ಶಾಶ್ವತ ಪ್ರಯೋಗಶೀಲ ಮೃಣಾಲ್ ಸೆನ್ : ಗಿರೀಶ್ ಕಾಸರವಳ್ಳಿ (ಭಾಗ -4 ಮೃಣಾಲ್ ಸೆನ್ ಅವರ ಕೆಲವು ಆಪ್ತ ನೆನಪುಗಳು)

ಮೃಣಾಲ್ ಸೆನ್ 

ಗಿರೀಶ್ ಕಾಸರವಳ್ಳಿ

ಮೃಣಾಲ್ ಸೆನ್ ವಿಶ್ವಮನ್ನಣೆ ಪಡೆದ ಭಾರತದ  ಹೊಸ ಅಲೆಯ ಸಿನೆಮಾ ದ ಪ್ರವರ್ತಕ ತ್ರಿಮೂರ್ತಿಗಳಲ್ಲಿ (ಸತ್ಯಜಿತ್ ರೇ, ರಿತ್ವಿಕ್ ಘಟಕ್ ಇನ್ನಿಬ್ಬರು) ಒಬ್ಬರು. ಈ ವರ್ಷ ಅವರ ಹುಟ್ಟಿನ ಶತಮಾನೋತ್ಸವ.  ಆ ಸಂದರ್ಭದಲ್ಲಿ ಮೃಣಾಲ್ ಸೆನ್ ಕುರಿತು ಭಾರತದ ಸಮಕಾಲೀನ ಸಿನೆಮಾದ ದಿಗ್ಗಜರಲ್ಲಿ ಒಬ್ಬರಾದ ಮತ್ತು ಮೃಣಾಲ್ ಸೆನ್ ಅವರ ಜತೆ ಒಡನಾಟವಿದ್ದ ಗಿರೀಶ್ ಕಾಸರವಳ್ಳಿ ಅವರ ದೀರ್ಘ ಲೇಖನ.  ಮೃಣಾಲ್ ಸೆನ್ ಅವರ ಸಿನೆಮಾಯಾನದ ಹಿಂದಿನ ಪ್ರೇರಣೆ, ಅದರ ಮೂರು ಹಂತಗಳ ಮತ್ತು ಕೆಲವು ಗಮನಾರ್ಹ ಸಿನಿಮಾಗಳ ಸ್ಥೂಲ ವಿಶ್ಲೇಷಣಾತ್ಮಕ ಪರಿಚಯ, ಕೆಲವು ಘಟನೆಗಳ ಮೂಲಕ ಅವರ ವ್ಯಕ್ತಿ ಚಿತ್ರಣ, ಅವರ ಜತೆಗಿನ ಒಡನಾಟದ ನೆನಪುಗಳ ಮೆಲುಕು – ಇವೆಲ್ಲವುಗಳನ್ನು ಒಳಗೊಂಡ ಈ ಸಮಗ್ರ ಲೇಖನವನ್ನು ನಾಲ್ಕು ಭಾಗಗಳಲ್ಲಿ ಪ್ರಕಟಿಸಲಾಗುತ್ತಿದೆ.   ಭಾಗ-1 ರಲ್ಲಿ ಹೊಸ ಅಲೆಯ ತ್ರಿಮೂರ್ತಿಗಳ ವಿಭಿನ್ನತೆ, ವಿಶಿಷ್ಟತೆಗಳ ಅನಾವರಣ, ಮೃಣಾಲ್ ಸಿನೆಮಾಯಾನದ ಹಿಂದಿನ ಪ್ರೇರಣೆ, ಶಾಶ್ವತ ಪ್ರಯೋಗಶೀಲತೆ, ಮೊದಲ ಹಂತ ಮತ್ತು ಭುವನ್ ಶೋಂ ಸ್ಥೂಲ ವಿಶ್ಲೇಷಣಾತ್ಮಕ ಪರಿಚಯವಿದೆ.  ಭಾಗ-2 ರಲ್ಲಿ ಅವರ ಸಿನೆಮಾಯಾನದ ‘ಸಾಮಾಜಿಕ ಪರಿವರ್ತನೆ’ಯ ಎರಡನೆಯ ಹಂತದ ಮತ್ತು ಮೂರನೆಯ ಹಂತವಾದ ‘critical insider’ ಹಂತಕ್ಕೆ ಸ್ಥಿತ್ಯಂತರದ ನಿರೂಪಣೆ ಇದೆ.  ಭಾಗ-3 ರಲ್ಲಿ ಮಧ್ಯಮ ವರ್ಗದ ಆತ್ಮಾವಲೋಕನದ ಮೂರನೆಯ ಹಂತದ ಚಿತ್ರಗಳ ವಿಶ್ಲೇಷಣೆ ಮತ್ತು ಅವರ ಧೋರಣೆ ನಿರೂಪಿಸುವ ಕೆಲವು ಗಮನಾರ್ಹ ಘಟನೆಗಳ ಉಲ್ಲೇಖವಿದೆ. ಈ ಭಾಗ-4ರಲ್ಲಿ ಮೃಣಾಲ್ ಸೆನ್ ಅವರ ಜತೆಗಿನ ಕೆಲವು ಆಪ್ತ ನೆನಪುಗಳ ಮೆಲುಕು ಹಾಕುತ್ತಾರೆ.

ನಾನು ಅವರ ಚಿತ್ರಗಳನ್ನು ಮೆಚ್ಚುವಷ್ಟೇ, ಅವರನ್ನು ವ್ಯಕ್ತಿಯಾಗಿಯೂ ಮೆಚ್ಚುತ್ತಿದ್ದೆ. ಇದು ನನ್ನೊಬ್ಬನ ಅನ್ನಿಸಿಕೆಯಲ್ಲ. ಅವರನ್ನು ಹತ್ತಿರದಿಂದ ಬಲ್ಲ ಅನೇಕರು ಒಪ್ಪುವ ಮಾತು. ನೇರ ನಡೆ, ಸ್ಪಷ್ಟ ಮಾತುಗಳು, ನಿರ್ಭಿಡೆಯಿಂದ ತನ್ನ ಅನ್ನಿಸಿಕೆಯನ್ನು ಹೇಳುವ ಪರಿ, ಸಿನಿಮಾ ಗ್ಲಾಮರ್ ಲೋಕಕ್ಕೆ ಅಪವಾದವಾಗುವಂತಹ ಮಧ್ಯಮ ವರ್ಗದ ಜೀವನ ಕ್ರಮ ಇವು ಪೂರಕ ಅಂಶಗಳು. ಸದಾ ಬಿಳಿಯ ಜುಬ್ಬಾ, ಪೈಜಾಮ, ಕೈಲ್ಲೊಂದು ಸಿಗಾರ್ ಪೈಪು, ಇಂಗ್ಲೀಷ್ ಸಂಭಾಷಣೆಯಲ್ಲೂ ಕಾಣುವ ಬಂಗಾಳೀ ಛಾಪು. ಅಷ್ಟೇ ವಿಶಿಷ್ಟವಾದದ್ದು ಯಾವ ಭಾರತೀಯ ಸಿನಿಮಾ ನಿರ್ದೇಶಕನಲ್ಲೂ ಕಾಣ ಸಿಗದ ತನ್ನ ಚಿತ್ರಗಳನ್ನೇ ವ್ಯಾಖ್ಯಾನಿಸಿಕೊಂಡು ಅವುಗಳ ಬಗ್ಗೆ ಲಘುವಾಗಿ ಮಾತನಾಡುವ ಪ್ರವೃತ್ತಿ.  ತಮ್ಮ ಮೊದಲ ಚಿತ್ರ “ರಾತ್ ಬೋರ್” (1956 ಬಂಗಾಲಿ) ಚಿತ್ರವು ಕೆಟ್ಟ ಚಿತ್ರಗಳಲ್ಲೇ ಅತ್ಯಂತ ಕೆಟ್ಟ ಚಿತ್ರ ಎಂದು ಯಾವುದೇ ಮುಜುಗರವಿಲ್ಲದೇ ಕೆಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದುಂಟು. ಹಾಗೆಯೇ ತನ್ನ ಅನೇಕ ಚಿತ್ರಗಳು ಕಮರ್ಷಿಯಲ್ ಪ್ಲಾಪ್ ಎಂಬುದನ್ನೂ ಅಷ್ಟೇ ನೇರವಾಗಿ ಹೇಳಿಕೊಳ್ಳುತ್ತಿದ್ದರು.  ಅವರ ಚಿತ್ರಗಳ ಬಗ್ಗೆ ನಿರ್ಭಿಡೆಯಿಂದ ಅಭಿಪ್ರಾಯಗಳನ್ನು ಹೇಳಿದಾಗಲೂ ಸಿಟ್ಟಾಗದಿದ್ದ ಕೆಲವೇ ಕೆಲವು ಚಿತ್ರೋದ್ಯಮದ ವ್ಯಕ್ತಿಗಳಲ್ಲಿ ಅವರೊಬ್ಬರು.

ಮೊದಲ ಭೇಟಿ

ಮೃಣಾಲ್ ಸೇನ್ ರನ್ನು ನಾನು ಮೊದಲ ಬಾರಿಗೆ ಮುಖಾಮುಖಿಯಾದದ್ದು ಒಂದು ಅಹಿತಕರ ಸಂಬಂಧಕ್ಕೆ ನಾಂದಿಯಾಗಿರಬೇಕಿತ್ತು. ಹಾಗಾಗದೇ ಅದು ಸ್ನೇಹಕ್ಕೆ ತಿರುಗಿದ್ದು ಮೃಣಾಲ್ ಸೇನರ ಸಮಚಿತ್ತ ಮನೋಭಾವಕ್ಕೆ ನಿದರ್ಶನ.

ಅವರ ಖ್ಯಾತ ಚಿತ್ರ ‘ಭುವನ್ ಷೋಂ’ಗೆ ದೆಹಲಿಯ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ  ಪ್ರಶಸ್ತಿ ಪಡೆದಾಗ ನಾನಿನ್ನೂ ಮಣಿಪಾಲದ ಫಾರ್ಮಸಿ ಕಾಲೇಜಿನಲ್ಲಿ ಬಿ. ಫಾರ್ಮಸಿ ಓದುತ್ತಿದ್ದೆ. ಅದನ್ನು ನೋಡಲು ತವಕಿಸುತ್ತಿದ್ದರೂ ನಮ್ಮೂರಿನ ಚಿತ್ರ ಮಂದಿರಗಳಲ್ಲಿ ಅದು ಪ್ರದರ್ಶನಕ್ಕೆ ಬರಲಿಲ್ಲ.  ಮುಂದೆ ಹೈದರಾಬಾದಿನಲ್ಲಿ Indian Drug and Pharmaceutical Company ಯಲ್ಲಿ ತರಬೇತಿಗೆ ಹೋದಾಗ ಆ ಚಿತ್ರವನ್ನು ನೋಡುವ ಅವಕಾಶ ದೊರೆತಿತ್ತು. ನಂತರ ಪುಣೆಯ ಫಿಲ್ಮ್ ಮತ್ತು ಟಿವಿ ಇನ್ ಸ್ಟಿಟ್ಯೂಟ್‌ಗೆ ಸೇರಲು ಬಯಸಿ ಸಂದರ್ಶನಕ್ಕೆ ಹೋದಾಗ ಅಲ್ಲಿದ್ದ ನಾಲ್ವರು ಸಂದರ್ಶಕರಲ್ಲಿ ಮೃಣಾಲ್ ಸೇನರೂ ಒಬ್ಬರು. ‘ಭುವನ್ ಷೋಂ’ ಚಿತ್ರವನ್ನು ನೋಡಿದ್ದೇನೆ ಎಂದು ಹೇಳಿದ್ದೇ, ಆ ಚಿತ್ರದ ಬಗ್ಗೆ ನನ್ನ ಅಭಿಪ್ರಾಯ ಕೇಳಿದರು. ನಾನು ವಯೋ ಸಹಜ ದಾರ್ಷ್ಟ್ಯದಿಂದ ‘ಅದೊಂದು ಕೆಟ್ಟ ಚಿತ್ರ. ತುಂಬಾ ಗಿಮಿಕಿಯಾಗಿದೆ.  ಪಾತ್ರ ಚಿತ್ರಣದಲ್ಲಿ ಸಂಯಮವಿಲ್ಲ. ಹಾಸ್ಯ ಒರಟೊರಟಾಗಿದೆ’ ಎಂದೆ. (ಈ ಅಭಿಪ್ರಾಯಕ್ಕೆ ಈಗಲೂ ಬದ್ಧನಾಗಿದ್ದೇನೆ.) ಪ್ರವೇಶ ಕೇಳಿ ಬಂದ ಅಭ್ಯರ್ಥಿಯ ಈ ಕಟು ಟೀಕೆ ಅವರಿಗೆ ಸಿಟ್ಟು ತರಿಸಬೇಕಿತ್ತು. ಆದರೆ ಅವರು ನಕ್ಕು ಸುಮ್ಮನಾಗಿದ್ದು ನೋಡಿದಾಗ ಈ ಮನುಷ್ಯ ಎಲ್ಲರಂತಲ್ಲ ಎನಿಸಿತು.

‘ಘಟಶ್ರಾಧ್ಧ’ದ  ಕುರಿತು ‘ಮತ್ಸರ’

ಎರಡನೇಯ ಬಾರಿ ಅವರನ್ನು ಭೇಟಿಯಾದದ್ದು 1978ರಲ್ಲಿ. ‘ಘಟಶ್ರಾದ್ಧ’ ಚಿತ್ರ ಆಗಷ್ಟೇ ಪೂರ್ಣಗೊಂಡಿತ್ತಾದರೂ ಬಿಡುಗಡೆಯಾಗಿರಲಿಲ್ಲ. ಅದೇ ವೇಳೆಗೆ ‘ಸುಚಿತ್ರಾ’ ಚಿತ್ರ ಸಮಾಜದವರು ಆಯೋಜಿಸಿದ್ದ ‘ನಾಸ್ಟಾಲ್ಜಿಯಾ’ ಚಿತ್ರೋತ್ಸವದ ಉದ್ಘಾಟನೆಗೆಂದು ಮೃಣಾಲ್ ಸೇನರು ಆಗಮಿಸಿದ್ದರು. ಆ ವೇಳೆಗಾಗಲೇ ‘ಘಟಶ್ರಾದ್ಧ’ ನೋಡಿದ್ದ ಕುಮಾರ್ ಸಹಾನಿಯವರು ‘ಅದೊಂದು ಅಪೂರ್ವ ಚಿತ್ರ’ ಎಂದು ಹೇಳಿದ್ದರಂತೆ. ತೋರಿಸು ಎಂದರು. ಸಮಾರಂಭ ಮುಗಿಸಿಕೊಂಡು ಚಿತ್ರ ನೋಡಲು ಚಾಮುಂಡೇಶ್ವರಿ ಸ್ಟೂಡಿಯೋಗೆ ಅವರು ಬಂದದ್ದು ರಾತ್ರೆ 11 ಗಂಟೆಗೆ. ಸ್ವಲ್ಪ ಹೊತ್ತು ನೋಡಿ ಹೋಗಬಹುದೆಂದು ನಾನು ಭಾವಿಸಿದರೆ, ಪೂರ್ತಿ ಸಿನಿಮಾ ನೋಡಿದರು. ನಂತರ ಸ್ಟೂಡಿಯೋ ಆವರಣದಲ್ಲಿದ್ದ ಮರದ ಕಟ್ಟೆಯ ಬಳಿ ಕುಳಿತು ಬೆಳಗ್ಗಿನ ಜಾವ 3:30ರವರೆಗೂ ಚಿತ್ರವನ್ನು ಎಳೆಎಳೆಯಾಗಿ ವಿಶ್ಲೇಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬೆನ್ನು ತಟ್ಟಿದರು. ಅದಾಗಿ ಎರಡು ವಾರದೊಳಗೇ Illustrated Weekly ಯಲ್ಲಿ ಈ ಚಿತ್ರದ ಬಗ್ಗೆ ದೀರ್ಘ ಲೇಖನ ಬರೆದು ‘ಇಂತಹ ಚಿತ್ರ ತಾನು ಮಾಡಲಿಲ್ಲವಲ್ಲ ಎಂದು ಮತ್ಸರ ಬರುತ್ತದೆ’ – ಎಂದಿದ್ದರು. (ಪ್ರಕಾಶ್ ಝಾ ರ ‘ದಾಮುಲ್’ ನೋಡಿದ ನಂತರವೂ ಇಂತಹದ್ದೇ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು.) ಇದು ಅವರ ಪ್ರಾಮಾಣಿಕ ಅಭಿಪ್ರಾಯವಾಗಿತ್ತೇ ಗೊತ್ತಿಲ್ಲ. ಆದರೆ ಸದಾ ಯುವಕರನ್ನು ಉತ್ತೇಜಿಸುತ್ತಿದ್ದ ಮೃಣಾಲ್ ಸೆನ್ ರ ಈ ತರಹದ ಅತೀ ಉದಾರ ಹೊಗಳಿಕೆಯು ತರುಣ ಚಿತ್ರ ನಿರ್ದೇಶಕರಲ್ಲಿ ಚೈತನ್ಯ ತುಂಬುತ್ತದೆ ಎಂಬ ಕಾರಣದಿಂದ  ಹೇಳಿಕೆ ಕೊಟ್ಟಿರಬಹುದು ಎಂದು ಈಗಲೂ ನನಗನ್ನಿಸುತ್ತದೆ.

‘ಘಟಶ್ರಾದ್ಧ’ ಚಿತ್ರದ ಲೆನ್ಸಿಂಗ್, ಟ್ರಾನ್ಸಿಷನ್ಸ್ ಮೊದಲಾದ ತಾಂತ್ರಿಕ ಅಂಶಗಳ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಒಂದು ದೃಶ್ಯ ವಿವರ ಬಗ್ಗೆ ದೀರ್ಘವಾಗಿ ಚರ್ಚೆ ನಡೆಸಿದರು. ಗರ್ಭಪಾತದ ನಂತರ ಚಿಕ್ಕ ಹುಡುಗ ನಾಣಿಯೊಂದಿಗೆ ಯಮುನಕ್ಕ ಮನೆಗೆ ವಾಪಾಸ್ಸಾಗುತ್ತಿರುವಾಗ, ಶಾಸ್ತ್ರಿ, ಗಣೇಶ ಬಂದು ನಾಣಿಯನ್ನು ಎತ್ತಿಕೊಂಡೊಯ್ಯುತ್ತಾರೆ. ತನಗೆ ಬಹಿಷ್ಕಾರ ಹಾಕಲಾಗುವುದು ಎಂದು ತಿಳಿದ ಯಮುನಕ್ಕ ಗಟ್ಟಿಯಾಗಿ  ರೋಧಿಸುತ್ತಾ ಕುಸಿದು ಕುಳಿತುಕೊಳ್ಳುತ್ತಾಳೆ. ಮುಂದಿನ ದೃಶ್ಯದಲ್ಲಿ ಯಮುನಕ್ಕ ತಂದೆ ಅವಳಿಗೆ ‘ಘಟಶ್ರಾದ್ಧ’ ಕ್ರಿಯೆಯನ್ನು ವಿಧ್ಯುಕ್ತವಾಗಿ ಮಾಡುತ್ತಿರುವಾಗಲೂ ಅವಳ ಅಳು ಕೇಳಿಸುತ್ತಿರುವಂತೆ ಸಂಕಲನ ಮಾಡಿದ್ದೆವು. ಈ ಒವರ್ ಲಾಪಿಂಗ್ (overlapping) ನ್ನು ಬಹಳ ಮೆಚ್ಚಿ, ಅವರು ಅದು  ಎಷ್ಟೊಂದು  ಧ್ವನಿಗಳನ್ನು ಪಡೆಯುತ್ತದೆ ಎನ್ನುವುದರ ಬಗ್ಗೆ, ಅದರ ಅರ್ಥ ಬಾಹುಳ್ಯದ ಬಗ್ಗೆ ದೀರ್ಘವಾಗಿ ಆ ದಿನ ಮಾತನಾಡಿದ್ದರು .

1981ರಲ್ಲಿ ತೆರೆ ಕಂಡ ಅವರ ನಿರ್ದೇಶನದ ‘ಏಕ್ ದಿನ್ ಪ್ರತಿ ದಿನ್’ ಚಿತ್ರದಲ್ಲಿ ಒಂದು ದೃಶ್ಯವಿದೆ. ಕೆಲಸಕ್ಕೆ ಹೋದ ಮಗಳು ರಾತ್ರಿಯಾದರೂ ಬಾರದಿದ್ದಾಗ ಚಾಳ್‌ನ ಉಳಿದ ಮನೆಯವರು ಕೆಟ್ಟ ಕುತೂಹಲದಿಂದ ಈ ಘಟನಾವಳಿಗಳನ್ನು ಅವಲೋಕಿಸುತ್ತಿರುತ್ತಾರೆ. ಸರಿ ರಾತ್ರಿಯಲ್ಲಿ ಮಗಳು ವಾಪಸ್ಸಾದಾಗ ತನ್ನ ಮಾನ ಕಳೆದಳೆಂದು ತಾಯಿ ಬೈದಾಗ ಮಗಳು ಗಟ್ಟಿದನಿಯಲ್ಲಿ ರೋದಿಸುತ್ತಾಳೆ. ರಾತ್ರಿ ಹೊತ್ತು ಝಗಮಗಿಸುವ ಕಲ್ಕತ್ತಾ ನಗರದ ಮೇಲೆ ಆ ಅಳುವನ್ನ ಓವರ್ ಲ್ಯಾಪ್ ಮಾಡಲಾಗಿದೆ.  ಈ ತಂತ್ರಕ್ಕೆ ‘ಘಟಶ್ರಾದ್ಧ’ ಕಾರಣವಾಗಿದ್ದಿರ ಬಹುದೇ ಎಂಬ ಆಲೋಚನೆ ನನ್ನನ್ನು ಪುಳಕಿತನನ್ನಾಗಿಸುತ್ತಿದೆ.

ಕನ್ನಡ ಚಿತ್ರರಂಗಕ್ಕೆ ಅನ್ಯಾಯವಾಯಿತಲ್ಲ?

ಚಲನಚಿತ್ರಕ್ಕೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಸಂಸ್ಥೆಯೊಂದು ಎಲ್ಲ ದೇಶಗಳ ಚಿತ್ರರಂಗದ ಬಗ್ಗೆ ಸಾಕ್ಷಚಿತ್ರಗಳನ್ನು ಮಾಡಲು ಆಯಾ ದೇಶದ ಖ್ಯಾತ ನಿರ್ದೇಶಕರಿಗೆ ಆ ಜವಾಬ್ದಾರಿ ವಹಿಸಿತ್ತು. ಭಾರತೀಯ ಚಿತ್ರರಂಗದ ಬಗ್ಗೆ ಸಾಕ್ಷಚಿತ್ರ ಮಾಡುವ ಜವಾಬ್ದಾರಿಯನ್ನು ಮೃಣಾಲ್ ಸೇನ್‌ರಿಗೆ ಒಪ್ಪಿಸಲಾಯಿತು. ಆದರೆ ಆ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಒಂದಿನಿತೂ ಸೊಲ್ಲೇ ಇರಲಿಲ್ಲ.  ಕನ್ನಡದಲ್ಲಿ ತಯಾರಾದ ಕಲಾತ್ಮಕ ಚಿತ್ರಗಳ ಬಗ್ಗೆ ಸದಾ ಉಮೇದಿನಿಂದ ಮಾತನಾಡುತ್ತಿದ್ದ ಮೃಣಾಲ್ ಸೇನರು ಈ ಚಿತ್ರರಂಗವನ್ನು ಕಡೆಗಣಿಸಿದ್ದೇಕೆ ಎಂದು ಈಗಲೂ ಅರ್ಥವಾಗುತ್ತಿಲ್ಲ.

ಜಪಾನ್ ಚಿತ್ರರಂಗದ ಬಗ್ಗೆ ಚಿತ್ರ ನಿರ್ಮಿಸಿದ್ದು ಖ್ಯಾತ ಚಿತ್ರ ನಿರ್ದೇಶಕ ನಾಗೀಸಾ ಓಷಿಮಾ. ಆದರೆ ಆ ಸಾಕ್ಷಚಿತ್ರದಲ್ಲಿ ಅಕಿರಾ ಕುರೋಸಾವಾರ ಬಗ್ಗೆ ಒಂದು ಫೋಟೋ ಮಾತ್ರ ತೋರಿಸಿ ಮುಗಿಸಲಾಗಿತ್ತು. ಇದೊಂದು ಘೋರ ಅನ್ಯಾಯ. ಮೃಣಾಲ್ ಸೇನ್‌ರು ಮಾಡಿದ್ದು ಇದೇ ತರಹದ ಅನ್ಯಾಯ ಆಗಿತ್ತಲ್ಲವೇ?

 

‘ಶಲ್ ಐ ಬೈಟ್ ಯುವರ್ ಹ್ಯಾಂಡ್?’

ಗಂಭೀರ ಚಿತ್ರ ನಿರ್ದೇಶಕರು ಬಾಹ್ಯ ಜಗತ್ತಿನಲ್ಲೂ ಗಂಭೀರವಾಗಿರ ಬೇಕೆಂಬ ಅಲಿಖಿತ ತೀರ್ಮಾನಕ್ಕೆ ಮೃಣಾಲ್ ಸೆನ್‌ರು ಒಂದು ಅಪವಾದ. ಒಂದು ಸಾಕ್ಷ ಚಿತ್ರಕ್ಕಾಗಿ ಅವರ ಸಂದರ್ಶನಕ್ಕೆ ಹೋಗಿದ್ದೆ. ’ದಾದಾ, ಐ ವಾಂಟ್ ಎ ಬೈಟ್’ ಎಂದಾಗ ತಕ್ಷಣ ನನ್ನ ಕೈ ಹಿಡಿದೆಳೆದು ’ಟೆಲ್ ಮಿ, ಶಲ್ ಐ ಬೈಟ್ ಯುವರ್ ಹ್ಯಾಂಡ್?’ ಅಂದು ಹಾಸ್ಯ ಮಾಡಿದರು.  ಹದಿವಯಸ್ಸಿನ ಹುಡುಗರು ಮಾಡುವ ಈ ರೀತಿಯ ಪನ್ ಗಳನ್ನು ಮೃಣಾಲ್ ಸೆನ್‌ರು ಆಗಾಗ ಮಾಡುತ್ತಿದ್ದರೆನ್ನುವುದನ್ನು ಗಮನಿಸಿದರೆ ಲಘು ವಿನೋದ ಅವರ ಜಾಯಮಾನಕ್ಕೆ ಒಗ್ಗಿ ಹೋಗಿತ್ತು ಎನ್ನುವುದು ತಿಳಿಯುತ್ತದೆ.  ದೂರದರ್ಶನದ ರಾಷ್ಟ್ರೀಯ ಪ್ರಸಾರದಲ್ಲಿ ಆಯ್ದ ಕೆಲವು ಚಿತ್ರಗಳು ಕ್ಲಾಸಿಕ್ಸ್ ಸರಣಿಯಲ್ಲಿ ಬಿತ್ತರವಾಗುತ್ತಿತ್ತು. ಆಯ್ಕೆಯ ಮಾನದಂಡ ಆ ಚಿತ್ರಗಳ ಗುಣ ಮಟ್ಟ ಅಲ್ಲ. ಅವು 25 ವರ್ಷಗಳಿಗಿಂತ ಹಳೆಯದಾಗಿರಬೇಕು ಎನ್ನುವುದು. ’ ಆ ಮಾನದಂಡದಿಂದ ನಾನು 7 ಕ್ಲಾಸಿಕ್ ಚಿತ್ರಗಳನ್ನು ಮಾಡಿದ್ದೇನೆ ಎಂದು ಎಲ್ಲರೆದುರು ಹೇಳಿಕೊಳ್ಳುವುದರ ಮೂಲಕ ಆ ಕ್ಲಾಸಿಕ್ ಮಾನದಂಡವನ್ನೇ ಗೇಲಿ ಮಾಡುತ್ತಿದ್ದರು.

“Girish, I have come.” ಇನ್ನೆಲ್ಲಿ?

ಕಲ್ಕತ್ತಾ ಚಲನ ಚಿತ್ರೋತ್ಸವದ ಜೊತೆಜೊತೆಗೇ, ಅದರ ವಿಸ್ತೃತ ಭಾಗವಾಗಿ ಸಿನೆ ಸೆಂಟ್ರಲ್ ಚಿತ್ರೋತ್ಸವವೂ ನಡೆಯುತ್ತಿತ್ತು.  ನಾನು ಪ್ರತಿ ಬಾರಿ ಚಿತ್ರ ಮಾಡಿದಾಗಲೂ ಉದ್ಘಾಟನಾ ಚಿತ್ರವಾಗಿ ಸಿನೆ ಸೆಂಟ್ರಲ್ ನನ್ನ ಚಿತ್ರಗಳನ್ನೇ ಆಯ್ಕೆ ಮಾಡಿಮಾಡಿಕೊಳ್ಳುತ್ತಿತ್ತು. ಆ ಎಲ್ಲಾ ಪ್ರದರ್ಶನಕ್ಕೂ ತಪ್ಪದೇ ಹಾಜರಾಗುತ್ತಿದ್ದವರಲ್ಲಿ ಮೃಣಾಲ್ ಸೇನ್ ಪ್ರಮುಖರು. 2012ರಲ್ಲಿ ‘ಕೂರ್ಮಾವತಾರ’ ಚಿತ್ರ ಪ್ರದರ್ಶನಕ್ಕೂ ಬಂದಿದ್ದರು. ಚಿತ್ರದ ಅವಧಿ 2 ಗಂಟೆ 10 ನಿಮಿಷ ಎಂದು ಗೊತ್ತಾಗುತ್ತಲೇ ಸ್ವಲ್ಪ ಅಸಹನೆಯಿಂದಲೇ ‘ಅಷ್ಟು ದೀರ್ಘ ಚಿತ್ರ ಯಾಕೆ ಮಾಡುತ್ತೀಯ?’ ಎಂದು ಗದರಿದರು.  ಅದಕ್ಕೆ ನಾನು ಲಘು ಹಾಸ್ಯದಲ್ಲಿ ‘ಏನು ಮಾಡಲಿ ದಾದಾ, ಕೂರ್ಮ (ಆಮೆ) ಮಂದಗತಿಯಲ್ಲಿ ನಡೆಯುತ್ತದೆ’ ಎಂದೆ. ಸೇನ್ ಅವರು ಆ ಮಾತಿಗೆ ನಕ್ಕು ‘ನನಗೆ 90 ಆಗುತ್ತಾ ಬಂತು. ಆರೋಗ್ಯವೂ ಚೆನ್ನಾಗಿಲ್ಲ. 10 ನಿಮಿಷ ನೋಡಿ ಹೊರಟು ಹೋಗುತ್ತೇನೆ. ತಪ್ಪು ತಿಳಿಯಬೇಡ.’ ಎಂದರು. ಇಬ್ಬರು ಸಹಾಯಕರನ್ನು ಊರುಗೋಲಾಗಿಟ್ಟುಕೊಂಡು ಅವರು ಚಿತ್ರ ವೀಕ್ಷಣೆಗೆ ಬಂದದ್ದೇ ವಿಶೇಷ. 10 ನಿಮಿಷ ಕಳೆಯುತ್ತಿದ್ದಂತೆಯೇ, ನಾನು ಚಿತ್ರಮಂದಿರದ ಮುಖ್ಯದ್ವಾರದಲ್ಲಿ ಹೊರ ಹೋಗಲಿರುವ ಮೃಣಾಲ್ ಸೇನ್‌ರಿಗೆ ವಂದನೆ ಹೇಳಲು ಕಾಯುತ್ತಿದ್ದೆ. ಆದರೆ ಅವರು ಪೂರ್ಣ ಚಿತ್ರ ನೋಡಿಯೇ ಹೊರಬಂದದ್ದು.

ಚಿತ್ರ ಮುಗಿಯುತ್ತಿದ್ದಂತೆಯೇ ಹೊರಬಂದ ಕಲ್ಕತ್ತಾ ಚಿತ್ರ ರಸಿಕರು ನನ್ನನ್ನು ಸುತ್ತುವರೆದು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಿದ್ದಾಗ, ಸಹಾಯಕರ ಸಹಾಯದಿಂದ ನಡೆದು ಬಂದ ಮೃಣಾಲ್ ಸೇನ್, “Girish, I have come.” ಎಂದು ಹೇಳಿ ಎಂದಿನಂತೆ ಹೆಗಲ ಮೇಲೆ ಕೈ ಹಾಕಿ ಬರಸೆಳೆದು ಅಪ್ಪಿಕೊಂಡರು.

ನನ್ನ ಮುಂದಿನ ಚಿತ್ರ ತಯಾರಾಗಿ, ಅದು ಕಲ್ಕತ್ತಾದಲ್ಲಿ ಪ್ರದರ್ಶನಗೊಂಡಾಗ “Girish, I have come.” ಎಂದು ತಮ್ಮ ಬ್ಯಾರಿಟೋನ್ ಕಂಠದಲ್ಲಿ ಘೋಷಿಸುತ್ತಾ ನಡೆದು ಬರುವ ಶಾಶ್ವತ ಬಂಡಾಯಗಾರ ಮೃಣಾಲ್ ಸೇನ್ ಇರುವುದಿಲ್ಲ ಎಂದು ನೆನಪಾದಾಗ ಮನಸ್ಸು ಮುದುಡುತ್ತದೆ.

(ಬೆಂಗಳೂರಿನ ಸತ್ಯಜಿತ್ ರಾಯ್ ಚಿತ್ರಸಮಾಜ ಆಯೋಜಿಸಿದ್ದ “ಮೃಣಾಲ್ ಸೆನ್ ನೆನಪು” ಕಾರ್ಯಕ್ರಮದಲ್ಲಿ ಮಾಡಿದ ಭಾಷಣದ ವಿಸ್ತೃತ ಕನ್ನಡ ರೂಪ.)

*********************

 

 

 

Donate Janashakthi Media

Leave a Reply

Your email address will not be published. Required fields are marked *