ ಕೃಷಿ ವ್ಯವಸ್ಥೆ ಜಾರಿಗೆ ತರಬೇಕಿತ್ತು. ಸರ್ಕಾರಿ ನೆಲೆಯಲ್ಲಿ ಕೃಷಿಕನಿಗೆ ಕೊಡಬೇಕಿದ್ದು, ಸರ್ಕಾರಿ ಸಮಾಜವಾದದ ಕೃಷಿ ವ್ಯವಸ್ಥೆ ಜಾರಿ ತಂದರೆ ಎಲ್ಲಾ ವರ್ಗದ ಅಭಿವೃದ್ಧಿಗೆ ಪೂರಕವಾಗುತ್ತದೆ. ನಮ್ಮ ಶ್ರಮ ವಿಭಜನೆಯ ನೀತಿ ಜಾತಿ ವ್ಯವಸ್ಥೆಯ ಮೇಲೆ ಕೇಂದ್ರೀಕೃತ ಆಗಿದೆ. ವೃತ್ತಿಗೂ, ಹುಟ್ಟಿಗೂ, ಜಾತಿಗೂ ತಳುಕು ಹಾಕಿದರೆ ಅಭಿವೃದ್ಧಿ ಸಾಧ್ಯವಾಗುವುದಿಲ್ಲ” ಎಂದು ಹೇಳಿದರು.

ಇದನ್ನೂ ಓದಿ: ಅಂತರ್ಜಾತಿ ವಿವಾಹಿತ ಯುವಕನಿಗೆ ಸಾಮಾಜಿಕ ಬಹಿಷ್ಕಾರ; ಚಾಮರಾಜನಗರ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ

“ಎಲ್ಲಾ ಜಾತಿಗಳ ಸ್ವಾಮಿಜಿಗಳಿಗೆ ಜಾತಿ ತಾರತಮ್ಯ ಬೇಕಾಗಿದೆ. ಹಾಗಾಗಿಯೇ ಕೋಲು ಮುಟ್ಟಿದ್ದಕ್ಕೆ, ಆರತಿತಟ್ಟೆ ಮುಟ್ಟಿದ್ದಕ್ಕೆ ದಲಿತರ ಮೇಲೆ ಹಲ್ಲೆಗಳು ಆಗುತ್ತಿವೆ. ಸ್ವಾಮೀಜಿಗಳು ವ್ಯಾಪಾರಿಗಳಾದ್ದಾರೆ. ಮಠಗಳು ವಾಣಿಜ್ಯ ಕೇಂದ್ರಗಳಾಗಿವೆ. ಜಾತಿಯ ಹೆಸರಿನಲ್ಲಿ ಸರ್ಕಾರ ರಚಿಸುವ ಮಂಡಲಿ, ನಿಗಮಗಳು ರದ್ದಾಗಬೇಕು. ಇವು ಮಠಗಳ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಖಾವಿಧರಿಸಿದವರು ಮನುಷ್ಯರಾಗಿ ಕೆಲಸ ಮಾಡಲಿ. ಸರ್ಕಾರ ಜಾತಿ ರಹಿತವಾಗಿ ಕೆಲಸ ಮಾಡಲಿ. ಜಾತಿವಾರು ಸ್ಮಶಾನವನ್ನು ನಿರ್ಮಿಸುವುದು ಮತ್ತು ಮಠೀಯ ವ್ಯವಸ್ಥೆ ಒಂದೇ ಆಗಿದೆ. ನಮ್ಮ ವ್ಯವಸ್ಥೆ ಹೀಗೆ ಇರಬಾರದು” ಎಂದು ಅರವಿಂದ ಮಾಲಗತ್ತಿ ಅವರು ಹೇಳಿದರು.

ದಲಿತ ಹಕ್ಕುಗಳ ಸಮಿತಿ (ಡಿಎಚ್ಎಸ್) ರಾಜ್ಯ ಸಂಚಾಲಕ ಗೋಲಾಕೃಷ್ಣ ಹರಳಹಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಮಾವೇಶದಲ್ಲಿ ಖ್ಯಾತ ಅರ್ಥ ಶಾಸ್ತ್ರಜ್ಞ ಟಿ.ಆರ್‌. ಚಂದ್ರಶೇಖರ್, ದಲಿತ ಹಕ್ಕುಗಳ ಕೇಂದ್ರ ಸಮಿತಿ ಸದಸ್ಯೆ ಮಾಳಮ್ಮ, ನಾಗರಾಜ್ ಎನ್., ಜಂಬಯ್ಯ ನಾಯಕ್ ಮಾತನಾಡಿದರು. ಪ್ರಾಸ್ತಾವಿಕವಾಗಿ ಬಿ. ರಾಜಶೇಖರಮೂರ್ತಿ ಮಾತನಾಡಿದರು. ಎನ್ ರಾಜಣ್ಣ ಸ್ವಾಗತಿಸಿ, ನಾಗಣ್ಣ ಅವರು ವಂದನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಮಂಡ್ಯ ಕೃಷ್ಣ ಅವರು ನಿರೂಪಿಸಿದರು

ಸ್ವಾಮೀಜಿಗಳು ವ್ಯಾಪಾರಿಗಳಾಗಿದ್ದು, ಮಠಗಳು ವಾಣಿಜ್ಯ ಕೇಂದ್ರಗಳಾಗಿವೆ:ಖ್ಯಾತ ಸಾಹಿತಿ ಅರವಿಂದ ಮಾಲಗತ್ತಿ | Swamijis are traders and Mathas are centers of commerce: Famous author Aravinda Malagatti
ಅಂತರ್ಜಾತಿ ವಿವಾಹವಾದ ದಂಪತಿಗಳಿಗೆ ಗೌರವಾರ್ಪಣೆ
Donate Janashakthi Media

Leave a Reply

Your email address will not be published. Required fields are marked *