ನೂತನ ಶಾಸಕರಿಗೆ ಬಲಪಂಥೀಯರಿಂದ ಮೋಟಿವೇಶನ್ ಭಾಷಣ: ಸ್ಪೀಕರ್‌ U.T. ಖಾದರ್‌ಗೆ ಪತ್ರ ಬರೆದ ಸಿಪಿಐ(ಎಂ)

ವಿವಾದಾತ್ಮಕ ಗುರು ರವಿಶಂಕರ್ ಗುರೂಜಿ ಸೇರಿದಂತೆ ಬಲಪಂಥೀಯರಿಂದ ಶಾಸಕರಿಗೆ ಮೋಟಿವೇಷನಲ್ ಭಾಷಣ ಮಾಡಿಸುವುದಾಗಿ ಹೇಳಿಕೆ ಹಿನ್ನಲೆ

ಬೆಂಗಳೂರು: ನೂತನವಾಗಿ ಆಯ್ಕೆಯಾದ ಶಾಸಕರಿಗೆ ವಿವಾದಾತ್ಮಕ ಬಲಪಂಥೀಯರಿಂದ ಮೋಟಿವೇಶನ್ ಭಾಷಣ ಮಾಡಿಸುವ ಸಭಾಧ್ಯಕ್ಷ ಯು.ಟಿ. ಖಾದರ್‌ ಅವರ ಕ್ರಮವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಖಂಡಿಸಿದೆ. ಸ್ಷೀಕರ್ ಅವರ ಈ ನಡೆಗೆ ಪಕ್ಷವೂ ಆಶ್ಚರ್ಯ ವ್ಯಕ್ತಪಡಿಸಿದ್ದು, ‘ಇದು ಅನಗತ್ಯವಾಗಿತ್ತು. ಸಾರ್ವಜನಿಕರ ನಡುವೆ ತಪ್ಪು ಸಂದೇಶ ರವಾನಿಸಿದೆ’ ಎಂದು ಹೇಳಿದೆ.

ಈ ಬಗ್ಗೆ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಗುರುವಾರ ಪತ್ರ ಬರೆದಿರುವ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ್, “ಹೊಸದಾಗಿ ಆಯ್ಕೆಯಾದ ಶಾಸಕರು ದೇಶದ ಸಂವಿಧಾನ ಮತ್ತು ಅದರ ಆಶಯವಾದ ದೇಶದ ಒಕ್ಕೂಟ ಹಾಗೂ ಜಾತ್ಯತೀತ ಸ್ವರೂಪವನ್ನು ಅರ್ಥೈಸಿಕೊಳ್ಳಲು ಇವರ ಭಾಗವಹಿಸುವಿಕೆ ಯಾವ ರೀತಿಯಲ್ಲಿ ನೆರವಾಗುತ್ತದೆ ಎಂದು ಭಾವಿಸಿದ್ದೀರಿ” ಎಂದು ಕೇಳಿದ್ದಾರೆ.

ಇದನ್ನೂ ಓದಿ: ಹೊಸ ಶಾಸಕರಿಗೆ ಭಾಷಣ ಮಾಡಲಿದ್ದಾರೆ ವಿವಾದಾತ್ಮಕ ಗುರು ರವಿಶಂಕರ್ ಗುರೂಜಿ!

“ರಾಜಕೀಯದಿಂದ ಧರ್ಮವನ್ನು ಪ್ರತ್ಯೇಕಿಸುವುದೇ ಜಾತ್ಯಾತೀತತೆ ಎಂದು ಸಂವಿಧಾನ ಹೇಳಿದೆ. ಆದರೆ ವಿವಾದಾತ್ಮಕ ಬಲಪಂಥೀಯ ವ್ಯಕ್ತಿಗಳನ್ನು ಶಾಸಕರ ತರಬೇತಿಯಲ್ಲಿ ಭಾಗಿಯಾಗಲು ಕರೆದಿರುವುದು ದೇಶದ ಜಾತ್ಯತೀತ ಸ್ವರೂಪಕ್ಕೆ ಧಕ್ಕೆಯಾಗುವ ವಿಚಾರವಾಗಿದೆ” ಎಂದು ಬಸವರಾಜ್ ಹೇಳಿದ್ದಾರೆ.

“ಮೊದಲ ಬಾರಿ ವಿಧಾನ ಸಭೆಗೆ ಪ್ರವೇಶಿಸಿದ ಶಾಸಕರಿಗೆ ತರಬೇತಿ ಕಾರ್ಯಕ್ರಮ ನಡೆಸುವುದು ಅಗತ್ಯವೇ ಆಗಿದೆ. ಆದರೆ, ವಿವಾದಾತ್ಮಕ ಗುರು ಡಾ. ರವಿಶಂಕರ್ ಗುರೂಜಿ, ಡಾ. ವೀರೇಂದ್ರ ಹೆಗಡೆ, ಡಾ. ಗುರುರಾಜ್ ಕರ್ಜಗಿ, ಬ್ರಹ್ಮಕುಮಾರಿ ಆಶಾ ದೀದಿ, ಮೊಹಮದ್ ಕುಂಙಿ ಮುಂತಾದ ವ್ಯಕ್ತಿಗಳಿಂದ ಭಾಷಣ ಮಾಡಿಸಲು ಕ್ರಮ ವಹಿಸಿದ ತಮ್ಮ ನಡಾವಳಿ ಆಶ್ಚರ್ಯಕರವಾಗಿದೆ. ಇದು ಅನಗತ್ಯವಾಗಿತ್ತು. ಸಾರ್ವಜನಿಕರ ನಡುವೆ ತಪ್ಪು ಸಂದೇಶ ರವಾನಿಸಿದೆ” ಎಂದು ಸಿಪಿಐ(ಎಂ) ಪತ್ರದಲ್ಲಿ ತಿಳಿಸಿದೆ.

ಈ ವಿವಾದಾತ್ಮಕ ವ್ಯಕ್ತಿಗಳು ಮಾಡುವ ಮೋಟಿವೇಶನಲ್ ಭಾಷಣ ದೇಶದ ಜಾತ್ಯತೀತ ಸ್ವರೂಪಕ್ಕೆ ಪೂರಕವಾಗಿರುತ್ತದೆಯೇ? ಈ ಕುರಿತು ರಾಜ್ಯದ ಜನತೆಗೆ ವಿಧಾನ ಸಭಾದ್ಯಕ್ಷರು ಸ್ಪಷ್ಠೀಕರಣ ನೀಡಬೇಕೆಂದು ಸಿಪಿಐ(ಎಂ) ಆಗ್ರಹಿಸಿದ್ದು, ಅನಗತ್ಯ ವಿವಾದಾತ್ಮಕ ವ್ಯಕ್ತಿಗಳ ಭಾಗವಹಿಸುವಿಕೆಯನ್ನು ಕೈ ಬಿಡುವಂತೆ ಒತ್ತಾಯಿಸಿದೆ.

Donate Janashakthi Media

Leave a Reply

Your email address will not be published. Required fields are marked *