ಶಾಂತವೇರಿ ಗೋಪಾಲಗೌಡರ ಹೆಸರಿನಲ್ಲಿ ಶ್ರೇಷ್ಠ ಕೃಷಿಕ-ಶ್ರೇಷ್ಠ ಶಾಸಕ ಪ್ರಶಸ್ತಿ: ಮುಖ್ಯಮಂತ್ರಿ

ಬೆಂಗಳೂರು: ಹಿರಿಯ ಮುತ್ಸದ್ದಿ ರಾಜಕಾರಣಿ ಹೋರಾಟಗಾರ ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವವನ್ನು ವರ್ಷವಿಡಿ ಆಚರಿಸುವುದಲ್ಲದೆ ಗೋಪಾಲ ಗೌಡರ ಹೆಸರಿನಲ್ಲಿ ಅತ್ಯಂತ ಶ್ರೇಷ್ಠ ಕೃಷಿಕ ಮತ್ತು ಶ್ರೇಷ್ಠ ಶಾಸಕ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಶಾಂತವೇರಿ ಗೋಪಾಲಗೌಡ ಸಮಾಜವಾದಿ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಅವರು ಮಾತನಾಡಿದರು. ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ ವಿಧಾನಸಭೆ, ವಿಧಾನಪರಿಷತ್‍ನಲ್ಲಿ ಶ್ರೇಷ್ಠ ಶಾಸಕ ಪ್ರಶಸ್ತಿ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದರು.

ಇಂದಿನಿಂದ ವರ್ಷವಿಡೀ ಗೋಪಾಲಗೌಡರ ಜನ್ಮ ಶತಮಾನೋತ್ಸವವನ್ನು ಆಚರಣೆ ಮಾಡಲಾಗುವುದು. ಗೋಪಾಲಗೌಡರ ಕೃತಿಗಳನ್ನು ಮುದ್ರಿಸಿ ಎಲ್ಲ ಗ್ರಂಥಾಲಯಕ್ಕೂ ತಲುಪಿಸಲಾಗುವುದು. ಭೂ ಸುಧಾರಣೆ ಕಾಯ್ದೆಗಾಗಿ ನಡೆದ ಹೋರಾಟದ ಬಗ್ಗೆ ಸರ್ಕಾರದ ವತಿಯಿಂದ ಸಂಶೋಧಿತ ಸಂಪುಟಗಳನ್ನು ಹೊರತಂದು ಜನ್ಮಶತಮಾನೋತ್ಸವ ಸಮಾರೋಪದಲ್ಲಿ ಬಿಡುಗಡೆ ಮಾಡುವ ಉದ್ದೇಶವಿದೆ ಎಂದರು.

ಗೋಪಾಲಗೌಡರು ಮುಖ್ಯಮಂತ್ರಿ ಸ್ಥಾನಕ್ಕಿಂತ ಮೀರಿದ ವ್ಯಕ್ತಿತ್ವವುಳ್ಳದವರು. ಜನರಿಗೆ ಬೇಕಾಗಿರುವ ವ್ಯವಸ್ಥೆ, ಜನಪರ ವೈಚಾರಿಕತೆಯೇ ಗೋಪಾಲಗೌಡರ ಆಸ್ತಿಯಾಗಿತ್ತು. ವೈಚಾರಿಕತೆ ಇರುವರೆಗೂ ನಮ್ಮ ನಡುವೆ ದೈಹಿಕವಾಗಿ ಇಲ್ಲದಿದ್ದರೂ ಅವರು ಜೀವಂತವಾಗಿರುತ್ತಾರೆ. ಗೋಪಾಲಗೌಡರ ಚಿಂತನೆ, ಪ್ರೇರಣೆ, ಭವಿಷ್ಯ ನಿರ್ಮಾಣದಲ್ಲಿ ಅವರ ಮಾರ್ಗದರ್ಶನ ಹಾಗೂ ದಾರಿದೀಪವಾಗಿದ್ದಾರೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಉಳುವವನಿಗೆ ಭೂಮಿ ಇರಬೇಕು ಎಂಬ ಹೋರಾಟ ನಡೆಯಿತು. ಅದರ ನಾಯಕತ್ವವನ್ನು ಗೋಪಾಲ ಗೌಡರು ವಹಿಸಿದ್ದರು. ಜಯಪ್ರಕಾಶ್ ನಾರಾಯಣ್ ಲೋಹಿಯ ವಿಚಾರಧಾರೆಗಳನ್ನು ಒಪ್ಪಿಕೊಂಡು ಗೇಣಿದಾರರ ಪರವಾಗಿ ದೊಡ್ಡ ಹೋರಾಟ ಮಾಡಿದರು. ಅಂತಹ ಹೋರಾಟ ಸಾಧ್ಯವಾಗಿತ್ತು. ಈಗ ಅದು ಅಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು.

ಅವರು ಕರ್ನಾಟಕ ರೈತರ ಬದುಕಿನಲ್ಲಿ ಹೆಜ್ಜೆ ಗುರುತನ್ನು ಬಿಟ್ಟುಹೋಗಿದ್ದಾರೆ. ಸದನದ ಒಳಗೆ ಅವರ ವಾಕ್ಚಾತುರ್ಯ ಒಳ್ಳೆಯದಿತ್ತು. ಇಡೀ ಬದುಕನ್ನ ಜನರಿಗಾಗಿಯೂ ಗಂಧದಂತೆ ತೇದಿದ್ದಾರೆ. ಕುವೆಂಪು, ಕಡಿದಾಳ ಮಂಜಪ್ಪ ಹೀಗೇ ಸಾಕಷ್ಟು ಜನ ಆ ಪ್ರದೇಶದಿಂದ ಬಂದಿದ್ದಾರೆ. ನಾನು ಆರಗಣ್ಣನಿಗೆ ಹೇಳಿದ್ದೆನೆ ಶೀಘ್ರವಾಗಿ ಆ ಸ್ಥಳಗಳಿಗೆ ಭೇಟಿ ನೀಡ್ತೇನೆ. ಅಲ್ಲಿಂದ ಪ್ರೇರಣೆ ಪಡೆದುಕೊಳ್ಳುತ್ತೆನೆ ಎಂದು ಶಾಂತವೇರಿ ಗೋಪಾಲಗೌಡರ ಊರಿನ ಬಗ್ಗೆಯೂ ಹೆಮ್ಮೆಯ ಮಾತುಗಳನ್ನಾಡಿದರು.

ಜನಸೇವೆಗಾಗಿ ತಮ್ಮ ಬದುಕನ್ನೇ ಗಂಧದ ಕೊರಡಿನಂತೆ ತೇಯ್ದಿದ್ದಾರೆ. ರೈತರ ಬದುಕಿನಲ್ಲಿ ತಮ್ಮದೇ ಆದ ಹೆಜ್ಜೆಗುರತನ್ನು ಬಿಟ್ಟುಹೋಗಿದ್ದಾರೆ. ಶ್ರೇಷ್ಠ ವಾಗ್ಮಿಯಾಗಿದ್ದು, ವಿಧಾನಸಭೆಯಲ್ಲಿ ಅವರು ಮಾಡಿರುವ ಭಾಷಣ ವಿಧಾನಸಭೆ ಇತಿಹಾಸದಲ್ಲೇ ಅಚ್ಚಳಿಯದೆ ಉಳಿಯಲಿದೆ.

ಶೀಘ್ರವಾಗೇ ಅವರ ಹುಟ್ಟೂರಿಗೆ ಭೇಟಿ ನೀಡುವುದಾಗಿ ಹೇಳಿದ ಬೊಮ್ಮಾಯಿ, ಗೋಪಾಲಗೌಡರ ಜನ್ಮಶತಮಾನೋತ್ಸವ ಉದ್ಘಾಟನೆ ಮಾಡಿದ್ದು ನನ್ನ ಪಾಲಿನ ಸೌಭಾಗ್ಯ. ನಮ್ಮ ತಂದೆಯ ಸಮಕಾಲೀನರಾದ ಗೌಡರು ಸಮಚಿಂತಕರು, ಸಮ ಹೋರಾಟಗಾರರು, ವೈಚಾರಿಕತೆಯಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದರು. ರಾಜಕಾರಣದಲ್ಲಿ ಅಪರೂಪದ ವ್ಯಕ್ತಿತ್ವವುಳ್ಳವರು. ಆದರ್ಶ ಬದುಕು ಬಾಳಿದವರು. ಈಗ ಆಸ್ತಿ ನೋಡಿ ರಾಜಕಾರಣಿಗಳನ್ನು ಗುರುತಿಸುವಂತಾಗಿದೆ. ಆಗ ಅವರ ವ್ಯಕ್ತಿತ್ವವನ್ನು ನೋಡಿ ಎಲ್ಲರೂ ಗುರುತಿಸುತ್ತಿದ್ದರು ಎಂದರು.

ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಶಾಂತವೇರಿ ಗೋಪಾಲಗೌಡರ ಸಮಾಜವಾದಿ ಪ್ರತಿಷ್ಠಾನದ ಅಧ್ಯಕ್ಷ ರಾಮಮನೋಹರ ಶಾಂತವೇರಿ ಹಾಗೂ ಅವರು ಕುಟುಂಬದ ವರ್ಗದವರು ಪಾಲ್ಗೊಂಡಿದ್ದರು.

Donate Janashakthi Media

Leave a Reply

Your email address will not be published. Required fields are marked *