ಸಾರಿಗೆ ನೌಕರರ ಬೇಡಿಕೆ-ಆರನೇ ವೇತನ ಆಯೋಗ ಜಾರಿ ಇಲ್ಲ: ರಾಜ್ಯ ಸರಕಾರ

ಬೆಂಗಳೂರು : ರಾಜ್ಯದ ಸಾರಿಗೆ ನೌಕರರು ಮಂಡಿಸಿರುವ ಒಂಬತ್ತು ಪ್ರಮುಖ ಬೇಡಿಕೆಗಳ ಪೈಕಿ ಆರನೇ ವೇತನ ಆಯೋಗದ ವರದಿ ಜಾರಿಯ ಬೇಡಿಕೆಯನ್ನ ಮಾತ್ರ ಈಡೇರಿಸಲು ಸಾಧ್ಯ ಇಲ್ಲ ಎಂದು ರಾಜ್ಯ ಸರಕಾರ ಸ್ಪಷ್ಟನೆ ನೀಡಿದೆ.

ಮುಖ್ಯಮಂತ್ರಿಗಳೊಂದಿಗೆ ಸಾರಿಗೆ ಮತ್ತು ಪೊಲೀಸ್‌ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ನಡೆದ ತುರ್ತು ಸಭೆಯ ಬಳಿಕ ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಮಾಧ್ಯಮಗಳಿಗೆ ಸಭೆಯ ತೀರ್ಮಾನಗಳನ್ನು ವಿವರಿಸಿದರು.

‘ಆರನೇ ವೇತನ ಆಯೋಗದ ವರದಿಯಂತೆ ವೇತನ ಹೆಚ್ಚಿಸಲು ಆಗ್ರಹಿಸಿ ನಾಳೆಯಿಂದ (ಏ. 7ರಿಂದ) ಮುಷ್ಕರಕ್ಕೆ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ. ಕೋವಿಡ್‌ ಪರಿಸ್ಥಿತಿ ಕಾರಣಕ್ಕೆ ಮುಷ್ಕರಕ್ಕೆ ಹೋಗದಂತೆ ನೌಕರರಲ್ಲಿ ಮನವಿ ಮಾಡುತ್ತಿದ್ದೇವೆ’ ಎಂದು ರವಿಕುಮಾರ್ ತಿಳಿಸಿದರು.

ಇದನ್ನು ಓದಿ : ಸಾರಿಗೆ ನೌಕರರ ಮುಷ್ಕರ :‌ ಖಾಸಗಿ ಬಸ್‌ ಓಡಿಸಲು ಸಿದ್ಧತೆ – ಸವದಿ

ನಾಳೆ ಸಾರಿಗೆ ನೌಕರರ ನಡೆಸಲು ಉದ್ದೇಶಿಸಿರುವ ಮುಷ್ಕರದ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ರವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಕಳಸದ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ  ಶಿಖಾ, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಸೇರಿದಂತೆ ಪ್ರಮುಖ ಸಭೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಿತು.

ಮುಖ್ಯಮಂತ್ರಿ ಜೊತೆ ನಡೆದ ಸಭೆಯ ಬಳಿಕ ಮಾತನಾಡಿದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌, ‘ವೇತನವನ್ನು ಶೇ 8ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಚುನಾವಣಾ ನೀತಿಸಂಹಿತೆ ಜಾರಿಯಲ್ಲಿ ಇದೆ. ಹೀಗಾಗಿ, ವೇತನ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಚುನಾವಣಾ ಆಯೋಗಕ್ಕೆ ನೆನ್ನೆಯೇ ಪತ್ರ ಬರೆಯಲಾಗಿದೆ. ಅನುಮತಿ ಸಿಕ್ಕಿದರೆ ತಕ್ಷಣ ಜಾರಿಗೊಳಿಸುತ್ತೇವೆ’ ಎಂದರು.

‘ಕೋವಿಡ್‌ ಕಾರಣದಿಂದ ಸಾರಿಗೆ ನಿಗಮಗಳಿಗೆ ಪ್ರತಿದಿನ ರೂ. 4 ಕೋಟಿಯಷ್ಟು ನಷ್ಟವಾಗುತ್ತಿದೆ. ಎಲ್ಲ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದರೂ ಸಹ ಸಾರಿಗೆ ನೌಕರರ ವೇತನಕ್ಕೆ ಸರ್ಕಾರ ಯಾವುದೇ ಸಮಸ್ಯೆ ಮಾಡಿಲ್ಲ. ಹೋದ ವರ್ಷವೂ ಸಾರಿಗೆ ಇಲಾಖೆಗೆ ಆದಾಯ ಇಲ್ಲದಿದ್ದರೂ ಸಾರಿಗೆ ನೌಕರರ ಸಂಬಳಕ್ಕಾಗಿ ರೂ. 2,100 ಕೋಟಿ ಬಿಡುಗಡೆ ಮಾಡಲಾಗಿತ್ತು. ಯಾರಿಗೂ ಸಂಬಳ ಕಡಿತ ಮಾಡಿಲ್ಲ. ಬಿಎಂಟಿಸಿ ನೌಕರರಿಗೂ ಜೂನ್‌ವರೆಗೆ ಸಂಬಳ ಕೊಡಲು ಆದೇಶಿಸಲಾಗಿದೆ. ಆದಾಯ ಇಲ್ಲವೆಂದು ಸಂಬಳ ಕಡಿತ ಮಾಡಿಲ್ಲ’ ಎಂದರು.

ಇದನ್ನು ಓದಿ : ಬೋಂಡಾ ಬಜ್ಜಿ ಮಾರಾಟ ಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಿದ ಸಾರಿಗೆ ನೌಕರರು

‘ನೌಕರರು ಮುಷ್ಕರಕ್ಕೆ ಹೋದರೆ ಜನರಿಗೆ ತೊಂದರೆ ಆಗಲಿದೆ. ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಸಾರಿಗೆ ಇಲಾಖೆ ತೆಗೆದುಕೊಳ್ಳಲಿದೆ. ಮ್ಯಾಕ್ಸಿ ಕ್ಯಾಬ್‌ಗಳು ಸೇರಿದಂತೆ ಖಾಸಗಿ ವಾಹನಗಳನ್ನು ಓಡಿಸಲು ಅನುಮತಿ ನೀಡುತ್ತೇವೆ. ಅದಕ್ಕೆ ಸಾರಿಗೆ ಆಯುಕ್ತರು ಕ್ರಮ ತೆಗೆದುಕೊಳ್ಳಲಿದ್ದಾರೆ’ ಎಂದರು.

‘ಕೋವಿಡ್‌ ಕಾರಣದಿಂದ ಸಮಸ್ಯೆ ಇದ್ದರೂ ಸಮಸ್ಯೆ ಹಾಗೆಯೇ ಮುಂದುವರೆದಿದೆ. ಪ್ರತಿದಿನ 45 ಲಕ್ಷದಷ್ಟು ಸಾರ್ವಜನಿಕರು ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದರು. ಕೋವಿಡ್‌ ಕಾರಣದಿಂದ ಆ ಸಂಖ್ಯೆ 20 ಲಕ್ಷಕ್ಕೆ ಇಳಿದಿದೆ. ಈ ಸಂಖ್ಯೆ ಇನ್ನೂ ಕಡಿಮೆಯಾಗುವ ಸಾಧ್ಯತೆ ಇದೆ.’ ಎಂದರು.

ಯಾರಾದರೂ ಪ್ರಚೋದನೆ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಎಸ್ಮಾ ಜಾರಿಗೂ ಸಿದ್ಧವಿದ್ದೇವೆ. ಕೋಡಿಹಳ್ಳಿ ಚಂದ್ರಶೇಖರ್ ಅವರಷ್ಟೇ ಅಲ್ಲ ಯಾರಾದರೂ ಪ್ರಚೋದನಕಾರಿಯಾಗಿ ಹೇಳಿಕೆ ಕೊಟ್ಟರೆ ಕಾನೂನು ರೀತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ರವಿ ಕುಮಾರ್ ತಿಳಿಸಿದರು.

ರಾಜ್ಯದ ಉಪಮುಖ್ಯಮಂತ್ರಿಗಳು ಸಹ ಲಕ್ಷ್ಮಣ ಸವದಿ ಅವರು ಮೇ 4ರ ನಂತರ ಸಾರಿಗೆ ನೌಕರರ ಬೇಡಿಕೆ ಈಡೇರಿಸುವುದಾಗಿ ಹೇಳಿದ್ದಾರೆ. 6ನೇ ವೇತನ ಆಯೋಗದ ಶಿಫಾರಸಿನಂತೆ ಸಂಬಳ ಹೆಚ್ಚಳ ಸಾಧ್ಯವಿಲ್ಲ. ಆದರೆ, ಶೇ. 8ರಷ್ಟು ಸಂಬಳ ಹೆಚ್ಚಳಕ್ಕೆ ಸರ್ಕಾರ ಸಿದ್ಧವಿದೆ ಎಂದು ರವಿ ಕುಮಾರು ವಿವರಿಸಿದರು.

ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರ ವಿಚಾರದಲ್ಲಿ ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳು ಸಭೆಯಲ್ಲಿ ಸೂಚಿಸಿದರೆಂಬ ಮಾಹಿತಿ ಕೇಳಿಬಂದಿದೆ.

ಇದನ್ನು ಓದಿ : ಲಜ್ಜೆಗೆಟ್ಟ ರಾಜಕಾರಣವೂ ಮಾನಗೆಟ್ಟ ಮಾಧ್ಯಮವೂ

‘ಸಾರಿಗೆ ನೌಕರರ ಕಠಿಣ ನಿರ್ಧಾರದಿಂದಾಗಿ ಅವರೊಂದಿಗೆ ಸಂಧಾನ ಸಭೆ ನಡೆಸುವ ಪ್ರಶ್ನೆಯೇ ಇಲ್ಗ. ಬೇಡಿಕೆ ಈಡೇರಿಸುವ ಕ್ರಮದ ಭಾಗವಾಗಿ ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆಯಲಾಗಿದೆ. ನೌಕರರು ಮುಷ್ಕರ ನಡೆಸಿದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ, ಪೊಲೀಸ್‌ ಕಾಯ್ದೆ, ಎಸ್ಮಾ ಸೇರಿದಂತೆ ಯಾವುದಾದರೂ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದ್ದೇವೆ’ ಎಂದು ಎಚ್ಚರಿಕೆ ನೀಡಿದರು.

ಎಸ್ಮಾ ಜಾರಿ ಸಾಧ್ಯತೆ : ಎಸೆನ್ಷಿಯಲ್ ಸರ್ವಿಸಸ್ ಮೈಂಟೆನೆನ್ಸ್ ಆ್ಯಕ್ಟ್ ಎಸ್ಮಾ ಎಂದು ಕರೆಯುವ ಈ ಕಾನೂನು ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆ. ಎಸ್ಮಾ ಜಾರಿಯಾದರೆ, ಜನರಿಗೆ ಅತ್ಯಗತ್ಯ ಎನಿಸುವ ಸೇವೆಗಳನ್ನ ಒದಗಿಸುವವರು ಉದ್ದೇಶಪೂರ್ವಕವಾಗಿ ಕರ್ತವ್ಯಕ್ಕೆ ಗೈರಾದಾಗ ಕಾನೂನು ರೀತಿ ಕ್ರಮ ಕೈಗೊಳ್ಳಬಹುದು.

ಸಾರಿಗೆ ನೌಕರರು ಮುಷ್ಕರ ನಡೆಸಿದರೆ ಸಾರ್ವಜನಿಕರ ಸಂಚಾರಕ್ಕೆ ತಡೆಯಾಗದಂತೆ ಸರ್ಕಾರ ಪರ್ಯಾಯ ವ್ಯವಸ್ಥೆಯನ್ನೂ ಯೋಜಿಸಿದೆ. ಅದರಂತೆ ನಾಳೆ ರಾಜ್ಯಾದ್ಯಂತ ಖಾಸಗಿ ಬಸ್ಸುಗಳನ್ನ ರಸ್ತೆಗೆ ಬಿಡಲಾಗುತ್ತಿದೆ. ಕ್ಯಾಬ್‌ಗಳು ಮತ್ತು  ಶಾಲಾ ಬಸ್‌ಗಳಿಗೆ ಪ್ರಯಾಣ ದರ ನಿಗಡಿಪಡಿಸಿ ಓಡಾಡಲು ಅನುಮತಿ ನೀಡುತ್ತೇವೆ. ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ವಸೂಲು ಮಾಡಿದರೆ ಕ್ರಮ ತೆಗೆದುಕೊಳ್ಳುಲಾಗಿದೆ.

14 ಜಿಲ್ಲೆಗಳಲ್ಲಂತೂ ಖಾಸಗಿ ಬಸ್ ವ್ಯವಸ್ಥೆ ಚೆನ್ನಾಗಿ ಇದ್ದು ಅಲ್ಲಿ ಸಾರಿಗೆ ನೌಕರರ ಬಂದ್ ಬಿಸಿ ತಟ್ಟದಂತೆ ಸರಕಾರ ಕ್ರಮಕೈಗೊಂಡಿದೆ. ರಾಜ್ಯ ಖಾಸಗಿ ಬಸ್ ಸ್ಟೇಜ್ ಕ್ಯಾರಿಯೇಜ್ ಫೆಡರೇಶನ್ ಸಂಸ್ಥೆ ಕೂಡ ಇದನ್ನ ಖಚಿತಪಡಿಸಿದೆ. ನಾಳೆ ಸ್ಟೇಜ್ ಕ್ಯಾರಿಯರ್ ಖಾಸಗಿ ಬಸ್ಸುಗಳು ಯಾವುದೇ ದರ ಹೆಚ್ಚಳ ಇಲ್ಲದೆ ಈಗಿರುವ ದರದಲ್ಲೇ ಸೇವೆ ನೀಡಲು ತೀರ್ಮಾನಿಸಿದ್ದೇವೆ ಎಂದು ಫೆಡರೇಶನ್​ನ ಉಪಾಧ್ಯಕ್ಷ ಕೆ.ಕೆ. ಬಾಲಕೃಷ್ಣ ಸ್ಪಷ್ಟಪಡಿಸಿದರು.

‍‘ಸಾಲು ಸಾಲು ರಜೆಗಳು ಇರುವುದರಿಂದ ಸಾರಿಗೆ ಇಲಾಖೆಯ ನಿರ್ವಹಣೆಯೊಂದಿಗೆ ರೈಲು ಸೌಲಭ್ಯ ಹೆಚ್ಚುಸುವಂತೆಯೂ ರೈಲ್ವೆ ಇಲಾಖೆ ಪತ್ರ ಬರೆಯುತ್ತೇವೆ. ಬೆಳಗಾವಿ, ಕಲಬುರ್ಗಿ, ಮೈಸೂರು ಕಡೆಗೆ ಸಂಚರಿಸುವ ರೈಲುಗಳ ಸಂಖ್ಯೆ ಹೆಚ್ಚಿಸಲು ಕೇಳಿಕೊಳ್ಳಲಾಗಿದೆ’ ಎಂದರು.

Donate Janashakthi Media

Leave a Reply

Your email address will not be published. Required fields are marked *