ನವದೆಹಲಿ: ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ವಜಾಗೊಳಿಸಬೇಕು ಮತ್ತು ದೇಶಾದ್ಯಂತ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಎಂದು ಪ್ರತಿಪಕ್ಷಗಳ ಹಲವು ನಾಯಕರು ಆಗ್ರಹಿಸಿದ್ದಾರೆ. ಎಸ್‌ಐಆರ್
ಇಬ್ಬರು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಎಸ್‌ಐಆರ್‌ಗೆ ಸಂಬಂಧಿಸಿದ ಹಲವು ನಿರ್ಧಾರಗಳ ಬಗ್ಗೆ ಆಕ್ಷೇಪ ದಾಖಲಿಸಿದ್ದರು ಎಂಬ ಮಾಹಿತಿ ಹೊರಬಿದ್ದ ಹಿನ್ನೆಲೆಯಲ್ಲಿ ಈ ಒತ್ತಾಯ ಮತ್ತಷ್ಟು ತೀವ್ರಗೊಂಡಿದೆ.
ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಇಬ್ಬರು ಚುನಾವಣಾ ಆಯುಕ್ತರು ಕೆಲವು ನಿರ್ಧಾರಗಳು ಹಾಗೂ ಆದೇಶಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಒಂದೇ ದಿನ ನಾಲ್ಕು ಬಾರಿ ಆಕ್ಷೇಪ ದಾಖಲಿಸಿದ ಸಂದರ್ಭವೂ ಇತ್ತು ಎನ್ನಲಾಗಿದೆ. ಮತದಾರರ ಹೆಸರುಗಳನ್ನು ಅಳಿಸುವುದು, ಹೊಸ ಮತದಾರರ ಸೇರ್ಪಡೆ, ಮತದಾರರ ಅರ್ಜಿಗಳಲ್ಲಿನ ಬದಲಾವಣೆ ಸೇರಿದಂತೆ ಎಸ್‌ಐಆರ್ ಪ್ರಕ್ರಿಯೆಯ ಹಲವು ಅಂಶಗಳ ಬಗ್ಗೆ ಆಕ್ಷೇಪಗಳು ದಾಖಲಾಗಿದ್ದವು.
ಇದನ್ನೂ ಓದಿ :ರಸ್ತೆ ಹೆಸರಲ್ಲಿ ಭಾರೀ ವೆಚ್ಚ! | ₹4,837 ಕೋಟಿ ಅಂದಾಜು ಹೆಚ್ಚಳ ಬಯಲು
ಕಾಂಗ್ರೆಸ್‌ನ ಜೈರಾಮ್ ರಮೇಶ್, ಕೆ.ಸಿ. ವೇಣುಗೋಪಾಲ್, ಮನೀಶ್ ತಿವಾರಿ, ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್, ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್, ಕಪಿಲ್ ಸಿಬಲ್, ಶಿವಸೇನೆ (ಯುಬಿಟಿ)ಯ ಸಂಜಯ್ ರಾವುತ್ ಹಾಗೂ ಟಿಎಂಸಿಯ ಡೆರೆಕ್ ಒ’ಬ್ರೈನ್ ಸೇರಿದಂತೆ ಹಲವು ನಾಯಕರು ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಜಾನ್ ಬ್ರಿಟ್ಟಾಸ್ ಅವರು ಎಸ್‌ಐಆರ್ ಪ್ರಕ್ರಿಯೆಯನ್ನೇ ರದ್ದುಪಡಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದು, ಜ್ಞಾನೇಶ್ ಕುಮಾರ್ ವಿರುದ್ಧ ಸಂಸತ್ತು ವಜಾ ಪ್ರಕ್ರಿಯೆ ಆರಂಭಿಸಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರು ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ವಜಾಗೊಳಿಸಿ, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಟಿಎಂಸಿ ನಾಯಕ ಡೆರೆಕ್ ಒ’ಬ್ರೈನ್, ಈಗಾಗಲೇ 60ಕ್ಕೂ ಹೆಚ್ಚು ರಾಜ್ಯಸಭಾ ಸದಸ್ಯರು ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ನಿರ್ಣಯ ಮಂಡಿಸಲು ಮುಂದಾಗಿದ್ದ ವಿಷಯವನ್ನು ಪ್ರಸ್ತಾಪಿಸಿ, ಆ ಪ್ರಕ್ರಿಯೆಯನ್ನು ಮತ್ತೆ ಮುಂದಕ್ಕೆ ತರಬೇಕು ಎಂದು ಹೇಳಿದ್ದಾರೆ.
ಇದನ್ನೂ ನೋಡಿ : BFT | ಖಾಯಂಗೆ ಆಗ್ರಹಿಸಿ, ವೇತನ ಹೆಚ್ಚಳಕ್ಕಾಗಿ ಒತ್ತಾಯಿಸಿ ಬೇರ್ ಫೂಟ್ ಟೆಕ್ನಿಷಿಯನ್‌ಗಳ ಪ್ರತಿಭಟನೆ
