ಕೇರಳ: ಪ್ರತಿನಿತ್ಯ ಕೆಲವು ಬಿಜೆಪಿ ಸಂಸದರು ಸಂವಿಧಾನ ಬದಲಿಸುತ್ತೇವೆ ಎಂದು ಹೇಳುವುದನ್ನು ಕೇಳುತ್ತಿದ್ದೀರಿ. ಸಂವಿಧಾನವನ್ನು ಬದಲಾಯಿಸಲು ಆರೆಸ್ಸೆಸ್‌ಗೆ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ವೈನಾಡು ಸಂಸದ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.
ವೈನಾಡು ಜಿಲ್ಲಾ ಕೇಂದ್ರದ ಪಡಿಂಜರಥರ ಸೇರಿದಂತೆ ಅನೇಕ ಕಡೆ ರಾಹುಲ್ ಗಾಂಧಿ ಲೋಕಸಭಾ ಚುನಾವಣಾ ಉದ್ದೇಶದಿಂದ ಜಾಥಾ ನಡೆಸಿ, ಕಾಂಗ್ರೆಸ್ ಪರ ಮತಯಾಚಿಸಿದರು. ಜಾಥಾವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಸಾಂವಿಧಾನಿಕ ಸಂಸ್ಥೆಗಳು ಪ್ರಧಾನಿಯ ವೈಯಕ್ತಿಕ ಸ್ವತ್ತಲ್ಲ. ಪ್ರತಿಯೊಬ್ಬ ಭಾರತೀಯ ಪ್ರಜೆಯ ಆಸ್ತಿ. ಈ ಚುನಾವಣೆಯು ಸಂವಿಧಾನವನ್ನು ರಕ್ಷಿಸಲು ಬಯಸುವವರು ಮತ್ತು ಸಂವಿಧಾನವನ್ನು ನಾಶಮಾಡಲು ಬಯಸುವವರ ನಡುವಿನ ಹೋರಾಟವಾಗಿದೆ. ಇದು ಎರಡು ಸಿದ್ಧಾಂತಗಳ ನಡುವಿನ ಹೋರಾಟವಾಗಿದೆ ಎಂದು ಹೇಳಿದರು.
ಒಂದು ರಾಷ್ಟ್ರ, ಒಂದು ಭಾಷೆ ಮತ್ತು ಒಂದು ಸಂಸ್ಕೃತಿ ಎಂದು ಹೇಳುವ ಯಾವುದೇ ಭಾರತೀಯನಿಗೆ ಭಾರತ ಅರ್ಥವಾಗುವುದಿಲ್ಲ. ಒಬ್ಬ ನಾಯಕ, ಒಂದು ಭಾಷೆಯನ್ನೇ ಹೇರುವುದು ರಾಷ್ಟ್ರಕ್ಕೆ ಮಾಡಿದ ಅವಮಾನ. ಕೇರಳವನ್ನು ನಾಗ್ಪುರದಿಂದ ಏಕೆ ಆಳಬೇಕು. ಯಾರವರು?ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ರಾಹುಲ್ ಗಾಂಧಿ, ಕೇರಳವನ್ನು ಇಲ್ಲಿಂದ, ರಾಜ್ಯದ ಬೀದಿಗಳು ಮತ್ತು ಹಳ್ಳಿಗಳಿಂದ ಆಳಬೇಕು. ಸಾಂವಿಧಾನಿಕ ಸಂಸ್ಥೆಗಳು ಪ್ರಧಾನಿಯವರ ವೈಯಕ್ತಿಕ ಆಸ್ತಿಯಲ್ಲ. ಅವು ಪ್ರತಿಯೊಬ್ಬ ಭಾರತೀಯ ಪ್ರಜೆಯ ಆಸ್ತಿ ಎಂದು ರಾಹುಲ್ ಗಾಂಧಿ ತಿಳಿಸಿದರು.
ಇದನ್ನೂ ಓದಿ: ಕರ್ನಾಟಕ ರಾಷ್ಟ್ರೀಯ ಅಂತರರಾಷ್ಟ್ರೀಯ ಇತರೆ ವಿದ್ಯಮಾನ ಸಾರ್ವಜನಿಕರಿಗೆ ಕ್ಷಮೆಯಾಚಿಸಲು ಪತಂಜಲಿಯ ಬಾಬಾ ರಾಮ್‌ದೇವ್ ಸಿದ್ಧ
ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷದ ವಿಷಯವು ವಯನಾಡ್‌ಗೆ ದೊಡ್ಡ ಸಮಸ್ಯೆಯಾಗಿದೆ. ರಾತ್ರಿ ಸಂಚಾರ ನಿಷೇಧವೂ ಸಂಕಷ್ಟಕ್ಕೆ ಕಾರಣವಾಗುತ್ತಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ನಾವು ಬದ್ಧರಾಗಿದ್ದೇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಹಲವು ಬಾರಿ ಪತ್ರ ಬರೆದಿದ್ದೇನೆ. ಅವರ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸುತ್ತೇವೆ. ನಾವು ಕೇಂದ್ರದಲ್ಲಿ ಮತ್ತು ಕೇರಳದಲ್ಲಿ ಅಧಿಕಾರಕ್ಕೆ ಬರಲಿದ್ದೇವೆ ಎಂದು ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದರು.
ದೇಶದ ಒಗ್ಗಟ್ಟು, ಮತ್ತು ಏಕತೆಗಾಗಿ ಅಜ್ಜಿ ಇಂದಿರಾ ಗಾಂಧಿ ಮತ್ತು ತಂದೆ ರಾಜೀವ್ ಅವರ ತ್ಯಾಗವನ್ನು ಸ್ಮರಿಸಿದ ರಾಹುಲ್ ಗಾಂಧಿ, ಒಂದೆಡೆ, ಒಬ್ಬ ನಾಯಕ, ಒಂದು ಭಾಷೆ ಮತ್ತು ಒಂದು ರಾಷ್ಟ್ರದ ಕಲ್ಪನೆ ಇದೆ ಮತ್ತು ಇನ್ನೊಂದೆಡೆ ಭಾರತದ ಕಲ್ಪನೆಯಿದೆ. ಒಂದು ಭಾಷೆಯ ಕಲ್ಪನೆಯು ಪ್ರತಿಯೊಬ್ಬ ಕೇರಳೀಗನಿಗೆ ಅವಮಾನವಾಗಿದೆ. ಮಲಯಾಳಂ ಕೇವಲ ಒಂದು ಭಾಷೆಯಲ್ಲ, ಅದು ಸಂಸ್ಕೃತಿ ಮತ್ತು ಜೀವನ ವಿಧಾನವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಇದನ್ನೂ ನೋಡಿ: ಸ್ಕಿಂ ನೌಕರರ ಬದಕನ್ನು ಬೀದಿಗೆ ತಂದ ಬಿಜೆಪಿಯನ್ನು ಸೋಲಿಸುತ್ತೇವೆ – ಅಂಗನವಾಡಿ, ಬಿಸಿಯೂಟ, ಆಶಾ ನೌಕರರ ನಿರ್ಧಾರ