ಹಾಸ್ಟೆಲ್‌ ವಿದ್ಯಾರ್ಥಿಗಳ ಸೌಲಭ್ಯದ ಹೆಸರಲ್ಲಿ ಕೋಟಿ ಕೋಟಿ ಹಣ ಗುಳಂ ಮಾಡಿದ ಅಧಿಕಾರಿಗಳು

  • ಹಾಸ್ಟೆಲ್‌ ಮಕ್ಕಳ ಮಂಚ, ದಿಂಬು, ಹಾಸಿಗೆಯನ್ನು ಬಿಡದ ಭ್ರಷ್ಟರು
  • ಬಿಸಿಎಂ ಜಿಲ್ಲಾಧಿಕಾರಿ ಹರ್ಷಾ ಕೋಟಿ ಕೋಟಿ ಹಣ ಲೂಟಿ ಹೊಡೆದಿದ್ದಾರೆ ಎಂಬ ಆರೋಪ
  • ಸಮಗ್ರ ತನಿಖೆಗೆ ವಿದ್ಯಾರ್ಥಿ ಸಂಘಟನೆಗಳ ಆಗ್ರಹ

ಹಾಸನ : ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಕೋಟಿ ಕೋಟಿ ರೂಪಾಯಿ ಗೋಲ್‌ಮಾಲ್ ಆಗಿರುವ ಬಗ್ಗೆ ಅತ್ಯಂತ ಗಂಭೀರವಾದ ಆರೋಪ ಕೇಳಿಬಂದಿದೆ. ಹಾಸ್ಟೆಲ್‌ ನಲ್ಲಿ ವಿದ್ಯಾರ್ಥಿಗಳಿಗೆ  ಸಿಗಬೇಕಿದ್ದ ಮಂಚ, ಹಾಸಿಗೆ, ದಿಂಬು ಖರದೀಯಲ್ಲಿ ಅಕ್ರಮವೆಸಗಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ವಾಗೀಶ್‌ ದಾಖಲೆ ಸಮೇತ ಆರೋಪಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ಹಾಸ್ಟಲ್ ವಿದ್ಯಾರ್ಥಿಗಳ ಕೋಟಿ ಕೋಟಿ ಹಣವನ್ನ ಮಂಚ, ಹಾಸಿಗೆ, ದಿಂಬು ಖರೀದಿ ಹೆಸರಿನಲ್ಲಿ ಕೋಟ್ಯಾಂತರ ರೂ ಸ್ಚಾಹ ಮಾಡಿದ್ದಾರೆ.  ಹಾಸನದ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಇಂತಹದ್ದೊಂದು ಬೃಹತ್ ಗೋಲ್ಮಾಲ್ ನಡೆದಿದ್ದು, ಇಲಾಖೆಯ ಜಿಲ್ಲಾ ಅಧಿಕಾರಿಯಾಗಿದ್ದ  ಹರ್ಷರವರ  ಕೈವಾಡ ಇದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಹಾಸನ ಜಿಲ್ಲೆಯ ಹಿಂದುಳಿದ ವರ್ಗಗಳ ಇಲಾಖೆ ಅಡಿಯಲ್ಲಿ 102 ಹಾಸ್ಟೆಲ್ ಗಳಿಗೆ,ಈ ವಿದ್ಯಾರ್ಥಿಗಳ ಊಟ ವಸತಿ ಖರ್ಚಿಗಾಗಿ 2020-21 ರ ಅವಧಿಯಲ್ಲಿ 17 ಕೋಟಿ 54 ಲಕ್ಣ ಹಣ ಬಿಡುಗಡೆಯಾಗಿದೆ, ಆದ್ರೆ ಕೋವಿಡ್ ಕಾರಣದಿಂದ ಖರ್ಚಾಗದೆ ಉಳಿದಿದ್ದ 9 ಕೋಟಿ 81 ಲಕ್ಷ ಹಣದಲ್ಲಿ ಹಾಸ್ಟೆಲ್ ಗಳಿಗೆ ಮೂಲ ಸೌಲಭ್ಯ ನೀಡುವ ನೆಪದಲ್ಲಿ ಬಡ ಮಕ್ಕಳ ಹಣದಲ್ಲಿ ಅಧಿಕಾರಿಗಳು ಹಬ್ಬ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳಿಗಾಗಿ 1124 ಎರಡಂತಸ್ತಿನ ಮಂಚಗಳನ್ನ 2,76,49,125. ರೂಗೆ ( 2 ಕೋಟಿ, 76 ಲಕ್ಷದ  49 ಸಾವಿರದ 125 ರೂ)  ಖರೀದಿ ಮಾಡಿದ್ದಾರೆ, ಅಂದರೆ ಒಂದು ಮಂಚಕ್ಕೆ 24,577. ರೂ ಪಾವತಿ ಮಾಡಲಾಗಿದೆ.  ಆದರೆ ಇದೇ ಮಂಚದ ಬೆಲೆ ಮಾರುಕಟ್ಟೆಯಲ್ಲಿ ಕೇವಲ 13 ಸಾವಿರ ಇದೆ.  ಮಂಚ ಖರೀದಿಯಲ್ಲಿ  1 ಕೋಟಿ 30 ಲಕ್ಷದ 24 ಸಾವಿರದ 125 ರೂ ಲೂಟಿ ಮಾಡಿದ್ದಾರೆ ಎಂದು ದಾಖಲೆ ಸಮೇತ ಮಾಹಿತಿ ಹಕ್ಕು ಹೋರಾಟಗಾರ ವಾಗೀಶ್ ದೂರಿದ್ದಾರೆ.

ಹಾಸಿಗೆ ದಿಂಬು,ಡೆಸ್ಕ್, ಫ್ರಿಡ್ಜ್ ಖರೀದಿಯಲ್ಲೂ ಭಾರೀ ಅಕ್ರಮ : ಮಂಚ ಖರೀದಿಯಲ್ಲಷ್ಟೆ ಅಕ್ರಮ ನಡೆದಿಲ್ಲ ಎನ್ನುವ ವಾಗೀಶ್ ಅದೇ ರೀತಿ 3366 ಹಾಸಿಗೆಗಳನ್ನ   2,15,82,792 ರೂ (2 ಕೋಟಿ 15 ಲಕ್ಷದ 82 ಸಾವಿರದ 792 ರೂ) ಪಾವತಿಸಿ ಖರೀದಿ ಮಾಡಿದ್ದಾರೆ, ಒಂದು ಹಾಸಿಗೆಗೆ ಮಾರುಕಟ್ಟೆಯಲ್ಲಿ 3200 ಬೆಲೆ ಇದ್ದರೆ ಇವರು ಪಾವತಿ ಮಾಡಿರೊದು ಬರೊಬ್ಬರಿ 6412 ರೂ ಅಂದ್ರೆ ಬಹುತೇಕ ಡಬಲ್ ಹಣ ಹಾಸಿಗೆಗೆ ಖರ್ಚಾಗಿದೆ. ಹಾಸಿಗೆ ಖರೀದಿಯಲ್ಲೂ ಕೂಡ 1,08,11,592 ರೂ ( 1 ಕೋಟಿ 08 ಲಕ್ಷದ 11 ಸಾವಿರದ 592 ರೂ)  ಅವ್ಯವಹಾರ ಆಗಿದೆ ಎಂದು ಆರೋಪಿಸಲಾಗುತ್ತಿದೆ, ಬಳಕೆಯಾಗದ ಅನುದಾನ ಖರ್ಚ ಮಾಡಲೇ ಬೇಕೆಂದು ಹೀಗೆ ಬೇಕಾಬಿಟ್ಟಿ ದರ‌ನೀಡಿ ಖರೀದಿ ಮಾಡಿ ಹಣ ಲಪಟಾಯಿಸಿದ್ದಾರೆ ಎಂಬುದು ದೂರುದಾರರ ಆರೋಪವಾಗಿದೆ.

ಇದನ್ನೂ ಓದಿ : ಜೀತವಿಮುಕ್ತ ದಲಿತರಿಗೆ ಭೂ ಸಾಗುವಳಿಗೆ ಜಮೀನು ಮಂಜೂರು ಮಾಡಬೇಕೆಂದು ಪ್ರತಿಭಟನೆ

ಸರ್ಕಾರಿ ಸ್ವಾಮ್ಯದ ನಿಗಮದ ಜೊತೆ ಶಾಮೀಲು, ಕೋಟಿ ಕೋಟಿ ಲೂಟಿ ಆರೋಪ : ಸರ್ಕಾರದ ಅದೀನದ ಹಲವು ನಿಗಮಗಳಿಗೆ ಆರ್ಥಿಕ ಶಕ್ತಿ ಬರಲಿ ಎನ್ನೊ ಕಾರಣಕ್ಕೆ ನಿಮಗಗಳಿಂದ ಏನಾದ್ರು ಖರೀದಿ ಮಾಡಲು 20 ಲಕ್ಣದ ವರೆಗೆ ಟೆಂಡರ್ ಕರೆಯೊ ಅಗತ್ಯ ಇಲ್ಲ ಆದರೆ ಈ ಪ್ರಕರಣದಲ್ಲಿ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮದಿಂದ ಬರೊಬ್ಬರಿ ಐದು ಕೋಟಿ ವ್ಯವಹಾರ ಟೆಂಡರ್ ಇಲ್ಲದೆಯೇ ನಡೆದಿದೆ, ಅದು ಮಾರುಕಟ್ಟೆ ಬೆಲೆಯ ದುಪ್ಪಟ್ಟು ಬೆಲೆಗೆ ವಸ್ತುಗಳ ಖರೀದಿ ಹಿಂದೆ ಅವ್ಯವಹಾರ ದ ವಾಸನೆ ಬಡಿಯುತ್ತಿದೆ.

ಅಚ್ಚರಿಯ ಸಂಗತಿ ಎಂದರೆ ಜಿಲ್ಲೆಯಲ್ಲಿ 9 ಕೋಟಿ ಅನುದಾನ ಬಳಕೆ ಮಾಡಬೇಕು ಎನ್ನೊ ಕಾರಣಕ್ಕೆ ಜಿಲ್ಲೆಯ ಎಲ್ಲಾ ಹಾಸ್ಟೆಲ್ ಗಳ ಕಂಪ್ಯೂಟರ್ ಕೆಟ್ಟಿವೆ, ಏಕ ಕಾಲದಲ್ಲಿ ಗ್ಯಾಸ್ ಸ್ಟೌ ರಿಪೇರಿಗೆ ಬಂದಿವೆ, ಒಂದೇ ಬಾರಿಗೆ ಯುಪಿಎಸ್ ಗಳ ದುರಸ್ತಿ ಕಾರ್ಯ ನಡೆದಿದೆ ಅದು ಒಂದೊಂದು ದುರಸ್ತಿ ಗೆ ಹತ್ತು ಸಾವಿರ ಬಿಲ್ ನೀಡಲಾಗಿದ್ದು ಎಲ್ಲವೂ ಬಹುತೇಕ ಒಂದೇ ಏಜೆನ್ಸಿಗೆ ನೀಡಿರೋದು ಅನುಮಾನ ಮೂಡಿಸಿದ್ದು ಅಕ್ರಮ ‌ನಡೆದಿರೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ, ಇನ್ನು ಸಿಸಿ ಕ್ಯಾಮರಾಗಳ ಖರೀದಿ ಫ್ರಿಡ್ಜ್ ಖರೀದಿಯಲ್ಲೂ ಭಾರೀ ಗೋಲ್ಮಾಲ್ ಆಗಿದೆ ಮಾರುಕಟ್ಟೆಯಲ್ಲಿ ಗರಿಷ್ಠ 31 ಸಾವಿರಕ್ಕೆ ಸಿಗೋ ಎಲ್.ಜಿ.260 ಲೀಟರ್ ಫ್ರಿಡ್ಜ್ ಗೆ ಇವರು 58 ಸಾವಿರ ಕೊಟ್ಟು ಖರೀದಿ ಮಾಡಿ ಹಣವನ್ನು ನೀಡಿಯಾಗಿದೆ ಅಲ್ಲಿಗೆ ಜಿಲ್ಲೆಯಲ್ಲಿ ಬಳಕೆಯಾಗದೆ ಉಳಿದ ಹಾಸ್ಟೆಲ್‌  ಮಕ್ಕಳ ಹಣದಲ್ಲಿ ಅದಿಕಾರಿಗಳು ಹಬ್ಬ ಮಾಡಿದ್ದಾರೆ ಎನ್ನೋ ಅನುಮಾನ ದಟ್ಟವಾಗಿದ್ದು ತನಿಖೆಯಿಂದ ಸತ್ಯ ಬಯಲಾಗಬೇಕಿದೆ.

ಡಿಓ ಹಾಗು ಸಿಇಓ ವಿರುದ್ದ ಆರೋಪ : ಇಷ್ಟೊಂದು ದೊಡ್ಡ ಮೊತ್ತದ ಹಣದಲ್ಲಿ ವಸ್ತುಗಳ ಖರೀದಿ ಹಾಗು ಬಿಲ್ ಗಳನ್ನ‌ ನೋಡಿದ್ರೆ ಹಲವು ಬಿಲ್ ಗಳು ಬೋಗಸ್ ಎನ್ನೋ ಅನುಮಾನ ಮೂಡುತ್ತೆ ನಾಲ್ಕು ಸ್ಯಾನಿಟೈಝರ್ ಖರೀದಿ ಮಾಲಾಗಿದೆ ಎಂದು ಬಿಲ್ ತೋರಿಸೋ ಅದಿಕಾರಿಗಳು ಒಂದಕ್ಕೆ ಎರಡು ಸಾವಿರ ಬಿಲ್ ಮಾಡಿದ್ದಾರೆ, ಅದು ನಾಲ್ಲು ಲೀಟರಾ ಅಥವಾ ನಾಲ್ಲು ಬಾಕ್ಸಾ ಏನು ಎನ್ನೋ ಸ್ಪಷ್ಟನೆಯೇ ಇಲ್ಲಾ ,ಈ ಎಲ್ಲಾ ಅಕ್ರಮದ ಹಿಂದೆ ಇಲಾಖೆಯ ಜಿಲ್ಲಾ‌ ಅದಿಕಾರಿ ಹರ್ಷಾ ಕೈವಾಡ ಇದೆ, ಎಲ್ಲಾ ತಾಲ್ಲೂಕಟ್ಟದ ಅದಿಕಾರಿಗಳೂ ಹಾಗು ಜಿಪಂ ಸಿಇಓ ಕೂಡ ಇದರ ಹಿಂದೆ ಇರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು ತನಿಖೆಯ ಮೂಲಕ ಎಲ್ಲದಕ್ಕೂ ಉತ್ತರ ಹೇಳಬೇಕಿದೆ.

ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಸಾಕ್ಷೀಕರಿಸುವ ದಾಖಲೆಗಳು

ಈ ರೀತಿ ಅಕ್ರಮಗಳು ಹಿಂದಿನಿಂದಲೂ ನಡೆಯುತ್ತಿವೆ. ಇದರ ವಿರುದ್ಧ ಅನೇಕ ಬಾರಿ ಹೋರಾಟ ಮಾಡಿದ್ದೇವೆ. ಆ ಸಂದರ್ಭದಲ್ಲಿ ಕೇವಲ ಎಚ್ಚರಿಕೆಯನ್ನು ನೀಡಿ ಬಿಡುತ್ತಿರುವುದೇ ಇಷ್ಟೊಂದು ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳ ಅನ್ನಕ್ಕೆ ಖನ್ನ ಹಾಕುವ ಅಧಿಕಾರಗಳ ವಿರುದ್ದ ಕ್ರಮ ಜರುಗಿಸಬೇಕು. ಈ ಪ್ರಕರಣದ ತನಿಖೆಯನ್ನು ನಡೆಸಬೇಕು. ಭ್ರಷ್ಟಾಚಾರ ಎಸಗಿರುವವರಿಂದ ಹಣವನ್ನು ವಾಪಸ್‌ ಪಡೆಯಬೇಕು ಮತ್ತು ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಹಾಗೂ ವಿದ್ಯಾರ್ಥಿಗಳಿಗೆ ಸಿಗಬೇಕಾದ ಮೂಲ ಸೌಲಭ್ಯಗಳನ್ನು ನೀಡಬೇಕು ಎಂದು ಎಸ್‌.ಎಫ್‌.ಐ ಜಿಲ್ಲಾ ಕಾರ್ಯದರ್ಶಿ ರಮೇಶ್‌ ಕುಮಾರ್‌ ಆಗ್ರಹಿಸಿದ್ದಾರೆ. 

Donate Janashakthi Media

Leave a Reply

Your email address will not be published. Required fields are marked *