ಅಫ್ಘಾನಿಸ್ತಾನ: ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯವು (SAU) ಅಫ್ಘಾನಿಸ್ತಾನದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿವೇತನವನ್ನು ಸ್ಥಗಿತಗೊಳಿಸಿದೆ. ಸಾರ್ಕ್ ಸಂಸ್ಥೆಯಡಿ ಕಾರ್ಯನಿರ್ವಹಿಸುವ ಈ ವಿಶ್ವವಿದ್ಯಾಲಯಕ್ಕೆ ಅಫ್ಘಾನಿಸ್ತಾನವು ತನ್ನ ಹಣಕಾಸು ಪಾಲನ್ನು ನಿರಂತರವಾಗಿ ಪಾವತಿಸದೆ ಇರುವ ಹಿನ್ನೆಲೆಯಲ್ಲಿ ಭೂಟಾನ್ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಫ್ಘಾನ್
“ನಿಯಮಿತವಾಗಿ ತಮ್ಮ ಪಾಲಿನ ಹಣ ಪಾವತಿಸುತ್ತಿರುವ ದೇಶಗಳಿಗೆ ಇದು ಅನ್ಯಾಯ ಎಂದು ಭೂಟಾನ್ ಅಭಿಪ್ರಾಯ ವ್ಯಕ್ತಪಡಿಸಿದೆ. ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಸಮಾನವಾಗಿ ವರ್ತಿಸಬೇಕಾದ್ದರಿಂದ ನಾವು ವಿದ್ಯಾರ್ಥಿವೇತನವನ್ನು ನಿಲ್ಲಿಸಬೇಕಾಯಿತು,” ಎಂದು SAU ಅಧ್ಯಕ್ಷ ಕೆ.ಕೆ. ಅಗರವಾಲ್ ತಿಳಿಸಿದ್ದಾರೆ.
ಹಣಕಾಸು ಬಾಕಿ ಸ್ಥಿತಿ
ಅಧಿಕೃತ ದಾಖಲೆಗಳ ಪ್ರಕಾರ, ಅಫ್ಘಾನಿಸ್ತಾನವು 2021ರಿಂದ ವಿಶ್ವವಿದ್ಯಾಲಯಕ್ಕೆ ಯಾವುದೇ ಹಣಕಾಸು ಕೊಡುಗೆ ನೀಡಿಲ್ಲ. 2020ರಲ್ಲಿ ಕೊನೆಯದಾಗಿ 3,07,000 ಅಮೆರಿಕನ್ ಡಾಲರ್ ಪಾವತಿಸಿದೆ.
ಇದನ್ನೂ ಓದಿ: ರಾಮ ಮಂದಿರ ದೇಣಿಗೆ ವಿವಾದ: ಬಿಜೆಪಿ-ಆರ್ಎಸ್ಎಸ್ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ
ಶ್ರೀಲಂಕೆಯೂ 2021ರಿಂದ ಯಾವುದೇ ಕೊಡುಗೆ ನೀಡಿಲ್ಲ. ಪಾಕಿಸ್ತಾನವು ಹಲವು ವರ್ಷಗಳ ನಂತರ 2025ರಲ್ಲಿ ಕೇವಲ 69,921 ಡಾಲರ್ ಪಾವತಿಸಿದೆ. ಪ್ರಸ್ತುತ SAUನಲ್ಲಿ ಪಾಕಿಸ್ತಾನದಿಂದ ಯಾವುದೇ ವಿದ್ಯಾರ್ಥಿಗಳು ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಶ್ರೀಲಂಕೆಯ ವಿಚಾರ ವಿಭಿನ್ನವಾಗಿದ್ದು, ಅದು ಹಣ ನೀಡುವುದನ್ನು ನಿರಾಕರಿಸಿಲ್ಲ, ಕೇವಲ ವಿಳಂಬವಾಗಿದೆ ಎಂದು ಅಗರವಾಲ್ ಸ್ಪಷ್ಟಪಡಿಸಿದರು.
ತಾಲಿಬಾನ್ ಸರ್ಕಾರದೊಂದಿಗೆ ಸಂಪರ್ಕದ ಕೊರತೆ
ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ, ಈ ವಿಷಯದಲ್ಲಿ ಹೊಸ ಸರ್ಕಾರದಿಂದ ಯಾವುದೇ ಸಂಪರ್ಕವಾಗಿಲ್ಲ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
“ಭಾರತವು ತಾಲಿಬಾನ್ ಸರ್ಕಾರವನ್ನು ಅಧಿಕೃತವಾಗಿ ಮಾನ್ಯತೆ ನೀಡದಿರುವುದರಿಂದ, ಹಣಕಾಸು ಸಮಸ್ಯೆಯನ್ನು ಪರಿಹರಿಸಲು ಅಗತ್ಯವಾದ ಸಂಪರ್ಕ ವ್ಯವಸ್ಥೆಯನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ,” ಎಂದು ಅಗರವಾಲ್ ಹೇಳಿದರು.
ದೆಹಲಿ ಅಫ್ಘಾನಿಸ್ತಾನ ರಾಯಭಾರಿ ಕಚೇರಿ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ.
ಆನ್ಲೈನ್ ಶಿಕ್ಷಣದ ಅವಕಾಶ
ವಿದ್ಯಾರ್ಥಿವೇತನವನ್ನು ನಿಲ್ಲಿಸಿದ್ದರೂ, ಅಫ್ಘಾನ್ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಮಹಿಳೆಯರಿಗೆ, ಆನ್ಲೈನ್ ಮೂಲಕ ಶಿಕ್ಷಣ ಒದಗಿಸಲು ವಿಶ್ವವಿದ್ಯಾಲಯ ಸಿದ್ಧವಿದೆ ಎಂದು ಅಗರವಾಲ್ ತಿಳಿಸಿದ್ದಾರೆ.
“ಅಫ್ಘಾನ್ ವಿದ್ಯಾರ್ಥಿಗಳಿಂದ, ವಿಶೇಷವಾಗಿ ಮಹಿಳೆಯರಿಂದ, ನಮಗೆ ಅನೇಕ ಇಮೇಲ್ಗಳು ಬರುತ್ತಿವೆ. ಮಹಿಳಾ ಶಿಕ್ಷಣದ ಮೇಲಿನ ನಿರ್ಬಂಧ ಮತ್ತು ವೀಸಾ ಸಮಸ್ಯೆಗಳ ಕಾರಣದಿಂದ ಅವರು ಇಲ್ಲಿ ಓದಲು ಸಾಧ್ಯವಾಗುತ್ತಿಲ್ಲ. ಜನಸಂಖ್ಯೆಯ ಅರ್ಧ ಭಾಗಕ್ಕೆ ಶಿಕ್ಷಣ ನಿರಾಕರಿಸಿದರೆ ದೇಶ ಹೇಗೆ ಅಭಿವೃದ್ಧಿ ಹೊಂದುತ್ತದೆ?” ಎಂದು ಅವರು ಪ್ರಶ್ನಿಸಿದರು.
ಅಫ್ಘಾನ್ ಸರ್ಕಾರ ಒಪ್ಪಿಗೆ ನೀಡಿದರೆ ಆನ್ಲೈನ್ ಶಿಕ್ಷಣ ನೀಡಲು ಸಿದ್ಧವಿರುವುದಾಗಿ ಅವರು ಹೇಳಿದ್ದಾರೆ.
ವಿದ್ಯಾರ್ಥಿವೇತನ ಪುನರಾರಂಭ ಸಾಧ್ಯತೆ
ಯಾವುದೇ ಸದಸ್ಯ ರಾಷ್ಟ್ರ ಅಥವಾ ಸಂಸ್ಥೆ ಅಫ್ಘಾನಿಸ್ತಾನದ ಹಣಕಾಸು ಹೊಣೆ ಹೊತ್ತರೆ ವಿದ್ಯಾರ್ಥಿವೇತನವನ್ನು ಪುನರಾರಂಭಿಸಲು ಸಾಧ್ಯವಿದೆ ಎಂದು ಅಗರವಾಲ್ ತಿಳಿಸಿದ್ದಾರೆ. ಜೊತೆಗೆ, ಅಫ್ಘಾನ್ ವಿದ್ಯಾರ್ಥಿಗಳಿಗೆ ICCR ಬೆಂಬಲಿತ ವಿದ್ಯಾರ್ಥಿವೇತನ ವಿಸ್ತರಿಸುವಂತೆ ಶಿಕ್ಷಣ ಸಚಿವಾಲಯವನ್ನು ಮನವಿ ಮಾಡಿದ್ದಾರೆ.
ಕೊಡುಗೆ ವಿವರಗಳು
2021ರಿಂದ 2026 ಜೂನ್ 30ರವರೆಗೆ ಭಾರತವು ಅತಿ ದೊಡ್ಡ ಕೊಡುಗೆದಾರವಾಗಿದ್ದು, 65.91 ಮಿಲಿಯನ್ ಡಾಲರ್ ನೀಡಿದೆ. ಬಾಂಗ್ಲಾದೇಶ (2.99 ಮಿಲಿಯನ್), ಮಾಲ್ಡೀವ್ಸ್ (1.82 ಮಿಲಿಯನ್), ಭೂಟಾನ್ (1.35 ಮಿಲಿಯನ್), ನೇಪಾಳ (1.26 ಮಿಲಿಯನ್) ಹಾಗೂ ಪಾಕಿಸ್ತಾನ (1,36,810 ಡಾಲರ್) ನಂತರದ ಸ್ಥಾನಗಳಲ್ಲಿಿವೆ.
ವಿಶ್ವವಿದ್ಯಾಲಯದ ಪ್ರವೇಶ ಹಂಚಿಕೆ ದೇಶವಾರು ಕೊಡುಗೆ ಆಧಾರಿತವಾಗಿದೆ. ಭಾರತಕ್ಕೆ 50 ಶೇಕಡಾ ಸೀಟುಗಳು, ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕೆ ತಲಾ 10 ಶೇಕಡಾ, ಅಫ್ಘಾನಿಸ್ತಾನ, ಭೂಟಾನ್, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕೆಗೆ ತಲಾ 4 ಶೇಕಡಾ ಸೀಟುಗಳನ್ನು ನೀಡಲಾಗಿದೆ. ಉಳಿದ 10 ಶೇಕಡಾ ಸೀಟುಗಳು ಸಾರ್ಕ್ ಹೊರಗಿನ ದೇಶಗಳಿಗೆ ಮೀಸಲಾಗಿದೆ.
ಕೊಡುಗೆಗಳಲ್ಲಿ ಅಸಮತೋಲನ
2025ರ ಮಾಹಿತಿಯ ಪ್ರಕಾರ, ಭಾರತ ತನ್ನ 50 ಶೇಕಡಾ ಪಾಲಿಗಿಂತ ಹೆಚ್ಚು 52.5 ಶೇಕಡಾ ಕೊಡುಗೆ ನೀಡಿದೆ. ಬಾಂಗ್ಲಾದೇಶ 25.8 ಶೇಕಡಾ ಕೊಡುಗೆ ನೀಡಿ ತನ್ನ ಪಾಲಿಗಿಂತ ಹೆಚ್ಚಿನ ಹೊಣೆ ಹೊತ್ತಿದೆ.
ಭೂಟಾನ್ 4.4 ಶೇಕಡಾ ಕೊಡುಗೆ ನೀಡಿ ತನ್ನ ಪಾಲಿಗೆ ಸಮೀಪವಾಗಿದೆ. ಮಾಲ್ಡೀವ್ಸ್ (9.5%) ಮತ್ತು ನೇಪಾಳ (7.3%) ತಮ್ಮ ಪಾಲಿಗಿಂತ ಹೆಚ್ಚು ಕೊಡುಗೆ ನೀಡಿದ್ದಾರೆ. ಪಾಕಿಸ್ತಾನ ಮಾತ್ರ 0.6 ಶೇಕಡಾ ಕೊಡುಗೆ ನೀಡಿದೆ.
ವಿದ್ಯಾರ್ಥಿಗಳ ವಿವರ
2024-25 ಶೈಕ್ಷಣಿಕ ವರ್ಷದಲ್ಲಿ ಅಫ್ಘಾನಿಸ್ತಾನದಿಂದ 10 ವಿದ್ಯಾರ್ಥಿಗಳು, ಬಾಂಗ್ಲಾದೇಶದಿಂದ 23, ಭೂಟಾನ್ನಿಂದ 12, ಭಾರತದಿಂದ 526, ನೇಪಾಳದಿಂದ 25 ಮತ್ತು ಶ್ರೀಲಂಕೆಯಿಂದ 3 ವಿದ್ಯಾರ್ಥಿಗಳು ಇದ್ದರು. ಪಾಕಿಸ್ತಾನ ಮತ್ತು ಮಾಲ್ಡೀವ್ಸ್ನಿಂದ ಯಾವುದೇ ವಿದ್ಯಾರ್ಥಿಗಳಿರಲಿಲ್ಲ.
ಪ್ರವೇಶದಲ್ಲಿ ಕುಸಿತ
2026ರ ಪ್ರವೇಶ ಚಕ್ರದಲ್ಲಿ ಅಫ್ಘಾನಿಸ್ತಾನದಿಂದ ಪದವಿ ಕೋರ್ಸ್ಗಳಿಗೆ 25 ಅರ್ಜಿಗಳು, ಸ್ನಾತಕೋತ್ತರ ಮತ್ತು ಪಿಎಚ್ಡಿ ಕೋರ್ಸ್ಗಳಿಗೆ ತಲಾ 66 ಅರ್ಜಿಗಳು ಬಂದಿದ್ದರೂ, ಅಂತಿಮವಾಗಿ ಯಾವುದೇ ಅಫ್ಘಾನ್ ವಿದ್ಯಾರ್ಥಿ ಸೇರಿಲ್ಲ.
ಈ ವರ್ಷದ ಹೊಸ ಬ್ಯಾಚ್ನಲ್ಲಿ ಭಾರತದಿಂದ 73 ವಿದ್ಯಾರ್ಥಿಗಳು, ನೇಪಾಳದಿಂದ 7, ಬಾಂಗ್ಲಾದೇಶದಿಂದ 6 ಮತ್ತು ಶ್ರೀಲಂಕೆಯಿಂದ 2 ವಿದ್ಯಾರ್ಥಿಗಳು ಸೇರಿದ್ದಾರೆ. ಅಫ್ಘಾನಿಸ್ತಾನ, ಭೂಟಾನ್, ಪಾಕಿಸ್ತಾನ, ಮಾಲ್ಡೀವ್ಸ್ ಹಾಗೂ ಸಾರ್ಕ್ ಹೊರಗಿನ ದೇಶಗಳಿಂದ ಯಾವುದೇ ವಿದ್ಯಾರ್ಥಿಗಳು ಸೇರಿಲ್ಲ.
ಇದನ್ನೂ ನೋಡಿ: ಆರ್ಎಸ್ಎಸ್ ನೋಂದಣಿ ಸುತ್ತಮುತ್ತ: ಎದ್ದಿರುವ ಪ್ರಶ್ನೆಗಳೇನು?
