ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಬಳಿ ನಡೆಯುತ್ತಿದ್ದ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಾಗಾರದ ಮೇಲೆ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ನಡೆಸಿದ ಧಾಳಿ ಖಂಡನೀಯ. ನುಸ್ರತುಲ್ ಯೆಂಗ್ ಮನ್ಸ್ ಅಸೋಸಿಯೇಷನ್ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಾಗಾರದ ಮೇಲಿನ ಧಾಳಿಗೆ ಅಲ್ಲಿ ಧಾರ್ಮಿಕ ಪ್ರವಚನ ನೀಡಲಾಗುತ್ತಿದೆ ಎಂಬುದು ಕೇವಲ ಒಂದು ದುರುದ್ದೇಶಪೂರಿತ ಆರೋಪವಾಗಿದೆ. ಅದು ಎಲ್ಲರಿಗೂ ಮುಕ್ತವಾದ, ಪಾರದರ್ಶಕವಾಗಿದ್ದ ಕಾರ್ಯಕ್ರಮವಾಗಿದ್ದರೂ, ಅಂತಹ ಯಾವುದೂ ಇರಲಿಲ್ಲವಾದರೂ ಶಿಕ್ಷಣದ ಕಲಿಕೆಯನ್ನು ಹಾಳುಗೆಡಹುವ ಉದ್ದೇಶಕ್ಕೆ ಮತೀಯವಾದೀ ಬಣ್ಣ ಹಚ್ಚಲಾಗಿದೆ. ತರಗತಿಗಳಿಗೆ ನುಗ್ಗಿ ದಾಂಧಲೆ ನಡೆಸಿದವರ ಮೇಲೆ ಕ್ರಮ ವಹಿಸುವುದಕ್ಕೆ ಬದಲಾಗಿ ಧಾಳಿಗೊಳಗಾದವರ ಮೇಲೆಯೇ ಮೊಕದ್ದಮೆ ಹೂಡಿರುವ ಪೊಲೀಸರ ಕ್ರಮ ಅತ್ಯಂತ ಆಕ್ಷೇಪಣೆಯ ನಡೆ ಮಾತ್ರವಲ್ಲ, ಮುಂಬರುವ ಅಪಾಯಗಳ ದಿನಗಳ ಸ್ಪಷ್ಟ ನಿದರ್ಶನವಾಗಿದೆ.
ಇದನ್ನು ಓದಿ: ಸಂಘಪರಿವಾರ ಮತ್ತು ಧರ್ಮ
ಬಿಜೆಪಿ ಮತ್ತು ಸಂಘ ಪರಿವಾರಗಳು ಮುಂಬರುವ ಚುನಾವಣೆಯಲ್ಲಿ ರಾಜಕೀಯ ಲಾಭವನ್ನು ಹೊಡೆದುಕೊಳ್ಳಲು ಯಾವ ಮಾರ್ಗಕ್ಕೆ ಎಳೆಸಲು ಹಿಂಜರಿಯುತ್ತಿಲ್ಲ ಎನ್ನುವುದು ಪ್ರತಿ ಘಟನೆಗಳಲ್ಲೂ ಸ್ಪಷ್ಟವಾಗಿ ವ್ಯಕ್ತವಾಗುತ್ತಿದೆ. ಗೋ ರಕ್ಷಣೆ, ರಕ್ಷಕರ ಹೆಸರಿನಲ್ಲಿ ನಡೆಸುವ ಕ್ರಿಮಿನಲ್ ಕೃತ್ಯಗಳಿಗೆ ಬಹುದೊಡ್ಡ ಗೌರವವನ್ನು ಕಲ್ಪಿಸಿ ಕೊಡುವ ಪ್ರಯತ್ನಗಳು ಕರಾವಳಿಯ ಉದ್ದಕ್ಕೆ ನಡೆಯುತ್ತಲೇ ಇವೆ. ಅವು ಲವ್ ಜಿಹಾದ್, ಹಿಜಾಬ್, ಸಂಪ್ರದಾಯ ಪಾಲನೆ ಹೀಗೆ ಸಾಮಾಜಿಕ ಸಾಮರಸ್ಯವನ್ನು ನಾಶಗೊಳಿಸುವುದಕ್ಕೆ ಏನೇನೋ ಹೆಸರುಗಳನ್ನು ಹೊಂದಿರುತ್ತವೆ.
ಪದೇ ಪದೇ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರ ಮೇಲೆ ನಡೆಯುವ ಸಂಘಪರಿವಾರದ ಧಾಳಿಗಳು ಮತೀಯ ದ್ವೇಷ ಹೆಚ್ಚಿಸಿ, ವಿಭಜನೆ ತರುವ ದಿಕ್ಕಿನಲ್ಲಿವೆ. ವಿಟ್ಲದಲ್ಲಿನ ಶಿಕ್ಷಣ ಕಾರ್ಯಾಗಾರದಲ್ಲಿ ಹಾಜರಾದವರು ವಿವಿಧ ಮತಧರ್ಮ, ವಿವಿಧ ಜಾತಿಗಳಿಗೆ ಸೇರಿದವರು. ಇವೇನೇ ಇದ್ದರೂ ಕಲಿಯುವ ಹಂಬಲದ ವಿದ್ಯಾರ್ಥಿಗಳು. ಈ ಶಿಕ್ಷಣದ ಕ್ಯಾಂಪ್ ಗೆ ಬೇಕೋ ಬೇಡವೋ ಎನ್ನುವುದನ್ನು ನಿರ್ಧರಿಸಬೇಕಾದವರು ಅವರು ಹಾಗೂ ಪಾಲಕರು ಮಾತ್ರ. ಸದುದ್ದೇಶದ ಇಂತಹ ಖಾಸಗಿ ಕಾರ್ಯಕ್ರಮವನ್ನು ಹಾಳುಗೆಡಹುವುದು ಅಕ್ಷಮ್ಯ. ಇಲ್ಲಿ ಕಲಿಯಲು ಬಂದಿದ್ದವರು ವಿವಿಧ ಜಾತಿ, ಮತಧರ್ಮಗಳಿಗೆ ಸೇರಿದವರು ಎನ್ನುವುದು ಯುವಪೀಳಿಗೆಗೆ, ಸಮಾಜಕ್ಕೆ ಒಂದು ಸಶಕ್ತ ಸಂದೇಶವಾಗಿದೆ. ಆದರೆ ಅಂತಹ ಸೌಹಾರ್ದತೆ, ಸಾಮರಸ್ಯ ಬಲಗೊಳಿಸುವುದು, ಬೆಳೆಸುವುದನ್ನೇ ಅಪರಾಧವಾಗಿಸಿದ ಪೊಲೀಸ್ ಇಲಾಖೆಯ ಅಸಹನೆಯ ವರ್ತನೆಯೂ ಖಂಡನೀಯ. ದೇಶದ ಸಂವಿಧಾನ, ಕಾನೂನಿಗೆ ನಿಷ್ಠೆ ವ್ಯಕ್ತಪಡಿಸಬೇಕಿರುವವರು ಸಂವಿಧಾನ ವಿರೋಧಿ ಶಕ್ತಿಗಳ ಅಣತಿಯಂತೆ ವರ್ತಿಸುತ್ತಿರುವುದು ಪ್ರಜಾಪಭುತ್ವ ವಿರೋಧಿ ಕೃತ್ಯವಾಗಿದೆ.
ಮತೀಯ ಮೂಲಭೂತವಾದಿಗಳು ಮತ್ತು ಸಂಘಪರಿವಾರ ಶಿಕ್ಷಣ, ಜನಜಾಗೃತಿಯ ಕಡು ವಿರೋಧಿಗಳು ಎನ್ನುವುದು ಹಿಜಾಬ್ ವಿವಾದದ ಪ್ರಕರಣದಲ್ಲಿ ಎದ್ದು ಕಂಡಿತು. ಸರಕಾರವೇ ಈ ವಿವಾದ ವಿಸ್ತರಿಸಿ ಭುಗಿಲೇಳುವಂತೆ ಮಾಡಲು ಸಹಕರಿಸಿತು. ಕರಾವಳಿಯಲ್ಲಿ ಸಂಘಪರಿವಾರ ನಡೆಸುವ ಪುಂಡಾಟಿಕೆಗಳನ್ನು ಮಟ್ಟ ಹಾಕುವ ಬದಲು ಕುಮ್ಮಕ್ಕು ನೀಡುವ, ಸಮರ್ಥಿಸುವ ಕ್ರಮಗಳು ಅವು ಇನ್ನಷ್ಟು ಹೆಚ್ಚಾಗುವಂತೆ ಮಾಡುತ್ತಿವೆ. ಮಾತ್ರವಲ್ಲ, ಸಮಾಜ ವಿರೋಧಿ, ಕ್ರಿಮಿನಲ್ ಗಳಿಗೆ ಧರ್ಮ ರಕ್ಷಣೆಯ ಗೌರವದ ಸ್ಥಾನವನ್ನೂ ತಂದು ಕೊಡುತ್ತಿವೆ. ಎಳೆಯ ಪ್ರಾಯದಲ್ಲೇ ಆ ಮನಸ್ಸುಗಳಿಗೆ ವಿಷ ಉಣಿಸಿದಲ್ಲಿ ನಾಳಿನ ಸಮಾಜ ಹೇಗಿದ್ದೀತು ಎಂದು ಇವರು ಸ್ವಲ್ಪವಾದರೂ ಚಿಂತಿಸಿದ್ದಾರೆಯೇ?
ವಿಟ್ಲದಲ್ಲಿ ನಡೆದ ಪ್ರಕರಣವನ್ನು ಸರಕಾರ, ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ದಾಂಧಲೆ ನಡೆಸಿ, ಕಲಿಯುವಿಕೆಯನ್ನು ಹಾಳುಗೆಡಹಿದ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೋಮುವಾದಿಗಳ ಇಂತಹ ಕೃತ್ಯಗಳು ಬಡ, ಸಾಮಾನ್ಯ ಜನರ ಮಕ್ಕಳ ಶಿಕ್ಷಣದ ಉತ್ತಮ ಸಾಧನೆಯನ್ನು ತಡೆಯುವ ವಂಚಕ ಕೃತ್ಯಗಳು ಎಂಬುದನ್ನು ಸಾರ್ವಜನಿಕರೂ ಅರ್ಥ ಮಾಡಿಕೊಳ್ಳಬೇಕು. ಅವರ ಹುನ್ನಾರಗಳನ್ನು ಸೋಲಿಸಿ ಶಾಂತಿ, ಸಾಮರಸ್ಯ ಬಲಗೊಳಿಸಬೇಕು. ಪ್ರತಿಗಾಮಿಗಳಿಗೆ ಬುದ್ಧಿ ಕಲಿಸಬೇಕು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ