ಬೆಂಗಳೂರು: 2014-15ನೇ ಸಾಲಿನ ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕ ಎಂ.ಪಿ. ಮಾದೇಗೌಡ ಹಾಗೂ ಸಮಗ್ರ ಶಿಕ್ಷಣ ಅಭಿಯಾನ ನಿರ್ದೇಶಕಿ ಗೀತಾ ಸೇರಿದಂತೆ ಆರು ಮಂದಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಅಕ್ಟೋಬರ್ 1ರವರೆಗೆ ಕಸ್ಟಡಿಗೆ ಪಡೆದಿದ್ದಾರೆ.
ಮಾದೇಗೌಡ, ಗೀತಾ, ನಿವೃತ್ತ ಜಂಟಿ ನಿರ್ದೇಶಕರಾದ ಡಿ.ಕೆ. ಶಿವಕುಮಾರ್, ಕೆ. ರತ್ನಯ್ಯ, ಜಿ.ಆರ್. ಬಸವರಾಜ್ ಹಾಗೂ ಕಂಪ್ಯೂಟರ್ ಪ್ರೋಗ್ರಾಮರ್ ನರಸಿಂಹರಾವ್ ಅವರನ್ನುಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪದಡಿ ಬಂಧಿಸಲಾಗಿದೆ ಎಂದು ಸಿಐಡಿ ಮೂಲಗಳು ಹೇಳಿವೆ.
ರಾಜ್ಯದ ಬಹುತೇಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ನೇಮಕಾತಿಯಲ್ಲಿ ಅಕ್ರಮ ಕುರಿತು ವಿಧಾನಸೌಧ ಠಾಣೆಯಲ್ಲಿ ದಾಖಲಾಗಿದ್ದ ಮೂರು ಪ್ರತ್ಯೇಕ ಪ್ರಕರಣಗಳ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಸಹ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಎಫ್‌ಡಿಎ ಕೆ.ಎಂ. ಪ್ರಸಾದ್ ಅವರನ್ನು ಬಂಧಿಸಿದ್ದ ಸಿಐಡಿ ಅಧಿಕಾರಿಗಳು, ಅವರೆಲ್ಲರ ಹೇಳಿಕೆ ದಾಖಲಿಸಿಕೊಂಡಿದ್ದರು. ಇಲಾಖೆಯ ಉನ್ನತ ಅಧಿಕಾರಿಗಳೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಅವರೇ ತರಾತುರಿಯಲ್ಲಿ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಕೊಟ್ಟಿದ್ದರು’ ಎಂಬುದಾಗಿ ಬಂಧಿತರು ಬಾಯ್ಬಿಟ್ಟಿದ್ದರೆಂದು ಸಿಐಡಿ ಮೂಲಗಳು ಹೇಳಿವೆ.
‘ಜಿಲ್ಲಾವಾರು ಅರ್ಜಿ ಸಲ್ಲಿಸಿದ್ದ ಕೆಲ ಅಭ್ಯರ್ಥಿಗಳು, ನೇಮಕಾತಿ ಮಂಡಳಿಯಲ್ಲಿದ್ದ ಸಿಬ್ಬಂದಿ ಹಾಗೂ ಇತರರಿಗೆ ₹ 5ಲಕ್ಷದಿಂದ ₹ 10 ಲಕ್ಷ ನೀಡಿ ಸಹ ಶಿಕ್ಷಕ ಹುದ್ದೆಗೆ ಆಯ್ಕೆಯಾಗಿದ್ದರು. ಇವರೆಲ್ಲರ ಹೆಸರು ಹೆಚ್ಚುವರಿ ಪಟ್ಟಿಯಲ್ಲಿತ್ತು. ಅಕ್ರಮವಾಗಿ ಆಯ್ಕೆಯಾಗಿದ್ದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಸದೇ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರು, ನೇಮಕಾತಿ ಆದೇಶ ಪತ್ರಗಳನ್ನು ನೀಡಿದ್ದರು.’
‘ಬಂಧಿತ ಆರೋಪಿಗಳೆಲ್ಲರೂ ಸಂಘಟಿತರಾಗಿ ಅಕ್ರಮದಲ್ಲಿ ಭಾಗಿಯಾಗಿರುವುದು ಇದುವರೆಗಿನ ತನಿಖೆಯಿಂದ ಗೊತ್ತಾಗಿದೆ. ಬಂಧಿತ ನಿರ್ದೇಶಕರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಕಸ್ಟಡಿಗೆ ಪಡೆಯಲಾಗಿದೆ. ವಿಚಾರಣೆ ಬಳಿಕವೇ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ’ ಎಂದೂ ತಿಳಿಸಿವೆ.
‘ಬಂಧಿತ ನಿರ್ದೇಶಕರು ತರಾತುರಿಯಲ್ಲಿ ನೇಮಕಾತಿ ಪ್ರಕ್ರಿಯೆ ಮುಗಿಸಲು ಯತ್ನಿಸಿದ್ದರು. ಇದಕ್ಕಾಗಿ ಅವರು ಲಕ್ಷಾಂತರ ರೂಪಾಯಿ ಪಡೆದಿರುವ ಶಂಕೆ ಇದ್ದು, ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.
‘ಕೋಲಾರ, ವಿಜಯಪುರ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಹ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆದಿತ್ತು. ಜಿಲ್ಲಾವಾರು ಹೆಚ್ಚುವರಿ ಆಯ್ಕೆಪಟ್ಟಿ ಸಿದ್ಧಪಡಿಸಲಾಗಿತ್ತು. ಈ ಪಟ್ಟಿಯಲ್ಲಿದ್ದ ಬಹುತೇಕ ಅಭ್ಯರ್ಥಿಗಳನ್ನು ಈಗಾಗಲೇ ಬಂಧಿಸಲಾಗಿದೆ.