ಸಿದ್ದರಾಮಯ್ಯ ಅವರಿಗೆ ಭಯ ಕಾಡ್ತಿದೆ.. ಆ ಭಯ ಇರಬೇಕು : ಪ್ರತಾಪ್‌ ಸಿಂಹ ವ್ಯಂಗ್ಯ

ಮೈಸೂರು : ಮಾಜಿ ಸಿಎಂ ಸಿದ್ದರಾಮಯ್ಯ ಎದುರು ಸಚಿವ ವಿ ಸೋಮಣ್ಣ ಕಣಕ್ಕಿಳಿಯುತ್ತಲೇ ವರುಣಾ ವಿಧಾನಸಭಾ ಕ್ಷೇತ್ರ ರಣಕಣವಾಗಿ ಬದಲಾಗಿದೆ. ವರುಣಾದಲ್ಲಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಸಿದ್ದರಾಮಯ್ಯ ಈಗ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿಗಳ ಪ್ರಚಾರಕ್ಕೆ ವ್ಯಂಗ್ಯವಾಡಿರುವ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್‌ ಸಿಂಹ, ಸಿದ್ದರಾಮಯ್ಯನವರೇ ಆ ಭಯ ಇರಬೇಕು ಎಂದು ಟಾಂಗ್‌ ನೀಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರತಾಪ್‌ ಸಿಂಹ, ವರುಣಾ ಕ್ಷೇತ್ರದಲ್ಲೇ ಚುನಾವಣೆ ನಿಲ್ಲುತ್ತೇನೆ, ನಾಮಪತ್ರ ಸಲ್ಲಿಸಲಷ್ಟೇ ಬರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿಹೋಗಿದ್ದರು. ಆದರೆ, ಸೋಮಣ್ಣನವರ ಹೆಸರು ಘೋಷಣೆಯಾಗುತ್ತಿದ್ದಂತೆಯೇ ನಾಮಪತ್ರ ಸಲ್ಲಿಸಲು 2 ದಿನ ಮೊದಲೇ ವರುಣಕ್ಕೆ ಓಡಿ ಬಂದರು, ಇವತ್ತು ಮತ್ತೆ ಬಂದಿದ್ದಾರೆ, ಮುಂದಿನ ವಾರ ಇಲ್ಲೇ ಇರುತ್ತಾರಂತೆ ಎಂದು ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯ ಅವರ ಪ್ರವಾಸ ಕಾರ್ಯಕ್ರಮದ ವೇಳಾಪಟ್ಟಿಯನ್ನು ಹಂಚಿಕೊಂಡಿರುವ ಪ್ರತಾಪ್‌ ಸಿಂಹ, ಸಿದ್ದರಾಮಯ್ಯ ಅವರಿಗೆ ಭಯ ಕಾಡ್ತಿದೆ.. ಆ ಭಯ ಇರಬೇಕು ಸಿದ್ದರಾಮಯ್ಯನವರೇ ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರ ವೇಳಾಪಟ್ಟಿಯಲ್ಲಿ ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಿಂದ ಬೆಳಗ್ಗೆ 10 ಗಂಟೆಗೆ ನಿರ್ಗಮಿಸಿ ಬೆಳಗ್ಗೆ 10.30ಕ್ಕೆ ಮೈಸೂರಿಗೆ ಬಂದು ದಿನವಿಡಿ ವರುಣಾದಲ್ಲಿ ಪ್ರಚಾರ ಕಾರ್ಯಕ್ರಮ ನಿಗದಿಯಾಗಿದೆ. ರಾತ್ರಿ 8 ಗಂಟೆಗೆ ಬೆಂಗಳೂರಿಗೆ ವಾಪಸ್‌ ಹೋಗಲಿದ್ದಾರೆ ಎಂದು ತಿಳಿಸಲಾಗಿದೆ.

ಪ್ರಚಾರ ಮಾಡಲ್ಲ, ನನ್ನ ಮಗ ನೋಡ್ಕೋತಾನೆ ಎಂದಿದ್ದ ಸಿದ್ದು : ವರುಣಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾದಾಗ ಮಾತನಾಡಿದ್ದ ಸಿದ್ದರಾಮಯ್ಯ, ವರುಣಾ ಕ್ಷೇತ್ರದಲ್ಲಿ ನಾಮಪತ್ರ ಮಾತ್ರ ಸಲ್ಲಿಸಲು ಮಾತ್ರ ಬರುತ್ತೇನೆ. ಒಂದು ದಿನವೂ ಪ್ರಚಾರ ಮಾಡುವುದಿಲ್ಲ. ನನ್ನ ಮಗ ಯತೀಂದ್ರ ಎಲ್ಲ ನೋಡಿಕೊಳ್ಳುತ್ತಾರೆ. ಯಾರೇ ಎದುರಾಳಿಯಾದರು ವರುಣಾದಲ್ಲಿ ನಾನೇ ಗೆಲ್ಲುತ್ತೇನೆ ಎಂದು ಹೇಳಿದ್ದರು. ಆದರೆ, ಈಗ ಸಿದ್ದರಾಮಯ್ಯನವರು ವರುಣಾದಲ್ಲಿ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಈಗ ಇದೇ ವಿಚಾರಕ್ಕೆ ಸಿದ್ದರಾಮಯ್ಯ ಅವರ ಕಾಲನ್ನು ಎಳೆದಿದ್ದಾರೆ ಸಂಸದ ಪ್ರತಾಪ್‌ ಸಿಂಹ.

ಇದನ್ನೂ ಓದಿ : ಪ್ರತಿಯೊಬ್ಬರಿಗೆ 500 ರೂಪಾಯಿ ಕೊಟ್ಟು ಕರ್ಕೊಂಡ್ ಬನ್ನಿ; ಸಿದ್ದರಾಮಯ್ಯ ಮಾತು ವೈರಲ್

ನಾಮಪತ್ರ ಸಲ್ಲಿಕೆಯ ಎರಡು ದಿನಗಳ ಹಿಂದೆಯೂ ವರುಣಾದಲ್ಲಿ ಸಿದ್ದರಾಮಯ್ಯ ಪ್ರಚಾರ ಮಾಡಿದ್ದರು. ಸಿದ್ದರಾಮಯ್ಯ ಜೊತೆ ಅವರ ಮೊಮ್ಮಗ ಧವನ್‌ ರಾಕೇಶ್‌ ಕೂಡ ಕಾಣಿಸಿಕೊಂಡಿದ್ದರು. ನಾಮಪತ್ರ ಸಲ್ಲಿಕೆ ದಿನ ಬೃಹತ್‌ ಸಮಾವೇಶ ನಡೆಸಿದ್ದ ಸಿದ್ದರಾಮಯ್ಯ ಇದೇ ನನ್ನ ಕೊನೆ ಚುನಾವಣೆ, ಧವನ್‌ ರಾಕೇಶ್‌ ನನ್ನ ಉತ್ತರಾಧಿಕಾರಿ ಎಂದು ಘೋಷಿಸಿದ್ದರು. ಅದಲ್ಲದೇ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಶನಿವಾರ ವರುಣಾಗೆ ಆಗಮಿಸಿರುವ ಸಿದ್ದರಾಮಯ್ಯ ಇಡೀ ದಿನ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಮುಂದಿನ ವಾರ ಕೂಡ ವರುಣಾದಲ್ಲಿ ಸಿದ್ದರಾಮಯ್ಯ ಪ್ರಚಾರ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

ವರುಣಾದಲ್ಲಿ ಕೈ ಕಮಲ ಪೈಪೋಟಿ :
ಮಾಜಿ ಸಿಎಂ ಸಿದ್ದರಾಮಯ್ಯನವರು ವರುಣಾದಲ್ಲಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ, ಬಿಜೆಪಿ ಜಾತಿ ಲೆಕ್ಕಾಚಾರ ಹಾಕಿ ಸಚಿವ ವಿ ಸೋಮಣ್ಣ ಅವರನ್ನು ವರುಣಾದಲ್ಲಿ ಕಣಕ್ಕಿಳಿಸಿದೆ. ಇಲ್ಲಿ ಲಿಂಗಾಯತರ ಮತಗಳು ಹೆಚ್ಚಿರುವುದರಿಂದ ಲಿಂಗಾಯತ ಸಮುದಾಯಕ್ಕೆ ಸೇರಿರುವ ಸೋಮಣ್ಣ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಲಿಂಗಾಯತ ಸಮುದಾಯದ ಪ್ರಮುಖ ನಾಯಕ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಇಲ್ಲಿ ಹೆಚ್ಚಿನ ಪ್ರಭಾವ ಹೊಂದಿರುವುದರಿಂದ ಸಿದ್ದರಾಮಯ್ಯ ಅವರಿಗೆ ಪೈಪೋಟಿ ಎದುರಾಗಿದೆ.

Donate Janashakthi Media

Leave a Reply

Your email address will not be published. Required fields are marked *