ಮುಂಬಯಿ: ಕೋವಿಡ್ ಸಾಂಕ್ರಾಮಿಕತೆ ವಿರುದ್ಧ ಬಳಕೆಯಾಗುತ್ತಿರುವ ಲಸಿಕೆ ಕೊವಿಶೀಲ್ಡ್ ಉತ್ಪಾದನೆಯನ್ನು ಶೇಕಡಾ 50ರಷ್ಟು ಕಡಿತಗೊಳಿಸುವುದಾಗಿ ಸೀರಮ್ ಇನ್ಸ್ಟಿಟ್ಯೂಟ್ನ ಸಿಇಒ ಅದಾರ್ ಪೂನಾವಾಲಾ ಹೇಳಿದ್ದಾರೆ. ಪ್ರಮುಖ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ಲಸಿಕೆಗಳು ಬೇಕು ಎಂದು ಕೇಂದ್ರ ಸರ್ಕಾರದಿಂದ ಹೊಸದಾಗಿ ಸೂಚನೆಗಳೇನು ಬಂದಿಲ್ಲ. ಹೀಗಾಗಿ ಮುಂದಿನ ವಾರದ ಹೊತ್ತಿಗೆ ಶೇಕಡಾ 50ರಷ್ಟು ಉತ್ಪಾದನೆಯನ್ನು ಕಡಿತಗೊಳಿಸುತ್ತೇವೆ ಎಂದು ಹೇಳಿದ್ದಾರೆ.
ನಾನು ಸದ್ಯಕ್ಕೆ ತಿಂಗಳಿಗೆ ನಾವು 250 ಮಿಲಿಯನ್ ಡೋಸ್ಗಳಷ್ಟು ಲಸಿಕೆ ಉತ್ಪಾದನೆ ಮಾಡುತ್ತಿದ್ದೇವೆ. ಇಲ್ಲಿಯವರೆಗೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ಸೂಚನೆ ನೀಡಲಾದ ಪ್ರಮಾಣದ ಬೇಡಿಕೆಯಷ್ಟು ಲಸಿಕೆಗಳನ್ನು ಪೂರೈಸಿದ್ದೇವೆ. ಈಗಾಗಲೇ ದೇಶದಲ್ಲಿ ಶೇಕಡಾ 50ಕ್ಕೂ ಹೆಚ್ಚು ಜನರಿಗೆ ಎರಡೂ ಡೋಸ್ ಕೋವಿಡ್ 19 ಲಸಿಕೆ ನೀಡಿ ಮುಗಿದಿದೆ. ಹೀಗಾಗಿ ಹೊಸದಾಗಿ ಆರ್ಡರ್ ಏನೂ ಬಂದಿಲ್ಲ. ನಾವೂ ಕೂಡ ಉತ್ಪಾದನೆ ಪ್ರಮಾಣ ತಗ್ಗಿಸಲು ನಿರ್ಧರಿಸಿದ್ದೇವೆ ಎಂದು ಪೂನಾವಾಲಾ ಹೇಳಿದ್ದಾರೆ.
ನಾವು ಉತ್ಪಾದನೆಯನ್ನು ಶೇಕಡಾ 50ರಷ್ಟು ಕಡಿತಗೊಳಿಸಿದರೂ, ಉತ್ಪಾದನಾ ಸಾಮರ್ಥ್ಯವನ್ನು ಹಾಗೇ ಉಳಿಸಿಕೊಳ್ಳುತ್ತೇವೆ. ಮುಂಬರುವ ದಿನಗಳಲ್ಲಿ ದೇಶಕ್ಕೆ ಅಥವಾ ಇಡೀ ವಿಶ್ವಮಟ್ಟದಲ್ಲಿ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಲಸಿಕೆ ಅಗತ್ಯ ಬಿದ್ದರೆ, ನಾವು ಹಿಂದೆ ಬೀಳಲು ಸಾಧ್ಯವಿಲ್ಲ. ಆದರೆ ಈಗ ತಿಂಗಳ ಉತ್ಪಾದನೆ ಕಡಿತಗೊಳಿಸುವುದು ಅನಿವಾರ್ಯ ಎಂದೂ ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ಅರ್ಹರಿಗೆ ಬೇಕಾಗುವ ಎರಡು ಡೋಸ್ಗಳು, ಅಗತ್ಯ ಇರುವವರಿಗೆ ಬೂಸ್ಟರ್ ಡೋಸ್ ಕೊಡುವ ಬಗ್ಗೆ ಒಂದು ಸ್ಪಷ್ಟತೆ ನೀಡುವಂತೆ ಕೇಂದ್ರಸರ್ಕಾರಕ್ಕೆ ಪತ್ರವೊಂದನ್ನು ಬರೆಯಲಾಗಿದೆ ಎಂದು ಹೇಳಿದರು.
ಲಸಿಕೆಯ ಉತ್ಪಾದನೆಯ ಆರಂಭದ ದಿನಗಳಲ್ಲಿ ಏಕಾಏಕಿಯಾಗಿ ನೂರಾರು ಮಿಲಿಯನ್ಗಳಷ್ಟು ಲಸಿಕೆ ಬೇಕಾಗಿ ಬಂದಿತ್ತು. ಆದರೆ ಈಗ ಅಂತಹ ಪರಿಸ್ಥಿತಿ ಏನೂ ಇಲ್ಲ. ಇವೆಲ್ಲವೂ ಗಳ ಬಗ್ಗೆ ಸರ್ಕಾರಗಳು ಗಮನಕೊಡಬೇಕು ಎಂದು ಸರ್ಕಾರ ಮತ್ತು ಆರೋಗ್ಯ ತಜ್ಞರಿಗೆ ನಾವು ಪತ್ರದಲ್ಲಿ ವಿವರಿಸಿದ್ದೇವೆ. ನಮಗೊಂದು ಸ್ಪಷ್ಟ ಮಾರ್ಗದರ್ಶನ ನೀಡುವಂತೆ ಕೇಳಿದ್ದೇವೆ ಎಂದು ತಿಳಿಸಿದ್ದಾರೆ.
ಕೊವ್ಯಾಕ್ಸ್ ಪ್ಲಾಟ್ಫಾರ್ಮ್ನಲ್ಲಿ ಸುಮಾರು 400-500 ಮಿಲಿಯನ್ ಡೋಸ್ಗಳಷ್ಟು ಲಸಿಕೆ ಅಗತ್ಯ ಇರುವುದನ್ನು ನಾವು ಪರಿಶೀಲಿಸಿದ್ದೇವೆ. ಹಾಗೇ, ಆಫ್ರಿಕಾದ ಕೆಲವು ರಾಷ್ಟ್ರಗಳ ನಾಯಕರೊಟ್ಟಿಗೆ ಸಂಪರ್ಕದಲ್ಲಿದ್ದೇವೆ. ಏನಿದ್ದರೂ ಕೇಂದ್ರ ಸರ್ಕಾರದಿಂದ ಅಧಿಕೃತ ಆದೇಶ ಬಂದ ಹೊರತು ಮುಂದಿನ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.