ನವದೆಹಲಿ : ಗುಜರಾತ್ ರಾಜ್ಯದ ಗೋದ್ರಾದಲ್ಲಿ 2002ನೇ ಇಸವಿಯಲ್ಲಿ ಸಂಭವಿಸಿದ ಕೋಮು ದಳ್ಳುರಿ ಕುರಿತ ʻಇಂಡಿಯಾ ದಿ ಮೋದಿ ಕ್ವಶ್ಚನ್ʼ ಬಿಬಿಸಿ ಸಾಕ್ಷ್ಯಚಿತ್ರ ದೇಶದಲ್ಲಿ ಚರ್ಚೆಯಾಗುತ್ತಿರುವ ನಡುವೆ ಬಿಬಿಸಿಯನ್ನು ನಿಷೇಧಿಸಬೇಕೆಂದು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಂ ಎಂ ಸುಂದ್ರೇಶ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದ್ದು, ಬಿಬಿಸಿ ಸಾಕ್ಷ್ಯಚಿತ್ರವನ್ನು ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಅರ್ಜಿ ಸಾಕ್ಷ್ಯಚಿತ್ರದ ಕುರಿತು ತಪ್ಪಾಗಿ ಗ್ರಹಿಸಿದ್ದು, ಇದು ವಿಚಾರಣೆಗೆ ಯಾವುದೇ ಅರ್ಹತೆ ಹೊಂದಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿರುವುದಾಗಿ ತಿಳಿಸಿದರು.
ಇದನ್ನು ಓದಿ: ಪ್ರಧಾನಿ ನರೇಂದ್ರ ಮೋದಿ ಕುರಿತ ಸಾಕ್ಷ್ಯಚಿತ್ರ; ಇಷ್ಟಕ್ಕೂ ಬಿಬಿಸಿ ವಿರುದ್ಧ ಕೇಂದ್ರ ಸರ್ಕಾರ ಕೆಂಡಕಾರುವುದೇಕೆ?
ನಿಮ್ಮ ಈ ಅರ್ಜಿ ತಪ್ಪಾದ ಕಲ್ಪನೆಯಾಗಿದೆ. ಇದನ್ನು ನೀವು ಹೇಗೆ ವಾದಿಸಬಹುದು? ಇದನ್ನು ನಿಷೇಧಿಸಲು ನೀವು ನ್ಯಾಯಾಲಯವನ್ನು ಕೇಳುತ್ತೀರಾ? ಸಾಕ್ಷ್ಯಚಿತ್ರ ಬದಲಾವಣೆ ತರುತ್ತದೆ ಎಂದು ನೀವು ಭಾವಿಸುತ್ತೀರಾ? ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಅರ್ಜಿದಾರರನ್ನು ಪ್ರಶ್ನಿಸಿದರು.
ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಶನ್ (ಬಿಬಿಸಿ) ಗೆ ಭಾರತದಲ್ಲಿ ಸಂಪೂರ್ಣವಾಗಿ ನಿಷೇಧ ಹೇರಬೇಕೆಂದು ಬೀರೇಂದ್ರ ಕುಮಾರ್ ಸಿಂಗ್ ಮತ್ತು ಹಿಂದೂ ಸೇನಾದ ಅಧ್ಯಕ್ಷ ವಿಷ್ಣು ಗುಪ್ತಾ ಅವರುಗಳು ಸಲ್ಲಿಸಿದ್ದರು.
ಇದನ್ನು ಓದಿ: ಮೋದಿ ಕುರಿತ ಸಾಕ್ಷ್ಯಚಿತ್ರಕ್ಕೆ ನಿರ್ಬಂಧ: ಫೆ. 6ರಂದು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ವಿಚಾರಣೆ
ಬಿಬಿಸಿ ಸತ್ಯಕ್ಕೆ ದೂರವಾದ ಮತ್ತು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯ ಮೇಲೆ ದಾಳಿ ಮಾಡುವ ಪಟ್ಟಭದ್ರ ಹಿತಾಸಕ್ತಿ ಹೊಂದಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. 2002ರಲ್ಲಿ ಸಂಭವಿಸಿದ್ದ ಗುಜರಾತ್ ಹಿಂಸಾಚಾರ ಕುರಿತ ಬಿಬಿಸಿ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಪ್ರಸಾರ ಮಾಡದಂತೆ ತಡೆಹಿಡಿಯಲಾಗಿದೆ. ಸಾಕ್ಷ್ಯಚಿತ್ರದ ಲಿಂಕ್ಗಳನ್ನು ನಿರ್ಬಂಧಿಸುವಂತೆ ಯೂಟ್ಯೂಬ್ ಮತ್ತು ಟ್ವಿಟರ್ ಸಾಮಾಜಿಕ ಜಾಲತಾಣಕ್ಕೆ ಜನವರಿ 21 ರಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿತು. ಮತ್ತೊಂದೆಡೆ ಭಾರತದ ಹಲವು ಕಡೆಗಳಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನಗಳು ನಡೆದಿವೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ