ಶಾಲೆಗಳಲ್ಲಿ ʻಸಂವಿಧಾನ ದಿನʼ ಆಚರಣೆ ನಿರ್ಧಾರ ಸ್ವಾಗತಾರ್ಹ; ಪರಿಣಾಮ ಕ್ರಮಕೈಗೊಳ್ಳಿ

ಬೆಂಗಳೂರು: ಸಂವಿಧಾನ ದಿನ(ನವೆಂಬರ್‌ 26)ವನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಆಚರಿಸುವ ಕುರಿತು ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶವು ಸ್ವಾಗತಾರ್ಹವಾಗಿದ್ದು, ಇಲಾಖೆಯು ಆಚರಣೆಯನ್ನು ಜಾರಿಗೊಳಿಸಲು ಪರಿಣಾಮ ಕ್ರಮಗಳನ್ನು ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ವಿನಂತಿಸಿಕೊಂಡಿದೆ.

ಸಮನ್ವಯ ವೇದಿಕೆ ಸಂಸ್ಥಾಪಕ ಮಹಾಪೋಷಕರಾದ ನಿರಂಜನಾರಾಧ್ಯ.ವಿ.ಪಿ. ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದು, ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಸಂವಿಧಾನ ಮೂಲ ತತ್ವಗಳನ್ನು ತಿಳಿದು ಅರ್ಥೈಸಿಕೊಂಡು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಜೊತೆಗೆ  ಭಾರತದ ಸಂವಿಧಾನವನ್ನು ಗೌರವಿಸಿ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲು ಈ ಬಗೆಯ ಪ್ರಯತ್ನಗಳು ತುಂಬಾ ಸಹಕಾರಿಯಾಗುತ್ತವೆ ಎಂದು ತಿಳಿಸಿದ್ದಾರೆ.

ʻಸಂವಿಧಾನ ದಿನʻ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಇಲಾಖೆಯು ಕೆಳಕಂಡ ಕೆಲವು ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

  1. ನವೆಂಬರ್ 26 ರ ಸಂವಿಧಾನ ದಿನವನ್ನು ಶಾಲೆಗಳಲ್ಲಿ ಆಚರಿಸುವ ಸಂದರ್ಭದಲ್ಲಿ, ಸಂವಿಧಾನದ ಮೂಲ ತಿರುಳಾದ ಪ್ರಸ್ತಾವನೆಯನ್ನು ಓದುವ ಜೊತೆಗೆ ಭಾರತದ ಪ್ರಜೆಯಾಗಿ ಅದನ್ನು ಪೂರ್ಣವಾಗಿ ಜಾರಿಗೊಳಿಸುವ ಪ್ರತಿಜ್ಞೆಯನ್ನು ಸಹ  ಮಾಡಿಸುವುದು.
  2. ಸಂವಿಧಾನದ ಪ್ರಸ್ತಾವನೆಯ ಜೊತೆಗೆ ನೇರವಾಗಿ ಮಕ್ಕಳಿಗೆ ಬದುಕಿಗೆ ಸಂಬಂಧಿಸಿದ ಪರಿಚ್ಛೇಧಗಳಾದ 15, 21,21ಎ, 24, 39 ಇ ಮತ್ತು ಎಫ್, 46 ಹಾಗು 47 ನ್ನು ಶಿಕ್ಷಕರು ಓದಿ ವಿವರಿಸಲು ಕ್ರಮವಹಿಸುವುದು.
  3. ಮಕ್ಕಳು ಸಂವಿಧಾನದ ಪ್ರಸ್ತಾವನೆಯನ್ನು ತಮ್ಮ ಕೈ ಬರಹದಲ್ಲಿಯೇ ಬರೆದುಕೊಳ್ಳಲು ಮತ್ತು ಅದನ್ನು ನವೆಂಬರ್ 26ರಂದು ಗಟ್ಟಿಯಾಗಿ ಓದಲು ಸಹಾಯಾವಾಗುವಂತೆ ಮನನ ಮಾಡಲು ಶಿಕ್ಷಕರು ಪೂರ್ವಭಾವಿಯಾಗಿ ಸಂವಿಧಾನದ ಪ್ರಸ್ತಾವನೆಯನ್ನು ತರಗತಿ ಕೋಣೆಗಳ ಕಪ್ಪು ಹಲಗೆಯ ಮೇಲೆ ದುಂಡಾಗಿ ಮತ್ತು ಸ್ಪಷ್ಟವಾಗಿ ಬರೆದು ಮಕ್ಕಳಿಗೆ ಅದನ್ನು ನಕಲು ಮಾಡುವಂತೆ ಕ್ರಮವಹಿಸಲು ತಿಳಿಸುವುದು.
  4. ತಾವೇ ಕೈಯಾರೆ ಬರೆದುಕೊಂಡ ಸಂವಿಧಾನದ ಪ್ರಸ್ತಾವನೆಯನ್ನು ಶಾಲೆ ಮುಗಿದ ನಂತರ ಮನೆಗೆ ಕೊಂಡೊಯ್ದು, ಕುಟುಂಬದ ಎಲ್ಲಾ ಸದಸ್ಯರ ಮುಂದೆ ಒಮ್ಮೆ ಜೋರಾಗಿ ಓದಿ ಹೇಳುವಂತೆ ಮಕ್ಕಳನ್ನು ಪ್ರೋತ್ಸಾಹಿಸುವುದು. ಇದು ಚಿಕ್ಕ ಮಕ್ಕಳಿಗೆ ಕಷ್ಟವೆನಿಸಿದರೆ, ಕನಿಷ್ಠ ದೊಡ್ಡ ಮಕ್ಕಳು ಮಾಡುವಂತೆ ಉತ್ತೇಜಿಸುವುದು.
  5. ಸಾಧ್ಯವಾಗುವ ಕುಟುಂಬಗಳಲ್ಲಿ, ಮಕ್ಕಳು ತಮ್ಮ ಕೈಬರಹದಲ್ಲಿ ಬರೆದುಕೊಂಡು ಓದಿದ ಸಂವಿಧಾನದ ಪ್ರಸ್ತಾವನೆಗೆ ಒಂದು ಫೋಟೊ ಫ್ರೇಂ ಹಾಕಿಸಿ ಪ್ರತಿ ಮನೆಯಲ್ಲೂ ಸಂವಿಧಾನದ ಪ್ರಸ್ತಾವನೆ ಫೋಟೋವನ್ನು ತೂಗು ಹಾಕಲು ಉತ್ತೇಜಿಸುವುದು.
  6. ಕಾರ್ಯಕ್ರಮದ ನಂತರವೂ ಮಕ್ಕಳು ಪ್ರತಿನಿತ್ಯ ಸಂವಿಧಾನದ ಪ್ರಸ್ತಾವನೆಯನ್ನು ಓದಿ ಅರ್ಥೈಸಿಕೊಳ್ಳಲು ಅನುವಾಗುವಂತೆ ಶಾಲೆಗಳ ಎಲ್ಲಾ ತರಗತಿ ಕೋಣೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಮುದ್ರಿತವಾದ ಹಾಗು ಎಲ್ಲರಿಗೂ ಸುಲಭವಾಗಿ ಕಾಣಬಹುದಾದ ರೀತಿಯಲ್ಲಿ ಒಂದು ಚಾರ್ಟ್ ಮಾದರಿಯ ಸಂವಿಧಾನದ ಪ್ರಸ್ತಾವನೆಯ ಫೋಟೋವನ್ನು ಒದಗಿಸಲು ಕ್ರಮವಹಿಸುವುದು.
  7. ಸಂವಿಧಾನದ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯಲು ಬಯಸುವ ಮಕ್ಕಳಿಗೆ ಅನುಕೂಲವಾಗುವಂತೆ ಸಂವಿಧಾನದ ದಿನಾಚರಣೆಯಂದು ಎಲ್ಲಾ ಶಾಲೆಗಳ ಗ್ರಂಥಾಲಯಕ್ಕೆ ಕನಿಷ್ಠ ಸಂವಿಧಾನದ ಐದು ಕನ್ನಡ ಪ್ರತಿಗಳನ್ನು ಒದಗಿಸಲು ಕ್ರಮ ವಹಿಸುವುದು.
  8. ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ರೂಪಿಸಿ ಜಾರಿಗೊಳಿಸುವುದನ್ನು ಖಾತರಿಪಡಿಸಿಕೊಂಡು ಅಗತ್ಯ ಮೇಲುಸ್ತುವಾರಿ ಮತ್ತು ಮಾರ್ಗದರ್ಶನಕ್ಕಾಗಿ ಶಿಕ್ಷಕೇತರ ಸಿಬ್ಬಂದಿಗಳಾದ ಶಿಕ್ಷಣ ಸಂಯೋಜಕರು, ಸಿಆರ್ಪಿ, ಬಿಆರ್ಪಿ, ಬಿಇಒ, ಬಿಆರ್ಸಿ, ಉಪನಿರ್ದೇಶಕರು, ಡಯಟ್‌ ನ ಮತ್ತು ಸಿಟಿಇ ಯ ಎಲ್ಲಾ ಬೋಧಕ ಸಿಬ್ಬಂದಿ ಹಾಗು ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳನ್ನು ಅಂದು ಶಾಲೆಗಳಿಗೆ ನಿಯೋಜಿಸಲು ಕ್ರಮವಹಿಸುವುದು.

ಮೇಲಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ನವೆಂಬರ್ 26ರ ಸಂವಿಧಾನ ದಿನಾಚರಣೆಯನ್ನು ಶಾಲೆಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ/ ಶಿಕ್ಷಣ ಇಲಾಖೆ ಎಲ್ಲಾ ಅಗತ್ಯ  ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಒತ್ತಾಯಿಸಿದೆ.

Donate Janashakthi Media

Leave a Reply

Your email address will not be published. Required fields are marked *