ನವದೆಹಲಿ: ಸುಪ್ರೀಂ ಕೋರ್ಟ್, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ರಾಜಿ ಸಂಧಾನ ಮಾಡಿಕೊಂಡ ಕೂಡಲೇ ಲೈಂಗಿಕ ಕಿರುಕುಳ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಆದೇಶ ನೀಡಿದೆ.
ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಶಿಕ್ಷಕನ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ರದ್ದುಪಡಿಸುವಂತೆ ನೀಡಿದ್ದ ರಾಜಸ್ಥಾನ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದೆ. ರಾಜಿ
ಇದು 2022ರಲ್ಲಿ ರಾಜಸ್ಥಾನದ ಗಂಗಾಪುರ್ ನಗರದಲ್ಲಿ ನಡೆದ ಪ್ರಕರಣ. ತನಗೆ ಸರ್ಕಾರಿ ಶಾಲೆ ಶಿಕ್ಷಕ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಅಪ್ರಾಪ್ತ ವಿದ್ಯಾರ್ಥಿನಿ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಳು. ಆ ಪ್ರಕಾರ ಪೊಲೀಸರು ಶಿಕ್ಷಕನ ವಿರುದ್ಧ ಪೋಕ್ಸೋ ಸೇರಿದಂತೆ ಎಸ್ ಸಿ/ಎಸ್ ಟಿ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದರು. ರಾಜಿ
ಏತನ್ಮಧ್ಯೆ ಆರೋಪಿ ಶಿಕ್ಷಕ ವಿಮಲ್ ಕುಮಾರ್ ಗುಪ್ತಾ, ಬಾಲಕಿಯ ಪೋಷಕರಿಂದ ಸ್ಟ್ಯಾಂಪ್ ಪೇಪರ್ ನಲ್ಲಿ ಹೇಳಿಕೆ ಪಡೆದುಕೊಂಡಿದ್ದ. ” ತಪ್ಪು ತಿಳಿವಳಿಕೆಯಿಂದಾಗಿ ನಾವು ದೂರು ದಾಖಲಿಸಿದ್ದು, ಶಿಕ್ಷಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು” ಎಂದು ವಿನಂತಿಸಿಕೊಂಡಿದ್ದರು.
ಈ ಹೇಳಿಕೆಯನ್ನು ಪೊಲೀಸರು ಒಪ್ಪಿ, ಎಫ್ ಐಆರ್ ರದ್ದು ಮಾಡಲು ವರದಿ ನೀಡಿದ್ದರು. ಆದರೆ ಬಾಲಕಿ ಪೋಷಕರ ಹೇಳಿಕೆಯನ್ನು ಕೆಳ ನ್ಯಾಯಾಲಯ ತಿರಸ್ಕರಿಸಿತ್ತು. ನಂತರ ಆರೋಪಿ ಶಿಕ್ಷಕ ಹೈಕೋರ್ಟ್ ಮೆಟ್ಟಿಲೇರಿದ್ದ. ಹೈಕೋರ್ಟ್, ಪೋಷಕರ ಹೇಳಿಕೆಯನ್ನು ಒಪ್ಪಿ, ಎಫ್ ಐಆರ್ ರದ್ದುಪಡಿಸುವಂತೆ ಆದೇಶ ನೀಡಿತ್ತು.
ಮತ್ತೊಂದೆಡೆ ಸಾಮಾಜಿಕ ಕಾರ್ಯಕರ್ತ ರಾಮ್ ಜೀ ಲಾಲ್ ಬೈರ್ವಾ ರಾಜಸ್ಥಾನ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಸುಪ್ರೀಂಕೋರ್ಟ್ ಪೀಠದ ಜಸ್ಟೀಸ್ ಸಿ.ಟಿ. ರವಿಕುಮಾರ್ ಮತ್ತು ಜಸ್ಟೀಸ್ ಪಿ.ವಿ.ಸಂಜಯ್ ಕುಮಾರ್, ರಾಜಸ್ಥಾನ ಹೈಕೋರ್ಟ್ ನೀಡಿರುವ ಆದೇಶವನ್ನು ವಜಾಗೊಳಿಸಿ, ಆರೋಪಿ ಶಿಕ್ಷಕನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದೆ.
ಇದನ್ನೂ ನೋಡಿ: ಅನ್ನದಲ್ಲಿ ಹುಳು, ಕೊಳೆತ ತರಕಾರಿ ಇದನ್ನೆ ತಿನ್ರಿ ಅಂತಾರೆ ವಾರ್ಡ್‌ನ – ವಿದ್ಯಾರ್ಥಿಗಳ ಪ್ರತಿಭಟನೆJanashakthi Media