ಬೆಂಗಳೂರು : ಉಡುಪಿಯ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ತರಗತಿಗಳಲ್ಲಿ ಪಾಠ ಕೇಳುವುದಕ್ಕೆ ಕಾಲೇಜಿನ ಪ್ರಾಂಶುಪಾಲರು ನಿರಾಕರಿಸಿರುವ ಅಸಂವಿಧಾನಿಕವಾದ ನಡೆಯನ್ನು ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್ಎಫ್ಐ) ಕರ್ನಾಟಕ ರಾಜ್ಯ ಸಮಿತಿ ಖಂಡಿಸಿದೆ.
ಕಾಲೇಜನ್ನು ಒಂದು ಕೋಮು ಅಥವಾ ಧರ್ಮದ ಪ್ರಚಾರಕ ಸಂಸ್ಥೆಯಂತೆ ಬಳಸುವುದೇ ಅಲ್ಲದೆ ಮತ್ತೊಂದು ಧರ್ಮದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗುವುದು ಸಂವಿಧಾನ ವಿರೋಧಿ ನಡೆಯಾಗಿದೆ. ಆದ್ದರಿಂದ ಈ ಕೂಡಲೇ ವಿದ್ಯಾರ್ಥಿನಿಯರಿಗೆ ತರಗತಿಗಳಿಗೆ ಹಾಜರಾಗಲು ಅನುಮತಿಸಬೇಕೆಂದು ಎಸ್ಎಫ್ಐ ಒತ್ತಾಯಿಸುತ್ತದೆ.
ಈ ಸ್ಕಾರ್ಫ್, ಕೇಸರಿ ಶಾಲು ವಿವಾದಗಳಿಗೆ ರಾಜ್ಯ ಬಿಜೆಪಿ ಸರಕಾರದ ಕುಮ್ಮಕ್ಕು ಮತ್ತು ಸಮ್ಮತಿ ಒಪ್ಪಿಗೆ ಇರುವ ರೀತಿಯಲ್ಲಿ ರಾಜ್ಯ ಸರ್ಕಾರದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರವರ ಹೇಳಿಕೆಗಳು ಪುಷ್ಟಿಕೊಡುತ್ತವೆ.
ಕರಾವಳಿಯ ಜಿಲ್ಲೆಗಳಲ್ಲಿ ಹಿಂದುತ್ವದ ರಾಜಕೀಯ ಹಿಡನ್ ಅಜೆಂಡಾ ಜಾರಿಗಾಗಿ ತರಗತಿಯ ಕೊಠಡಿಗಳ ಒಳಗೆ ಧರ್ಮದ ಆಧಾರದಲ್ಲಿ ವಿದ್ಯಾರ್ಥಿಗಳನ್ನು ವಿಭಜಿಸಲಾಗುತ್ತಿದೆ. ಇದರ ಪರಿಣಾಮವಾಗಿ ಕರಾವಳಿಯ ಜಿಲ್ಲೆಗಳಲ್ಲಿ ನೈತಿಕ ಪೋಲೀಸ್ ಗಿರಿ, ಅನ್ಯ ಧರ್ಮೀಯ ವಿದ್ಯಾರ್ಥಿಗಳಿಗೆ ತ್ರಿಶೂಲದಿಂದ ತಿವಿದು ಹಲ್ಲೆ, ಲವ್ ಜಿಹಾದ್, ಹೋಮ್ ಸ್ಟೇ ದಾಳಿಗಳಂತಹ ಪ್ರಕರಣಗಳು ನಡೆಯುತ್ತಿವೆ. ಇದರಿಂದ ಅಮಾಯಕ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ.
ಹಿಜಾಬ್ ವಿರೋಧಿಸುವುದು, ಹಿಜಾಬ್ ಧರಿಸಿಕೊಂಡು ವಿದ್ಯಾರ್ಥಿನಿಯರು ಕಾಲೇಜಿಗೆ ಬರಬಾರದೆಂದು ತಡೆಯುವುದು, ಮುಸ್ಲಿಂ ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ವಂಚಿಸುವ ಸಂಚಲ್ಲದೆ ಬೇರೇನೂ ಅಲ್ಲ. ಈಗಾಗಲೇ ಶೈಕ್ಷಣಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತರ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕನ್ನು ಈ ಧಾರ್ಮಿಕ ಮೂಲಭೂತವಾದಿ, ಕೋಮುವಾದಿ ದಾಳಿಗಳಿಂದ ರಕ್ಷಿಸಬೇಕಾದದ್ದು ತುರ್ತು ಅಗತ್ಯವಾಗಿದೆ.
ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿಕ್ಷಣ ನೀಡುವುದು ಸ್ಕಾರ್ಫ್ ನಿಷೇದಕ್ಕಿಂತ ಸದ್ಯದ ಉತ್ತಮ ಔಷದಿ. ಮೊದಲು ಮುಸ್ಲಿಂ ಹುಡುಗಿಯರು ಶಿಕ್ಷಣ ಪಡೆಯುವಂತಾಗಬೇಕು. ಅದರಲ್ಲೂ ಸರ್ವ ಜನಾಂಗದ ಶಾಂತಿಯ ತೋಟವಾದ ಈ ನಾಡಿನ ಕೋಮು ಸೌಹಾರ್ದತೆಯನ್ನು ಗಟ್ಟಿಗೊಳಿಸಬೇಕು. ಹಿಂದೂ ಮುಸ್ಲೀಂ ಹುಡುಗ ಹುಡುಗಿಯರು ಸಹಶಿಕ್ಷಣ ಪಡೆಯುವಂತಾಗಬೇಕು ಎಂದು ಸಂಘಟನೆಯು ಆಗ್ರಹಿಸಿದೆ.
ಒಟ್ಟಾರೆಯಾಗಿ ಹಿಂದುತ್ವದ ಕೋಮುವಾದ ಮತ್ತು ಮುಸ್ಲಿಂ ಧಾರ್ಮಿಕ ಮೂಲಭೂತವಾದದ ಮೊದಲ ಬಲಿಪಶುಗಳು ಹೆಣ್ಣು ಮಕ್ಕಳು, ವಿದ್ಯಾರ್ಥಿನಿಯರು ಆಗುತ್ತಿದ್ದಾರೆ ಇದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಎಸ್‌ಎಫ್‌ಐ ಸಂಘಟನೆಯು ತಿಳಿಸಿದೆ.
ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದು ಅದನ್ನು ಪರಿಹಾರಕ್ಕೆ ಬೇಕಾದ ಮಾರ್ಗೋಪಾಯಗಳನ್ನು ಸರ್ಕಾರ ಅನುಸರಿಸಬೇಕೆಂದು ಎಸ್‌ಎಫ್‌ಐ ಆಗ್ರಹಿಸಿದೆ.
ಎಲ್ಲ ಕೋಮುವಾದಿ ರಾಜಕಾರಣದ ಹುನ್ನಾರಗಳನ್ನು ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳ ನಡುವೆ ಒಡಕು ಉಂಟು ಮಾಡುವ ಮತೀಯವಾದಿ ಶಕ್ತಿಗಳನ್ನು ಶಿಕ್ಷಣ ಸಂಸ್ಥೆಗಳಿಂದ ಹೊರಗಿಟ್ಟು ಸಮಾಜದ ಶಾಂತಿ ಸೌಹಾರ್ದತೆಯನ್ನು ಕಾಪಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಎಸ್ಎಫ್ಐ ಆಗ್ರಹಿಸಿದೆ.