ಬೆಂಗಳೂರು : ಕ್ರೀಡೆಯಲ್ಲಿ ಅದರಲ್ಲೂ ಕುಸ್ತಿಯಲ್ಲಿ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿ, ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ 7 ಮಹಿಳಾ ಕುಸ್ತಿಪಟುಗಳು ದೆಹಲಿಯ ಸೆಂಟ್ರಲ್ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ದೂರು ದಾಖಲಿಸಿದ್ದಾರೆ.
ವರ್ಷದ ಹಿಂದೆ ಶುರುವಾದ ಈ ಹೋರಾಟಕ್ಕೆ ಇನ್ನೂ ನ್ಯಾಯವೇ ಸಿಕ್ಕಿಲ್ಲ, ಆತನ ಮೇಲೆ ದೂರು ದಾಖಲಿಸಿಲ್ಲ ಹಾಗೆಯೇ ಆಳುವ ಸರ್ಕಾರ ಮತ್ತು ಆಡಳಿತ ಮಂಡಳಿ ಯಾವ ಕ್ರಮವು ಕೈಗೊಂಡಿಲ್ಲ, ಬದಲಾಗಿ ಆಪಾದಿತನ ರಕ್ಷಣೆ ನಡೆಯುತ್ತಿದೆ. ಇದು ಭ್ರಷ್ಟ ಕಾಮುಕ ಬಿಜೆಪಿ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಕೂಡಲೇ ಅಪಾದಿತನ ಮೇಲೆ ಸೂಕ್ತ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಹೆಣ್ಣು ಮಕ್ಕಳಿಗೆ ಭದ್ರತೆ ನೀಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್ ( ಎಸ್ಎಫ್ಐ ) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.
ಇದನ್ನೂ ಓದಿ : ಲೈಂಗಿಕ ಕಿರುಕುಳದ ಆರೋಪ : WFI ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ನಮ್ಮ ಪ್ರಧಾನಿ ಮೋದಿಯವರು ಭೇಟಿ ಬಚಾವೋ – ಭೇಟಿ ಪಡಾವೋ ಎಂದು ಎಲ್ಲೆಡೆಯೂ ಹೇಳುತ್ತಾರೆ ಆದರೆ ತಮ್ಮ ಪಕ್ಷದ ಜನಪ್ರತಿನಿಧಿಗಳು, ಮುಖಂಡರು ದೇಶದ ಅನೇಕ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಜೀವಂತ ಸಾಕ್ಷಿ ಇದ್ದಾಗಲೂ ಯಾವ ಕ್ರಮ ಕೈಗೊಂಡ ಉದಾಹರಣೆ ಇಲ್ಲ. ತಮ್ಮದು ಶಿಸ್ತಿನ ಪಕ್ಷ, ನಾವು ಹಣ್ಣು ಮಕ್ಕಳ ಪರ ಎಂದು ಹೇಳುತ್ತಾರೆ ಆದರೆ ಎಷ್ಟು ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಟ್ಟಿದೆ, ನ್ಯಾಯ ಕೊಡಿಸಿದೆ ? ಭಾಷಣಗಳು ಸಾಕು ಮಾಡಿ ಕ್ರಮಕ್ಕೆ ಮುಂದಾಗಬೇಕು ಎಂದು ಎಸ್ಎಫ್ಐ ರಾಜ್ಯ ಅಧ್ಯಕ್ಷರಾದ ಅಮರೇಶ ಕಡಗದ, ರಾಜ್ಯ ಕಾರ್ಯದರ್ಶಿ ಭೀಮನಗೌಡ ಸುಂಕೇಶ್ವರಹಾಳ ಪತ್ರಿಕಾ ಹೇಳಿಕೆಯ ಮೂಲಕ ಪ್ರಶ್ನೆ ಮಾಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.