ಕ್ರಿಶ್ಚಿಯನ್-ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಮೀಸಲಾತಿ ಗೊಂದಲ: ಕೇಂದ್ರದಿಂದ ಆಯೋಗ ರಚನೆ

ನವದೆಹಲಿ: ಕ್ರಿಶ್ಚಿಯನ್‌ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಲಿತರ ಸ್ಥಿತಿಗತಿಗಳ ಅಧ್ಯಯನಕ್ಕೆ ಕೇಂದ್ರ ಸರ್ಕಾರವು ಹೊಸದೊಂದು ಆಯೋಗವನ್ನು ರಚನೆ ಮಾಡಿದೆ. ಮತಾಂತರಗೊಂಡ ದಲಿತರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಈ ಆಯೋಗವು ಅಧ್ಯಯನ ಮಾಡಲಿದ್ದು, ಮೀಸಲಾತಿ ಸಂಬಂಧಿಸಿದಂತೆ ವಿವರಗಳನ್ನು ಶಿಫಾರಸ್ಸು ಮಾಡಲಿದೆ. ಈ ಕುರಿತು ಶೀಘ್ರದಲ್ಲಿಯೇ ಅಧಿಸೂಚನೆಯೊಂದು ಪ್ರಕಟವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಇಂಡಿಯನ್‌ ಎಕ್ಸ್‌ಪ್ರೆಸ್‌ ಈ ಕುರಿತು ವರದಿ ಮಾಡಿದ್ದು, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮತ್ತು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಉನ್ನತ ಅಧಿಕಾರಿಗಳು ಆಯೋಗ ರಚನೆ ಕುರಿತು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಗೃಹ, ಕಾನೂನು, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಹಾಗೂ ಹಣಕಾಸು ಸಚಿವಾಲಯಗಳಲ್ಲಿ ಈ ಪ್ರಸ್ತಾಪದ ಬಗ್ಗೆ ಸಮಾಲೋಚನೆಗಳು ನಡೆಸಲಾಗುತ್ತಿದೆ.

ಸವೋಚ್ಚ ನ್ಯಾಯಾಲಯದಲ್ಲಿ ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಪರಿಶಿಷ್ಟ ಜಾತಿ(ಎಸ್​ಸಿ) ಮೀಸಲಾತಿ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಹಲವಾರು ಅರ್ಜಿಗಳು ಸಲ್ಲಿಕೆಯಾಗಿದೆ. ಮತಾಂತರಗೊಂಡ ದಲಿತರಿಗೂ ಮೀಸಲಾತಿ ವಿಸ್ತರಿಸಿದರೆ ಮುಂದಿನ ದಿನಗಳಲ್ಲಿ ಅದು ಸಾಮಾಜಿಕವಾಗಿ ಬೀರಬಹುದಾದ ಪರಿಣಾಮಗಳ ಬಗ್ಗೆ ಹಿಂದುತ್ವ ಪರ ಸಂಘಟನೆಗಳಲ್ಲಿ ಹೆಚ್ಚಿನ ಆತಂಕವಿದೆ. ಧಾರ್ಮಿಕ ಅಂಕಿಅಂಶಗಳು ಏರುಪೇರಾಗಬಹುದು ಎಂದೂ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಯೋಗವನ್ನು ರಚಿಸುವ ಕ್ರಮಕ್ಕೆ ಮುಂದಾಗಲಾಗಿದೆ ಎಂದು ವರದಿಯಾಗಿದೆ.

ನಾಲ್ವರು ಉನ್ನತ ಮಟ್ಟದ ಸದಸ್ಯರು ಈ ಆಯೋಗದಲ್ಲಿ ಇರಲಿದ್ದಾರೆ ಎಂದು ಅಂದಾಜಿಸಲಾಗಿದೆ. ಅದರ ಅಧ್ಯಕ್ಷರಿಗೆ ಕೇಂದ್ರ ಸಂಪುಟ ದರ್ಜೆ ಸಚಿವರ ಶ್ರೇಣಿ ಇರುತ್ತದೆ. ವರದಿ ಸಲ್ಲಿಸಲು ಸುಮಾರು ಒಂದು ವರ್ಷದ ಕಾಲಾವಧಿ ಸಿಗಬಹುದು ಎಂದು ಹೇಳಲಾಗಿದೆ. ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಎಸ್​ಸಿ ಸ್ಥಾನಮಾನ ನೀಡುವುದರ ಸಾಧಕ-ಬಾಧಕ ಪರಿಶೀಲನೆ ಹಾಗೂ ಹಾಲಿ ಇರುವ ಎಸ್​ಸಿ ಪಟ್ಟಿಗೆ ಹೆಚ್ಚಿನ ಸದಸ್ಯರನ್ನು ಸೇರಿಸಿದರೆ ಆಗಬಹುದಾದ ಪರಿಣಾಮವನ್ನು ಸಹ ಸಮಿತಿಯು ಅಧ್ಯಯನ ಮಾಡಲಿದೆ.

ಹಿಂದೂ, ಸಿಖ್ಖ್ ಅಥವಾ ಬೌದ್ಧ ಧರ್ಮಕ್ಕೆ ಸೇರದ ವ್ಯಕ್ತಿಯನ್ನು ಪರಿಶಿಷ್ಟ ಜಾತಿಗೆ ಸೇರಿದವ ಎಂದು ಘೋಷಿಸಲು ‘ಸಂವಿಧಾನದ (ಅನುಸೂಚಿತ ಜಾತಿಗಳು) ಆದೇಶ 1950ರ ಪರಿಚ್ಛೇದ 341 ನಿರ್ಬಂಧಿಸುತ್ತದೆ. ಮೊದಲು ಕೇವಲ ಹಿಂದೂಗಳನ್ನು ಮಾತ್ರವೇ ಪರಿಶಿಷ್ಟ ಜಾತಿ ಎಂದು ಘೋಷಿಸಲು ಅವಕಾಶವಿತ್ತು. 1956ರಲ್ಲಿ ಸಿಖ್ಖರನ್ನು ಸೇರಿಸಲು ಮತ್ತು 1990ರಲ್ಲಿ ಬೌದ್ಧರನ್ನು ಒಳಗೊಳ್ಳಲು ಅಗತ್ಯ ತಿದ್ದುಪಡಿ ಮಾಡಲಾಯಿತು.

ಎಸ್​ಟಿ ಮತ್ತು ಒಬಿಸಿಗಳು ನಿರ್ದಿಷ್ಟ ಧರ್ಮಕ್ಕೆ ಸೇರಿರಬೇಕು ಎಂಬ ನಿಯಮವಿಲ್ಲ. ಮಂಡಲ್ ಆಯೋಗದ ವರದಿಯ ಅನುಷ್ಠಾನದ ನಂತರ, ಹಲವಾರು ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯಗಳು ಕೇಂದ್ರ ಅಥವಾ ರಾಜ್ಯಗಳ ಒಬಿಸಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಎಸ್​ಸಿ ಸಮುದಾಯಕ್ಕೆ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ನೇರ ನೇಮಕಾತಿಗಾಗಿ ಶೇ 15ರಷ್ಟು ಮೀಸಲಾತಿ ಮತ್ತು ಎಸ್​ಟಿಗಳಿಗೆ ಶೇ 7.5 ಹಾಗೂ ಒಬಿಸಿಗಳಿಗೆ ಶೇ 27ರಷ್ಟು ಮೀಸಲಾತಿ ಇದೆ. ಹೀಗಾಗಿಯೇ ಎಸ್​ಸಿ ಸ್ಥಾನಮಾನಕ್ಕೆ ಅಷ್ಟು ಮಹತ್ವ ಬಂದಿದೆ.

2004ರ ಅಕ್ಟೋಬರ್ ನಲ್ಲಿ ಡಾ ಮನಮೋಹನ್ ಸಿಂಗ್ ನೇತೃತ್ವದ ಅಂದಿನ ಯುಪಿಎ ಸರ್ಕಾರ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕ್ರಮಗಳನ್ನು ಶಿಫಾರಸು ಮಾಡಲು ಸುಪ್ರಿಂಕೋರ್ಟ್​ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ಅಧ್ಯಕ್ಷತೆಯಲ್ಲಿ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗವನ್ನು ರಚಿಸಿತ್ತು.

ರಂಗನಾಥ್ ಮಿಶ್ರಾ ಆಯೋಗ 2007ರ ಮೇ ತಿಂಗಳಿನಲ್ಲಿ ಸಲ್ಲಿಸಿದ ತನ್ನ ವರದಿಯಲ್ಲಿ ಪರಿಶಿಷ್ಟ ಜಾತಿ(ಎಸ್‌ಸಿ) ಸ್ಥಾನಮಾನವನ್ನು ಪರಿಶಿಷ್ಟ ಪಂಡಗ(ಎಸ್​ಟಿ) ಮಾದರಿಯಲ್ಲಿ ಧರ್ಮಾತೀತಗೊಳಿಸಬೇಕು ಎಂದು ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಅಂದಿನ ಯುಪಿಎ ಸರ್ಕಾರ ಒಪ್ಪಿರಲಿಲ್ಲ. 2007ರಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವು ನಡೆಸಿದ ಅಧ್ಯಯನವು ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರಿಗೆ ಎಸ್​ಸಿ ಸ್ಥಾನಮಾನ ನೀಡುವ ಅಗತ್ಯವಿದೆ ಎಂದು ಹೇಳಿತು.

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬಿಜೆಪಿ ವಲಯದಲ್ಲಿ ‘ಮತಾಂತರಗೊಂಡವರಿಗೂ ಮೀಸಲಾತಿ ಒದಗಿಸುವುದು ಮುಂದಿನ ದಿನಗಳಲ್ಲಿ ಮತಾಂತರಕ್ಕೆ ಪ್ರೇರಣೆಯಾಗಬಹುದು. ಸಾಮಾಜಿಕ ವೈರುಧ್ಯಗಳಿಗೆ ಕಾರಣವಾಗಬಹುದು’ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *