ಕೇಂದ್ರ ಸರಕಾರಕ್ಕೆ ಮುಖಭಂಗ: ರಾಜ್ಯ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ರಾಜ್ಯಕ್ಕೆ ಹೆಚ್ಚಿನ ಆಕ್ಸಿಜನ್ ಪೂರೈಕೆ‌ ಮಾಡಬೇಕೆಂದು ಕರ್ನಾಟಕ ಹೈಕೋರ್ಟ್‌ ನೀಡಿದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಕೇಂದ್ರ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.

ಕೇಂದ್ರವು ಕರ್ನಾಟಕಕ್ಕೆ ನೀಡುತ್ತಿರುವ ಆಮ್ಲಜನಕದ ಪಾಲನ್ನು 1200 ಮೆಟ್ರಿಕ್‌ ಟನ್‌ಗೆ ಹೆಚ್ಚಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿತ್ತು.  ಇದನ್ನು ಪ್ರಶ್ನಿಸಿದ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಇದನ್ನು ಓದಿ: ರಾಜ್ಯವನ್ನು ಲಾಕ್‌ಡೌನ್‌ ಮಾಡುವುದು ಅನಿವಾರ್ಯ: ಮುಖ್ಯಮಂತ್ರಿ ಬಿಎಸ್‌ವೈ

“ನಾವು ಆದೇಶವನ್ನು ಓದಿದ್ದೇವೆ, ಘಟನಾವಳಿಗಳನ್ನೂ ಅರಿತಿದ್ದೇವೆ. ತೂಗಿನೋಡಿ, ಆಲೋಚನಾಪರವಾಗಿ ಅದೇಶವನ್ನು ನೀಡಲಾಗಿದೆ ಎಂದು ನಾವು ಹೇಳುತ್ತೇವೆ.ʼʼ ಎಂದು ರಾಜ್ಯ ಹೈಕೋರ್ಟ್ ಆದೇಶವನ್ನು ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಎತ್ತಿಹಿಡಿದರು. ಕರ್ನಾಟಕದ ನಾಗರಿಕರು ತತ್ತರಿಸಲು ನಾವು ಬಿಡುವುದಿಲ್ಲ ಎಂದು ಅವರು ಕೇಂದ್ರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಹೇಳಿದರು.

ಹೈಕೋರ್ಟ್ ತನ್ನ ಬೇಡಿಕೆಯನ್ನು ಸರಿಯಾಗಿ ಪರಿಶೀಲಿಸಿದೆ ಮತ್ತಿ ಅವರ ನಿರ್ದೇಶನದಲ್ಲಿ ತಾನು ಮಧ್ಯಪ್ರವೇಶ ಮಾಡುವುದಿಲ್ಲ. ಕೇಂದ್ರದ ಮನವಿಯನ್ನು ಪುರಸ್ಕರಿಸಲು ನಮಗೆ ಯಾವ ಕಾರಣವೂ ಕಾಣಿಸುತ್ತಿಲ್ಲ ಎಂದು ಕೋರ್ಟ್ ತಿಳಿಸಿತು.

ಇದನ್ನು ಓದಿ: ಆಕ್ಸಜಿನ್‌ ಘಟಕವಿದೆ ಆದರೆ ಉತ್ಪಾದನೆ ಇಲ್ಲ : ಡಿಸಿಎಂ ನಿರ್ಲಕ್ಷ್ಯವೇ ಕಾರಣ

ಈಗಿನ ಬಿಕ್ಕಟ್ಟಿ ತೀವ್ರವಾಗಿದ್ದು ಕೇಂದ್ರದ ಆಕ್ಸಿಜನ್ ಹಂಚಿಕೆ ಯೋಜನೆಯಲ್ಲಿ ಹೈಕೋರ್ಟ್‌ಗಳು ಹಸ್ತಕ್ಷೇಪ ಮಾಡುವುದಕ್ಕೆ ನಮ್ಮ ಆಕ್ಷೇಪವಿದೆ ಎಂದು ಸಾಲಿಸಿಟರ್ ಜನರಲ್ ಹೇಳಿದರು.

ಕರ್ನಾಟಕ ಹೈಕೋರ್ಟ್ ಸುಮ್ಮನೇ ಅಂದಾಜಿನಂತೆ ಈ ಆದೇಶ ನೀಡಿಲ್ಲ. ಅದು ಕನಿಷ್ಠ 1200 ಮೆಟ್ರಿಕ್ ಟನ್ ಆಕ್ಸಿಜನ್ ಬೇಡಿಕೆ ಇದೆ ಎಂಬ ರಾಜ್ಯದ ಅಂದಾಜನ್ನು ಆಧಾರವಾಗಿಟ್ಟುಕೊಂಡಿದೆ. ರಾಜ್ಯದ ಬೇಡಿಕೆಯನ್ನು ಪರಿಗಣಿಸುವಂತೆ ಹೈಕೋರ್ಟ್ ಮೊದಲು ಸೂಚನೆ ನೀಡಿತ್ತು. ಆಕ್ಸಿಜನ್ ಕೋಟಾವನ್ನು ಸಮರ್ಪಕವಾಗಿ ಹೆಚ್ಚಿಸಿಲ್ಲ ಎನ್ನುವುದು ಗಮನಕ್ಕೆ ಬಂದಿದ್ದರಿಂದ ಮರುದಿನ ಆದೇಶ ಹೊರಡಿಸಿದೆ ಎಂದು ಸುಪ್ರೀಂಕೋರ್ಟ್ ಹೇಳಿತು.

ತುಷಾರ್‌ ಮೆಹ್ತಾ ಅವರು, “ಈ ಆದೇಶಗಳಿಂದ ಇತರೆ ರಾಜ್ಯಗಳ ಹೈಕೋರ್ಟ್‌ಗಳು ಸಹ ಆಮ್ಲಜನಕದ ವಿತರಣೆಗೆ ಪರಿಶೀಲಿಸಲು ಮುಂದಾಗುವಂತೆ ಮಾಡುತ್ತದೆ. ದಯವಿಟ್ಟು ಇದನ್ನು ಪರಿಗಣಿಸಬಾರದು ಎಂದು ಆದೇಶಿಸಬೇಕೆಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಚಂದ್ರಚೂಡ್‌ ಅವರು, “ನಾವು ವಿಸ್ತೃತವಾದ ವಿಷಯದ ಬಗ್ಗೆ ಗಮನಿಸುತ್ತಿದ್ದೇವೆ. ಆದರೆ, ಈ ಮಧ್ಯೆ ಕರ್ನಾಟಕದ ನಾಗರಿಕರನ್ನು ಕೈಬಿಡಲಾಗದು,” ಎಂದರು.

ದೇಶದಲ್ಲಿ 3.95 ಲಕ್ಷ ಪ್ರಕರಣಗಳ ನಡುವೆಯೂ ಕರ್ನಾಟಕ 1700 ಟನ್ ಆಕ್ಸಿಜನ್‌ಗೆ ಕೋರಿದೆ. ನ್ಯಾಯಾಲಯವು ಇದನ್ನೆಲ್ಲ ಸಮಗ್ರವಾಗಿಯೇ ಗಮನಿಸಿ ಈ ಆದೇಶವನ್ನು ನೀಡಿದೆ ಎಂದು ನ್ಯಾಯಪೀಠ ಹೇಳಿದೆ.

ಚಾಮರಾಜನಗರ, ಕಲಬುರ್ಗಿ ಮುಂತಾದೆಡೆ ಆಕ್ಸಿಜನ್ ಕೊರತೆಯಿಂದ ರೋಗಿಗಳು ಮೃತಪಟ್ಟ ಘಟನೆಗಳನ್ನು ಪರಿಗಣಿಸಿ ಕರ್ನಾಟಕ ಹೈಕೋರ್ಟ್ ಈ ಆದೇಶ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *