ಹೊಸ ಪಿಎಫ್‌ ನಿಯಮ ವಿರೋಧಿಸಿ ಗಾರ್ಮೆಂಟ್ಸ್‌ ಕಾರ್ಮಿಕರ ಬೃಹತ್ ಪ್ರತಿಭಟನೆ

ತುಮಕೂರು : ಭವಿಷ್ಯ ನಿಧಿ (ಪಿಎಫ್‌) ಹಣ ಹಿಂಪಡೆಯಲು 12 ತಿಂಗಳು ಹಾಗೂ ಪಿಂಚಣಿ ಹಣ ಪಡೆಯಲು 36 ತಿಂಗಳು ಕಾಯಬೇಕೆಂಬ ಹೊಸ ನಿಯಮಗಳನ್ನು ವಿರೋಧಿಸಿ ಗಾರ್ಮೆಂಟ್ಸ್‌ ಕಾರ್ಮಿಕರು ಮಂಗಳವಾರ ಕೆಲಸ ಬಹಿಷ್ಕರಿಸಿ ಬೃಹತ್ ಪ್ರತಿಭಟನೆ ನಡೆಸಿದರು. ಹೊಸ ಪಿಎಫ್‌

ಗಾರ್ಮೆಂಟ್ಸ್‌ ಕಾರ್ಮಿಕರ ಜಂಟಿ ಹೋರಾಟ ಸಮಿತಿ, ಸಿಐಟಿಯು ಹಾಗೂ ಸಂರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಮಹಿಳಾ ಕಾರ್ಮಿಕರು ನಗರದ ಗುಬ್ಬಿ ಗೇಟ್‌ ರಿಂಗ್‌ ರಸ್ತೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. **‘ನಾವು ದುಡಿದು ಕಟ್ಟಿದ ಪಿಎಫ್‌ ಹಣವನ್ನು ನಮ್ಮ ಅಗತ್ಯಕ್ಕೆ ಪಡೆಯಲು 12 ತಿಂಗಳು ಕಾಯಬೇಕೆ? ಇದು ಯಾವ ನ್ಯಾಯ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಗಾರ್ಮೆಂಟ್ಸ್‌ ಕಾರ್ಮಿಕರಾದ ರಾಧಿಕಾ, ಆಶಾ, ಎಸ್. ನೇತ್ರಾವತಿ ಹಾಗೂ ಶರ್ಮಿನ್ ಉನ್ನಿಸಾ, ತಮ್ಮದೇ ಆದ ದುಡಿಮೆಯ ಹಣವನ್ನು ಅಗತ್ಯದ ಸಂದರ್ಭದಲ್ಲಿ ಪಡೆಯಲು ನಿರ್ಬಂಧ ವಿಧಿಸಿರುವುದು ಅನ್ಯಾಯ ಎಂದು ಹೇಳಿದರು. ಸಂರಕ್ಷಣಾ ವೇದಿಕೆಯ ಯೋಗೀಶ್‌ ಅವರು ಕಾರ್ಮಿಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ ಮಾತನಾಡಿ, ಬೆಲೆ ಏರಿಕೆಯಿಂದ ಗಾರ್ಮೆಂಟ್ಸ್‌ ಕಾರ್ಮಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಕನಿಷ್ಠ ವೇತನ ನಿಗದಿಯಲ್ಲಿಯೂ ಗಾರ್ಮೆಂಟ್ಸ್‌ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರ ಸಾಮಾಜಿಕ ಭದ್ರತೆಯ ಭಾಗವಾಗಿರುವ ಪಿಎಫ್‌ ಹಣ ಪಡೆಯುವುದಕ್ಕೂ ನಿರ್ಬಂಧ ವಿಧಿಸಿರುವುದು ಮತ್ತಷ್ಟು ಸಮಸ್ಯೆ ಉಂಟುಮಾಡಲಿದೆ. ಕಾರ್ಮಿಕರು ಒಗ್ಗಟ್ಟಿನಿಂದ ಅನ್ಯಾಯದ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ :ಎಸ್‌ಐಆರ್‌ ರದ್ದುಪಡಿಸಿ, ಸಿಇಸಿ ಜ್ಞಾನೇಶ್‌ ಕುಮಾರ್‌ ವಜಾಗೊಳಿಸಿ: ಪ್ರತಿಪಕ್ಷಗಳ ಒಕ್ಕೊರಲ ಆಗ್ರಹ

ಸಿಐಟಿಯು ಜಿಲ್ಲಾ ಅಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ,1952ರ ಭವಿಷ್ಯ ನಿಧಿ ಕಾಯ್ದೆಯ ಬದಲಿಗೆ ಸಾಮಾಜಿಕ ಭದ್ರತಾ ಸಂಹಿತೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಇದು ಕಾರ್ಮಿಕರಿಗೆ ಇದ್ದ ಅಲ್ಪಸ್ವಲ್ಪ ಸಾಮಾಜಿಕ ಭದ್ರತೆಯನ್ನೂ ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದರು. 2026ರಲ್ಲಿ ಪಿಎಫ್‌ ನಿಯಮಗಳಲ್ಲಿ ಮಾಡಲಾಗಿರುವ ಬದಲಾವಣೆಗಳು ಕಾರ್ಮಿಕ ವಿರೋಧಿಯಾಗಿದ್ದು, ಅವುಗಳನ್ನು ಸಂಪೂರ್ಣವಾಗಿ ಹಿಂಪಡೆಯುವ ಹೋರಾಟಕ್ಕೆ ಗಾರ್ಮೆಂಟ್ಸ್‌ ಕಾರ್ಮಿಕರು ಕೈಜೋಡಿಸಬೇಕು ಎಂದು ಕರೆ ನೀಡಿದರು. ಹೊಸ ಪಿಎಫ್‌

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಇದು ಕೇಂದ್ರ ಸರ್ಕಾರದ ನೀತಿಗೆ ಸಂಬಂಧಿಸಿದ ವಿಚಾರವಾಗಿದ್ದು, ಕಾರ್ಮಿಕರ ಅಹವಾಲನ್ನು ಕೇಂದ್ರ ಸರ್ಕಾರಕ್ಕೆ ತಕ್ಷಣ ಕಳುಹಿಸುವುದಾಗಿ ತಿಳಿಸಿದರು. ಪಿಎಫ್‌ ಅಧಿಕಾರಿಗಳೂ ಮನವಿ ಸ್ವೀಕರಿಸಿದರು.

ಗಾರ್ಮೆಂಟ್ಸ್‌ ಹೋರಾಟ ಸಮಿತಿಯ ಜಬಿನಾ, ಉಮಾ, ಕವ್ಯಾ, ಸಿಐಟಿಯು ತಾಲೂಕು ಸಂಚಾಲಕ ರಂಗಧಾಮಯ್ಯ, ದಿನಮಣಿ, ಇಂತಿಯಾಜ್‌ ಸೇರಿದಂತೆ ಹಲವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಕಾರ್ಮಿಕರ ಪ್ರಮುಖ ಹಕ್ಕೊತ್ತಾಯಗಳು

* ಹೊಸ ಪಿಎಫ್‌ ನೀತಿಯಲ್ಲಿನ ಕಾರ್ಮಿಕ ವಿರೋಧಿ ಅಂಶಗಳನ್ನು ತಕ್ಷಣ ಹಿಂಪಡೆಯಬೇಕು.
* ಕಾರ್ಮಿಕರು ತಮ್ಮ ಪಿಎಫ್‌ ಹಣವನ್ನು ಅಗತ್ಯಕ್ಕೆ ಅನುಗುಣವಾಗಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಬೇಕು.
* ಗಾರ್ಮೆಂಟ್ಸ್‌ ಕಾರ್ಮಿಕರಿಗೆ ಅನುಕೂಲವಾಗುವಂತೆ ಹಿಂದಿನ ನಿಯಮಗಳನ್ನು ಮರುಜಾರಿಗೆ ತರಬೇಕು.

ಇದನ್ನೂ ನೋಡಿ :ಸೌಜನ್ಯ ಪ್ರಕರಣಕ್ಕೆ ಮರುಜೀವ! | ಮತ್ತೆ ಚಿಗುರಿದ ನ್ಯಾಯದ ನಿರೀಕ್ಷೆ Janashakthi Media

Donate Janashakthi Media

Leave a Reply

Your email address will not be published. Required fields are marked *