ರೋಹಿತ್ ಚಕ್ರತೀರ್ಥ ಬಂಧನಕ್ಕೆ ಕರವೇ ಆಗ್ರಹ

ಬೆಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಮರುಪರಿಷ್ಕರಣ ಸಮಿತಿಯನ್ನು ಸರ್ಕಾರ ಕೂಡಲೇ ರದ್ದುಪಡಿಸಿ ಹಿಂದಿನ ವರ್ಷದ ಪಠ್ಯವನ್ನೇ ಮಕ್ಕಳಿಗೆ ವಿತರಿಸಬೇಕು, ರಾಷ್ಟ್ರಕವಿ ಕುವೆಂಪು ಅವರನ್ನು, ನಾಡಗೀತೆಯನ್ನು, ಕನ್ನಡ ಧ್ವಜವನ್ನು ಅಪಮಾನಿಸಿರುವ ರೋಹಿತ್ ಚಕ್ರತೀರ್ಥ ಬಂಧಿಸಿ, ಗಡೀಪಾರು ಮಾಡಬೇಕೆಂದು ಆಗ್ರಹಿಸಿ ಕರವೇ ಇಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿತು.

ಈ ವೇಳೆ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ, ರಾಜ್ಯ ಸರ್ಕಾರವು ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯ ಪರಿಷ್ಕರಣ ಸಮಿತಿ ಸಿದ್ಧಪಡಿಸಿದ್ದ ಶಾಲಾ ಪಠ್ಯ ಪುಸ್ತಕಗಳನ್ನು ತರಾತುರಿಯಲ್ಲಿ ಮರು ಪರಿಷ್ಕರಿಸಲು ರೋಹಿತ್ ಚಕ್ರತೀರ್ಥ ಎಂಬುವವರ ನೇತೃತ್ವದಲ್ಲಿ ಪಠ್ಯ ಮರು ಪರಿಷ್ಕರಣ ಸಮಿತಿ ನೇಮಿಸಿ ಅದರ ಶಿಫಾರಸಿನ ಅನ್ವಯ ಭಾಷಾ ಪಠ್ಯ ಹಾಗೂ ಸಮಾಜ ವಿಜ್ಣಾನ ಪಠ್ಯಗಳಲ್ಲಿ ಖಂಡನಾರ್ಹ ಬದಲಾವಣೆ ತಂದಿರುತ್ತದೆ.

ಈಗ ಈ ಮರು ಪರಿಷ್ಕರಿಸಿದ ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ಹಂಚಲು ಸರ್ಕಾರ ಹೊರಟಿದೆ.‌ ಸರ್ಕಾರದ ಈ ಕ್ರಮ ಅತ್ಯಂತ ಬೇಜವಾಬ್ದಾರಿತನದಿಂದ ಕೂಡಿದ್ದು ಇದರಿಂದ ಲಕ್ಷಾಂತರ ಮಕ್ಕಳ ಭವಿಷ್ಯ ಮತ್ತು ಶಿಕ್ಷಣದ ‌ಮೇಲೆ ನಕಾರಾತ್ಮಕ ಪರಿಣಾಮಗಳಾಗಲಿವೆ ಎಂದರು.

ಮೊದಲನೆಯದಾಗಿ ಪಠ್ಯ ಪುಸ್ತಕಗಳಲ್ಲಿ ಯಾವುದೇ ಬದಲಾವಣೆ ತರುವುದನ್ನು ಯಾವುದೇ ಸರ್ಕಾರ ಮನಸಿಗೆ ಬಂದ ರೀತಿಯಲ್ಲಿ ಮಾಡುವಂತಿಲ್ಲ. ಅದಕ್ಕೆ ತನ್ನದೇ ರೀತಿ ನೀತಿ ಘನತೆಗಳಿರುತ್ತವೆ. ರಾಷ್ಟ್ರೀಯ ಪಠ್ಯ ಚೌಕಟ್ಟುಗಳ ಮಾರ್ಗಸೂಚಿಯಿರುತ್ತದೆ. ಸಂವಿಧಾನದ ತತ್ವಗಳಿಗೆ ಅನುಸಾರವಾಗಿ ಇಂತಹ ಸಮಿತಿಗಳನ್ನು ರಚಿಸಬೇಕಾಗಿರುತ್ತದೆ.‌ ಆದರೆ ರಾಜ್ಯ ಸರ್ಕಾರ ಮೇಲ್ನೋಟಕ್ಕೇ ಕಾಣುವಂತೆ ಎಲ್ಲಾ ರೀತಿ ನೀತಿಗಳನ್ನು ಗಾಳಿಗೆ ತೂರಿ ಯಾರದೋ ಅಜೆಂಡಾವನ್ನು ಶಿಕ್ಷಣದಲ್ಲಿ ತೂರಿಸಲು ಒಂದೇ ಸಿದ್ದಾಂತ ಸಂಘಟನೆಯ ಬೆಂಬಲಿಗರನ್ನು ಸಮಿತಿಯಲ್ಲಿ ಇರಿಸಿ ದುಂಡಾವರ್ತನೆ ಪ್ರದರ್ಶಿಸಿದೆ.‌

ಇದನ್ನೂ ಓದಿ : ಪಠ್ಯ ಪುಸ್ತಕದ ಪರಿಷ್ಕರಣೆ- ಅನುಮತಿ ಹಿಂಪಡೆದ ಮತ್ತಿಬ್ಬರು ಸಾಹಿತಿಗಳು

ಕನ್ನಡದ ಸಂಸ್ಕೃತಿ ಪರಂಪರೆಗೆ ತಕ್ಕುದಾಗಿ ಇದ್ದಂತಹ ಹಲವಾರು ಪಠ್ಯಗಳನ್ನು ಯಾವುದೇ ಕಾರಣ ನೀಡದೇ ತೆಗದು ಹಾಕಿದೆ. ಕನ್ನಡದ ಹೆಮ್ಮೆಯ ಸಾಹಿತಿ ಲೇಖಕರಾದ ಪಿ ಲಂಕೇಶ್, ಸಾರಾ ಅಬೂಬಕರ್, ಗೋರೂರು ರಾಮಸ್ವಾಮಿ ಅಯಂಗಾರ್, ಅರವಿಂದ ಮಾಲಗತ್ತಿ, ಬಿ ಟಿ ಲಲಿತಾನಾಯಕ್ ಮೊದಲಾದವರ ಮೌಲಿಕ ಪಠ್ಯಗಳನ್ನು ಕಿತ್ತುಹಾಕಿ ಕನ್ನಡ ಚಿಂತನೆಯನ್ನೇ ಅಪಮಾನಿಸಲಾಗಿದೆ. ಹತ್ತನೇ ತರಗತಿ ಸಮಾಜ ವಿಜ್ಞಾನ ಪಠ್ಯದಿಂದ ನಾರಾಯಣ ಗುರುಗಳ ಪಾಠ ತೆಗೆದು ಹಾಕಲಾಗಿದೆ. ಇವುಗಳ ಬದಲಿಗೆ ಸಂಘಪರಿವಾರದ ಸಿದ್ದಾಂತ ಸಂಘಟನೆಯ ಪರವಾದ ಪಠ್ಯಗಳನ್ನು ತುರುಕಲಾಗಿದೆ‌. ಆ ಪಾಠಗಳು ಕುವೆಂಪು ಹೇಳಿದ ವಿಶ್ವಮಾನವತೆ ವಿರುದ್ಧ ದಿಕ್ಕಿನಲ್ಲಿವೆ ಎಂದರು.

ಇನ್ನು ರಾಜ್ಯ ಸರ್ಕಾರ ನೇಮಿಸಿರುವ ಸಮಿತಿಯಲ್ಲಿ ಯಾವುದೇ ಶಿಕ್ಷಣ ತಜ್ಞರಿರುವುದಿಲ್ಲ. ಸ್ವತಃ ರೋಹಿತ್ ಚಕ್ರತೀರ್ಥ ಒಬ್ಬ ಕನ್ನಡ ವಿರೋಧಿ ಕಿಡಿಗೇಡಿ ಎಂಬುದನ್ನು ಹಲವಾರು ಸಲ ತೋರಿಸಿಕೊಂಡ ವ್ಯಕ್ತಿ. ಇವರನ್ನು ಸಮರ್ಥನೆ ಮಾಡಿಕೊಳ್ಳಲು ಶಿಕ್ಷಣ ಸಚಿವರು ಹಸಿ ಹಸಿ ಸುಳ್ಳು ಹೇಳಿ ರೋಹಿತ್ ಚಕ್ರತೀರ್ಥ ಒಬ್ಬ IIT, CET ಪ್ರೊಫೆಸರ್ ಎಂದು ಹೇಳಿ ಸ್ವತಃ ನಗೆಪಾಟಲಿಗೀಡಾಗಿದ್ದಾರೆ. ನಂತರವೂ ತಾನು ಉಪನ್ಯಾಸಕ ಎಂದೆಲ್ಲಾ ಸುಳ್ಳು ಹೇಳಿರುವ ರೋಹಿತ್ ಚಕ್ರತೀರ್ಥ ಕನಿಷ್ಟ ಯೋಗ್ಯತೆ ಇಲ್ಲದ ಅನರ್ಹ ವ್ಯಕ್ತಿ ಎಂದು ಕನ್ನಡಿಗರಿಗೆಲ್ಲಾ ತಿಳಿದಿದೆ. ಕನ್ನಡ ಬಾವುಟವನ್ನು ತನ್ನ ಒಳಚೆಡ್ಡಿಗೆ ಹೋಲಿಸಿ ಫೇಸ್‌ಬುಕ್‌ ನಲ್ಲಿ ಕನ್ನಡದ ಅಸ್ಮಿತೆಗಳನ್ನು ಲೇವಡಿ ಮಾಡಿರುವ ವ್ಯಕ್ತಿ ರೋಹಿತ್ ಚಕ್ರತೀರ್ಥ. ರಾಷ್ಟ್ರಕವಿ ಕುವೆಂಪು ಬರೆದಿರುವ ನಾಡಗೀತೆಯನ್ನು ವಿಕೃತಗೊಳಿಸಿ ಪ್ರಚಾರ ಮಾಡಿದ್ದಲ್ಲದೇ ಅನೇಕ ಸಲ ಕುವೆಂಪು ಮತ್ತು ತೇಜಸ್ವಿ ಅವರನ್ನು “ಬ್ರಾಹ್ಮಣ ವಿರೋಧಿ” ಎಂದು ಬಿಂಬಿಸಿ ಬ್ರಾಹ್ಮಣರನ್ನು ರಾಷ್ಟ್ರಕವಿಯ ವಿರುದ್ದ ಎತ್ತಿ ಕಟ್ಟಿರುವ ಹಿನ್ನೆಲೆ ಈ ವ್ಯಕ್ತಿಗಿದೆ. ಇಂತಹ ಒಬ್ಬ ಕನ್ನಡ ದ್ವೇಷಿ ವ್ಯಕ್ತಿಗೆ ಒಂದು ಸರ್ಕಾರ ಜವಾಬ್ದಾರಿಯುತ ಹುದ್ದೆ ನೀಡುವುದೇ ಅತ್ಯಂತ ಖಂಡನಾರ್ಹ. ರಾಷ್ಟ್ರಕವಿ ಕುವೆಂಪು ಅವರನ್ನು, ನಾಡಗೀತೆಯನ್ನು, ಕನ್ನಡ ಧ್ವಜವನ್ನು ಅಪಮಾನಿಸಿರುವ ರೋಹಿತ್ ಚಕ್ರತೀರ್ಥ ಬಂಧಿಸಿ, ಗಡೀಪಾರು ಮಾಡಬೇಕೆಂದು ಕರ್ನಾಟಕ ರಕ್ಷಣಾ‌ ವೇದಿಕೆ ಆಗ್ರಹಿಸುತ್ತದೆ ಎಂದರು.

ಇಂತಹ ಒಬ್ಬ ಅಯೋಗ್ಯ ವ್ಯಕ್ತಿಯ ಮೂಲಕ ಮಕ್ಕಳು ಓದುವ ಪಠ್ಯ ಪುಸ್ತಕ ಬದಲಾಯಿಸಲು ಅವಕಾಶ ಮಾಡಿರುವುದಕ್ಕೆ ಸರ್ಕಾರ ಕನ್ನಡಿಗರ ಬಳಿ ಕ್ಷಮೆ ಯಾಚಿಸಬೇಕಲ್ಲದೇ ಕೂಡಲೇ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಮರು ಪರಿಷ್ಕರಣ ಸಮಿತಿಯನ್ನು ರದ್ದುಪಡಿಸಿ ಆದೇಶ ಹೊರಡಿಸಬೇಕು‌ ಎಂದು ಒತ್ತಾಯಿಸಿದರು.

ಯಾವುದೇ ಸಂವಿಧಾನಬದ್ಧ ರೀತಿ ನೀತಿ ಅನುಸರಿಸದೇ ರಚನೆಯಾದ ಈ ಸಮಿತಿ ನೀಡಿರುವ ಎಲ್ಲಾ ಶಿಫಾರಸುಗಳನ್ನು ಅಸಿಂಧುಗೊಳಿಸಿ ಅಂತಹ ಯಾವುದೇ ಶಿಫಾರಿಸನ ಮೂಲಕ ಯಾವುದೇ ಪಠ್ಯದಲ್ಲಿ ಬದಲಾವಣೆ ತಂದಿದ್ದರೂ ಅದನ್ನು ಸರ್ಕಾರ ಹಿಂಪಡೆದುಕೊಳ್ಳಬೇಕು. ಬದಲಿಗೆ ಈ ಹಿಂದೆ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಯಾವ ಯಾವ ಪರಿಷ್ಕರಣೆಗಳನ್ನು ಮಾಡಲಾಗಿತ್ತೋ ಅದೇ ಪ್ರಕಾರ ಕಳೆದ ವರ್ಷದ ಪಠ್ಯಕ್ರಮದ ಪ್ರಕಾರವೇ ಮಕ್ಕಳಿಗೆ ಪುಸ್ತಕ ರಚಿಸಿ ಹಂಚಬೇಕು.

ಒಂದೊಮ್ಮೆ ಸರ್ಕಾರಕ್ಕೆ ಪಠ್ಯ ಪರಿಷ್ಕರಣೆ ಅಗತ್ಯ ಎನಿಸಿದ್ದರೆ ಅದಕ್ಕೆ ಸೂಕ್ತ ರೀತಿ ನೀತಿ ಪಾಲಿಸಿ, ಅರ್ಹರ ಪರಿಶೀಲನಾ ಸಮಿತಿಯನ್ನು ನೇಮಿಸಲಿ‌. ಬರಗೂರು ರಾಮಚಂದ್ರಪ್ಪನವರ ಸಮಿತಿಯ ಪರಿಷ್ಕರಣ ಕುರಿತು ಮೊದಲು ವರದಿ ತಯಾರಿಸಿಕೊಂಡು ಆ ವರದಿಯಲ್ಲಿ ಪರಿಷ್ಕರಣೆ ಅಗತ್ಯ ಎಂದು ಕಂಡು ಬಂದರೆ ಮಾತ್ರ ಮರು ಪರಿಷ್ಕರಣೆಗೆ ಬೇರೆ ಸಮಿತಿ ನೇಮಕಕ್ಕೆ ಮುಂದಾಗಲಿ. ಈ ಮಾರ್ಗವನ್ನು ಹೊರತುಪಡಿಸಿದ ಯಾವುದೇ ತರಾತುರಿಯ ಮಾರ್ಗ ಒಪ್ಪತಕ್ಕದ್ದಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಭಾವಿಸುತ್ತದೆ ಎಂದು ಹೇಳಿದರು.

ಸರ್ಕಾರಗಳು ಯಾರದೋ ಸಿದ್ದಾಂತ, ಸಂಘಟನೆ, ಸ್ವಾರ್ಥಕ್ಕೆ ಕನ್ನಡಿಗರ ಭಾವನೆಗಳ ಜೊತೆಗೆ ಆಟ ಆಡುವುದನ್ನು ನಾವು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಸರ್ಕಾರಗಳು ಮೊಂಡುತನಕ್ಕೆ ಬಿದ್ದರೆ ಕನ್ನಡಿಗರು ತಕ್ಕ ರೀತಿಯಲ್ಲಿ ಪಾಠ ಕಲಿಸಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.

Donate Janashakthi Media

Leave a Reply

Your email address will not be published. Required fields are marked *