ಸಂಚಲನ ಮೂಡಿಸಿದ ಶಾಮನೂರು ಶಿವಶಂಕರಪ್ಪ- ಬೊಮ್ಮಾಯಿ ರೆಸಾರ್ಟ್‌ ಭೇಟಿ

ಬೆಂಗಳೂರು: ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ಹೊಂದಾಣಿಕೆ ರಾಜಕಾರಣದಿಂದಾಗಿ ಕರ್ನಾಟಕದಲ್ಲಿ ಬಿಜೆಪಿಗೆ ಇಂದು ದುರ್ಗತಿ ಬಂದಿದೆ ಎಂದು ಬಿಜೆಪಿಯ ಇಬ್ಬರು ನಾಯಕರು ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ತಲ್ಲಣ ಮೂಡಿಸಿದೆ. ಈ ಮಧ್ಯೆ  ಮಂಗಳವಾರ ಕಾಂಗ್ರೆಸ್‌ ಹಿರಿಯ ನಾಯಕ ಶಾಮನೂರು ಶಿವಶಂಕ್ರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಹಲವು ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಮಂಗಳವಾರ ದಾವಣಗೆರೆಯಲ್ಲಿ ಬಿಜೆಪಿಯ ಕಾರ್ಯಕಾರಿಣಿ ಸಭೆ ನಡೆದಿತ್ತು. ಅದಾದ ಬಳಿಕ ಸಾಯಂಕಾಲ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು  ಶಾಮನೂರ್ ಶಿವಶಂಕರಪ್ಪ ಅವರನ್ನು ರೆಸಾರ್ಟ್ ವೊಂದರಲ್ಲಿ ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ನಿನ್ನೆ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿ ಪಕ್ಷ ಸೋಲಿಸಿದ್ದೀರಿ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ರಾಜ್ಯ ಹಾಗೂ ಜಿಲ್ಲಾ ನಾಯಕರ ವಿರುದ್ಧ ಕಾರ್ಯಕರ್ತರು ಕಿಡಿಕಾರಿದ್ದರು ಎಂದು ಬಿಜೆಪಿಯ ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಕಾಂಗ್ರೆಸ್ ಹಿರಿಯ ನಾಯಕನ ಜೊತೆ ಭೇಟಿ ಮಾತುಕತೆ ಇಂದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಮಾಜಿ ಸಿಎಂ ಬೊಮ್ಮಾಯಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ನಮ್ಮ ಹಿರಿಯರು ಮತ್ತು ದೂರದ ಸಂಬಂಧಿಯೂ ಹೌದು. ಹಲವಾರು ಬಾರಿ ನಾವು ಅವರು ನಮ್ಮ ಮನೆಯಲ್ಲಿ ಭೇಟಿ ಆಗಿದ್ದೇವೆ. ಇದರಲ್ಲಿ ರಾಜಕೀಯ ವಿಚಾರಗಳೇನು ಇಲ್ಲ, ಇದೊಂದು ಸೌಹಾರ್ದಯುತ ಭೇಟಿಯಷ್ಟೆ.

ಇದನ್ನೂ ಓದಿ:ರಾಜ್ಯ ಸರ್ಕಾರ ಲಿಂಗಾಯತ-ಒಕ್ಕಲಿಗರ ಮೀಸಲಾತಿಯನ್ನು ತಿರುಗಾಮುರಗಾ ಮಾಡಿದೆ: ಶಾಮನೂರು ಶಿವಶಂಕರಪ್ಪ

ನಾನು ಶಿಗ್ಗಾಂವಿಯಿಂದ ಬೆಂಗಳೂರಿಗೆ ಬರುವಾಗ ರಾತ್ರಿ‌ ಊಟ ಮಾಡಲು ಹೊಟೆಲ್ ಗೆ ಹೋದಾಗ ಅವರು ತಮ್ಮ ಮೊಮ್ಮಕ್ಕಳ ಬಗ್ಗೆ  ಹೊಸ ಸಂಬಂಧದ ಕುರಿತು ಚರ್ಚೆ ಮಾಡಲು ಸೇರಿದ್ದರು. ಆ ಸಂದರ್ಭದಲ್ಲಿ ಅವರ ಜೊತೆಗೆ ಹತ್ತು ನಿಮಿಷ ಉಭಯ ಕುಶಲೊಪರಿ ಮಾತನಾಡಿದ್ದು ಬಿಟ್ಟರೆ ಯಾವುದೇ ರಾಜಕೀಯ ವಿಷಯ ಪ್ರಸ್ತಾಪ ಆಗಿಲ್ಲ. ಸ್ನೇಹ ಸಂಬಂಧಗಳೇ ಬೇರೆ ರಾಜಕೀಯ ಸಂಬಂಧವೇ ಬೇರೆ ನಾನು ನನ್ನ ರಾಜಕೀಯ ನಿಲುವಿನಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಭರ್ಜರಿ ಗೆಲುವು, ಬಿಜೆಪಿಯ ಹೀನಾಯ ಸೋಲು ಕೇಸರಿ ಪಾಳಯದ ಅನೇಕ ನಾಯಕರಿಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ.  ಚುನಾವಣೆ ಮುಗಿದು ಫಲಿತಾಂಶ ಹೊರ ಬಿದ್ದು, ಒಂದು ತಿಂಗಳಾದ ಮೇಲೆ ಬಿಜೆಪಿ ಕೆಲ ನಾಯಕರು ಒಬ್ಬೊಬ್ಬರಾಗಿ ಧ್ವನಿ ಎತ್ತುತ್ತಿದ್ದಾರೆ. ಬಿಜೆಪಿ ಹಿರಿಯ ನಾಯಕರು ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಅರ್ಥದಲ್ಲಿ ಪ್ರತಾಪ ಸಿಂಹ ಹಾಗೂ ಸಿಟಿ ರವಿ ಹೇಳಿಕೆ ನೀಡಿರುವುದು ಕಮಲ ಪಾಳಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *