ಸರಕಾರಿ ಶಿಕ್ಷಕರಾದ ಲಿಂಗತ್ವ ಅಲ್ಪಸಂಖ್ಯಾತರು

ಬೆಂಗಳೂರು : ಸರ್ಕಾರಿ ಶಾಲೆಗಳ ಶಿಕ್ಷಕರ ಹುದ್ದೆಗೆ ಇದೇ ಮೊದಲ ಸಲ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಮೂವರು ನೇಮಕವಾಗುವ ಮೂಲಕ ವಿಶಿಷ್ಟ ಸಾಧನೆ ಮೆರೆದಿದ್ದಾರೆ.

ಶಿಕ್ಷಕರ ನೇಮಕಾತಿ ಪರೀಕ್ಷೆಗೆ 10 ತೃತೀಯ ಲಿಂಗಿಗಳು ಹಾಜರಾಗಿದ್ದರು. ಅವರ ಪೈಕಿ ಅಂತಿಮ ಸುತ್ತಿನಲ್ಲಿ ಆಯ್ಕೆಯಾದವರು ಮೂವರು – ಸುರೇಶ್‌ ಬಾಬು, ರವಿ ಕುಮಾರ್‌ ವೈಆರ್‌ ಮತ್ತು ಅಶ್ವತ್ಥಮ್ಮ. ಈ ಪೈಕಿ ಬಾಬು ಇಂಗ್ಲಿಷ್‌ ಭಾಷಾ ಶಿಕ್ಷಕರಾದರೆ, ಉಳಿದಿಬ್ಬರು ಸಮಾಜ ವಿಜ್ಞಾನ ಶಿಕ್ಷಕರು.

ಲಿಂಗತ್ವ ಅಲ್ಪಸಂಖ್ಯಾತರಿಗೆ ಶಿಕ್ಷಕರ ನೇಮಕಾತಿಯಲ್ಲಿ ಶೇ.1ರಷ್ಟು ಮೀಸಲಾತಿ ನೀಡಲಾಗಿತ್ತು. ಪ್ರಪ್ರಥಮ ಬಾರಿಗೆ ಮೂವರು ಲಿಂಗತ್ವ ಅಲ್ಪಸಂಖ್ಯಾತರು 1:1 ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ. ಈ ಮೂವರು ಆಯ್ಕೆಯಾಗಿದ್ದಕ್ಕೆ ಸಂಗಮ ಸಂಸ್ಥೆಯ ಕಾರ್ಯಕ್ರಮ ನಿರ್ದೇಶಕರಾದ ನಿಶಾ ಗುಲೂರ್ ಸಂತಸ ವ್ಯಕ್ತಪಡಿಸಿದ್ದಾರೆ.

ಲಿಂಗತ್ವ ಅಲ್ಪಸಂಖ್ಯಾತರಿಗೆ ಉದ್ಯೋಗದಲ್ಲಿ ಮೀಸಲಾತಿ ಬೇಕು ಎಂದು ದಶಕದ ಹಿಂದೆ ಹೋರಾಟ ಮಾಡಿದ್ದೆವು. ಅದರ ಫಲವಾಗಿ ಶೇ.1 ರಷ್ಟು ಮೀಸಲಾತಿ ಸಿಕ್ಕಿತ್ತು. ಇದರ ಅನ್ವಯ ಈಗ ಮೂರು ಜನ ಶಿಕ್ಷಕರಾಗಿ ಆಯ್ಕೆಯಾಗಿದ್ದು ನಮ್ಮ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಇನ್ನುಮುಂದೆ ಬಹಳಷ್ಟು ಜನ ಲಿಂಗತ್ವ ಅಲ್ಪಸಂಖ್ಯಾತರು ವಿವಿಧ ಹುದ್ದೆಗಳಲ್ಲಿ ನೇಮಕವಾಗುವ ಭರವಸೆ ಮೂಡಿಸಿದ್ದಾರೆ ಎಂದೆನ್ನುತ್ತಾರೆ ನಿಶಾ ಗುಲೂರ್.

ಮೂವರು ಲಿಂಗತ್ವ ಅಲ್ಪಸಂಖ್ಯಾತರು ಶಿಕ್ಷಕರಾಗಿದ್ದಕ್ಕೆ ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಹಳಷ್ಟು ಜನ ಸಾಮಾಜಿಕ ಜಾಲತಾಣದಲ್ಲಿ ಇವರಿಗೆ ಶುಭಕೋರುತ್ತಿದ್ದಾರೆ.

ಈಗಾಗಲೇ ಕೇರಳ ಸರಕಾರ ಈ ಮೀಸಲಾತಿಯನ್ನು ಜಾರಿ ಮಾಡುವ ಮೂಲಕ ಮಾದರಿಯಾಗಿತ್ತು. ಲಿಂಗತ್ವ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರುವುದಕ್ಕಾಗಿ ಕೇರಳ ಸರಕಾರ ಸಾಕಷ್ಟು ಯೋಜನೆಗಳನ್ನು ತರುತ್ತಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತವಾಗಿ ನೃತ್ಯ ತರಬೇತಿ ಕೇಂದ್ರವನ್ನು ಕೇರಳದಲ್ಲಿ ಮೂರು ಕಡೆ ರಚನೆ ಮಾಡಲಾಗಿದೆ.  ಸ್ವಯಂ ಉದ್ಯೋಗ, ಉದ್ಯೋಗಕ್ಕೆ ಸಾಲ ಸೌಲಭ್ಯಗಳನ್ನು ನೀಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *