ಕೋಲ್ಕತ್ತ: ‘ಪಾರ್ಥ ಚಟರ್ಜಿ ನನ್ನ ಮನೆ ಮತ್ತು ಇನ್ನೊಬ್ಬ ಮಹಿಳೆಯ ಮನೆಯನ್ನು ಮಿನಿ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದರು. ಆ ಮಹಿಳೆಯೂ ಕೂಡ ಅವರ ಆಪ್ತ ಸ್ನೇಹಿತೆಯಾಗಿದ್ದಾಳೆ’ ಎಂದು ಅರ್ಪಿತಾ ಮುಖರ್ಜಿ ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆ ಸಂದರ್ಭದಲ್ಲಿ ಹಲವು ಮಹತ್ವ ವಿಚಾರಗಳನ್ನು ಬಹಿರಂಗಗೊಳಿಸಿದ್ದಾರೆ.
ಶಿಕ್ಷಕರ ನೇಮಕಾತಿ ಹಗರಣದಲ್ಲಿ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರೊಂದಿಗೆ ಬಂಧಿತರಾಗಿರುವ ನಟಿ, ರೂಪದರ್ಶಿ ಹಾಗೂ ಸಚಿವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಹಗರಣದ ಬಗ್ಗೆ ವಿವರಗಳನ್ನು ತಿಳಿಸಿದ್ದಾರೆ.
ಅರ್ಪಿತಾ ಮುಖರ್ಜಿ ಅವರ ಬಳಿ ಇದುವರೆಗೆ ಸರಿ ಸುಮಾರು ₹ 50 ಕೋಟಿಯಷ್ಟು ನಗದು ಹಣ ವಶಕ್ಕೆ ಪಡೆಯಲಾಗಿದೆ. ಬೆಲ್‌ಘಾರಿಯಾ ಬಹುಮಹಡಿ ಕಟ್ಟಡದಲ್ಲಿ ಬುಧವಾರ(ಜುಲೈ 27) ರಾತ್ರಿ ₹ 27.9 ಕೋಟಿ ನಗದು ವಶಕ್ಕೆ ಪಡೆಯಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 23ರಂದು ಅರ್ಪಿತಾ ಮತ್ತು ಪಾರ್ಥ ಚಟರ್ಜಿ ಅವರನ್ನು ಬಂಧಿಸುವ ಒಂದು ದಿನದ ಮೊದಲು ಅರ್ಪಿತಾ ಮನೆಯಲ್ಲಿ ಹಣದ ದೊಡ್ಡ ರಾಶಿಯ ದೃಶ್ಯ ಕಂಡುಬಂದಿತ್ತು. ಹಣವನ್ನು ಪಾರ್ಥ ಚಟರ್ಜಿ ಮತ್ತು ಅವರ ಸಹಚರರು ಮಾತ್ರ ಪ್ರವೇಶಿಸುವ ಕೋಣೆಯೊಂದರಲ್ಲಿ ಇಡುತ್ತಿದ್ದರು ಎಂದು ವರದಿಯಾಗಿದೆ.
ಸಚಿವರು ಪ್ರತಿ ವಾರ ಅಥವಾ 10 ದಿನಗಳಿಗೊಮ್ಮೆ ಅರ್ಪಿತಾ ಮುಖರ್ಜಿ ಮನೆಗೆ ಭೇಟಿ ಕೊಡುತ್ತಿದ್ದರು. ಅರ್ಪಿತಾ ಮುಖರ್ಜಿ ಅವರಿಗೆ ಬಂಗಾಳಿ ನಟರೊಬ್ಬರು ಪಾರ್ಥ ಚಟರ್ಜಿ ಅವರನ್ನು ಪರಿಚಯಿಸಿದರು ಮತ್ತು ಇಬ್ಬರೂ 2016 ರಿಂದ ಹತ್ತಿರವಾಗಿದ್ದರು ಎಂದು ಹೇಳಿದ್ದಾರೆ.
ವರ್ಗಾವಣೆಗಾಗಿ ಮತ್ತು ಕಾಲೇಜುಗಳಿಗೆ ಮಾನ್ಯತೆ ಪಡೆಯಲು ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ. ಇದರಿಂದಾಗಿಯೇ ಇಷ್ಟು ದೊಡ್ಡ ಮೊತ್ತದ ಹಣ ಬಂದಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಬಂಧನದಲ್ಲಿರುವ ಪಾರ್ಥ ಮುಖರ್ಜಿ ಅವರನ್ನು ಆಗಸ್ಟ್ 3ರವರೆಗೆ ಜಾರಿ ನಿರ್ದೇಶನಾಲಯ ವಶದಲ್ಲಿದ್ದಾರೆ.