ಕಾರ್ಖಾನೆ ಮಾಲೀಕರ ಒಪ್ಪಿಗೆ; ನವೆಂಬರ್ 5ರಿಂದ ಕಬ್ಬು ನುರಿಸುವಿಕೆ ಆರಂಭಿಸಲು ನಿರ್ಧಾರ – ₹5,500 ದರಕ್ಕೆ ಪಟ್ಟು ಹಿಡಿದಿದ್ದ ರೈತ ಸಂಘಟನೆಗಳಲ್ಲಿ ಅಸಮಾಧಾನ
ಬೆಳಗಾವಿ: ಕಬ್ಬಿಗೆ ನ್ಯಾಯಯುತ ದರ ನಿಗದಿಪಡಿಸುವಂತೆ ಆಗ್ರಹಿಸಿ ಹಲವು ದಿನಗಳಿಂದ ನಡೆಯುತ್ತಿದ್ದ ರೈತರ ಹೋರಾಟದ ನಡುವೆ ಪ್ರಸಕ್ತ ಹಂಗಾಮಿನಲ್ಲಿ ಪ್ರತಿ ಟನ್ ಕಬ್ಬಿಗೆ ₹3,600 ದರ ನಿಗದಿಪಡಿಸಲಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಘೋಷಿಸಿದ್ದಾರೆ. ರೈತ ಮುಖಂಡರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನವೆಂಬರ್ 5ರಿಂದ ಕಬ್ಬು ನುರಿಸುವಿಕೆ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ರೈತ ಮುಖಂಡರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆಯ ಬಳಿಕ ಮಾತನಾಡಿದ ಸತೀಶ್ ಜಾರಕಿಹೊಳಿ, ಪ್ರತಿ ಟನ್ ಕಬ್ಬಿಗೆ ₹3,600 ನೀಡಲು ಕಾರ್ಖಾನೆ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ. ಕಬ್ಬು ನುರಿಸುವಿಕೆ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ರೈತ ಮುಖಂಡರಾದ ಚೂನಪ್ಪ ಪೂಜಾರಿ ಮತ್ತು ಶಶಿಕಾಂತ್ ಸೇರಿದಂತೆ ಪ್ರತಿಭಟನಾನಿರತ ಮುಖಂಡರೊಂದಿಗೆ ಮಾತುಕತೆ ನಡೆಸಿ, ಪ್ರತಿಭಟನೆ ಕೈಬಿಟ್ಟು ಕಬ್ಬು ನುರಿಸುವಿಕೆಗೆ ಸಹಕರಿಸುವಂತೆ ಮನವಿ ಮಾಡಿದರು.
ಅಕ್ಟೋಬರ್ 22ರಿಂದ ಹೋರಾಟ ತೀವ್ರ
ಕಬ್ಬು ಬೆಳೆಗಾರರು ಪ್ರತಿ ಟನ್ ಕಬ್ಬಿಗೆ ₹5,500 ದರ ನೀಡಬೇಕು ಎಂದು ಆಗ್ರಹಿಸಿ ಅಕ್ಟೋಬರ್ 22ರಿಂದ ಹೋರಾಟ ತೀವ್ರಗೊಳಿಸಿದ್ದರು. ಇದರಲ್ಲಿ ₹4,500 ಅನ್ನು ಸಕ್ಕರೆ ಕಾರ್ಖಾನೆಗಳು ನೀಡಬೇಕು ಹಾಗೂ ₹1,000 ಅನ್ನು ರಾಜ್ಯ ಸರ್ಕಾರ ಪ್ರೋತ್ಸಾಹಧನವಾಗಿ ನೀಡಬೇಕು ಎಂಬುದು ರೈತರ ಬೇಡಿಕೆಯಾಗಿತ್ತು. ಉತ್ಪಾದನಾ ವೆಚ್ಚ, ಕಾರ್ಮಿಕರ ಕೂಲಿ, ಗೊಬ್ಬರ, ಕೀಟನಾಶಕ ಮತ್ತು ಸಾಗಣೆ ವೆಚ್ಚಗಳು ಹೆಚ್ಚಾಗಿರುವುದರಿಂದ ಈಗಿನ ದರದಲ್ಲಿ ಕಬ್ಬು ಬೆಳೆದು ಮಾರಾಟ ಮಾಡುವುದು ಕಷ್ಟವಾಗಿದೆ ಎಂದು ರೈತರು ಪ್ರತಿಪಾದಿಸಿದ್ದರು.
ಅಕ್ಟೋಬರ್ 23ರಂದು ಮಂಡ್ಯ ಜಿಲ್ಲೆಯ ಗಣಂಗೂರು ಟೋಲ್ಗೇಟ್ ಬಳಿ ಬೆಂಗಳೂರು–ಮೈಸೂರು ಎಕ್ಸ್ಪ್ರೆಸ್ವೇ ತಡೆದು ರೈತರು ಪ್ರತಿಭಟನೆ ನಡೆಸಿದ್ದರು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ರೈತ ಮುಖಂಡರ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ರೈತರು ಭಾಗವಹಿಸಿದ್ದರು. ರಸ್ತೆ ತಡೆಯಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಬೆಳಗಾವಿ ಜಿಲ್ಲೆಯಲ್ಲಿಯೂ ಹೋರಾಟ ತೀವ್ರಗೊಂಡಿತ್ತು. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರು ರಸ್ತೆ ತಡೆ ನಡೆಸಿ, 30 ಗಂಟೆಗೂ ಹೆಚ್ಚು ಕಾಲ ಸಂಚಾರಕ್ಕೆ ಅಡ್ಡಿಪಡಿಸಿದ್ದರು. ಅಕ್ಟೋಬರ್ 26ರಂದು ಸುವರ್ಣ ವಿಧಾನಸೌಧದಲ್ಲಿ ನಡೆದ ಮಾತುಕತೆ ಯಾವುದೇ ಅಂತಿಮ ನಿರ್ಧಾರಕ್ಕೆ ಬರದೆ ವಿಫಲವಾಗಿತ್ತು. ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿಯೂ ರೈತರು ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿ, ಕಬ್ಬಿಗೆ ಹೆಚ್ಚಿನ ದರ ನಿಗದಿಪಡಿಸುವಂತೆ ಒತ್ತಾಯಿಸಿದ್ದರು.
ಅಕ್ಟೋಬರ್ 31ರಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಸ್ತೆ ತಡೆ ಮತ್ತು ಪ್ರತಿಭಟನೆಗಳನ್ನು ನಡೆಸಿ ಸರ್ಕಾರದ ಗಮನ ಸೆಳೆಯಲು ರೈತ ಸಂಘಟನೆಗಳು ಮುಂದಾಗಿದ್ದವು. ನವೆಂಬರ್ 2ರಂದು ಬೆಳಗಾವಿಯ ಗುರ್ಲಾಪುರದಿಂದ ಹಿಂಡಲಗಾ ಕೇಂದ್ರ ಕಾರಾಗೃಹದವರೆಗೆ ಜೈಲ್ ಭರೋ ಪಾದಯಾತ್ರೆ ಆರಂಭಿಸಲಾಯಿತು. ಕಬ್ಬಿಗೆ ₹5,500 ದರ ನಿಗದಿಪಡಿಸುವವರೆಗೆ ಹೋರಾಟ ಮುಂದುವರಿಸುವ ಎಚ್ಚರಿಕೆಯನ್ನು ರೈತ ಮುಖಂಡರು ನೀಡಿದ್ದರು.
ಇದನ್ನೂ ಓದಿ : ಕಬ್ಬಿಗೆ ಟನ್ಗೆ ₹5,500 ಬೆಲೆ ನಿಗದಿಗೆ ರೈತರ ಪಟ್ಟು: ಬೇಡಿಕೆ ಈಡೇರದಿದ್ದರೆ ಬೃಹತ್ ಜೈಲ್ ಭರೋ ಹೋರಾಟ
₹3,600 ದರಕ್ಕೆ ರೈತರ ಅಸಮಾಧಾನ
ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೈತರ ಬೇಡಿಕೆಗಳು ಮತ್ತು ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿತಿಗತಿಗಳ ಕುರಿತು ಚರ್ಚೆ ನಡೆದಿದೆ. ಅಂತಿಮವಾಗಿ ಪ್ರತಿ ಟನ್ಗೆ ₹3,600 ದರ ನಿಗದಿಪಡಿಸಲಾಗಿದೆ. ಆದರೆ ರೈತರು ಕೇಳಿದ್ದ ₹5,500ಕ್ಕೂ ಈಗ ಘೋಷಿಸಿರುವ ₹3,600ಕ್ಕೂ ₹1,900ರಷ್ಟು ವ್ಯತ್ಯಾಸವಿದೆ. ಹೀಗಾಗಿ ಸರ್ಕಾರದ ನಿರ್ಧಾರದಿಂದ ರೈತರ ಪ್ರಮುಖ ಬೇಡಿಕೆ ಈಡೇರಿದಂತಾಗಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಕಬ್ಬು ಬೆಳೆಗಾರರ ಮತ್ತೊಂದು ಪ್ರಮುಖ ಬೇಡಿಕೆಯಾಗಿದ್ದ ಸಕ್ಕರೆಯ ಕನಿಷ್ಠ ಮಾರಾಟ ದರ ಹೆಚ್ಚಳದ ಬಗ್ಗೆಯೂ ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ. ಸಕ್ಕರೆಯ ಕನಿಷ್ಠ ಮಾರಾಟ ದರವನ್ನು ಪ್ರತಿ ಕೆ.ಜಿಗೆ ₹31ರಿಂದ ₹60ಕ್ಕೆ ಹೆಚ್ಚಿಸಬೇಕು ಎಂದು ರೈತರು ಒತ್ತಾಯಿಸಿದ್ದರು. ಸಕ್ಕರೆ ಮಾರಾಟದಿಂದ ಕಾರ್ಖಾನೆಗಳಿಗೆ ದೊರೆಯುವ ಆದಾಯಕ್ಕೆ ಅನುಗುಣವಾಗಿ ಕಬ್ಬು ಬೆಳೆಗಾರರಿಗೂ ನ್ಯಾಯಯುತ ದರ ನೀಡಬೇಕು ಎಂಬುದು ರೈತರ ವಾದವಾಗಿದೆ.
ಒಟ್ಟಿನಲ್ಲಿ, ಪ್ರತಿ ಟನ್ ಕಬ್ಬಿಗೆ ₹3,600 ದರ ನಿಗದಿಪಡಿಸುವ ಮೂಲಕ ಸರ್ಕಾರ ಮತ್ತು ಕಾರ್ಖಾನೆಗಳು ಕಬ್ಬು ನುರಿಸುವಿಕೆ ಆರಂಭಿಸಲು ಮುಂದಾಗಿವೆ. ಆದರೆ ರೈತರ ₹5,500 ದರದ ಬೇಡಿಕೆ, ಸಕ್ಕರೆಯ ಕನಿಷ್ಠ ಮಾರಾಟ ದರ ಹೆಚ್ಚಳ ಸೇರಿದಂತೆ ಪ್ರಮುಖ ಪ್ರಶ್ನೆಗಳು ಇನ್ನೂ ಬಗೆಹರಿದಿಲ್ಲ.
ಜೈಲ್ ಭರೋ ಚಳವಳಿಗೆ ಚೂನಪ್ಪ ಪೂಜಾರಿ ಕರೆ: 3,600 ರೂ. ಬೆಲೆಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ನೇತೃತ್ವದ ಬಣವು ಒಪ್ಪಿಲ್ಲ. ಅಲ್ಲದೇ ಅವರು ಸಭೆಗೂ ಬಂದಿರಲಿಲ್ಲ. ಹಾಗಾಗಿ, ಗುರುವಾರ ಜೈಲ್ ಭರೋ ಚಳವಳಿ ಮುಂದುವರಿಸಲು ನಿರ್ಧರಿಸಿದ್ದಾರೆ. ಲಕ್ಷಾಂತರ ರೈತರನ್ನು ಸೇರಿಸಿ ಬೆಳಗಾವಿ ಸಿಪಿಎಡ್ ಮೈದಾನದಲ್ಲಿ ಸಮಾವೇಶ ನಡೆಸಲು ಕರೆ ಕೊಟ್ಟಿದ್ದಾರೆ. ಇಲ್ಲಿಗೆ ಕಾರ್ಖಾನೆ ಮಾಲೀಕರು ಮತ್ತು ಮುಖ್ಯಮಂತ್ರಿ ಬಂದು, ದರ ಘೋಷಿಸಬೇಕು. 5 ಸಾವಿರ ರೂ. ಘೋಷಣೆ ಆಗೋವರೆಗೆ ಮುಗಿಯಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ ನಿಷೇಧಾಜ್ಞೆ ಜಾರಿ: ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ಮಾತನಾಡಿ, ಜೈಲ್ ಭರೋ ಚಳವಳಿ ಹಿನ್ನೆಲೆಯಲ್ಲಿ ಲಕ್ಷಾಂತರ ರೈತರು ಬಂದು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅಕ್ಟೋಬರ್ 5ರಂದು ಬೆಳಗ್ಗೆ 6 ಗಂಟೆಯಿಂದ ಅ.7ರ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಐದು ಜನಕ್ಕಿಂತ ಹೆಚ್ಚು ಜನರು ಓಡಾಡುವಂತಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ನೋಡಿ : 3 ಕೋಟಿ ನುಸುಳುಕೋರರು ಎಲ್ಲಿ? ಅಮಿತ್ ಶಾ ಅವರದ್ದೂ ಮತ್ತೊಂದು ಜುಮ್ಲಾನಾ? | ಕೆ.ಎಸ್ ವಿಮಲಾ Janashakthi Media
