ಕಳೆದ ಕೆಲವು ವರ್ಷಗಳಿಂದ ಜಗತ್ತನ್ನು ಕಾಡುತ್ತಿರುವ ಯುದ್ಧಗಳಲ್ಲಿ ಉಕ್ರೇನ್, ಗಾಜಾ ನರಮೇಧ ಮತ್ತು ಪಶ್ಚಿಮ ಏಶ್ಯಾದ ಆದ್ಯಂತ ಇಸ್ರೇಲ್ ಹೂಡಿರುವ ಯುದ್ಧ ಎಲ್ಲರಿಗೂ ಗೊತ್ತು. ಆದರೆ ಇದೇ ಅವಧಿಯಲ್ಲಿ ಆರಂಭವಾಗಿ ಇವೆರಡಕ್ಕಿಂತಲೂ ಹೆಚ್ಚು ಭೀಕರವಾದ ಮಾನವೀಯ ಬಿಕ್ಕಟ್ಟು ಸೃಷ್ಟಿಸಿರುವ ಇನ್ನೊಂದು ಯುದ್ಧವಿದೆ. ಅದು ‘ಕತ್ತಲ ಖಂಡ’ ವೆಂದು ಕರೆಯಲಾಗುವ ಆಫ್ರಿಕಾದಲ್ಲಿ ನಡೆಯುತ್ತಿರುವುದರಿಂದಲೋ ಅಥವಾ ಅದು ಅಂತರ್ಯುದ್ಧವೆಂದು ತೋರುತ್ತಿರುವುದರಿಂದಲೋ ಏನೋ ಹೆಚ್ಚು ಗಮನ ಸೆಳೆದಿಲ್ಲ. ಸುಡಾನ್ ನಲ್ಲಿ ನಡೆಯುತ್ತಿರುವ ಈ ಯುದ್ಧದಲ್ಲಿ ಹಲವಾರು ದಾಖಲಿತ ಯುದ್ಧಾಪರಾಧಗಳು ಮತ್ತು ವ್ಯಾಪಕ ಬರಗಾಲದ ಹಿನ್ನೆಲೆಯಲ್ಲಿ,, ಜನಸಂಖ್ಯೆಯ ನಾಲ್ಕನೇ ಒಂದು ಭಾಗಕ್ಕಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ, ಮೊದಲ ಒಂದೇ ವರ್ಷದಲ್ಲಿ 1.5 ಲಕ್ಷ ಜನ ಸಾವಿಗೀಡಾಗಿದ್ದಾರೆ. ಆ ಮೇಲೂ ದೊಡ್ಡ ಪ್ರಮಾಣದಲ್ಲಿ ಸಾವುನೋವುಗಳಾಗಿವೆ. ಬಹುತೇಕ ಪ್ರಪಂಚ ಮೌನವಾಗಿರುವಾಗ ಸುಡಾನ್ ಈ ಊಹಿಸಲಾಗದ ಹಿಂಸಾಚಾರ, ಮತ್ತು ದುರ್ಭರ ಸ್ಥಿತಿಯನ್ನು ಅನುಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸುಡಾನ್ ದುರಂತದತ್ತ ಒಂದು ನೋಟ.(ಆಧಾರ : ಟ್ರೈ ಕಾಂಟಿನೆಂಟಲ್ ಸೋಶಿಯಲ್ ರಿಸರ್ಚ್ ವರದಿ)
-ವಸಂತರಾಜ ಎನ್.ಕೆ.
ಏಪ್ರಿಲ್ 15, 2023ರಂದು, ಸುಡಾನಿನ ಹಂಗಾಮಿ ಮಿಲಿಟರಿ ಕೌನ್ಸಿಲ್‌ನ ಮುಖ್ಯಸ್ಥ ಜನರಲ್ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ನೇತೃತ್ವದ ಸುಡಾನೀಸ್ ಸಶಸ್ತ್ರ ಪಡೆಗಳು (SAF) ಮತ್ತು ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ‘ಹೆಮೆಡ್ಟಿ’ ಹಮ್ದಾನ್ ದಗಾಲೋ ನೇತೃತ್ವದ ರಾಪಿಡ್ ಸಪೋರ್ಟ್ ಫೋರ್ಸಸ್ (RSF) ನಡುವೆ ಯುದ್ಧ ಆರಂಭವಾಯಿತು. ಅಂದಿನಿಂದ ಈ ಎರಡು ಪಕ್ಷಗಳು, ಸುಡಾನ್‌ನ ಹೊರಗಿನ ವಿವಿಧ ಸರ್ಕಾರಗಳ ಬೆಂಬಲದೊಂದಿಗೆ, ಒಂದು ಭೀಕರವಾದ ಕೊನೆಗಾಣದ ನಿರಂತರ ಯುದ್ಧವನ್ನು ನಡೆಸುತ್ತಿವೆ, ಇದರಲ್ಲಿ ನಾಗರಿಕರು ಮುಖ್ಯವಾಗಿ ಬಲಿಯಾಗುತ್ತಿದ್ದಾರೆ. ಎಷ್ಟು ಜನರು ಮರಣಹೊಂದಿದ್ದಾರೆ ಎಂದು ಹೇಳುವುದು ಅಸಾಧ್ಯ, ಒಂದು ಅಂದಾಜಿನ ಪ್ರಕಾರ, ಏಪ್ರಿಲ್ 2023 ಮತ್ತು ಜೂನ್ 2024 ರ ನಡುವೆ ಮಾತ್ರ ಸುಮಾರು 1.5 ಲಕ್ಷ ಜನರು ಹತರಾಗಿದ್ದಾರೆ ಮತ್ತು ಆ ನಂತರದ ಮರಣ ಸಂಖ್ಯೆಯೂ ಗಮನಾರ್ಹವಾಗಿದೆ ಎಂಬುದು ಸ್ಪಷ್ಟ.
ಇದನ್ನೂ ಓದಿ: ಮುಡಾ ಹಗರಣ: ಡಿ.18ರ ಒಳಗೆ ಅಂತಿಮ ತನಿಖಾ ವರದಿ ಸಲ್ಲಿಸುವಂತೆ ನ್ಯಾಯಾಲಯ ಆದೇಶ
ಎರಡೂ ಪಕ್ಷಗಳು ಮಾಡಿದ ಹಲವಾರು ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ಈಗಾಗಲೇ ವಿವಿಧ ಮಾನವ ಹಕ್ಕು ಸಂಸ್ಥೆಗಳು ದಾಖಲಿಸಿವೆ. 5.1 ಕೋಟಿ ಜನಸಂಖ್ಯೆಯಲ್ಲಿ ಕನಿಷ್ಠ 1.45 ಕೋಟಿ ಸುಡಾನೀಯರು ಸ್ಥಳಾಂತರಗೊಂಡಿದ್ದಾರೆ. ಉತ್ತರ ದಾರ್ಫೂರ್ನ ಎಲ್ ಫಶೀರ್ ಮತ್ತು ದಕ್ಷಿಣ ಕೊರ್ಡೋಫಾನ್‌ನ ಕಡುಗ್ಲಿ ನಡುವಿನ ಪಟ್ಟಿಯಲ್ಲಿ ವಾಸಿಸುವ ಜನರು ತೀವ್ರ ಬರಗಾಲ ಮತ್ತು ದುರ್ಭಿಕ್ಷದಿಂದ ಹೋರಾಡುತ್ತಿದ್ದಾರೆ. ವಿಶ್ವ ಸಂಸ್ಥೆಯ ‘ಸಮಗ್ರ ಆಹಾರ ಭದ್ರತಾ ಹಂತ’ದ ವರ್ಗೀಕರಣದ ಇತ್ತೀಚಿನ ಒಂದು ವಿಶ್ಲೇಷಣೆಯ ಪ್ರಕಾರ, ಸುಡಾನ್‌ನ ಸುಮಾರು 2.12 ಕೋಟಿ ಜನರು – ಒಟ್ಟು ಜನಸಂಖ್ಯೆಯ 45% – ತೀವ್ರ ಆಹಾರ ಅಸುರಕ್ಷಿತತೆಯ ಉಚ್ಛ ಮಟ್ಟವನ್ನು ಎದುರಿಸುತ್ತಿದ್ದಾರೆ, ಮತ್ತು ದೇಶದಾದ್ಯಂತ 3.75 ಲಕ್ಷ ಜನರು ‘ವಿನಾಶಕಾರಿ’ ಮಟ್ಟ’ದ ಹಸಿವನ್ನು ಎದುರಿಸುತ್ತಿದ್ದಾರೆ, ಅಂದರೆ, ಹಸಿವು-ಸಾವಿನ ಅಂಚಿನಲ್ಲಿದ್ದಾರೆ.

ಯುದ್ಧ ಆರಂಭವಾದ ನಂತರ, ಲಕ್ಷಾಂತರ ಜನರು ತಮ್ಮ ದೇಶದಲ್ಲೇ ನಿರಾಶ್ರಿತರಾಗಿದ್ದು ಎಲ್ ಫಶೀರ್‌ನಲ್ಲಿ ಆಶ್ರಯ ಪಡೆದರು, ಆ ನಗರವನ್ನು ಆಗ ಹೆಚ್ಚಾಗಿ SAF ಹಿಡಿದಿಟ್ಟಿತ್ತು. 2025ರ ಅಕ್ಟೋಬರ್‌ನಲ್ಲಿ, RSF ನಗರದ ಪ್ರತಿರೋಧವನ್ನು ಮುರಿದು, ನಗರವನ್ನು ಪ್ರವೇಶಿಸಿ ಹಲವಾರು ದಾಖಲಿತ ಹತ್ಯಾಕಾಂಡಗಳನ್ನು ಮಾಡಿದಾಗ, ಸುಮಾರು 2.6 ಲಕ್ಷ ನಾಗರಿಕರು ಇನ್ನೂ ಅಲ್ಲಿದ್ದರು. ಸೌದಿ ಪ್ರಸೂತಿ ಆಸ್ಪತ್ರೆಯಲ್ಲಿ 460 ರೋಗಿಗಳು ಮತ್ತು ಅವರ ಸಂಗಾತಿಗಳು ಕೊಲ್ಲಲ್ಪಟ್ಟರು. ಈ ನಗರದ ಪತನದ ಅರ್ಥ RSF ಈಗ ಹೆಚ್ಚಾಗಿ ದಾರ್ಫೂರ್ ವಿಶಾಲ ಪ್ರದೇಶದ ಮೇಲೆ ನಿಯಂತ್ರಣ ಹೊಂದಿದೆ, ಆದರೆ ಪೂರ್ವ ಸುಡಾನ್‌ನ ಬಹುಭಾಗವನ್ನು – ದೇಶದ ಸಮುದ್ರ ಮತ್ತು ಅಂತರರಾಷ್ಟ್ರೀಯ ವ್ಯಾಪಾರದ ಪ್ರವೇಶದ್ವಾರವಾದ ಪೋರ್ಟ್ ಸುಡಾನ್ ಸೇರಿದಂತೆ – ಮತ್ತು ರಾಜಧಾನಿ ಖಾರ್ತೂಮ್ SAF ವಶದಲ್ಲಿವೆ.
ಪ್ರಸ್ತುತ, ಈ ಅಂತರ್ಯುದ್ಧದ ತೀವ್ರತೆ ಕಡಿಮೆಯಾಗುವ ಯಾವುದೇ ಚಿಹ್ನೆಗಳಿಲ್ಲ.

SAF ಮತ್ತು RSF ಏಕೆ ಪರಸ್ಪರ ಭೀಕರ ಸಂಘರ್ಷದಲ್ಲಿ ತೊಡಗಿವೆ?
ಈ ಪ್ರಮಾಣದ ಯುದ್ಧಕ್ಕೆ ಸಾಮಾನ್ಯವಾಗಿ ಒಂದೇ ಸರಳ ಕಾರಣವಿರುವುದಿಲ್ಲ. ಇದು 2019ರ ಜನಪ್ರಿಯ ಕ್ರಾಂತಿಯ ವಿರುದ್ಧದ ಪ್ರತಿಕ್ರಾಂತಿ ಎಂಬುದು ಈ ಸಂಘರ್ಷದ ರಾಜಕೀಯ ಕಾರಣ. 2019ರ ಕ್ರಾಂತಿ 1993ರಿಂದ ಆಳುತ್ತಿದ್ದ ಅಧ್ಯಕ್ಷ ಒಮರ್ ಅಲ್-ಬಶೀರ್ ಅವರನ್ನು ಹೊರಹಾಕಲು ಯಶಸ್ವಿಯಾಯಿತು. ಅವರ ಅಧಿಕಾರದ ಕೊನೆಯ ವರ್ಷಗಳಲ್ಲಿ ಹಣದುಬ್ಬರ ಮತ್ತು ಸಾಮಾಜಿಕ ಬಿಕ್ಕಟ್ಟುಗಳು ವಿಪರೀತವಾಗಿ ಹೆಚ್ಚುತ್ತಿದ್ದವು.
2019ರ ಕ್ರಾಂತಿಯ ಹಿಂದಿದ್ದ ಎಡಪಂಥೀಯ ಮತ್ತು ಜನಪ್ರಿಯ ಶಕ್ತಿಗಳು (ಸುಡಾನೀಸ್ ಕಮ್ಯುನಿಸ್ಟ್ ಪಾರ್ಟಿ, ರಾಷ್ಟ್ರೀಯ ಸಹಮತ ಶಕ್ತಿಗಳು, ಸುಡಾನೀಸ್ ಪ್ರೊಫೆಷನಲ್ ಅಸೋಸಿಯೇಷನ್, ಸುಡಾನ್ ರೆವಲ್ಯೂಷನರಿ ಫ್ರಂಟ್, ಸುಡಾನೀಸ್ ಸಾಮಾಜಿಕ ಮತ್ತು ರಾಜಕೀಯ ಗುಂಪುಗಳ ಮಹಿಳೆಯರು ಮತ್ತು ಅನೇಕ ಸ್ಥಳೀಯ ಪ್ರತಿರೋಧ ಮತ್ತು ನೆರೆಹೊರೆ ಸಮಿತಿಗಳು ಸೇರಿದಂತೆ) ನಾಗರಿಕ ಸರ್ಕಾರಕ್ಕೆ ಪರಿವರ್ತನೆಯ ಮೇಲ್ವಿಚಾರಣೆಯನ್ನು ಮಾಡಬೇಕೆಂದು ಮಿಲಿಟರಿಯನ್ನು ಒಪ್ಪಿಸಿದವು.
ಆಫ್ರಿಕನ್ ಯೂನಿಯನ್ ಸಹಾಯದೊಂದಿಗೆ ಐದು ಸೇನಾ ಮತ್ತು ಆರು ನಾಗರಿಕ ಸದಸ್ಯರುಗಳನ್ನು ಒಳಗೊಂಡ ಹಂಗಾಮಿ ಸಾರ್ವಭೌಮ ಮಂಡಳಿಯನ್ನು ಸ್ಥಾಪಿಸಲಾಯಿತು. ಅಬ್ದಲ್ಲಾ ಹಂಡೋಕ್ ಪ್ರಧಾನ ಮಂತ್ರಿಯಾಗಿ ಮತ್ತು ನ್ಯಾಯಾಧೀಶ ನೇಮತ್ ಅಬ್ದುಲ್ಲಾ ಖೈರ್ ಪ್ರಧಾನ ನ್ಯಾಯಾಧೀಶರಾಗಿ ನೇಮಕಗೊಂಡರು. ಅಲ್-ಬುರ್ಹಾನ್ ಮತ್ತು ಹೆಮೆಡ್ಟಿ (ಈಗ ಭೀಕರ ಯುದ್ಧದಲಿ ತೊಡಗಿರುವ SAF ಮತ್ತು RSF ನಾಯಕರು) ಸಹ ಮಂಡಳಿಯಲ್ಲಿದ್ದರು.
ಸೇನಾ-ನಾಗರಿಕ ಜಂಟಿ ಸರ್ಕಾರವು ಕರೆನ್ಸಿಯನ್ನು ತೇಲಿಬಿಟ್ಟು ಮತ್ತು ಸರಕಾರಿ ಉದ್ಯಮಗಳನ್ನು ಖಾಸಗೀಕರಣಗೊಳಿಸುವ ಮೂಲಕ ಆರ್ಥಿಕತೆಯನ್ನು ಮತ್ತಷ್ಟು ಹಾಳುಮಾಡಿತು. ಇದರಿಂದ ಬಂಗಾರದ ಕಳ್ಳಸಾಗಣೆ ಹೆಚ್ಚು ಲಾಭದಾಯಕವಾಯಿತು ಮತ್ತು RSF ಶಕ್ತಿಯುತವಾಯಿತು, ಈ ಸರ್ಕಾರವು ಇಸ್ರೇಲ್‌ನೊಂದಿಗೆ ಸಂಬಂಧಗಳನ್ನು ಸಾಮಾನ್ಯಗೊಳಿಸಿದ ಅಬ್ರಹಾಂ ಒಪ್ಪಂದಗಳಿಗೆ ಸಹಿ ಸಹ ಹಾಕಿತು. ಈ ನೀತಿಗಳು ಅಧಿಕಾರ (ಭದ್ರತಾ ಪ್ರಭುತ್ವದ ನಿಯಂತ್ರಣ) ಮತ್ತು ಸಂಪತ್ತಿನ (ಬಂಗಾರದ ವ್ಯಾಪಾರದ ನಿಯಂತ್ರಣ) ಮೇಲಿನ ನಿಯಂತ್ರಣಕ್ಕೆ ಪೈಪೋಟಿಯ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದವು.
ಸೇನಾ-ನಾಗರಿಕ ಜಂಟಿ ಸರ್ಕಾರದಲ್ಲಿ ಮತ್ತು ಆಡಳಿತ ಮಂಡಳಿಯಲ್ಲಿ ಇದ್ದರೂ, ಅಲ್-ಬುರ್ಹಾನ್ ಮತ್ತು ಹೆಮೆಡ್ಟಿ ಇಬ್ಬರೂ ಕ್ಷಿಪ್ರದಂಗೆ ನಡೆಸಿ ಅಧಿಕಾರ ಕಿತ್ತುಕೊಳ್ಳುವ ಹಲವು ಪ್ರಯತ್ನಗಳನ್ನು 2019ರ ಕ್ರಾಂತಿಯ ಸಮಯದಿಂದ ನಡೆಸುತ್ತಲೇ ಇದ್ದರು. ಕೊನೆಗೆ 2021ರಲ್ಲಿ ಮಿಲಿಟರಿ ಅಧಿಕಾರ ಕಿತ್ತುಕೊಂಡಿತು. ಜಂಟಿ ಸರಕಾರದಿಂದ ನಾಗರಿಕರನ್ನು ಹೊರಗೆ ಹಾಕಿದ ನಂತರ, ಈ ಇಬ್ಬರು ಸೇನಾ ನಾಯಕರ ನಡುವೆ ಘರ್ಷಣೆ ಆರಂಭವಾಯಿತು.

ಸಂಪನ್ಮೂಲಗಳಿಗಾಗಿ ಪೈಪೋಟಿ
SAF ಅಧಿಕಾರಿಗಳು ಸರಕಾರಿ ಯಂತ್ರದ ಮೇಲಿನ ತಮ್ಮ ಹತೋಟಿಯನ್ನು ಉಳಿಸಿಕೊಳ್ಳಲು ಶ್ರಮಿಸಿದರು. 2019ರಲ್ಲಿ ಸರಕಾರದ ಬಜೆಟ್ ಸಂಪನ್ಮೂಲದ (2020ರಲ್ಲಿ ಪ್ರಧಾನಿ ಅಬ್ದಲ್ಲಾ ಹಂಡೋಕ್ ದೃಢಪಡಿಸಿದಂತೆ) 82% ಸರಕಾರಿ ಉದ್ಯಮಗಳಲ್ಲಿತ್ತು. ಈ ಉದ್ಯಮಗಳ ಮೇಲೆ ತಮ್ಮ ನಿಯಂತ್ರಣವನ್ನು ಉಳಿಸಿಕೊಳ್ಳಲು SAF ಅಧಿಕಾರಿಗಳು ಪ್ರಯತ್ನಿಸಿದರು. ವಾರ್ಷಿಕ ಆದಾಯ 2 ಬಿಲಿಯನ್ (ಶತಕೋಟಿ) ಡಾಲರ್ ಇರುವ 200ಕ್ಕೂ ಹೆಚ್ಚು ಕಂಪನಿಗಳನ್ನು ನಡೆಸುವ ಡಿಫೆನ್ಸ್ ಇಂಡಸ್ಟ್ರೀಸ್ ಸಿಸ್ಟಮ್ ಮೇಲೆ SAF ನಿಯಂತ್ರಣ ಹೊಂದಿತು. ಅದರ ಮೂಲಕ ಗಣಿ, ದೂರಸಂಪರ್ಕ ಮತ್ತು ಆಮದು-ರಫ್ತು ವ್ಯಾಪಾರದಾದ್ಯಂತ ಸುಡಾನ್‌ನ ಔಪಚಾರಿಕ ಆರ್ಥಿಕತೆಯ ಗಮನಾರ್ಹ ಪಾಲನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ..
ಜಂಜಾವೀಡ್ ಉಗ್ರಗಾಮಿಗಳಲ್ಲಿ ನೆಲೆಯಿದ್ದ RSF, ದಾರ್ಫೂರ್‌ನ ಪ್ರಮುಖ ಬಂಗಾರ ಉತ್ಪಾದಕ ಪ್ರದೇಶಗಳು ಮತ್ತು ಜೆಬೆಲ್ ಅಮೇರ್ ಸೇರಿದಂತೆ ಅರ್ಧ ಡಜನ್ ಗಣಿ ಸ್ಥಳಗಳನ್ನು ನಿಯಂತ್ರಿಸುವ ಅಲ್ ಜುನೈಡ್ ಮಲ್ಟಿ-ಆಕ್ಟಿವಿಟೀಸ್ ಕಾರ್ಪೊರೇಷನ್ ಅನ್ನು ಕೇಂದ್ರೀಕರಿಸಿದ ಆರ್ಥಿಕತೆಯನ್ನು ತನ್ನ ಹತೋಟಿಗೆ ತರಲು ಪ್ರಯತ್ನಿಸಿತು. ಸುಡಾನ್‌ನ ಒಟ್ಟು ಬಂಗಾರ ಉತ್ಪಾದನೆಯ 50-80% (2022 ರಂತೆ) ಅಧಿಕೃತವಾಗಿ ರಫ್ತಾಗುವ ಬದಲು ಕಳ್ಳಸಾಗಣೆಯಾಗುತ್ತದೆ (ಮುಖ್ಯವಾಗಿ UAE ಗೆ). ಪಶ್ಚಿಮ ಸುಡಾನ್‌ನ ಕುಶಲಕರ್ಮಿ ಆಧಾರಿತ ಗಣಿ ವಲಯಗಳಲ್ಲಿ (ಒಟ್ಟು ಉತ್ಪಾದನೆಯ 80-85%) ಪ್ರಾಬಲ್ಯ ಪಡೆದಿರುವುದರಿಂದ, RSF ಪ್ರತಿ ವರ್ಷ ಬಂಗಾರದ ಆದಾಯದಿಂದ ಬೃಹತ್ ಮೊತ್ತವನ್ನು ಪಡೆಯುತ್ತದೆ (2024 ರಲ್ಲಿ ದಾರ್ಫೂರ್ ಗಣಿಗಳಿಂದ ಮಾತ್ರ 86 ಕೋಟಿ ಡಾಲರು ಎಂದು ಅಂದಾಜು).
ಈ ರಾಜಕೀಯ ಮತ್ತು ಭೌತಿಕ ಪೈಪೋಟಿಗಳಡಿಯಲ್ಲಿ ಸಂಕಟವನ್ನು ಹೆಚ್ಚಿಸುವ ಪರಿಸರದ ಒತ್ತಡಗಳು ಸಹ ಅಡಗಿವೆ. ದಾರ್ಫೂರ್‌ನಲ್ಲಿ ದೀರ್ಘಕಾಲದ ಸಂಘರ್ಷಕ್ಕೆ ಭಾಗಶಃ ಸಹೇಲ್‌ನ ಶುಷ್ಕತೆ ಸಹ ಕಾರಣವಾಗಿದೆ. ದಶಕಗಳ ಕಾಲ, ಹವಾಮಾನ ದುರಂತದಿಂದಾಗಿ ಉಂಟಾಗುತ್ತಿರುವ ಅನಿಯಮಿತ ಮಳೆ ಮತ್ತು ಶಾಖಾ ಅಲೆಗಳು ಸಹಾರಾ ಮರುಭೂಮಿಯನ್ನು ದಕ್ಷಿಣಕ್ಕೆ ವಿಸ್ತರಿಸಿವೆ, ಮರುಭೂಮಿಯ ವಿಸ್ತರಣೆ ನಿವಾಸಿ ಕೃಷಿಕರು ಮತ್ತು ಸಂಚಾರಿ ಕುರಿ ಸಾಕಣೆದಾರರ ನಡುವೆ ನೀರಿನ ಸಂಪನ್ಮೂಲಗಳಿಗಾಗಿ ಸಂಘರ್ಷಕ್ಕೆ ಕಾರಣವಾಗಿದೆ..
ಸುಡಾನ್‌ನ ಅರ್ಧ ಜನಸಂಖ್ಯೆಯು ಈಗ ತೀವ್ರ ಆಹಾರ ಅಭದ್ರತೆಯೊಂದಿಗೆ ಬದುಕುತ್ತಿದೆ. ಕೆಲವೇ ಶ್ರೀಮಂತರಿಂದ ಸಂಪನ್ಮೂಲಗಳ ಕಳ್ಳತನದೊಂದಿಗೆ, ಹವಾಮಾನ ನಮೂನೆಗಳಲ್ಲಿ ತ್ವರಿತ ಬದಲಾವಣೆಗಳಿಂದ ಬಳಲುತ್ತಿರುವ ಜನಸಂಖ್ಯೆಗೆ ಆರ್ಥಿಕ ಯೋಜನೆಯನ್ನು ರೂಪಿಸಲು ವಿಫಲತೆ, ಸುಡಾನ್‌ನನ್ನು ದೀರ್ಘಕಾಲದ ಸಂಘರ್ಷಕ್ಕೆ ಗುರಿ ಮಾಡಿದೆ.
ಇದು ಕೇವಲ ಇಬ್ಬರು ಬಲಿಷ್ಠ ಮಿಲಿಟರಿ ನಾಯಕರ ನಡುವಿನ ಯುದ್ಧವಲ್ಲ, ಬದಲಿಗೆ ದೇಶದ ಸಂಪನ್ಮೂಲಗಳ ರೂಪಾಂತರ ಮತ್ತು ಹೊರಗಿನ ಶಕ್ತಿಗಳ ಬೆಂಬಲದೊಂದಿಗೆ ಅವುಗಳನ್ನು ದೋಚುವ ಯುದ್ಧವಾಗಿದೆ. ಶಸ್ತ್ರಸಜ್ಜಿತ ಗುಂಪುಗಳಿಗೆ ಸಂಪನ್ಮೂಲಗಳು ಉಜ್ಜ್ವಲ ಬಹುಮಾನವಾಗಿ ಉಳಿದಿರುವವರೆಗೆ, ಎಷ್ಟೇ ಯುದ್ಧವಿರಾಮ ಒಪ್ಪಂದಗಳ ಪ್ರಸ್ತಾವಗಳು ಇದ್ದರೂ ಅದು ಅಂಗೀಕರಿಸಲ್ಪಡುವ, ಜಾರಿಯಾಗುವ ಸಂಭವ ತೀರಾ ಕಡಿಮೆ.
ಸುಡಾನ್‌ನಲ್ಲಿ ಶಾಂತಿಯ ಸಾಧ್ಯತೆಗಳೇನು?
ಸುಡಾನ್‌ನಲ್ಲಿ ಶಾಂತಿಗೆ ದಾರಿ ಮಾಡಿಕೊಡಲು ಆರು ಅಂಶಗಳ ಅಗತ್ಯವಿದೆ:
- ಜಾರಿಯ ಸೂಕ್ತ ಮೇಲ್ವಿಚಾರಣೆಯಿರುವ ತಕ್ಷಣದ ಯುದ್ಧವಿರಾಮ ಮೊದಲ ಅಗತ್ಯ. ಇದು ಆಹಾರ ಮತ್ತು ಔಷಧಿಗಳ ಸಾಗಣೆಗಾಗಿ ‘ಮಾನವೀಯ ಹಾದಿ’ಗಳ ಸ್ಥಾಪನೆಯನ್ನು ಒಳಗೊಂಡಿರಬೇಕು. ಈ ಹಾದಿಗಳು ಪ್ರತಿರೋಧ ಸಮಿತಿಗಳ ನೇತೃತ್ವದಲ್ಲಿರಬೇಕು, ಏಕೆಂದರೆ ಅವು ನೇರವಾಗಿ ಅಗತ್ಯವಿದ್ದವರಿಗೆ ಸಹಾಯ ತಲುಪಿಸಲು ಅಗತ್ಯವಾದ ಜಾಲಗಳನ್ನು ಮತ್ತು ಪ್ರಜಾಸತ್ತಾತ್ಮಕ ವಿಶ್ವಾಸಾರ್ಹತೆ ಹೊಂದಿವೆ.
- ಯುದ್ಧದ ಆರ್ಥಿಕತೆಯ ಅಂತ್ಯ ಅಷ್ಟೇ ಆವಶ್ಯಕ. ನಿರ್ದಿಷ್ಟವಾಗಿ ಬಂಗಾರ ಮತ್ತು ಶಸ್ತ್ರಾಸ್ತ್ರಗಳ ಪೂರೈಕೆಯ ಕಳ್ಳಹಾದಿಗಳನ್ನು ನಿಲ್ಲಿಸಬೇಕು. ಇದರಲ್ಲಿ RSF ಯೊಂದಿಗಿನ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳುವವರೆಗೆ UAE ಗೆ ಶಸ್ತ್ರಾಸ್ತ್ರಗಳ ಮಾರಾಟ ಮತ್ತು ಅವರಿಂದ ಬಂಗಾರದ ಖರೀದಿಗೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಒಳಗೊಳ್ಳಬೇಕು. ಸುಡಾನ್ ಬಂದರಿನಲ್ಲಿ ರಫ್ತು ನಿಯಂತ್ರಣಗಳನ್ನು ಜಾರಿಗೊಳಿಸಬೇಕು.
- ರಾಜಕೀಯ ನಿರಾಶ್ರಿತರ ಸುರಕ್ಷಿತ ವಾಪಸಾತಿ ಮತ್ತು ರಾಜಕೀಯ ಸಂಸ್ಥೆಗಳ ಪುನರ್ನಿರ್ಮಾಣ ಪ್ರಕ್ರಿಯೆಯ ಪ್ರಾರಂಭ ಸಹ ಅಗತ್ಯ. ಪ್ರಮುಖವಾಗಿ ಪ್ರತಿರೋಧ ಸಮಿತಿಗಳು ಮುಂತಾದ ಜನಪ್ರಿಯ ಶಕ್ತಿಗಳಿಂದ ಆಯ್ಕೆಯಾದ ಅಥವಾ ಬೆಂಬಲಿತ ನಾಗರಿಕ ಸರ್ಕಾರದ ಅಡಿಯಲ್ಲಿ ಈ ಪ್ರಕ್ರಿಯೆ ನಡೆಯಬೇಕು. SAF ನ ರಾಜಕೀಯ ಅಧಿಕಾರ ಮತ್ತು ಆರ್ಥಿಕ ಸ್ವತ್ತುಗಳನ್ನು ಕಿತ್ತುಕೊಳ್ಳಬೇಕು ಮತ್ತು ಅದು ಸರ್ಕಾರಕ್ಕೆ ಅಧೀನವಾಗಬೇಕು. RSF ಯನ್ನು ನಿಶ್ಶಸ್ತ್ರಗೊಳಿಸಬೇಕು ಮತ್ತು ವಿಸರ್ಜಿಸಬೇಕು.
- ಸುಡಾನ್‌ನ ಉಚ್ಚ ನ್ಯಾಯಾಂಗದ ತತ್ಕ್ಷಣದ ಪುನರ್ನಿರ್ಮಾಣವಾಗಬೇಕು. ಅದು ಕ್ರೂರ ಕೃತ್ಯಗಳಿಗೆ ಜವಾಬ್ದಾರರಾದವರನ್ನು ತನಿಖೆ ಮಾಡಲು ಮತ್ತು ವಿಚಾರಣೆ ನಡೆಸಲು ಅಧಿಕಾರ ಹೊಂದಿರಬೇಕು.
- ಸುಡಾನ್‌ನಲ್ಲಿ ಜವಾಬ್ದಾರಿಯ ಪ್ರಕ್ರಿಯೆಯನ್ನು ತತ್ಕ್ಷಣ ಸ್ಥಾಪಿಸಿ ಸರಿಯಾಗಿ ರಚಿತವಾದ ನ್ಯಾಯಾಲಯದ ಮೂಲಕ ಯುದ್ಧಕೋರ ಗ್ಯಾಂಗ್ ನಾಯಕರ ವಿಚಾರಣೆಯನ್ನು ಒಳಗೊಳ್ಳಬೇಕು.
- ಸುಡಾನ್‌ನ ಯೋಜನಾ ಆಯೋಗ ಮತ್ತು ಹಣಕಾಸು ಸಚಿವಾಲಯದ ತತ್ಕ್ಷಣ ಪುನರ್ನಿರ್ಮಾಣವಾಗಬೇಕು. ಅದು ರಫ್ತು ವಲಯಗಳಿಂದ ಬರುವ ಹೆಚ್ಚುವರಿ ಆದಾಯವನ್ನು ಸಾರ್ವಜನಿಕ ಸರಕುಗಳು ಮತ್ತು ಸಾಮಾಜಿಕ ರಕ್ಷಣೆಗೆ ಬಳಸುವಂತಾಗಬೇಕು..

ಸವಾಲುಗಳು ಮತ್ತು ಪ್ರಸ್ತುತ ಪರಿಸ್ಥಿತಿ
ಈ ಆರು ಅಂಶಗಳು ಆಫ್ರಿಕನ್ ಯೂನಿಯನ್ ಮತ್ತು ಇಂಟರ್-ಗವರ್ನ್ಮೆಂಟಲ್ ಅಥಾರಿಟಿ ಆನ್ ಡೆವಲಪ್ಮೆಂಟ್ (IGAD) ರ AU-IGAD ಜಂಟಿ ರೋಡ್‌ಮ್ಯಾಪ್ (2023) ನ ಮೂರು ಪ್ರಮುಖ ಅಂಶಗಳನ್ನು ವಿವರಿಸುತ್ತವೆ. ಆದರೆ, ಇದರ ಕಷ್ಟವೆಂದರೆ – ಇತರ ಪ್ರಸ್ತಾವನೆಗಳಂತೆ – ಇದು ದಾನಿಗಳ ಮೇಲೆ ಅವಲಂಬಿತವಾಗಿದೆ, ಮತ್ತು ಈ ದಾನಿಗಳಲ್ಲಿ ಹಿಂಸೆಯಲ್ಲಿ ಭಾಗಿಯಾದ ವ್ಯಕ್ತಿ/ಸಂಸ್ಥೆ/ದೇಶಗಳೂ ಸೇರಿವೆ. ಈ ಆರು ಅಂಶಗಳು ವಾಸ್ತವವಾಗಲು, ಹೊರಗಿನ ಶಕ್ತಿಗಳು SAF ಮತ್ತು RSF ಗೆ ತಮ್ಮ ಬೆಂಬಲ ಕೊಡುವುದನ್ನು ನಿಲ್ಲಿಸಲು ಒತ್ತಡ ಹಾಕಬೇಕು. ಇಂತಹ ಶಕ್ತಿಗಳಲ್ಲಿ ಈಜಿಪ್ಟ್, ಯುರೋಪಿಯನ್ ಯೂನಿಯನ್, ಕತಾರ್, ರಷ್ಯಾ, ಸೌದಿ ಅರೇಬಿಯಾ, UAE ಮತ್ತು ಯು.ಎಸ್ ಸೇರಿವೆ.
ಈ ರೋಡ್‌ಮ್ಯಾಪ್‌ನಲ್ಲಾಗಲೀ ಅಥವಾ ‘ಜೆದ್ದಾ ವಾಹಿನಿ’ಯಲ್ಲಾಗಲೀ (2023 ರಲ್ಲಿ ಪ್ರಾರಂಭವಾದ ಸೌದಿ-ಅಮೆರಿಕ ಮಧ್ಯಸ್ತಿಕೆ ಮಾರ್ಗ, ಇದು ಅಲ್ಪಾವಧಿಯ ಯುದ್ಧವಿರಾಮ ಮತ್ತು ಮಾನವೀಯ ಪ್ರವೇಶದ ಮೇಲೆ ಕೇಂದ್ರೀಕರಿಸಿದೆ) ಸುಡಾನಿ ನಾಗರಿಕ ಗುಂಪುಗಳು, ಅದರಲ್ಲೂ ವಿಶೇಷವಾಗಿ ಪ್ರತಿರೋಧ ಸಮಿತಿಗಳು ಸೇರಿಸಲ್ಪಟ್ಟಿಲ್ಲ.
ಶಾಂತಿಯ ಸಾಧ್ಯತೆಗಳು ಈ ಕೆಳಗಿನವುಗಳ ಮೇಲೆ ಅವಲಂಬಿತವಾಗಿವೆ:
– ಹೊರಗಿನ ಶಕ್ತಿಗಳು ಯುದ್ಧದಲ್ಲಿ ತಮ್ಮ ಭಾಗವಹಿಸುವಿಕೆಯನ್ನು ನಿಜವಾಗಿಯೂ ಕಡಿಮೆ ಮಾಡುವುದು.
– ಯುದ್ಧ ಆರ್ಥಿಕತೆಯನ್ನು ನಿಭಾಯಿಸಲು ಮತ್ತು ಸಂಪನ್ಮೂಲಗಳ ಕಳ್ಳತನವನ್ನು ತಡೆಯಲು ನೈಜ ಹೊಣೆಗಾರಿಕೆ ಮತ್ತು ವ್ಯವಸ್ಥೆಗಳ ಸ್ಥಾಪನೆ.
– ಸುಡಾನಿ ಸಮಾಜದ ವಿವಿಧ ವಿಭಾಗಗಳು, ವಿಶೇಷವಾಗಿ ಪ್ರತಿರೋಧ ಸಮಿತಿಗಳಂತಹ ತಳಮಟ್ಟದ ನಾಗರಿಕ ಗುಂಪುಗಳು, ಶಾಂತಿ ಪ್ರಕ್ರಿಯೆಗಳಲ್ಲಿ ಕೇಂದ್ರ ಪಾತ್ರ ವಹಿಸುವುದು.
ಪ್ರಸ್ತುತ, ಯಾವುದೇ ಪಕ್ಷವು ನಿರ್ಣಾಯಕ ಸೈನಿಕ ಗೆಲುವನ್ನು ಸಾಧಿಸದಿರುವುದರಿಂದ ಮತ್ತು ಸಮುದಾಯದ ಮಟ್ಟದಲ್ಲಿ ಬಲವಾದ ಪ್ರತಿರೋಧವಿರುವುದರಿಂದ, ಯುದ್ಧ ತೊಡಗಿದವರಿಗೆ ಅಂತಿಮವಾಗಿ ಶಾಂತಿ ಚರ್ಚೆಗೆ ಕುಳಿತುಕೊಳ್ಳುವಂತೆ ಒತ್ತಡ ಹೇರುವ ಸಾಧ್ಯತೆ ಇದೆ. ಆದರೆ, ಹೆಚ್ಚಿನ ಅಂತರರಾಷ್ಟ್ರೀಯ ಪ್ರಯತ್ನಗಳು ಯುದ್ಧದಲ್ಲಿ ಭಾಗಿಯಾದ ಪಕ್ಷಗಳು ಮತ್ತು ಹೊರಗಿನ ಬೆಂಬಲಿಗರ ಮೇಲೆ ಕೇಂದ್ರೀಕರಿಸಿದೆ, ನಿಜವಾದ ನಾಗರಿಕ-ನೇತೃತ್ವದ ಪರಿವರ್ತನೆಯ ಅಗತ್ಯವನ್ನು ನಿರ್ಲಕ್ಷಿಸಿವೆ. ಆದ್ದರಿಂದ, ಶಾಂತಿಯ ನೈಜ ಮಾರ್ಗವು ಸ್ಥಳೀಯ ನಾಗರಿಕ ಶಕ್ತಿಗಳು, ಅಂತರರಾಷ್ಟ್ರೀಯ ಒತ್ತಡ ಮತ್ತು ಯುದ್ಧದ ಆರ್ಥಿಕ ಅಡಿಪಾಯವನ್ನು ನಾಶಮಾಡುವ ಕ್ರಮಗಳ ಸಂಯೋಜನೆಯ ಮೂಲಕ ಆಗಬೇಕು.
ಇದನ್ನೂ ನೋಡಿ: ಚಿನ್ನಯ್ಯನಿಗೆ ಷರತ್ತುಬದ್ಧ ಜಾಮೀನು!! ರೀ ಓಪನ್ ಆಗುತ್ತಾ ಸೌಜನ್ಯ ಕೇಸ್ ?!!v Janashakthi Media
