ಸುರತ್ಕಲ್: ಸುರತ್ಕಲ್ ಟೋಲ್ ಗೇಟ್ ಹೋರಾಟಗಾರರ ಮನೆಗಳಿಗೆ ಪೊಲೀಸರು ಭೇಟಿ ನೀಡಿ ನೋಟಿಸ್ ನೀಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಬಿ.ಕೆ. ಇಮ್ಮಿಯಾಝ್, ಪ್ರತಿಭಾ ಕುಳಾಯಿ, ರಾಘವೇಂದ್ರ ರಾವ್ ಸೇರಿದಂತೆ ಹಲವು ಮುಖಂಡರಿಗೆ ಸುರತ್ಕಲ್ ಪೊಲೀಸರು ನೋಟಿಸ್ ನೀಡಿದ್ದಾರೆ.
ಅಕ್ಟೋಬರ್ 18 ರಂದು ಸುರತ್ಕಲ್ ಟೋಲ್ ತೆರವುಗೊಳಿಸುವ ಉಗ್ರ ಹೋರಾಟಕ್ಕೆ ಹೋರಾಟ ಸಮಿತಿ ಕರೆಕೊಟ್ಟಿದ್ದು, ಬಿಜೆಪಿಯೇತರ ಎಲ್ಲಾ ವಿಪಕ್ಷಗಳು ಇದಕ್ಕೆ ಬೆಂಬಲ ನೀಡಿದ್ದವು. ಈ ಟೋಲ್ ವಿಚಾರವೂ ವಿಧಾನಸೌಧದಲ್ಲೂ ಸದ್ದು ಮಾಡಿದ್ದು, ಆಡಳಿತ ಪಕ್ಷಕ್ಕೆ ತಲೆನೋವು ಉಂಟು ಮಾಡಿತ್ತು. ಆದ್ದರಿಂದ ಜಿಲ್ಲಾಡಳಿತ ಮೂಲಕ ಹೋರಾಟವನ್ನು ಕೈಬಿಡುವಂತೆ ಹೋರಾಟ ಸಮಿತಿಯೊಂದಿಗೆ ಮನವಿಯನ್ನೂ ಮಾಡಲಾಗಿತ್ತು. ಆದರೆ ಅದಕ್ಕೆ ಮಣಿಯದ ಹೋರಾಟಗಾರರ ಮನೆ ಮೇಲೆ ಪೊಲೀಸರು ತಡರಾತ್ರಿ ದಾಳಿ ಮಾಡಿದ್ದು, ಹೋರಾಟಗಾರರು 2 ಲಕ್ಷದ ಬಾಂಡ್ ಮತ್ತು ಸರ್ಕಾರಿ ಜಾಮೀನಿನೊಂದಿಗೆ ಇಂದು ಬೆಳಗ್ಗೆ ಪೊಲೀಸ್ ಕಮೀಷನರ್ ಕಛೇರಿಗೆ ಹಾಜರಾಗುವಂತೆ ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಮಧ್ಯರಾತ್ರಿ ಪೊಲೀಸರನ್ನು ಹೋರಾಟಗಾರರ ಮನೆಗಳಿಗೆ
ಕಳುಹಿಸುತ್ತೀರಾ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತರೆ ? ಮಹಿಳಾ ಹೋರಾಟಗಾರರ ಮನೆಗೂ ಕಾಳರಾತ್ರಿ “ಗಂಡಸು” ಪೊಲೀಸರ ದಂಡು !! ಅದಕ್ಕೆಲ್ಲ ಜನ ಹೆದರುವ ಕಾಲ ಮುಗಿದಿದೆ. ತುಳುನಾಡಿನ ಮುಂದೆ ಬೆತ್ತಲಾಗುತ್ತಿದ್ದೀರಿ ಬಿಜೆಪಿಗರೆ ಎಚ್ಚರ” ಎಂದು
ಹೇಳಿದ್ದಾರೆ.