ರಾಜ್ಯದ ದುಡಿಯುವ ವರ್ಗದ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳತ್ತ ಒಂದು ನೋಟ

ಕೆ. ಮಹಾಂತೇಶ್

ರಾಜ್ಯದ ದುಡಿಯುವ ವರ್ಗದ ಬಲ

ಆವರ್ತಕ ಕಾರ್ಮಿಕ ಬಲದ ಸಮೀಕ್ಷೆ 2018-19 ರ ವಾರ್ಷಿಕ ವರದಿಯಂತೆ ರಾಜ್ಯದಲ್ಲಿ ಕಾರ್ಮಿಕ ಬಲದ ಭಾಗವಹಿಸಿಕೆ (LFPR) ದರವು 51.2 ಶೇಕಡವಾಗಿದೆ. ಅಂದರೆ ಉದ್ಯೋಗ ಮಾಡುವ ವಯೋಮಾನದ 15 ವರ್ಷ ವಯಸ್ಸಿನ ಮೇಲ್ಪಟ್ಟ ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರು ಉದ್ಯೋಗ ಮಾಡುತ್ತಾ ಅಥವಾ ಅರೆಸುತ್ತಾ ಸಕ್ರಿಯರಾಗಿದ್ದಾರೆ. ಇದು ಗ್ರಾಮೀಣ ಪ್ರದೇಶದಲ್ಲಿ 52.5 ರಷ್ಟಿದ್ದರೆ, ನಗರ ಪ್ರದೇಶದಲ್ಲಿ 49.1 ರಷ್ಟಿದೆ. ಮಹಿಳೆಯರ ಪ್ರಮಾಣ ನಗರದಲ್ಲಿ 20.5 ಮತ್ತು ಗ್ರಾಮೀಣದಲ್ಲಿ 27.6 ಹಾಗೂ ಒಟ್ಟಾರೆ 24.9 ರಷ್ಟಿದೆ.

ಕಾರ್ಮಿಕ ಜನಸಂಖ್ಯೆ ಪ್ರಮಾಣ (WPR) ಒಟ್ಟಾರೆ 49.3 ನಗರದಲ್ಲಿ 46.5 ಮತ್ತು ಗ್ರಾಮೀಣದಲ್ಲಿ 51.1 ಶೇಕಡವಾಗಿದೆ. ಅಂದರೆ ಪ್ರತಿ ಸಾವಿರ ಜನರಲ್ಲಿ 493 ಜನ ಉದ್ಯೋಗ ಹೊಂದಿದ್ದಾರೆ. ಒಟ್ಟಾರೆ ಪ್ರತಿ ಸಾವಿರ ಮಹಿಳೆಯರಲ್ಲಿ 242 ಮಹಿಳೆಯರು ಮಾತ್ರ ಉದ್ಯೋಗ ಹೊಂದಿದ್ದರೆ, ಗ್ರಾಮೀಣ ಪ್ರದೇಶದಲ್ಲಿ 272 ಮತ್ತು ನಗರ ಪ್ರದೇಶಗಳಲ್ಲಿ 193 ಮಹಿಳೆಯರು ಉದ್ಯೋಗ ಹೊಂದಿದ್ದಾರೆ.

ಜನರು ತೊಡಗಿಕೊಂಡಿರುವ ಸಾಮಾನ್ಯ ಪ್ರಧಾನ ಚಟುವಟಿಕೆ ಮತ್ತು ಅಂಗಚಟುವಟಿಕೆ ಆಧಾರದಂತೆ ಉದ್ಯೋಗ ಸ್ಥಿತಿ ಆಧಾರಿತ ಪ್ರತಿ ನೂರು ಕಾರ್ಮಿಕರಲ್ಲಿ 46 ಸ್ವಯಂ ಉದ್ಯೋಗಿಗಳು, 27 ಕೂಲಿ ವೇತನ ಉದ್ಯೋಗಿಗಳು ಮತ್ತು 27 ಸಾಮಾನ್ಯ ಉದ್ಯೋಗಿಗಳಾಗಿದ್ದಾರೆ.

ಕರ್ನಾಟಕದ ಆರ್ಥಿಕ ಪರಿಸ್ಥಿತಿ:

ಕರ್ನಾಟಕವು ಹಿಂದಿನ ವರ್ಷಗಳಲ್ಲಿ ಉತ್ತಮ ಆರ್ಥಿಕ ಪ್ರಗತಿಯನ್ನು ಸಾಧಿಸುತ್ತಲೇ ಬರುವ ಮೂಲಕ ಭಾರತದ ಮೊದಲ ಐದು ರಾಜ್ಯಗಳ ಸಾಲಿನಲ್ಲಿ ಒಂದಾಗಿದೆ. ಈ ಸಾಧನೆಗೆ ಪ್ರಮುಖ ಕಾರಣ ರಾಜ್ಯದಲ್ಲಿ ಐಟಿ ವಲಯ ಮತ್ತು ಇತರೆ ತಂತ್ರಜ್ಞಾನಾಧಾರಿತ ಕ್ಷೇತ್ರಗಳ ಕೊಡುಗೆಯಾಗಿರುತ್ತದೆ. ಕರ್ನಾಟಕವು ದೇಶದಲ್ಲಿರುವ ಸಂಘಟಿತ ಉದ್ಯೋಗಗಳ ಉತ್ಪಾದನೆ ಪೈಕಿ ಶೇಕಡ 10 ಉದ್ಯೋಗಗಳ ಪಾಲನ್ನು ಹೊಂದಿರುತ್ತದೆ.

2021-22ನೇ ಸಾಲಿನಲ್ಲಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಕೃಷಿ ಕ್ಷೇತ್ರದಿಂದ ರೂ.2.57 ಲಕ್ಷ ಕೋಟಿಗಳು, ಕೈಗಾರಿಕೆಯಿಂದ ರೂ.3.61 ಲಕ್ಷ ಕೋಟಿಗಳು, ಸೇವೆಗಳ ಕ್ಷೇತ್ರದಿಂದ ರೂ.12.06 ಲಕ್ಷ ಕೋಟಿಗಳ ಕೊಡುಗೆಯಿಂದ ರಾಜ್ಯದ ಒಟ್ಟು ಆಂತರಿಕ ಮಾಲ್ಯವರ್ಧನೆ (ಜಿಎಸ್‌ವಿಎ)ರೂ.18.24 ಲಕ್ಷ ಕೋಟಿಗಳಾಗಿರುತ್ತದೆ. 2020-21ನೇ ಸಾಲಿನ ಕೋವಿಡ್-19 ಸಾಂಕ್ರಾಮಿಕದ ಕುಸಿತದಿಂದಾಗಿ ರೂ.17.31 ಲಕ್ಷ ಕೋಟಿ ಇದ್ದ ಅರ್ಥವ್ಯವಸ್ಥೆಯು 2021-22ನೇ ಸಾಲಿನಲ್ಲಿ ಶೇಕಡ 18.4 ರಷ್ಟು ಬೆಳವಣಿಗೆಯೊಂದಿಗೆ ರೂ.20.49 ಲಕ್ಷ ಕೋಟಿಗಳಾಗಿರುತ್ತದೆ. 2019-20 ರಲ್ಲಿ ರೂ 16.15 ಲಕ್ಷ ಕೋಟಿಯಿದ್ದು ಕೋವಿಡ್-19 ಸಾಂಕ್ರಾಮಿಕದ ಲಾಕ್‌ಡೌನ್ ನಿಬಂಧನೆಗಳಿಂದಾಗಿ 2020-21 ನೇ ಸಾಲಿನಲ್ಲಿ ಶೇಕಡ 7.2 ರಷ್ಟು ಬೆಳವಣಿಗೆಯನ್ನು ಕಂಡಿದೆ.

2016-17 ರಲ್ಲಿ 13.3 ಶೇಕಡವಾರು ಬೆಳೆವಣಿಗೆ ದರ ಸಾಧಿಸಿದ್ದ ಸ್ಥಿರ ಬೆಲೆಗಳ ಆಧಾರಿತ ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನವು (GSDP) ಆನಂತರ ಪ್ರತಿ ವರ್ಷವು ಇಳಿಮುಖವಾಗಿದೆ. 2020-21 ರಲ್ಲಿ ಭಾರತ ಸರ್ಕಾರದ ಮುನ್ಸೂಚನ ಅಂದಾಜಿನಂತೆ -2.6 ಶೇಕಡವಾರು ಋಣಾತ್ಮಕವಾಗಿದೆ. ರಾಷ್ಟ್ರೀಯ ಆಂತರಿಕ ಉತ್ಪನ್ನ ಬೆಳೆವಣಿಗೆ ದರಕ್ಕಿಂತ ಸದಾ ಹೆಚ್ಚಿರುತ್ತಿದ್ದ ರಾಜ್ಯದ ಆಂತರಿಕ ಉತ್ಪನ್ನ ದರವು ಕೋವಿಡ್ ಲಾಕ್ಡೌನ್ ಕಾಲದಲ್ಲೂ ರಾಷ್ಟ್ರೀಯ ಉತ್ಪನ್ನ ಬೆಳವಣಿಗೆ ದರ (-7.7) ಕುಸಿದಿರುವಷ್ಟು ಪ್ರಮಾಣದಲ್ಲಿ ಕುಸಿತ ಕಂಡಿಲ್ಲ. ಆದರೆ ಪ್ರಥಮ ಬಾರಿಗೆ ಋಣಾತ್ಮಕ ಬೆಳವಣಿಗೆ ಕಂಡಿದೆ.

ಅರ್ಥ ವ್ಯವಸ್ಥೆಯ ಸಂಯೋಜನೆ

ಕೋವಿಡ್-19 ಸಾಂಕ್ರಾಮಿಕದ ಪೂರ್ವದಲ್ಲಿ ಅಂದರೇ 2019-20ನೇ ಸಾಲಿನಲ್ಲಿ ಸೇವಾವಲಯವು ಶೇಕಡ 66.3ರಷ್ಟು, ಕೈಗಾರಿಕಾ ವಲಯ ಶೇಕಡ 21.3 ರಷ್ಟು ಮತ್ತು ಕೃಷಿ ವಲಯವು ಶೇಕಡ 12.3ರಷ್ಟು ಕೊಡುಗೆಯನ್ನು ನೀಡಿರುತ್ತದೆ. ಕೋವಿಡ್-19 ಸಾಂಕ್ರಾಮಿಕದಿಂದಾಗಿ ಹೆಚ್ಚಿನ ವ್ಯತರಿಕ್ತ ಪರಿಣಾಮವನ್ನು ಕೈಗಾರಿಕಾ ವಲಯದ ಮೇಲೆ ಆಗಿರುತ್ತದೆ. 2020-21ನೇ ಸಾಲಿನಲ್ಲಿ ಕೈಗಾರಿಕಾ ವಲಯದ ಪಾಲು ಶೇಕಡ 19.4ಕ್ಕೆ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಸೇವಾ ವಲಯದ ಪಾಲು ಶೇಕಡ 66.3 ಮತ್ತು ಕೃಷಿ ವಲಯದ ಪಾಲು ಶೇಕಡ 14.3ಕ್ಕೆ ಏರಿಕೆಯನ್ನು ಕಂಡಿದೆ.

ವ್ಯಂಗ್ಯಚಿತ್ರ ಕೃಪೆ : ಸತೀಶ್‌ ಆಚಾರ್ಯ

ಉದ್ಯೋಗದ ಹೊಸ ಸ್ವರೂಪ: (Gig Economy)

ಡಿಜಿಟಲ್ ಲೇಬರ್ ಪ್ಲಾಟ್‌ಫಾರ್ಮ್ (ಗಿಗ್ ಆರ್ಥಿಕತೆ) ಇತ್ತೀಚಿನ ಅವಧಿಯಲ್ಲಿ ರೂಪಾಂತರವಾಗುತ್ತಿರುವ ಅತ್ಯಂತ ಮಹತ್ವದ ಉದ್ಯೋಗ ಸ್ವರೂಪಗಳಲ್ಲಿ ಒಂದೆಂದರೆ, ‘ಡಿಜಿಟಲ್ ಲೇಬರ್ ಪ್ಲಾಟ್‌ಫಾರ್ಮ್’ಗಳ ಬೆಳವಣಿಗೆ. ಇದರಲ್ಲಿ ಎರಡು ರೀತಿಗಳಿವೆ: ಒಂದು ವೆಬ್ ಆಧಾರಿತ (“ಕ್ರೌಡ್ ವರ್ಕ್”), ಮತ್ತೊಂದು ಸ್ಥಳ-ಆಧಾರಿತ ಅಪ್ಲಿಕೇಶನ್ಸ್ (ಆಪ್ಸ್). ಇಲ್ಲಿ ಕೆಲಸದ ವಿಧಾನಗಳು ಹಿಂದಿನಿಂದ ಬಂದ ಹಲವಾರು ಕೆಲಸದ ವಿಧಾನಗಳ ರೀತಿಯಲ್ಲೇ ಕಾಣುತ್ತವೆ. ಅಂದರೆ ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ವ್ಯಕ್ತಿಗಳಿಗೆ ಕೆಲಸವನ್ನು ಹಂಚುವುದು. ವಸತಿ, ಸಾರಿಗೆ, ಎಲ್ಲಾ ರೀತಿಯ ವಸ್ತುಗಳ ಡೆಲಿವರಿ, ಗೃಹ ಕೆಲಸಗಳು ಮುಂತಾದ ಕೆಲಸಗಳನ್ನು ಇದು ಒಳಗೊಂಡಿದೆ. ಬೆಂಗಳೂರಿನಲ್ಲಿ ಇದನ್ನು ವ್ಯಾಪಕವಾಗಿ ಬಹಿರಂಗವಾಗಿ ಕಾಣಬಹುದು. ಅಮೇಜಾನ್, ಫ್ಲಿಪ್‌ಕಾರ್ಟ್, ಊಬರ್, ಓಲಾ, ಸ್ವಿಗ್ಗಿ, ಜೊಮಾಟೊ, ಬಿಗ್ ಬ್ಯಾಸ್ಕೆಟ್, ಹೀಗೆ ನೂರಾರು ಕಂಪನಿಗಳಲ್ಲಿ ಕಾರ್ಮಿಕರು ಗಂಟೆಗಳ ಆಧಾರದಲ್ಲಿ, ಡೆಲಿವರಿಯ ಆಧಾರದಲ್ಲಿ, ಟ್ರಿಪ್‌ಗಳ ಆಧಾರದಲ್ಲಿ ಕೆಲಸ ಮಾಡುವುದನ್ನು ಕಾಣಬಹುದು. ಈ ಆಪ್ ಆಧಾರಿತ ಕೆಲಸಗಳು ಕಾರ್ಮಿಕರ ಕೆಲಸದ ಸ್ವರೂಪವನ್ನೇ ಬದಲಾಯಿಸಿಬಿಟ್ಟಿದೆ.

ಆರ್ಥಿಕ ಬೆಳವಣಿಗೆಯ ಮೇಲೆ ಕೋವಿಡ್-19ರ ಪರಿಣಾಮ

2021-22ನೇ ಸಾಲಿನ ಮುನ್ಸೂಚನಾ ಅಂದಾಜುಗಳಂತೆ ಕರ್ನಾಟಕ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ ಪ್ರಸಕ್ತ ಬೆಲೆಗಳಲ್ಲಿ 2020-21ನೇ ಸಾಲಿನ ರೂ. 17.31 ಲಕ್ಷ ಕೋಟಿಗಳಿಗೆ ಹೋಲಿಸಿದರೆ, 2021-22ನೇ ಸಾಲಿಗೆ ರೂ.20.5 ಲಕ್ಷ ಕೋಟಿಗಳಾಗುವ ನಿರೀಕ್ಷೆಯಿದೆ. ಇದು ಭಾರತದ ಒಟ್ಟು ಆಂತರಿಕ ಉತ್ಪನ್ನವಾದ ರೂ. 232.15 ಲಕ್ಷ ಕೋಟಿಗೆ ಶೇಕಡ 8.8ರಷ್ಟು ಕೊಡುಗೆಯನ್ನು ನೀಡಿರುತ್ತದೆ. 2020-21ನೇ ಸಾಲಿನಲ್ಲಿ ಕೋವಿಡ್-19 ಸಾಂಕ್ರಾಮಿಕ ಪೀಡಿತವಾಗಿದ್ದ ಸಂದರ್ಭದಲ್ಲಿ ರಾಜ್ಯವು ಶೇಕಡ 7.2 ರಷ್ಟು ದರದಲ್ಲಿ ಬೆಳವಣಿಗೆಯನ್ನು ಪ್ರಸಕ್ತ ಬೆಲೆಗಳಲ್ಲಿ ಸಾಧಿಸಿದೆ ಎನ್ನುತ್ತಿದೆ ಕರ್ನಾಟಕ ಆರ್ಥೀಕ ಸಮೀಕ್ಷಾ ವರದಿ. ಆದರೆ ಇದೇ ಸಂದರ್ಭದಲ್ಲಿ ಭಾರತವು ಮುನ್ಸೂಚನಾ ಅಂದಾಜುಗಳಂತೆ ಶೇಕಡ (-)3ರಷ್ಟು ಬೆಳವಣಿಗೆಯನ್ನು ಸಾಧಿಸಿದೆ ಎನ್ನುವುದರತ್ತ ಅದು ಬೆರಳು ಮಾಡಿ ತೋರಿಸಿದೆ.

ಕೊವೀಡ್: ಸಂಘಟಿತ ಕಾರ್ಮಿಕ ವರ್ಗದ ಮೇಲೆ ಪರಿಣಾಮ

ಕಾರ್ಮಿಕ ಇಲಾಖೆಯ 2018ರ ಸಾಲಿನ ವಾರ್ಷಿಕ ವರದಿಯಂತೆ 2018 ಡಿಸೆಂಬರ್‌ಗೆ ರಾಜ್ಯದಲ್ಲಿ ನೋಂದಣಿಯಾಗಿರುವ ಕಾರ್ಖಾನೆಗಳ ಸಂಖ್ಯೆ 17,390. ಇವುಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಖ್ಯೆ 18,25,865 ರಷ್ಟಿತ್ತು. 2020-21ರ ಸಾಲಿನ ಕರ್ನಾಟಕ ಆರ್ಥಿಕ ಸಮೀಕ್ಷೆಯ ವರದಿಯಲ್ಲಿ ಪ್ರಕಟಿಸಿರುವಂತೆ ರಾಜ್ಯದಲ್ಲಿ ನೋಂದಾಯಿತ ಕಾರ್ಖಾನೆಗಳ ಸಂಖ್ಯೆ 16,991. ಇವುಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಖ್ಯೆ 16,92,494 ಇದೆ ಎಂದು ಹೇಳುತ್ತಿದೆ. 2019ರಲ್ಲಿನ ಆರ್ಥಿಕ ಹಿಂಜರಿತ ಮತ್ತು ಕೋವಿಡ್‌ನಿಂದ ಹಲವಾರು ಕೈಗಾರಿಕೆಗಳು ಮುಚ್ಚಲ್ಪಟ್ಟಿರುವುದು ಮತ್ತು ಒಂದುವರೆ ಲಕ್ಷಕ್ಕಿಂತ ಹೆಚ್ಚು ಕೈಗಾರಿಕಾ ಕಾರ್ಮಿಕರು ಕೆಲಸವನ್ನು ಕಳೆದು ಕೊಂಡಿರುವುದನ್ನು ಸೂಚಿಸುತ್ತದೆ. ಅದರೆ 5,096 ಬಾಯ್ಲರ್‌ಗಳ ಸಂಖ್ಯೆ ರಾಜ್ಯದಲ್ಲಿ 5,264 ಕ್ಕೆ ಏರಿಕೆಯಾಗಿದೆ. ಇದು ಕೋವಿಡ್ ನಂತರ ವೈದ್ಯಕೀಯ ಸಂಬಂಧಿತ ಕೈಗಾರಿಕೆಗಳ ಸಂಖ್ಯೆ ಹೆಚ್ಚಳಗೊಂಡಿರುವುದು ಗಮನಿಸಬಹುದಾಗಿದೆ. ಇದರ ಬಹುಪಾಲು ಬೆಂಗಳೂರಿನದ್ದು.

ಕೋವಿಡ್ ನಂತರ ಕಾರ್ಮಿಕ ಕಾನೂನುಗಳ ಉಲ್ಲಂಘನೆ ನಿರಂತರವಾಗಿ ನಡೆದಿದೆ. 2020 ಕೋವಿಡ್ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯಲ್ಲಿ ಲೇ-ಆಫ್, ರಿಟ್ರೆಂಚ್‌ಮೆಂಟ್, ವಿಆರ್‌ಎಸ್, ಸೇವೆಯಿಂದ ವಜಾ, ಕ್ಲೋಸರ್ ಮುಂತಾದ ಕಾರಣಕ್ಕೆ ಸುಮಾರು 5500 ಅರ್ಜಿಗಳು 2020 ಏಪ್ರಿಲ್ ನಿಂದ ಆಗಸ್ಟ್ ಅವಧಿಯಲ್ಲಿ ಸಲ್ಲಿಕೆಯಾಗಿವೆ. ಈ ಅರ್ಜಿಗಳ ಇತ್ಯರ್ಥಕ್ಕೆ ಕಾರ್ಯಪಡೆ ರಚಿಸಿದರು ಪ್ರಯೋಜನವಾಗಲಿಲ್ಲ. ಕಾರ್ಮಿಕರು ಸರಿಯಾದ ಪರಿಹಾರವಿಲ್ಲದೆ ಉದ್ಯೋಗಗಳನ್ನು ಕಳೆದುಕೊಳ್ಳುವಂತಾಗಿದೆ. ಅನೇಕ ಮಾಲೀಕರು ವೇತನ ಒಪ್ಪಂದಗಳ ಉಲ್ಲಂಘನೆ, ಕಾರ್ಮಿಕರ ವೇತನ ಕಡಿತ ಮುಂತಾದ ಕ್ರಮಗಳನ್ನು ಕೈಗೊಂಡರು ಕಾರ್ಮಿಕ ಇಲಾಖೆ ಯಾವುದೇ ಕ್ರಮಗಳನ್ನು ವಹಿಸಿಲ್ಲ. ಕೇಂದ್ರ ಸರ್ಕಾರ ರೂಪಿಸಿರುವ ನೂತನ ಸಂಹಿತೆಗಳ ಜಾರಿಯ ಕೆಲಸದಲ್ಲಿ ಕಾರ್ಮಿಕ ಇಲಾಖೆ ಮೂಲಕ ರಾಜ್ಯ ಸರ್ಕಾರ ತೊಡಗಿದೆ. ವಿವಿಧ ಕಾರ್ಮಿಕ ಕಾಯ್ದೆಗಳಡಿ ರಾಜ್ಯದಲ್ಲಿ ನಡೆಸಲಾದ ಒಟ್ಟು ತಪಾಸಣೆಯ ಸಂಖ್ಯೆ 5,838 ಆಗಿದೆ. ಹೂಡಲಾದ ಮೊಕದ್ದಮೆಗಳ ಸಂಖ್ಯೆ ಕೇವಲ 885 ಆಗಿದೆ. ವಿಲೇವಾರಿ ಮಾಡಲಾದ 545 ಮೊಕದ್ದಮೆಗಳಿಂದ ರೂ.13,93,395 ದಂಡದ ಮೊತ್ತವಾಗಿ ಸಂಗ್ರಹವಾಗಿದೆ. ಅಂದರೆ ನಡೆಸಲಾದ ತಪಾಸಣೆ ಹೆಚ್ಚಿದ್ದರೂ ಹೂಡಲಾದ ಮೊಕದ್ದಮೆಗಳ ಸಂಖ್ಯೆ ಕಡಿಮೆ ಇರುವುದು ಕಾರ್ಮಿಕ ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.

ಕೋವಿಡ್ 19: ಅಸಂಘಟಿತ/ವಲಸೆ ಕಾರ್ಮಿಕರು ಅನುಭವಿಸಿದ ಸಂಕಟಗಳು

ಈ ಅವಧಿಯಲ್ಲಿ ತಲೆದೋರಿದ ಕೋವಿಡ್-19 ಅತ್ಯಂತ ಆಘಾತಕಾರಿ ರೊಗವು ದೇಶಾದ್ಯಂತ ಮತ್ತು ರಾಜ್ಯದಲ್ಲಿ ಹಾಗೂ ದೇಶ ವಿದೇಶಗಳಲ್ಲಿ ಲಕ್ಷ ಲಕ್ಷಗಟ್ಟಲೆ ಅಮಾಯಕರನ್ನು ಅದು ಬಲಿ ಪಡೆಯಿತು. ಈ ಅವಧಿಯಲ್ಲಿ ಲಕ್ಷಾಂತರ ಕಾರ್ಮಿಕರು ಅತಿ ಹೆಚ್ಚಿನ ಕಷ್ಟ ನಷ್ಟಗಳಿಗೆ ಒಳಗಾದರು. ಅದರಲ್ಲೂ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಸಂಖ್ಯೆಯ ವಲಸೆ ಕಾರ್ಮಿಕರು ಸಾವಿರಾರು ಕಿಮೀ ಭಯ ಮತ್ತು ಆತಂಕದಿಂದ ನಡೆದೇ ತಮ್ಮ ಊರುಗಳಿಗೆ ತೆರಳಿದರು.

ಕೊವೀಡ್ 19 ಅವಕಾಶವನ್ನು ರಾಜ್ಯದ ಆಡಳಿತರೂಢ ಬಿಜೆಪಿ ಸರ್ಕಾರ ಪರಿಹಾರ ಕಾರ್ಯ ಹೆಸರಲ್ಲಿ ವಿಶೇಷವಾಗಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಸಾವಿರಾರು ಕೋಟಿ ಹಣವನ್ನು ಮನಬಂದಂತೆ ಖರ್ಚು ಮಾಡುತ್ತಾ ವ್ಯಾಪಕವಾದ ಭ್ರಷ್ಟಚಾರ ನಡೆಸಿತು, ಇದರ ವಿರುದ್ದ ವಿಶಾಲವಾದ ಕಟ್ಟಡ ಕಾರ್ಮಿಕ ಚಳವಳಿಯನ್ನು ನಾವು ಸಂಘಟಿಸಿ ಭ್ರಷ್ಟ ಸರ್ಕಾರ ಹಾಗೂ ಕಾರ್ಮಿಕ ಸಚಿವರು ಹಾಗೂ ಇಲಾಖೆಯ ಭ್ರಷ್ಟಚಾರವನ್ನು ಬಯಲಿಗೆಳೆಯುವ ಪ್ರಯತ್ನವನ್ನು ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕ ಫೆಡರೇಷನ್ ಅತ್ಯಂತ ಪರಿಣಾಮಕಾರಿಯಾಗಿ ಸಂಘಟಿತ್ತು.

ಚಳುವಳಿಯಿಂದಾಗಿ ನೌಕರರು ಪಡೆದಿರುವ ಸೌಲಭ್ಯಗಳು, ಗೌರವಧನ ಹೆಚ್ಚಳದಂತಹ ಸಾಧನೆಗಳಿಗೆ ಕಾರಣವಾದ ಸ್ಕೀಂ ನೌಕರರ ಚಳುವಳಿ ಮುರಿಯಲು ಒಂದೆಡೆ ಟ್ರಸ್ಟ್ ಹೆಸರಿನಲ್ಲಿ ಅಂಗನವಾಡಿ ನೌಕರರನ್ನು ಸಂಘಟಿಸುವ ಮತ್ತೊಂದೆಡೆ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಇಡೀ ಯೋಜನೆಯನ್ನೇ ಇಲ್ಲದಾಗಿಸುವ ಯತ್ನ ನಡೆದಿದೆ. ಈ ಸವಾಲನ್ನು ನಮ್ಮ ಅಂಗನವಾಡಿ ನೌಕರರ ಫೆಡರೇಷನ್ ಪರಿಣಾಮಕಾರಿಯಾಗಿ ಎದುರಿಸಿದೆ. ಪರಂಪರಾಗತ ಬೀಡಿ, ಗೇರು ಮುಂತಾದ ಕೈಗಾರಿಕಾ ಕಾರ್ಮಿಕರು ಉದ್ದಿಮೆಗಳು ಎದುರಿಸುತ್ತಿರುವ ಸವಾಲುಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಂಚಾಯಿತಿ ಮತ್ತು ಬಿಸಿಊಟ ನೌಕರರು ವರ್ಷಾನುಗಟ್ಟಲೆ ಸಂಬಳ ಇಲ್ಲದೆ ದುಡಿಯಬೇಕಾಗಿ ಬಂದಿದೆ. ಸ್ಕೀಂ ನೌಕರರು ನೇರ ನಗದು ವರ್ಗಾವಣೆ, ISKCON ಅದಮ್ಯ ಚೇತನ ಮುಂತಾದ ಸ್ವಯಂ ಸೇವಾ ಸಂಘಟನೆಗಳ ಅಪಾಯವನ್ನು ಎದುರಿಸಬೇಕಾಗಿ ಬಂದಿದೆ.

ರಾಜ್ಯದ ಕೈಗಾರಿಕಾ ಪರಿಸ್ಥಿತಿ:

ರಾಜ್ಯವು ಬಯೋಟೆಕ್ ನವೋದ್ಯಮಗಳನ್ನು ಒಳಗೊಂಡಂತೆ 750 ಬೃಹತ್, ಮಧ್ಯಮ ಮತ್ತು ಸಣ್ಣ ಕಂಪನಿಗಳನ್ನು ಹೊಂದಿದೆ. 2019-20ನೇ ಸಾಲಿನಲ್ಲಿ ಕರ್ನಾಟಕದ ಜೈವಿಕ ತಂತ್ರಜ್ಞಾನ ಕ್ಷೇತ್ರದ ರಫ್ತುಗಳ ಆದಾಯವು 20,283 ಕೋಟಿ ರೂಗಳಷ್ಟಾಗಿದೆ. ಕರ್ನಾಟಕ ಜೈವಿಕ ತಂತ್ರಜ್ಞಾನ ಕಾರ್ಯನೀತಿ (2017-22) ಯಲ್ಲಿ 2025 ರ ಒಳಗೆ ರಾಷ್ಟ್ರೀಯ ಜೈವಿಕ ಆರ್ಥಿಕತೆ (ಬೈಯೋ ಎಕಾನಮಿ) ತಲುಪಲು ಉದ್ದೇಶಿಸಿರುವ 7 ಲಕ್ಷ ಕೋಟಿ ರೂಗಳಲ್ಲಿ 40 ರಿಂದ 60 ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಗುರಿ ಹೊಂದಲಾಗಿದೆ. 2019ರ ಅಂತ್ಯದ ವೇಳೆಗೆ ರಾಜ್ಯದ ಬಯೋ ಎಕಾನಮಿ ಉತ್ಪಾದನೆಯು 1.58 ಲಕ್ಷ ಕೋಟಿ ರೂಗಳಷ್ಟಾಗಿದೆ. 2018 ರ ಹೋಲಿಕೆಯಲ್ಲಿ 17 ಶೇಕಡ ಬೆಳವಣಿಗೆ ಸಾಧಿಸಿದೆ.

ಕರ್ನಾಟಕ ಮಾಹಿತಿ ತಂತ್ರಜ್ಞಾನ ಕಾರ್ಯನೀತಿ 2020-25 ಅನ್ನು ರಾಜ್ಯ ಸರ್ಕಾರವು ರೂಪಿಸಿದೆ. ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ಕೈಗಾರಿಕಾ ಸಂಸ್ಥೆಗಳ ಸ್ಥಾಯಿ ಆದೇಶಗಳ ಕಾಯ್ದೆಯಿಂದ ವಿನಾಯಿತಿಯನ್ನು ಮುಂದುವರಿಸಿದೆ. ಕಾರ್ಯನೀತಿಯ ಭಾಗವಾಗಿ ಐಟಿ ಹಬ್/ಕ್ಲಸ್ಟರ್‌ಗಳ ಮೂಲಸೌಕರ್ಯಕ್ಕಾಗಿ ಸ್ಥಿರ ಹೂಡಿಕೆಯ 20 ಶೇಕಡರಷ್ಟರವರೆಗೆ ಗರಿಷ್ಠ 3 ಕೋಟಿ ರೂಗಳ ಹಣಕಾಸು ನೆರವನ್ನು, ಕಾರ್ಯಸ್ಥಳಗಳ ಮೂಲ ಸೌಕರ್ಯಕ್ಕೆ ಶೇ.33 ರವರೆಗೆ ಗರಿಷ್ಠ 2 ಕೋಟಿ ರೂಗಳ ಹಣಕಾಸು ಬೆಂಬಲ, 3 ರಿಂದ 6 ಲಕ್ಷದವರೆಗೆ ಗುತ್ತಿಗೆ / ಬಾಡಿಗೆ ಮರುಪಾವತಿ, ರಾಜ್ಯದ 2 ಮತ್ತು 3ನೇ ಹಂತದ ನಗರಗಳಲ್ಲಿ ಸಂಸ್ಥೆ ಸ್ಥಾಪನೆಗೆ ಭವಿಷ್ಯನಿಧಿ/ನೌಕರರ ರಾಜ್ಯ ವಿಮೆ ರಿಯಾಯತಿಯನ್ನು ಮುದ್ರಾಂಕ ಶುಲ್ಕ ವಿನಾಯಿತಿಯನ್ನು ಪ್ರಕಟಿಸಿದೆ. ಅಂತೆಯೇ ಕರ್ನಾಟಕದ ವಿದ್ಯುನ್ಮಾನ ವ್ಯವಸ್ಥೆಗಳ ವಿನ್ಯಾಸ ಮತ್ತು ತಯಾರಿಕಾ (ESDM) ನೀತಿ 2017-22 ಕರ್ನಾಟಕ ಆನಿಮೇಷನ್ ವಿಷುವಲ್ ಗೇಮಿಂಗೆ ಮತ್ತು ಕಾಮಿಕ್ಸ್ ನೀತಿ 2017-22 ಹಾಗೂ ಕರ್ನಾಟಕ ಸ್ಟಾರ್ಟ್ ಆಫ್ ನೀತಿ 2015-2020 ಗಳನ್ನು ಪರಿಷ್ಕರಿಸಿ ನೂತನ ನೀತಿಗಳ ರೂಪಿಸಲು ರಾಜ್ಯ ಸರ್ಕಾರ ಕ್ರಮವಹಿಸುತ್ತಿದೆ.

ಕೈಗಾರಿಕಾ ವಲಯದ ಹಿನ್ನಡೆ:

ಕೈಗಾರಿಕಾ ವಲಯವು ಸೇವೆ ಮತ್ತು ಕೃಷಿ ಕ್ಷೇತ್ರಗಳಿಗೆ ಹೋಲಿಸಿದರೆ, ಸಾಕಷ್ಟು ಹಿಂದೆ ಬಿದ್ದಿರುವುದು ಗೋಚರಿಸುತ್ತದೆ. ಈ ವಲಯವು ಶೇಕಡ 6.1ರ ಸಿಎಜಿಆರ್ ಯನ್ನು ಹೊಂದಿರುತ್ತದೆ. ಈ ವಲಯಕ್ಕೆ ನೀಡಲ್ಪಟ್ಟಿರುವ ಬೆಂಬಲ ಮತ್ತು ಸಹಾಯ ಅಸರ್ಮಪಕವಾಗಿರುವುದನ್ನು ಕಾಣಬಹುದು. ಕಳೆದ 5 ವರ್ಷಗಳ ಬೆಳವಣಿಯು ಶೇಕಡ 6.1 ಸಿಎಜಿಆರ್ ಇದ್ದು, ಇದೇ ಅವಧಿಯಲ್ಲಿ ಕೃಷಿ ಶೇಕಡ 16.6ರಷ್ಟು ಸಿಎಜಿಆರ್‌ಯನ್ನು ಮತ್ತು ಸೇವಾ ವಲಯ ಶೇಕಡ 11.6ರಷ್ಟು ಸಿಎಜಿಆರ್‌ಯನ್ನು ಹೊಂದಿರುತ್ತದೆ. ಇದರಿಂದಾಗಿ ಕರ್ನಾಟಕದ ಉದ್ಯೋಗ ಬೆಳವಣಿಗೆಯ ದರ ತೀವ್ರ ಕುಸಿತವನ್ನು ಕಂಡಿರುತ್ತದೆ. ಕರ್ನಾಟಕದ ಜಿಎಸ್‌ವಿಎಯಲ್ಲಿ ಕೈಗಾರಿಕೆ ಶೇಕಡ 20.3ರಷ್ಟು ಕೊಡುಗೆಯನ್ನು ನೀಡಿದರೆ, ಗುಜರಾತ್ ರಾಜ್ಯದಲ್ಲಿ ಇದರ ಕೊಡುಗೆ ಶೇಕಡ 48.2, ತಮಿಳುನಾಡಿನಲ್ಲಿ ಶೇಕಡ 33ರಷ್ಟು ಮತ್ತು ಮಹಾರಾಷ್ಟ್ರದಲ್ಲಿ ಶೇಕಡ 28.4ರಷ್ಟು ಇರುತ್ತದೆ. ಹಾಗಾಗಿ ಸೇವಾ ವಲಯದಲ್ಲಿ ಉತ್ತಮವಾದ ಸಾಧನೆಯನ್ನು ನಾವು ನೋಡುತ್ತಿದ್ದರೂ, ಕೈಗಾರಿಕಾ ವಲಯದಲ್ಲಿ ಗಮನಾರ್ಹವಾದ ಸಾಧನೆ ಇಲ್ಲವಾಗಿರುತ್ತದೆ.

ಕೋಷ್ಟಕ -5 : 2019-20 ರಿಂದ 2021-22 ರವರೆಗಿನ ರಾಜ್ಯ ಆಂತರಿಕ ಉತ್ಪನ್ನದಲ್ಲಿ ವಿವಿಧ ವಲಯಗಳ ಸಂಯೋಜನೆ


ಮೂಲ: ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಕರ್ನಾಟಕ ಸರ್ಕಾರ

ಕರ್ನಾಟಕ ಆರ್ಥಿಕ ಸಮೀಕ್ಷೆ 2021-22

ಕೃಷಿ ವಲಯದಲ್ಲಿರುವ ಹೆಚ್ಚುವರಿ ಕಾರ್ಮಿಕರನ್ನು ಕೌಶಲ್ಯವನ್ನು (ಇತ್ತೀಚಿಗೆ ದೀಪಾವಳಿ ಮುನ್ನ ದಿನ ಪ್ರಧಾನಿಗಳು 10 ಲಕ್ಷ ಯುವಜನರಿಗೆ ಉದ್ಯೋಗ ಒದಿಸಲು ರೋಜ್ಗಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಗಮನಿಸಿ) ನೀಡಿ ಕೈಗಾರಿಕಾ ವಲಯಕ್ಕೆ ವರ್ಗಾಯಿಸುವ ಮತ್ತು ಕೈಗಾರಿಕಾ ವಲಯಕ್ಕೆ ಅಗತ್ಯವಿರುವ ಬಂಡವಾಳ ಹೂಡಿಕೆಗೆ ಅವಕಾಶ ನೀಡುವ ಅಗತ್ಯವಿದೆ ಎಂದು ಭಾವಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕದ ಪ್ರಭಾವವನ್ನು ರಾಜ್ಯದ ಆರ್ಥಿಕ ವ್ಯವಸ್ಥೆಯ ಎಲ್ಲಾ ವಲಯಗಳಲ್ಲೂ ಕಾಣಬಹುದಾಗಿದೆ.
ಕೋವಿಡ್ ಲಾಕ್ಡೌನ್‌ನಿಂದ ಉಂಟಾಗಿರುವ ಆರ್ಥಿಕ ಹಿನ್ನೆಡೆ ಸರಿದೂಗಿಸಿಕೊಳ್ಳುವ ಮತ್ತು ಕೇಂದ್ರದಿಂದ ಬರಬೇಕಾದ ಜಿಎಸ್‌ಟಿ ಬಾಕಿ ಮತ್ತು ಪರಿಹಾರದ ಕೊರತೆ ನೀಗಿಸುವ ನಿಟ್ಟಿನಲ್ಲಿ ವಿತ್ತೀಯ ಕೊರತೆ ಮತ್ತು ಬಜೆಟ್ ನಿರ್ವಹಣೆ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯದ ಆಂತರಿಕ ಉತ್ಪನ್ನದ 3 ಶೇಕಡ ಸಾಲ ಪಡೆಯಲು ಇದ್ದ ಗರಿಷ್ಠ ಮಿತಿಯನ್ನು 5 ಶೇಕಡಕ್ಕೆ ರಾಜ್ಯ ಬಿಜೆಪಿ ಸರ್ಕಾರವು ಹೆಚ್ಚಿಸಿದೆ. ಕೈಗಾರಿಕಾ ಕಾರ್ಮಿಕರ ‘ವ್ಯತ್ಯಸ್ಥ ತುಟ್ಟಿಭತ್ಯೆ’ (ವಿಡಿಎ) ನೀಡಿಕೆ ಮುಂದೂಡಿಕೆ, ನಿಶ್ಚಿತ ಕಾಲಾವಧಿ ನೌಕರರ ನೇಮಕಕ್ಕೆ ಅವಕಾಶ, ಲಾಕ್ಡೌನ್ ಕಾಲಾವಧಿ ವೇತನ ಕೊಡಿಸಲು ಕ್ರಮ ವಹಿಸದ, ಕೋವಿಡ್ ನಿಯಂತ್ರಣ ಮತ್ತು ಲಾಕ್ಡೌನ್ ಪರಿಹಾರ ನೀಡುವಲ್ಲಿನ ವೈಫಲ್ಯವಾಗಿದೆ. ರಾಜ್ಯ ಸರ್ಕಾರದಲ್ಲಿನ ಶೇ 40 ರಷ್ಟು ಭ್ರಷ್ಟಾಚಾರ, ಆರೋಗ್ಯ ಇಲಾಖೆ ಮತ್ತು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿನ ಸಾವಿರಾರು ಕೋಟಿ ಖರೀದಿಗಳ ಹಗರಣಗಳು ರಾಜ್ಯದ ಅಭಿವೃದ್ದಿ ಮೇಲೆ ಕರಾಳಛಾಯೆ ಬೀರಿವೆ. ಇದರ ಜತೆ ಬಿಜೆಪಿ ನೈತಿಕತೆಗೆ ಹಿಡಿದ ಕನ್ನಡಿಯಾಗಿದೆ.

ಆರ್ಥಿಕ ಕುಸಿತಕ್ಕೆ ಕಾರಣಗಳು:

ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ನೋಟು ರದ್ಧತಿ, ಅವೈಜ್ಞಾನಿಕ ಜಿಎಸ್‌ಟಿ ಜಾರಿ ಮುಂತಾದ ದಿವಾಳಿಕೋರ ಆರ್ಥಿಕ ನೀತಿಗಳು ಮೇಲಿನ ಆಂತರಿಕ ಉತ್ಪನ್ನ ದರದ ನಿರಂತರ ಕುಸಿತಕ್ಕೆ ಕಾರಣವಾಗಿದೆ. ಅಂತೆಯೇ ಕೋವಿಡ್ ಸಾಂಕ್ರಾಮಿಕ ಮತ್ತದರ ನಿರ್ವಹಣೆಯಲ್ಲಿ ಕೇಂದ್ರ ರಾಜ್ಯ ಬಿಜೆಪಿ ಸರ್ಕಾರಗಳ ದುರಾಡಳಿತ, ಲಾಕ್ಡೌನ್ ಸಂತಸ್ತರಿಗೆ ಪರಿಹಾರ ನೀಡುವಲ್ಲಿ ತೋರಿದ ನಿರ್ಲಕ್ಷö್ಯ, ನೇರ ನಗದು ವರ್ಗಾವಣೆ, ತಲಾ 10 ಕೆಜಿ ಉಚಿತ ಆಹಾರ ಧಾನ್ಯ ವಿತರಣೆ, ನಗರ ಪ್ರದೇಶಗಳಿಗೂ ಉದ್ಯೋಗ ಖಾತ್ರಿ ವಿಸ್ತರಣೆ, 200 ದಿನಗಳ ಉದ್ಯೋಗ ಖಾತ್ರಿ ಕೆಲಸದ ದಿನಗಳ ಹೆಚ್ಚಳದೊಂದಿಗೆ ಕೂಲಿ ಹೆಚ್ಚಳದ ಪರ್ಯಾಯ ಕ್ರಮವಹಿಸಲು ಬಿಜೆಪಿ ಸರ್ಕಾರದ ಕ್ರಿಮಿನಲ್ ನಿರಾಕರಣೆಯು ಇಂತಹ ಆಂತರಿಕ ಉತ್ಪನ್ನ ಬೆಳವಣಿಗೆ ದರ ಕುಸಿತಕ್ಕೆ ನೇರ ಕಾರಣವಾಗಿದೆ. ಈ ಕಾಲಾವಧಿಯಲ್ಲಿ ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಕೋವಿಡ್-19, ಲಾಕ್ಡೌನ್ ಮಗದೊಂದೆಡೆ ಬಿಜೆಪಿ ಸರ್ಕಾರಗಳ ದಿವಾಳಿಕೋರ ನವಉದಾರವಾದಿ ಆರ್ಥಿಕ ನೀತಿಗಳು ರಾಜ್ಯದ ಆರ್ಥಿಕತೆಯನ್ನು ಋಣಾತ್ಮಕ ಬೆಳವಣಿಗೆಗೆ ದೂಡಿವೆ. 2022 ನೇ ಸಾಲಿನಲ್ಲಿ ನಿರಂತವಾಗಿ ಸುರಿದ ಮುಂಗಾರು ಮಳೆಯಿಮದಾಗಿಯೇ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಮಾತ್ರವೇ ಆದ ಒಟ್ಟು ನಷ್ಟ 7647.13 ಕೋಟಿ ಎಂದು ಕರ್ನಾಟಕ ಸರ್ಕಾರ ಅಂದಾಜು ಮಾಡಿತ್ತು. ಆದರೆ ಈ ವಿಪರೀತ ಮಳೆ ಈ ಅಕ್ಟೋಬರ್ ವರೆಗೂ ಮುಂದುವರೆದು ಅಂದಾಜು 10 ಸಾವಿರ ಕೋಟಿಯಷ್ಟು ನಷ್ಟ ಉಂಟು ಮಾಡಿದೆ ಇದು ರಾಜ್ಯದ ಆರ್ಥಿಕತೆ ಮೇಲೆ ಮತ್ತಷ್ಟು ಕೆಟ್ಟ ಪರಿಣಾಮ ಬೀರಲಿದೆ.

ಉದ್ಯೋಗ ನಾಶ:

ಕೋವಿಡ್ ಲಾಕ್ಡೌನ್ ಪರಿಣಾಮವಾಗಿ ದೊಡ್ಡ ಪ್ರಮಾಣದ ಉದ್ಯೋಗ ನಾಶವುಂಟಾಗಿದೆ. ಲಾಕ್ಡೌನ್‌ನಿಂದಾಗಿ ಒಂದೆರೆಡು ತಿಂಗಳಲ್ಲೆ 6 ಶೇಕಡವಿದ್ದ ನಿರುದ್ಯೋಗ ದರವು 20 ಶೇಕಡಕ್ಕೆ ಏರಿಕೆಯಾಗಿರುವುದು ವರದಿಯಾಗಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಏಕಾನಮಿ (CMIE) ನಡೆಸಿದ ಸರ್ವೆ ಪ್ರಕಾರ 2020 ಏಪ್ರಿಲ್‌ನಲ್ಲಿ ನಿರುದ್ಯೋಗ ದರವು 26.3 ಶೇಕಡವಾರು ಅಂಶ ಏರಿಕೆಯಾಗಿ 29.8 ಶೇಕಡಕ್ಕೆ ತಲುಪಿದೆಯಂತೆ. ರಾಷ್ಟ್ರೀಯ ನಿರುದ್ಯೋಗ ಸರಾಸರಿಯು 23.5 ಶೇಕಡವಿದ್ದಾಗ ರಾಜ್ಯದ ನಿರುದ್ಯೋಗ ದರವು 29.8 ರಷ್ಟಕ್ಕೆ ಏರಿಕೆಯಾಗುವ ಮೂಲಕ ಏಪ್ರಿಲ್ 2019 ರಲ್ಲಿ ಅತ್ಯಂತ ಕಡಿಮೆಯಿದ್ದ 0.5 ಶೇಕಡದಿಂದ ಪ್ರಸಕ್ತ ಪರಿಸ್ಥಿತಿ ತಲುಪಿದೆ ಎಂದು ವರದಿಯು ಗುರುತಿಸಿದೆ.
ಬೆಂಗಳೂರು ಭಾರತದ ಅತ್ಯಂತ ಶ್ರೀಮಂತ ನಗರವೇ? ಹೌದು ಎನ್ನುತ್ತವೆ ಕರ್ನಾಟಕ 2021-22 ರ ಆರ್ಥಿಕ ಸಮೀಕ್ಷೆಯ ಕೆಲವು ಸಂಗತಿಗಳು

ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿನ ಉದ್ಯೋಗ:

ಈ ಅವಧಿಯಲ್ಲಿ ಖಾಸಗಿ ವಲಯದಲ್ಲಿ ಶೇ.0.26 ರಷ್ಟು ಏರಿಕೆಯಾದರೆ ಸಾರ್ವಜನಿಕ ವಲಯದಲ್ಲಿ ಉದ್ಯೋಗ ಪ್ರಮಾಣ 0.14 ರಷ್ಟು ಕುಸಿದಿದೆ. ಕರ್ನಾಟಕದ ಒಟ್ಟು ಕಾರ್ಮಿಕರ ಪೈಕಿ ಶೇ.86.9 ರಷ್ಟು ಅಸಂಘಟಿತ ಕಾರ್ಮಿಕರೇ ಆಗಿರುತ್ತಾರೆ. ರಾಜ್ಯದಲ್ಲಿ ಸಂಘಟಿತ ವಲಯದಲ್ಲಿನ ಉದ್ಯೋಗ ಪ್ರಮಾಣವು 2020ರ ಜೂನ್ ಅಂತ್ಯಕ್ಕೆ ರೂ.24.11,900 ರಷ್ಟಿದ್ದು, ಸಾರ್ವಜನಿಕ ವಲಯದ ಉದ್ಯೋಗ ಕ್ಷೇತ್ರವು ರೂ.10.30,300 ಹಾಗೂ ಖಾಸಗಿ ಕ್ಷೇತ್ರ ರೂ.13.81,500ಗಳನ್ನು ಹೊಂದಿದೆ.

ಕರ್ನಾಟಕ ಉದ್ಯೋಗ ನೀತಿ 2022-25:

ಕರ್ನಾಟಕ ಸರ್ಕಾರ ಇತ್ತೀಚಿಗೆ ಅಂಗೀಕರಿಸಿದ ಕರ್ನಾಟಕ ಉದ್ಯೋಗ ನೀತಿಯು ಹೂಡಿಕೆದಾರರು ಉದ್ಯೋಗಳ ಸಂಖ್ಯೆಯನ್ನು ಹೆಚ್ಚಿಸುವುದು ಹಾಗೂ ಸ್ಥಳಿಯ ಜನರಿಗೆ ಉದ್ಯೋಗವಕಾಶಗಳನ್ನು ನೀಡಬೇಕೆಂದು ನಿರ್ದೇಶಿಸಿದೆ. ಈ ನೀತಿಯಂತೆ ಕೈಗಾರಿಕಾ ಬಂಡವಾಳ ಹೂಡುವ ಮಧ್ಯಮ ಗಾತ್ರದ ಕಂಪನಿಗಳು ಈಗಿರುವ 20 ಉದ್ಯೋಗ ಸೃಷ್ಟಿಗೆ ಬದಲಾಗಿ 27 ಉದ್ಯೋಗಗಳನ್ನು ಸ್ಥಳಿಯರಿಗೆ ಕಲ್ಪಿಸಬೇಕು ಅದೇ ರೀತಿ 50 ಕೋಟಿ ಹೆಚ್ಚುವರಿ ಬಂಡವಾಳ ಹೂಡಿಕೆಗೆ 30-50 ಉದ್ಯೋಗಗಳು, ಬಂಡವಾಳ 100 ಕೋಟಿ ರೂ ಹೂಡಿಕೆಯಾದರೆ 35 ಉದ್ಯೋಗಗಳ್ನನು ಸೃಷ್ಟಿಸಲು ಕಡ್ಡಾಯಗೊಳಿಸಲಾಗಿದೆ. ಹಾಗೆಯೇ ಅರೆ ಬೃಹತ್ ಕೈಗಾರಿಗಳು ಈಗಿರುವ 400 ಮಿತಿಯನ್ನು 510 ಕ್ಕೆ ಹೆಚ್ಚಸಬೇಕು ಎಂದು ನೂತನ ಉದ್ಯೋಗ ನೀತಿಯಲ್ಲಿ ಹೇಳಲಾಗಿದೆ. ಆದರೆ ಬಂಡವಾಳ ಹೂಡಿಕೆ ಮಾಡುವ ಕಂಪನಿಗಳು ಅಸಲಿಗೆ ಕೋಟ್ಯಾಂತರ ಬೆಲೆ ಬಾಳುವ ಭೂಮಿ,ವಿದ್ಯುತ್ ಮತ್ತಿತರೆ ಸೌಕರ್ಯಗಳನ್ನು ಪಡೆದು ಕಂಪನಿ ಆರಂಭಿಸದೇ ಪಡೆದ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಗೆ ಬಳಸುವುದು ಮತ್ತು ಕೈಗಾರಿಕಾ ಎಸ್ಟೇಟ್ ನೆಪದಲ್ಲಿ ರೈತರಿಂದ ಅತ್ಯಂತ ಕಡಿಮೆಗೆ ಬೆಲೆಗೆ ಭೂಮಿ ಕಬಳಿಸಿ ಅವರನ್ನು ಬೀದಿಗೆ ತಳ್ಳುವುದು ಬಿಜೆಪಿ ಪಕ್ಷ ಮತ್ತು ಸರ್ಕಾರಕ್ಕೆ ಹೊಸದೇನು ಅಲ್ಲ ಎನ್ನುವುದು ನಮಗೆಲ್ಲ ಗೊತ್ತಿರುವ ಸಂಗತಿಯೇ.

ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಲ್ಲಿ ಉದ್ಯೋಗ ನಾಶ:

2019-20 ರಲ್ಲಿದ್ದ 80,379 ಅತಿಸಣ್ಣ ಕೈಗಾರಿಕೆಗಳ ಸಂಖ್ಯೆ 2020-21 ರಲ್ಲಿ 67,031ಕ್ಕೆ ಕುಸಿದಿದ್ದು, ಕಾರ್ಮಿಕರ ಸಂಖ್ಯೆಯು 3,89,244 ರಿಂದ 2,66,704ಕ್ಕೆ ಕುಸಿದಿದೆ. ಸಣ್ಣ ಕೈಗಾರಿಕೆಗಳ ಸಂಖ್ಯೆ 16,069 ರಿಂದ 14,276ಕ್ಕೆ ಕುಸಿದು ಕಾರ್ಮಿಕರ ಸಂಖ್ಯೆಯು 2,57,408 ರಿಂದ 2,08,273 ಕ್ಕೆ ಕುಸಿದಿದೆ. ಅಂದರೆ ರಾಜ್ಯದ ಅತಿಸಣ್ಣ ಮತ್ತು ಸಣ್ಣ ಕೈಗಾರಿಕೆಗಳಲ್ಲಿ ಒಟ್ಟು 1,71,639 ಕಾರ್ಮಿಕರು ಕಡಿಮೆಯಾಗಿದ್ದಾರೆ, ನಿಜಾರ್ಥದಲ್ಲಿ ಉದ್ಯೋಗ ಕಳೆದು ಕೊಂಡಿದ್ದಾರೆ. 2017-18 ರಲ್ಲಿ ಅತಿಸಣ್ಣ, ಸಣ್ಣ, ಮದ್ಯಮ ಉದ್ಯಮಗಳಲ್ಲಿ ಪ್ರತಿ ಉದ್ಯಮಕ್ಕೆ 9.08 ಉದ್ಯೋಗಗಳಿದ್ದರೆ 2020-21 ರಲ್ಲಿ ಪ್ರತಿ ಉದ್ಯಮಕ್ಕೆ ಕೇವಲ 6.6 ಉದ್ಯೋಗಗಳಿವೆ.

Donate Janashakthi Media

Leave a Reply

Your email address will not be published. Required fields are marked *