ನವದೆಹಲಿ: ಮತ ಎಣಿಕೆಗೂ ಮುನ್ನ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವಿವಿಪ್ಯಾಟ್(ವಿವಿಪಿಎಟಿ) ಪರಿಶೀಲನೆ ಕೋರಿ ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಾಳೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.
ಇವಿಎಂ ಮತಗಳ ಎಣಿಕೆಯ ನಂತರದಲ್ಲಿ ವಿವಿಪ್ಯಾಟ್ ಪರಿಶೀಲನೆ ನಡೆಸುವ ಬದಲಿಗೆ ಎಣಿಕೆ ಆರಂಭವಾಗುವುದಕ್ಕೂ ಮೊದಲೇ ಪರಿಶೀಲನೆ ನಡೆಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಮೀನಾಕ್ಷಿ ಅರೋರಾ ಅರ್ಜಿಯ ಬಗ್ಗೆ ವಿವರಗಳು ಪ್ರಸ್ತಾಪಿಸಿದ ಬಳಿಕ ನಾಳೆ ಪ್ರಕರಣದ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಸೂಚಿಸಿದ್ದಾರೆ.
ಇದುವರೆಗೂ ದಿನ ಮತ ಎಣಿಕೆ ಮುಗಿದ ನಂತರ ವಿವಿಪ್ಯಾಟ್ ಪರಿಶೀಲನೆ ನಡೆಸಲಾಗುತ್ತಿತ್ತು. ಆದರೆ, ಮತ ಎಣಿಕೆ ಮುಗಿದ ನಂತರ ವಿವಿಪ್ಯಾಟ್ ಪರಿಶೀಲನೆಯಾಗುವ ವೇಳೆಗೆ ಏಜೆಂಟರು, ಪಕ್ಷಗಳು, ಅಭ್ಯರ್ಥಿಗಳು ಆ ಸಂದರ್ಭದಲ್ಲಿ ಇರುವುದಿಲ್ಲ. ಅವರ ಸಮ್ಮುಖದಲ್ಲಿ ಅಂದರೆ, ಮತ ಎಣಿಕೆಯ ಆರಂಭದಲ್ಲಿ ಪರಿಶೀಲನೆ ನಡೆಯಬೇಕು ಎಂದು ಅರ್ಜಿಯ ಮೂಲಕ ತಿಳಿಸಲಾಗಿದೆ.
ಈ ನಿಟ್ಟಿನಲ್ಲಿ 2019ರ ಮಾರ್ಗಸೂಚಿಗಳಿವೆ ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹೇಳಿದರು. ಆ ಮಾರ್ಗಸೂಚಿಯಲ್ಲಿ ವಿವಿಪ್ಯಾಟ್‌ಗಳ ಪರಿಶೀಲನೆಯನ್ನು 1 ಇವಿಎಂನಿಂದ 5 ಇವಿಎಂಗಳಿಗೆ ಹೆಚ್ಚಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಕನಿಷ್ಠ ಶೇ 50ರಷ್ಟು ಮತಗಟ್ಟೆಗಳಿಗೆ ವಿವಿಪ್ಯಾಟ್ ಪೇಪರ್ ಟ್ರೈಲ್ ಭೌತಿಕ ಪರಿಶೀಲನೆ ಕೋರಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿತ್ತು.
ಆದರೆ ಪ್ರಸ್ತುತ ಒಂದು ಮತಗಟ್ಟೆಗೆ ಸಂಬಂಧಿಸಿದಂತೆ ಒಂದು ಬೂತ್ ಮತಯಂತ್ರದ ವಿವಿಪ್ಯಾಟ್ ಮಾತ್ರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೀನಾಕ್ಷಿ ಅರೋರಾ ಹೇಳಿದ್ದಾರೆ. ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಈಗಾಗಲೇ ಮುಕ್ತಾಯವಾಗಿದ್ದು, ಮಾರ್ಚ್ 10ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ. ಮತ ಎಣಿಕೆ ಮಾಡುವುದಕ್ಕೂ ಮುನ್ನ ವಿವಿಪ್ಯಾಟ್ ಪರಿಶೀಲನೆಗೆ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ನ್ಯಾಯಾಲಯವು ಚುನಾವಣಾ ಆಯೋಗ ನಾಳಿನ ವಿಚಾರಣೆ ವೇಳೆ ಹಾಜರಿರಬೇಕು ಎಂದು ಸೂಚಿಸಿತು.
ಎಲ್ಲಾ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವಿವಿಪ್ಯಾಟ್ ಪರಿಶೀಲನೆಗಾಗಿ ಕೆಲವು ತಂತ್ರಜ್ಞರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ 2019ರ ಮೇನಲ್ಲಿ ವಜಾಗೊಳಿಸಿತ್ತು.