ಬೆಂಗಳೂರು : ಪೆಟ್ರೋಲ್ ಹಾಗೂ ಡೀಸೆಲ್ ದರ ಶತಕ ದಾಟಿದ ನಂತರ ಬೆಲೆ ಹೆಚ್ಚಳದ ಕಾವು ತರಕಾರಿ, ಹಣ್ಣಿಗೂ ತಟ್ಟಿದೆ. ನಿತ್ಯ ಬಳಸುವ ತರಕಾರಿ ಮತ್ತು ಹಣ್ಣುಗಳ ದರ ಶತಕ ದಾಟಿದೆ.
‘ಒಂದು ತಿಂಗಳಿಂದ ತರಕಾರಿ ಮಾರುಕಟ್ಟೆಯಲ್ಲಿ ಬೆಲೆಗಳ ಏರಿಳಿತ ಮುಂದುವರಿದಿದೆ. 15 ದಿನಗಳ ಹಿಂದೆ ಅತಿವೃಷ್ಟಿಯಿಂದ ಬೆಳೆ ಹಾನಿ ಆಗಿ ಕೆಲ ತರಕಾರಿ ಬೆಲೆ ಏರಿತ್ತು. ಕೊಳೆಯುವ ಭಯದಿಂದ ರೈತರು ಕೆಲ ತರಕಾರಿಯನ್ನು ಮಾರುಕಟ್ಟೆಗೆ ತಂದ ಕಾರಣ ದಿಢೀರ್ ಬೆಲೆ ಕುಸಿದಿತ್ತು. ಆದರೆ, ಈ ಬಾರಿ ತೈಲ ಬೆಲೆ ಹೆಚ್ಚಳದಿಂದ ತರಕಾರಿ ಬೆಳೆ ಹೆಚ್ಚಳವಾಗಿದೆ’ ಎಂದು ತರಕಾರಿ ವ್ಯಾಪಾರಿಗಳು ಹೇಳುತ್ತಿದ್ದಾರೆ.
ಕಂಗಾಲಾದ ಜನಸಾಮಾನ್ಯ : ಒಂದೆಡೆ ಮಳೆಯಾರ್ಭಟದ ಜತೆಗೆ ತೈಲದರ ಹೆಚ್ಚಳದ ಬಿಸಿ, ಇನ್ನೊಂದೆಡೆ ತರಕಾರಿ ದರ ಹೆಚ್ಚಳದಿಂದ ಜನಸಾಮಾನ್ಯರು ಕಂಗಾಲಾಗುತ್ತಿದ್ದಾರೆ. ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಹೀಗಾಗಿ ಬಡ, ಮಧ್ಯಮವರ್ಗದ ಕುಟುಂಬಗಳಿಗೆ ಊಟಕ್ಕೆ ಪರದಾಡುವ ಸ್ಥಿತಿ ಇದಗಿದೆ. ಬೆಲೆ ಏರಿಕೆಯಿಂದ ತರಕಾರಿ ಬೆಳೆದ ರೈತರಿಗೂ ಲಾಭ ಕೈಸೇರುತ್ತಿಲ್ಲ, ಇತ್ತ ಗ್ರಾಹಕರನ್ನೂ ಕಂಗಾಲಾಗಿಸಿದೆ. ದೀಪಾವಳಿ ವರೆಗೂ ತರಕಾರಿ ಹಣ್ಣುಗಳ ದರ ಇದೇ ರೀತಿ ಇರಲಿದೆ ಎಂಬುದು ಮಾರುಕಟ್ಟೆ ಲೆಕ್ಕಾಚಾರ.
ನಿತ್ಯ ಬಳಸುವ ತರಕಾರಿ ದರ ದುಪ್ಪಟ್ಟು : ನಾವು ದಿನ ನಿತ್ಯ ಅಡುಗೆಗೆ ಬಳಸುವ ಟೊಮ್ಯಾಟೊ, ಮೆಂತೆ ಸೊಪ್ಪು, ಬೀನ್ಸ್, ಕೊತಂಬರಿ, ನುಗ್ಗೆಕಾಯಿ, ಬೆಳ್ಳುಳ್ಳಿ ದರ ಶತಕ ದಾಟಿದ್ದರೆ ಉಳಿದ ತರಕಾರಿಗಳ ದರ ಶತಕದ ಸಮೀಪದಲ್ಲಿದೆ.
ಅಡುಗೆ ರುಚಿ ರುಚಿಯಾಗಿ ಆಗಬೇಕಾದರೆ ಟೊಮ್ಯಾಟೊ, ಕೋತಂಬರಿ ಮುಖ್ಯ, ಪ್ರತಿಮನೆಯಲ್ಲಿ ದಿನ ನಿತ್ಯದ ಊಟಕ್ಕೆ ಬೇಕೆ ಬೇಕು. ಆದರೆ, ಮಾರುಕಟ್ಟೆಯಲ್ಲಿ ಟೊಮ್ಯಾಟೊ ದರಕೇಳಿದರೆ ಹೌಹಾರುತ್ತೀರಿ, 1KG ಗೆ 80 ರಿಂದ 100 ರೂ ನಿಗದಿಯಾಗಿದೆ. ಇನ್ನೂ ಕೊತ್ತಂಬರಿ ಕೆ.ಜಿಗೆ 100ರೂ.ಯಿಂದ 200 ರೂ.ಗೆ ಜಿಗಿದಿದೆ. ಸಾಮಾನ್ಯಾವಾಗಿ ಕಟ್ಟುಗಳಲ್ಲಿ ಸಿಗುತ್ತಿದ್ದ ಕೊತ್ತಂಬರಿಯನ್ನು ತೂಕ ಮಾಡಿಮಾರಾಟ ಮಾಡಲಾಗುತ್ತಿರುವುದು ವಿಶೇಷ.
80 ರೂ. ಇದ್ದ ಮೆಂತೆ ಸೊಪ್ಪು 120ರೂ., 60 ರೂ. ಇದ್ದ ಬಿನಿಸ್ 100 ರೂ., 80 ರೂ.ಇದ್ದ ನುಗ್ಗೆಗಾಯಿ 160 ರೂ. 80 ರೂ. ಇದ್ದ ಬೆಳ್ಳುಳ್ಳಿ100 ರೂ. ಹಾಗೂ 40 ರೂ. ಇದ್ದ ಪಾಲಕ್ 80 ರೂ.ಗಳಿಗೆ, ಬಟಾಣಿ ಕೆ.ಜಿಗೆ 120 ರೂ. ಹೂಕೋಸು ಕೆ.ಜಿಗೆ 100 ರೂ.ಗಳಿಗೆ ಮಾರಾಟವಾಗುತ್ತಿದೆ.
ಹಣ್ಣಿನ ದರದಲ್ಲೂ ಏರಿಕೆಯಾಗಿದ್ದು ಸೇಬು 100 ರೂ. ಇದ್ದರೆ ದಾಳಿಂಬೆ 100 ರಿಂದ 120 ರೂ. ಆಗಿದೆ, ಮೋಸಂಬಿಗೆ 60-80ರೂ. ಇದ್ದು, ಏಲಕ್ಕಿ ಬಾಳೆ 70 ರಿಂದ 80 ರೂ., ಪಚ್ಚಬಾಳೆ 45 ರೂ 58 ರೂ, ಸಪೋಟಾ 50ರೂ.ಗೆ ಮಾರಾಟವಾಗುತ್ತಿದೆ.
ಕೋವಿಡ್ ಎರಡನೇ ಅಲೆಯ ಅಬ್ಬರ ಕಡಿಮೆ ಆಗಿದ್ದರೂ, ಅಗತ್ಯ ವಸ್ತುಗಳ ಬೆಲೆ ಏರಿಕೆ ಸೃಷ್ಟಿಸಿರುವ ತಲ್ಲಣದಿಂದ ಮನೆ- ಮನೆಗಳಲ್ಲಿ ದೈನಂದಿನ ಖರ್ಚು- ವೆಚ್ಚ ದುಬಾರಿಯಾಗಿದೆ. ತರಕಾರಿ, ದಿನಸಿ, ಅಡುಗೆ ಅನಿಲ, ಪೆಟ್ರೋಲ್/ ಡೀಸೆಲ್, ಖಾದ್ಯ ತೈಲಗಳ ಬೆಲೆ ಏರಿಕೆ ಗ್ರಾಹಕರ ಜೇಬು ಸುಡಲಾರಂಭಿಸಿದೆ. ಒಟ್ಟಿನಲ್ಲಿ ಅಡಿಗೆ ಮನೆಗೆ ಈಗ ಬೆಲೆ ಏರಿಕೆಯ ಬಿಸಿ ತಟ್ಟಿದೆ.