ಬೆಂಗಳೂರು: ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನಲ್ಲಿ ನಾಳೆಯೂ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಕಾಲೇಜುಗಳಿಗೆ ರಜೆ ಘೋಷಿಸಲಾಗಿಲ್ಲ.
ನಿನ್ನೆ ಶಾಲೆ ಮತ್ತು ಕಾಲೇಜುಗಳಿಗೆ ಭಾರೀ ಮಳೆ ನಿಮಿತ್ತ ರಜೆ ಘೋಷಿಸಲಾಗಿತ್ತು. ಆದರೆ ಇಂದು ಬೆಳಿಗ್ಗಿನ ಅವಧಿಯಲ್ಲಿ ವರುಣ ಬಿಡುವು ನೀಡಿದ್ದರಿಂದ ಎಂದಿನಂತೆ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸಿದ್ದವು. ಆದರೆ ಅಪರಾಹ್ನದ ನಂತರ ಭಾರೀ ಮಳೆಯಾಗಿದ್ದು, ಮಕ್ಕಳು ಮನೆಗೆ ತೆರಳುವುದಕ್ಕೂ ಕಷ್ಟಪಡುವಂತಾಗಿತ್ತು.
ಇದನ್ನು ಓದಿ : ಬೆಂಗಳೂರು| ಧಾರಾಕಾರ ಸುರಿದ ಮಳೆಗೆ ಸೇತುವೆ ಕುಸಿತ
ಇಂದು ಸುರಿದ ಭಾರೀ ಮಳೆಯಿಂದ ಮತ್ತಷ್ಟು ಅನಾಹುತಗಳಾಗಿದೆ. ಜೊತೆಗೆ ನಾಳೆಯೂ ಮಳೆಯ ಮುನ್ಸೂಚನೆ ಇರುವ ಕಾರಣ ಬೆಂಗಳೂರು ನಗರ ಡಿಸಿ ಎಲ್ಲಾ ಖಾಸಗಿ ಮತ್ತು ಸರ್ಕಾರೀ ಸ್ಕೂಲ್‌ಗಳಿಗೆ ರಜೆ ಘೋಷಿಸಿದ್ದಾರೆ. ಶಾಲೆಗಳು ಮತ್ತು ಅಂಗನವಾಡಿಗಳಿಗೆ ನಾಳೆ ರಜೆ ನೀಡಲಾಗಿದೆ.
ಆದರೆ ಕಾಲೇಜುಗಳಿಗೆ ರಜೆಯಿಂದ ವಿನಾಯ್ತಿ ನೀಡಲಾಗಿದೆ. ಆದರೆ ನಿಗದಿಯಾಗಿದ್ದ ಪರೀಕ್ಷೆಗಳು ಮುಂದೂಡಿಕೆಯಾಗಲಿದೆ. ಈಗಾಗಲೇ ಮಳೆಯಿಂದಾಗಿ ನಷ್ಟವಾಗಿರುವ ತರಗತಿಗಳನ್ನು ಮುಂದಿನ ದಿನಗಳಲ್ಲಿ ಶನಿವಾರ ಪೂರ್ತಿ ದಿನ ಮತ್ತು ಭಾನುವಾರ ಹೆಚ್ಚುವರಿ ಕ್ಲಾಸ್ ಮಾಡಿ ಭರ್ತಿ ಮಾಡಬೇಕು ಎಂದು ಡಿಸಿ ಆದೇಶದಲ್ಲಿ ತಿಳಿಸಿದ್ದಾರೆ.
ವಾಯುಭಾರ ಕುಸಿತದಿಂದಾಗಿ ನಾಳೆಯೂ ಭಾರೀ ಮಳೆಯಾಗುವ ಮುನ್ಸೂಚನೆಯಿದೆ. ಇಂದು ರಾತ್ರಿ ಮಳೆ ಪೀಡಿತ ಬೆಂಗಳೂರಿನ ಕೆಲವು ಪ್ರದೇಶಗಳಿಗೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಣ್ಣೂರಿನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದಿದ್ದು ಪ್ರಾಣ ಹಾನಿಯಾಗಿದೆ.
ಇದನ್ನು ನೋಡಿ : ಬೆಂಗಳೂರು ಮಳೆ: ಮಾನ್ಯತಾ ಟೆಕ್ ಪಾರ್ಕ್ ರಸ್ತೆ ಜಲಾವೃತ Janashakthi Media