ಕಮ್ಯೂನಿಸ್ಟರಿಗೆ ಸ್ವಾರ್ಥ ಇಲ್ಲ-ಶ್ರೀರಾಮರೆಡ್ಡಿ ಜನಪರ ಬದ್ದತೆಯುಳ್ಳ ನಾಯಕರಾಗಿದ್ದರು: ಸಿದ್ದರಾಮಯ್ಯ

ಬೆಂಗಳೂರು: ಕಮ್ಯುನಿಸ್ಟರು ಖಾರವಾಗಿ ಮಾತಾಡುತ್ತಾರೆ. ಆದರೆ, ಅವರಲ್ಲಿ ಸ್ವಾರ್ಥ ಇರುವುದಿಲ್ಲ. ಜನಪರವಾದ ಕಾಳಜಿ‌ ಇದೆ. ಶ್ರೀರಾಮರೆಡ್ಡಿ ಅಂತಹ ಜನಪರ ಬದ್ಧತೆಯುಳ್ಳ ನಾಯಕರಾಗಿದ್ದವರಯ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಪತ್ರಕರ್ತ ನವೀನ್‌ ಸೂರಿಂಜೆ ಸಂಪಾ ದಿಸಿರುವ ‘ಸದನದಲ್ಲಿ ಶ್ರೀರಾಮರೆಡ್ಡಿ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಜಿ.ವಿ. ಶ್ರೀರಾಮರೆಡ್ಡಿ ಶಾಸಕರಾಗಿದ್ದ ಅವಧಿಯಲ್ಲಿ ವಿಧಾನಸಭೆ ಅಧಿವೇಶನಕ್ಕೆ ಯಾವತ್ತೂ ಗೈರಾಗುತ್ತಿರಲಿಲ್ಲ. ಸ್ವಂತ ಕೆಲಸಕ್ಕಾಗಿ ನಮ್ಮ ಬಳಿ ಬಂದವರಲ್ಲ. ಅವರ ಬೇಡಿಕೆಗಳ ಹಿಂದೆ ಸದಾ ಜನಪರ ಕಾಳಜಿ ಇರುತ್ತಿತ್ತು. ಶ್ರೀರಾಮ ರೆಡ್ಡಿ ನಿಸ್ವಾರ್ಥ ರಾಜಕಾರಣಕ್ಕೆ ಮಾದರಿಯಾಗಿದ್ದವರು. ಜೀವನದ ಕೊನೆಯವರೆಗೂ ಜನಪರ ಕಾಳಜಿ ಮತ್ತು ಬದ್ಧತೆಯಿಂದ ರಾಜಕಾರಣ ಮಾಡಿದರುʼ ಎಂದರು.

ಶ್ರೀರಾಮರೆಡ್ಡಿ ಬಡವರು, ರೈತರು, ದಲಿತರ ಪರ, ಕೋಮುವಾದದ ವಿರುದ್ಧ ಸದಾ ಮಾತನಾಡುತ್ತಿದ್ದವರು. ಭೂಮಿಯನ್ನು ಬಡವರಿಗೆ ಹಂಚಬೇಕು ಎಂದು ಅವರು ಹೇಳುತ್ತಿದ್ದರು. ಆದರೆ ಇಂದು ‘ಉಳುವವನೇ ಭೂಮಿಯ ಒಡೆಯ’ ಎಂಬುದನ್ನು ‘ಉಳ್ಳವನೇ ಭೂಮಿಯ ಒಡೆಯ’ ಎಂದು ಮಾಡಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಶ್ರೀರಾಮರೆಡ್ಡಿ ಅದ್ಭುತ ಭಾಷಣಕಾರರಾಗಿದ್ದರು. ಅಪರಿಮಿತ ಸಿದ್ಧತೆ ಮಾಡಿಕೊಂಡು ಕಲಾಪಕ್ಕೆ ಬರುತ್ತಿದ್ದರು. ನಾವೆಲ್ಲರೂ ಅಲುಗಾಡದೇ ಅವರ ಭಾಷಣವನ್ನು ಆಲಿಸುತ್ತಿದ್ದೆವು. ಅವರು ಸದಾ ಸದನದಲ್ಲಿ ಬಡವರು, ಕೂಲಿ ಕಾರ್ಮಿಕರು, ದೀನ ದಲಿತರ ಬಗ್ಗೆ ಮಾತನಾಡುತ್ತಿದ್ದರು. ಅವರ ನೀಡುತ್ತಿದ್ದ ವಿವರಗಳು ಗಂಭೀರವಾಗಿರುತ್ತಿದ್ದವು. ಅಂಥ ಶಾಸಕರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ ಎಂದು ಅವರು ವಿಷಾದಿಸಿದರು.

ಜನರಿಗೆ ಸಹಾಯ ಮಾಡಲು ಮನಸ್ಸು ಇರುವವರು ಮಾತ್ರ ರಾಜಕಾರಣದಲ್ಲಿರಬೇಕು, ಅಧಿಕಾರಕ್ಕಾಗಿ ರಾಜಕಾರಣ ಮಾಡುವವರ ಅಗತ್ಯವಿಲ್ಲ. ಜನಪರವಾಗಿ ಇರುವವರು ಆಯ್ಕೆ ಆಗುತ್ತಾರೆ. ಶ್ರೀರಾಮರೆಡ್ಡಿ ಅವರ ಮೊದಲ ಭಾಷಣ ನೋಡಿದಾಗ ಅವರ ಜನಪರ ಕಾಳಜಿ ಸ್ಪಷ್ಟವಾಗಿ ಗೊತ್ತಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಕ್ಕೆ ಚಾಟಿ ಬೀಸುವವರು ಇರಬೇಕು ಆಗ ಮಾತ್ರ ಉತ್ತಮವಾಗಿ ಸರ್ಕಾರ ನಡೆಯಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ವೈಎಸ್‌ವಿ ದತ್ತಾ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಗೆ ಸರಿಸಾಟಿಯಾದ ನಾಯಕ ಇದ್ರೆ ಅದು ಸಿದ್ದರಾಮಯ್ಯ ಮಾತ್ರ.  ನನ್ನ ಈ ಮಾತಿನಿಂದ ಯಾರು ಏನು ಬೇಕಾದರೂ ಅರ್ಥ ಮಾಡಿಕೊಳ್ಳಲಿ. ಸೈದ್ಧಾಂತಿಕವಾಗಿ ತಾತ್ವಿಕವಾಗಿ ಯಾವತ್ತೂ ಸಿದ್ದರಾಮಯ್ಯ ರಾಜಿ ಮಾಡಿಕೊಂಡವರಲ್ಲ, ಅವರ ನಿಲುವು ಸ್ಪಷ್ಟವಾಗಿದೆ. ಸಿದ್ದರಾಮಯ್ಯ ಅವರ ಬಗ್ಗೆ ಬಹಳ ನಿರೀಕ್ಷೆ ಇದೆ. ಆ ಆಸೆ ಈಡೇರಲಿ ಎಂದರು.

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷವನ್ನು ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದಿಂದ ಎರಡು ಸಲ ಪ್ರತಿನಿಧಿಸಿದ್ದ ಶ್ರೀರಾಮರೆಡ್ಡಿ ಅವರು, ಕಲಾಪದಲ್ಲಿ ಮಾಡಿದ್ದ ಭಾಷಣಗಳು ಒಳಗೊಂಡಿರುವ ಪುಸ್ತಕ ಇದಾಗಿದೆ. ಜಿ.ವಿ. ಶ್ರೀರಾಮರೆಡ್ಡಿ ಅವರು, ಏಪ್ರಿಲ್‌ 15ರಂದು ಹೃದಯಾಘಾತದಿಂದ ನಿಧನರಾಗಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವೈ.ಎಸ್‌.ವಿ. ದತ್ತ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಮಿಕ ಮುಖಂಡ ವಿ.ಜೆ.ಕೆ. ನಾಯರ್‌, ಹೋರಾಟಗಾರ್ತಿ ವಿ. ಗೀತಾ ಮುಖ್ಯ ಅತಿಥಿಗಳಾಗಿದ್ದರು. ಕೃತಿಯ ಸಂಪಾದಕ ನವೀನ್‌ ಸೂರಿಂಜೆ, ವಕೀಲ ಎನ್‌. ಅನಂತ್‌ ನಾಯ್ಕ್‌, ಅಭಿರುಚಿ ಪ್ರಕಾಶನದ ಅಭಿರುಚಿ ಗಣೇಶ್‌ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *