ದೆಹಲಿ : ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆಗೆ ಆಧಾರ್ ಅನ್ನು 12 ನೇ ದಸ್ತಾವೇಜಾಗಿ ಸೇರಿಸುವಂತೆ ಸುಪ್ರೀಂ ಕೋರ್ಟ್ ಭಾರತದ ಚುನಾವಣಾ ಆಯೋಗಕ್ಕೆ ಸಪ್ಟಂಬರ್ 8ರ ವಿಚಾರಣೆಯ ನಂತರ ನಿರ್ದೇಶನ ನೀಡಿದೆ. ಆದರೆ ಅದನ್ನು ಗುರುತಿನ ಪುರಾವೆಯಾಗಿ ಮಾತ್ರ ಬಳಸಲಾಗುವುದು ಎಂದು ಪುನರುಚ್ಚರಿಸುತ್ತ, ಇತರ ದಾಖಲೆಗಳಂತೆ ಸಲ್ಲಿಸಿದ ಆಧಾರ್‌ನ ದೃಢೀಕರಣ ಮತ್ತು ಋಜುತ್ವವನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಅರ್ಹತೆ ಇರುತ್ತದೆ ಎಂದು ನ್ಯಾಯಾಲಯದ ಸಪ್ಟಂಬರ್ 8ರ ಅದೇಶದಲ್ಲಿ ಹೇಳಲಾಗಿದೆ ಎಂದು ವರದಿಯಾಗಿದೆ. ಬಿಹಾರ
ಈ ವಿಚಾರಣೆಗಳ ವೇಳೆಯಲ್ಲಿ ಆಧಾರ್ ಕಾರ್ಡ್ ಬಗ್ಗೆ ಸಾಕಷ್ಟು ವಾದ-ಪ್ರತಿವಾದಗಳು ನಡೆದು ಅದನ್ನು ಪರಿಗಣನೆಗೆ ತಗೊಳ್ಳಬೇಕು ಎಂದು ಸ್ವತಃ ನ್ಯಾಯಪೀಠವೇ ಸೂಚಿಸಿದರೂ, ಚುನಾವಣಾ ಆಯೋಗ ಬುಡಮಟ್ಟದಲ್ಲಿ ಅದನ್ನು ಜಾರಿಗೊಳಿಸದಿರುವ, ಮತ್ತು ಸಪ್ಟಂಬರ್ 8ರ ವಿಚಾರಣೆಯಲ್ಲೂ ಆಯೋಗದ ವಕೀಲರು ಅದನ್ನು ಈಗಾಗಲೇ ಸೂಚಿಸಿರುವ ದಾಖಲೆಗಳ ಜೊತೆಯಲ್ಲಿ ಇನ್ನೊಂದು ದಸ್ತಾವೇಜಾಗಿ ಖಚಿತಪಡಿಸಬೇಕು ಎಂಬ ಅರ್ಜಿದಾರರ ಆಗ್ರಹವನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಈ ಆದೇಶ ಬಂದಿದೆ.
ಸಪ್ಟಂಬರ್ 8ರಂದು ಬಿಹಾರ ಎಸ್‍ಐಆರ್ ಬಗ್ಗೆ ಸುಪ್ರಿಂ ಕೋರ್ಟಿನಲ್ಲಿ ವಿಚಾರಣೆ ಮುಂದುವರೆದಾಗ, ದಾವೆಗಳು/ಆಕ್ಷೇಪಣೆ/ತಿದ್ದುಪಡಿಗಳಿಗೆ ಸಮಯ ಮೀರುತ್ತ ಬರುತ್ತಿದೆ, ಆಧಾರ್ ಸ್ವೀಕರಿಸಲಾಗುತ್ತದೋ ಇಲ್ಲವೋ ಎಂಬುದನ್ನು ಖಚಿತ ಪಡಿಸಬೇಕು ಎಂದು ಕಪಿಲ್ ಸಿಬಲ್ ಹೇಳಿದರು. ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸುತ್ತ, ಅದನ್ನು ಪೌರತ್ವದ ಪುರಾವೆಯಾಗಿ ಕೇಳುತ್ತಿಲ್ಲ, ಮತದಾನ ಮಾಡಲು ಅರ್ಹಗೊಳಿಸುವ ನಿವಾಸದ ಪುರಾವೆಯಾಗಿ ಕೇಳುತ್ತಿದ್ದೇವೆ ಎನ್ನುತ್ತ ಅವರು “ ನಾವು 11 ದಸ್ತಾವೇಜುಗಳೊಂದಿಗೆ ಆಧಾರನ್ನೂ ಸೇರಿಸಬೇಕು ಎಂದು ಕೇಳುತ್ತಿದ್ದೇವೆ. ಚುನಾವಣಾ ಆಯೋಗ ಈಗಲೂ ಬುಡಮಟ್ಟದಲ್ಲಿ ಆಧಾರ್ ನ್ನು ಸ್ವೀಕರಿಸಲು ಹಿಂಜರಿಯುತ್ತಿದೆ, 11 ದಸ್ತಾವೇಜುಗಳಲ್ಲಿ ಒಂದನ್ನು ತೋರಿಸಬೇಕು ಎಂದು ಹೇಳುತ್ತಿದೆ” ಎಂದು ಹೇಳಿದರು.
“ನೀವು 11ದಸ್ತಾವೇಜುಗಳಿಗೆ ಪರ್ಯಾಯವಾಗಿ ಆಧಾರನ್ನು ಬಳಸಬಹುದು ಎಂದು ಸ್ಪಷ್ಟವಾಗಿ ಹೇಳಿದ್ದೀರಿ. ಬಿಎಲ್‍ಒ ಗಳು ನಿರಾಕರಿಸುತ್ತಿದ್ದಾರೆ. ಆಯೋಗ ಆಧಾರ್ ಕಾರ್ಡ್ ಸ್ವೀಕರಿಸಿದ್ದಕ್ಕೆ ತನ್ನ ಅಧಿಕಾರಿಗಳನ್ನು ಶಿಕ್ಷಿಸುತ್ತಿದೆ” ಎಂದು ಮುಂದುವರೆದು ಹೇಳಿದ ಅವರು ದಾವೆಗಳು ಮತ್ತು ಆಕ್ಷೇಪಣೆಗಳಿಗೆ ಆಯೋಗ ಸೂಚಿಸಿರುವ 11 ದಸ್ತಾವೇಜುಗಳನ್ನು ಮಾತ್ರವೇ ಸ್ವೀಕರಿಸಲಾಗುವುದು ಎಂದು ಸಹಿ ಹಾಕಿದ ನೋಟೀಸುಗಳನ್ನು ಜಾರಿ ಮಾಡಿದ್ದಾರೆ ಎಂದು ಹೇಳಿದರು. ಆಧಾರ್ ಕಾರ್ಡ್ ಸ್ವೀಕರಿಸಿದ ಬಿಎಲ್‍ಒಗಳ ವಿರುದ್ಧ ಆಗಲೇ ಶಿಸ್ತು ಕಲಾಪಗಳು ಆರಂಭವಾಗಿವೆ, ಸುಪ್ರಿಂ ಕೋರ್ಟ್ ಆದೇಶ ನೀಡಿದ್ದರೂ, ಚುನಾವಣಾ ಆಯೋಗದಿಂದ ಆಧಾರ್ ನ್ನು ಸ್ವೀಕರಿಸುವಂತೆ ಸೂಚನೆ ಹೋಗಿಲ್ಲ ಎಂದು ಸಿಬಲ್ ನ್ಯಾಯಾಲಯಕ್ಕೆ ಹೇಳಿದರು. ತಮ್ಮ ಬಳಿ ವಿವಿಧ ಜಿಲ್ಲೆಗಳಲ್ಲಿ ಆಧಾರ್ ನೊಂದಿಗೆ ಅರ್ಜಿ ಸಲ್ಲಿಸುವಲ್ಲಿ ವಿಫಲರಾದ 24 ಮಂದಿಯ ಅಫಿಡವಿಟ್ ಗಳು ಇವೆ ಎಂದೂ ಅವರು ಹೇಳಿದರು.
ಇದನ್ನೂ ಓದಿ: ಗಜೇಂದ್ರಗಡ|ಫಲಿತಾಂಶಗಳ ಆಧಾರಿತ ಪಠ್ಯಕ್ರಮ ಚೌಕಟ್ಟು (LOCF) ಕರಡನ್ನು ಕೈಬಿಡಲು ಒತ್ತಾಯಿಸಿ -ಎಸ್ ಎಫ್ ಐ ಪ್ರತಿಭಟನೆ ಬಿಹಾರ
ಚುನಾವಣಾ ಆಯೋಗದ ವಕೀಲ ರಾಕೇಶ್ ದ್ವಿವೇಧಿ ಕೂಡ ಆಧಾರ್ ನ್ನು ಪೌರತ್ವದ ದಾಖಲೆಯಾಗಿ ಸ್ವೀಕರಿಸಲಾಗುತ್ತಿಲ್ಲ ಎಂದು ದೃಢಪಡಿಸುತ್ತ. ಆಧಾರ್ ನಿವಾಸದ ಪುರಾವೆಯೇನೋ ಹೌದು, ಆದರೆ ಚುನಾವಣಾ ಆಯೋಗವು ಮತದಾರ ಪಟ್ಟಿಯಲ್ಲಿ ಸೇರಿಸಲು ಪೌರತ್ವದ ಬಗ್ಗೆ ನೋಡಬಹುದಾಗಿದೆ ಎಂಬ ತಮ್ಮ ಹಳೆಯ ವಾದವನ್ನು ಪುನರುಚ್ಚರಿಸಿದರು.
ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿಯವರು “ಅರ್ಜಿದಾರರು ಸಹ ಆಧಾರ್ ಪೌರತ್ವದ ದಾಖಲೆ ಅಲ್ಲ ಎಂದು ಹೇಳುತ್ತಿದ್ದಾರೆ. ಶಾಸನದ ಪ್ರಕಾರವೂ ಕೂಡ ಆಧಾರ್ ಪೌರತ್ವದ ದಾಖಲೆ ಅಲ್ಲ. ನ್ಯಾಯಾಲಯ ಹಲವು ಬಾರಿ ಆಧಾರ್ ಅನ್ನು ಪರಿಗಣನೆಗೆ ತಗೊಳ್ಳುವಂತೆ ಹೇಳಿದೆ” ಎಂದರು. ಆಧಾರ್ ಜನತಾ ಪ್ರಾತಿನಿಧ್ಯ ಕಾಯ್ದೆಗೆ ಹೊರತಾದ್ದೇನೂ ಅಲ್ಲ, ಕಾಯ್ದೆಯ ಒಂದು ಅಂಶ ನಿವಾಸದ ಪುರಾವೆಯಾಗಿ ಅದಕ್ಕೆ ಅವಕಾಶ ನೀಡುತ್ತದೆ ಎಂದೂ ಅವರು ಹೇಳಿದರು.
ಆಧಾರ್ ಅನ್ನು 12 ನೇ ದಸ್ತಾವೇಜಾಗಿ ಮಾನ್ಯ ಮಾಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕಪಿಲ್ ಸಿಬಲ್ ಅರ್ಜಿದಾರರ ಪರವಾಗಿ ನ್ಯಾಯಾಲಯದ ಮುಂದೆ ಆಗ್ರಹಿಸಿದರು.
ಆಧಾರ್ ಬಡವರು ಹೊಂದಿರುವ ಏಕೈಕ ದಾಖಲೆಯಾಗಿದೆ, ಅವರು ಬಡವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕ ಬೇಕೆಂದಿದ್ದಾರೆ ಎಂದು ಅರ್ಜಿದಾರರ ಪರವಾದ ಮತ್ತೊಬ್ಬ ವಕೀಲರಾದ ವೃಂದಾ ಗ್ರೋವರ್ ಅಭಿಪ್ರಾಯ ಪಟ್ಟರು.
ಅರ್ಜಿದಾರರ ಪರ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಚುನಾವಣಾ ಆಯೋಗ ಸೂಚಿಸಿರುವ ಎಲ್ಲಾ 11ದಸ್ತಾವೇಜುಗಳು ಆಧಾರ್ ನಂತೆ ಗುರುತು, ನಿವಾಸದ ದಾಖಲೆಗಳಾಗಿವೆ ಮತ್ತು ಪೌರತ್ವದ್ದಲ್ಲ, ಅರ್ಜಿದಾರರು ಆಧಾರ್ ಅದನ್ನು ಕೂಡ ಸೇರಿಸಿ ಎಂದಷ್ಟೇ ಕೇಳುತ್ತಿದ್ದಾರೆ ಎಂದು ಹೇಳಿದರು.
ಆಧಾರ್ ಪೌರತ್ವದ ಪುರಾವೆಯಲ್ಲ ಎಂದು ಹೇಳುತ್ತಲೇ ಸುಪ್ರಿಂ ಕೋರ್ಟ್ ಹಿಂದಿನ ತನ್ನ ಆದೇಶದಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆಯ ವಿಭಾಗ 23(4) ಮತ್ತು (5)ನ್ನು ಉಲ್ಲೇಖಿಸುತ್ತ ಅದು ಒಬ್ಬರು ವ್ಯಕ್ತಿಯ ಗುರುತನ್ನು ಸಾಬೀತುಪಡಿಸುವ ಒಂದು ದಸ್ತಾವೇಜು ಎಂದೂ ಹೇಳಿದೆ.
ಆದ್ದರಿಂದ ಆಧಾರ್ 12 ನೇ ದಸ್ತಾವೇಜು ಎಂದು ನ್ಯಾಯಾಲಯ ಘೋಷಿಸಬೇಕು ಎಂದು ಕಪಿಲ್ ಸಿಬಲ್ ಮತ್ತು ಗೋಪಾಲ್ ಶಂಕರನಾರಾಯಣನ್ ನ್ಯಾಯಾಲಯವನ್ನು ಕೋರಿದರು.
ಇದಕ್ಕೆ ಎದುರಾಗಿ ವಾದಿಸುತ್ತ ಚುನಾವಣಾ ಆಯೋಗದ ವಕೀಲರಾದ ರಾಕೇಶ್ ದ್ವಿವೇದಿ, ಆಧಾರ್ ನ್ನು ಗುರುತಿನ ಪುರಾವೆಯಾಗಿ ಸ್ವೀಕರಿಸಲು ಆಯೋಗ ಒಪ್ಪಿದ ಮೇಲೆ ಪಾಸ್‌ಪೋರ್ಟ್ ಅಥವಾ ಭೂ ದಾಖಲೆ ಅಥವಾ ಜನನ ಪ್ರಮಾಣಪತ್ರದಂತೆಯೇ ಅದನ್ನು 12ನೇ ದಸ್ತಾವೇಜಾಗಿ ಘೋಷಿಸಬೇಕು ಎಂದು ಅರ್ಜಿದಾರರು ಏಕೆ ಒತ್ತಾಯಿಸಬೇಕು ಎಂದು ತರ್ಕಿಸುತ್ತ, ಆಧಾರ್‌ಗೆ ಪೌರತ್ವದ ಪುರಾವೆಯೂ ಆಗಿರುವ ಪಾಸ್‌ಪೋರ್ಟ್‌ನಂತಹ ಸ್ಥಾನಮಾನವನ್ನು ನೀಡಲು ಸಾಧ್ಯವಿಲ್ಲ ಎಂದು ವಾದಿಸಿದರು. ಆದ್ದರಿಂದ ಆಯೋಗ ಪಾಸ್‌ಪೋರ್ಟ್ ಸೇರಿದಂತೆ ಇತರ 11 ದಾಖಲೆಗಳೊಂದಿಗೆ ಆಧಾರ್ ಅನ್ನು ಸೇರಿಸುವುದನ್ನು ಆಕ್ಷೇಪಿಸುತ್ತದೆ ಎಂದು ಹೇಳಿದರು.
ಈ ತರ್ಕವನ್ನು ಪ್ರಶ್ನಿಸುತ್ತ ಅರ್ಜಿದಾರರು ಚುನಾವಣಾ ಆಯೋಗದ 11 ದಸ್ತಾವೇಜುಗಳಲ್ಲಿ ಒಂಬತ್ತು ಪೌರತ್ವದ ದಾಖಲೆಗಳಲ್ಲ, ಹಾಗಿರುವಾಗ ಆಧಾರ್ ಅನ್ನು ಏಕೆ ಸೇರಿಸಬಾರದು ಎಂದು ಪ್ರಶ್ನಿಸಿದರು. ಆಯೋಗದ ಫಾರ್ಮ್ 6 ಸ್ವತಃ ಆಧಾರ್ ನ್ನು ಒಪ್ಪುತ್ತದೆ ಎಂದು ಗೋಪಾಲ್ ಶಂಕರನಾರಾಯಣನ್ ಹೇಳಿದರು.
ಇದಕ್ಕೆ ಪ್ರತಿಯಾಗಿ, 99% ಕ್ಕಿಂತ ಹೆಚ್ಚು ಜನರು ಈಗಾಗಲೇ ತಮ್ಮ ದಾವೆಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ, ಅಂದರೆ ಜನರು 11 ದಸ್ತಾವೇಜುಗಳಲ್ಲಿ ಯಾವುದನ್ನೂ ಹೊಂದಿಲ್ಲ ಎಂದೇನಲ್ಲ, ಯಾವುದೇ ರಾಜಕೀಯ ಪಕ್ಷಗಳು ಯಾವುದೇ ದೋಷಗಳನ್ನು ಎತ್ತಿ ತೋರಿಸಿಲ್ಲ ಎಂದು ಆಯೋಗದ ವಕೀಲರು ವಾದಿಸಿದರು.
ಈ ನಡುವೆ ಅರ್ಜಿದಾರರ ಪರವಾಗಿ ವಾದಿಸುತ್ತ ಸಪ್ಟಂಬರ್ 1ರ ಆದೇಶದಲ್ಲಿ ಉಲ್ಲೇಖಿಸಿದ್ದ ಪಾರಾ ಲೀಗಲ್ ಅಂದರೆ ಅರೆ-ನ್ಯಾಯಿಕ ಸ್ವಯಂಸೇವಕರು ಎಲ್ಲಿದ್ದಾರೆ ಎಂದು ಶಂಕರನಾರಾಯಣನ್ ಕೇಳಿದರು. ರಾಜ್ಯಾದ್ಯಂತ ಪ್ರತಿ ಜಿಲ್ಲೆಯಲ್ಲಿ ವ್ಯಕ್ತಿಗಳು ಮತ್ತು ರಾಜಕೀಯ ಪಕ್ಷಗಳು ದಾವೆಗಳು, ಆಕ್ಷೇಪಣೆಗಳು ಮತ್ತು ತಿದ್ದುಪಡಿಗಳನ್ನು ಸಲ್ಲಿಸಲು ಸಹಾಯ ಮಾಡಲು ಪಾರಾಲೀಗಲ್ ಸ್ವಯಂಸೇವಕರನ್ನು ಸಕ್ರಿಯಗೊಳಿಸುವಂತೆ ಬಿಹಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.
ಇದು ಚುನಾವಣಾ ಆಯೋಗಕ್ಕೆ ಸೇರಿದ್ದಲ್ಲ ಎಂದ ಆಯೋಗದ ವಕೀಲರು, ಅಕ್ರಮ ವಲಸಿಗರು ಇರುವುದು ಕಂಡು ಬಂದಿದೆ ಎನ್ನುತ್ತಾರೆ. ಅದು ಒಂದು ಸಮಸ್ಯೆ, ಆದಾಗ್ಯೂ, ಆಧಾರ್ ಅನ್ನು 12 ನೇ ದಾಖಲೆಯಾಗಿ ಸೇರಿಸಬಹುದು ಮತ್ತು ಅದರ ಪ್ರಾಮಾಣ್ಯವನ್ನು ಪರೀಕ್ಷಿಸಬಹುದು ಎಂದು ನ್ಯಾಯಮೂರ್ತಿ ಕಾಂತ್ ಅವರು ಮೌಖಿಕವಾಗಿ ಸೂಚಿಸಿದರು.
ಈ ಎಲ್ಲ ವಾದ-ಪ್ರತಿವಾದಗಳ ನಂತರ ಸುಪ್ರಿಂ ಕೋರ್ಟ್ಚವ ನ್ಯಾಯಪೀಠ ಆಧಾರ್ ಅನ್ನು 12 ನೇ ದಸ್ತಾವೇಜಾಗಿ ಪರಿಗಣಿಸಬೇಕೆಂದು ಆದೇಶ ನೀಡಿದೆ. ಈ ವಿಷಯದಲ್ಲಿ ಚುನಾವಣಾ ಆಯೋಗ ಈ ದಿನ ಸೂಚನೆಗಳನ್ನು ನೀಡಬೇಕು ಎಂದಿರುವ ಈ ಸುಪ್ರೀಂ ಕೋರ್ಟ್ ಆದೇಶ ಕೂಡ ಆಧಾರ್ ಅನ್ನು ಗುರುತಿನ ಪುರಾವೆಯಾಗಿ ಮಾತ್ರ ಬಳಸಲಾಗುವುದು ಎಂದು ಪುನರುಚ್ಚರಿಸುತ್ತದೆ. ಇತರ ದಾಖಲೆಗಳಂತೆ ಸಲ್ಲಿಸಿದ ಆಧಾರ್‌ನ ದೃಢೀಕರಣ ಮತ್ತು ಋಜುತ್ವವನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಅರ್ಹತೆ ಇರುತ್ತದೆ ಎಂದು ನ್ಯಾಯಾಲಯ ನಿರ್ದೇಶಿಸಿದೆ. ಈ ಆದೇಶವನ್ನು ಭಾರತದ ಚುನಾವಣಾ ಆಯೋಗದ ವೆಬ್ ಸೈಟಿನಲ್ಲಿ ಪ್ರಕಟಿಸಬೇಕು ಎಂದೂ ನ್ಯಾಯಮೂರ್ತಿಗಳು ಆಯೋಗದ ವಕೀಲರಿಗೆ ಹೇಳಿದ್ದಾರೆ.
ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 15 ಕ್ಕೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.
ಇದನ್ನೂ ನೋಡಿ : ಪರಿಷ್ಕೃತ ಜಿಎಸ್ ಟಿ : ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ? Janashakthi Media
