ಸವದತ್ತಿಯಲ್ಲಿ ಎಪಿಎಂಸಿ ಹಮಾಲಿ ಕಾರ್ಮಿಕರ 3ನೇ ರಾಜ್ಯ ಸಮಾವೇಶ| ಎಪಿಎಂಸಿ ಹಮಾಲಿ ಕಾರ್ಮಿಕರಿಗೆ ನಿವೃತ್ತಿ ಪರಿಹಾರಕ್ಕೆ ಒತ್ತಾಯ

ಸವದತ್ತಿ: ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ (ಸಿಐಟಿಯು) ನೇತೃತ್ವದಲ್ಲಿ ಎಪಿಎಂಸಿ ಹಮಾಲಿ ಕಾರ್ಮಿಕರ 3ನೇ ರಾಜ್ಯ ಸಮಾವೇಶ ನವೆಂಬರ್ 29ರಂದು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.

ಎಪಿಎಂಸಿಯಲ್ಲಿ ದುಡಿಯುವ 60 ವರ್ಷ ಪೂರೈಸಿದ ಹಮಾಲಿ ಕಾರ್ಮಿಕರಿಗೆ ಕನಿಷ್ಟ ಒಂದು ಲಕ್ಷ ನಿವೃತ್ತಿ ಪರಿಹಾರ ನೀಡುವುದು ಸೇರಿದಂತೆ ವಸತಿ, ಭವಿಷ್ಯನಿಧಿ ಯೋಜನೆ, ಕನಿಷ್ಟ ವೇತನ ಮುಂತಾದ ಸೌಲಭ್ಯಗಳನ್ನು ಜಾರಿಮಾಡಲು ಹಾಗೂ ಈ ಹಿಂದಿನ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ರದ್ದುಪಡಿಸಲು ಸಮಾವೇಶ ಸರಕಾರವನ್ನು ಒತ್ತಾಯಿಸಿತು.

ಇದನ್ನೂ ಓದಿ:ಹಮಾಲಿ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಕಲ್ಪಿಸಿ – ಹಮಾಲಿ ಕಾರ್ಮಿಕ ಫೆಡರೇಷನ್ ಆಗ್ರಹ

ಸರಕಾರ ಬದ್ದವಾಗಿದೆ:

ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರ ಅನುಪಸ್ಥಿತಿಯಲ್ಲಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸವದತ್ತಿ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ ನಮ್ಮ ಸರಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ವಾಪಸ್ಸು ಪಡೆದು ಮೊದಲಿನಂತೆ ಎಪಿಎಂಸಿ ವ್ಯವಸ್ಥೆಯನ್ನು ಮರುಸ್ಥಾಪಿಸಲು ಬದ್ದವಾಗಿದೆ. ನಾನು ಬಾಲ್ಯದಿಂದಲೇ ಹಮಾಲಿ ಕಾರ್ಮಿಕರೊಂದಿಗೆ ಒಡನಾಟ ಇದ್ದವನು ಅವರ ಸಂಕಷ್ಟಗಳ ಬಗ್ಗೆ ನನಗೆ ಅರಿವಿದೆ. ಅವರ ಬೇಡಿಕೆಗಳ ಕುರಿತು ಸರಕಾರ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರೊಂದಿಗೆ ಮಾತನಾಡಿ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನ ಮಾಡುವೆ ಎಂದರು.

ಕಾರ್ಪೋರೇಟ್ ಕಂಪನಿಗಳಿಗೆ ಸ್ವಾತಂತ್ರ್ಯ:

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ್ ಮಾತನಾಡಿ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಮೋದಿ ಸರಕಾರ ಸ್ವಾತಂತ್ರ್ಯ ನೀಡಿದೆ ಎಂದು ಕೇಂದ್ರ ಕೃಷಿ ಸಚಿವರು ಜಂಬಕೊಚ್ಚಿಕೊಂಡಿದ್ದರು. ಆದರೇ ವಾಸ್ತವ ಏನೆಂದರೆ ಕೃಷಿ ಕ್ಷೇತ್ರದಲ್ಲಿ ಲೂಟಿ ಮಾಡಲು ಕಾರ್ಪೋರೇಟ್ ಕಂಪನಿಗಳಿಗೆ ಮೋದಿ ಸರಕಾರ ಸ್ವಾತಂತ್ರ್ಯ ನೀಡಿದೆ. ರಾಜ್ಯದಲ್ಲಿ ಈ ಹಿಂದಿನ ಬಿಜೆಪಿ ಸರಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಮಾಡಿದ್ದರಿಂದ ಎಪಿಎಂಸಿಗಳು ಇಂದು ಸ್ಮಶಾನಗಳಾಗಿ ಮಾರ್ಪಡುತ್ತಿವೆ. ಜನವಿರೋಧಿ ಕೇಂದ್ರದ ನೀತಿಗಳ ವಿರುದ್ದ ರೈತ ಕಾರ್ಮಿಕರು ನವೆಂಬರ್‌ನಲ್ಲಿ ನಡೆಸುವ ಹೋರಾಟವನ್ನು ಯಶಸ್ವಿಗೊಳಿಸಲು ಮುಂದಾಗೋಣ ಎಂದರು.

ಇದನ್ನೂ ಓದಿ:ಹಮಾಲಿ ಕಾರ್ಮಿಕರಿಂದ ಬೃಹತ್ ಬೆಳಗಾವಿ ಚಲೋಗೆ ಕರೆ

ಹೋರಾಟ ನಮ್ಮ ಬದುಕು ರೂಪಿಸುತ್ತದೆ:

ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷರಾದ ಕೆ. ಮಹಾಂತೇಶ್ ಮಾತನಾಡಿ ಸಂಘಟಿತ ಹೋರಾಟಗಳಿಂದ ಮಾತ್ರ ನಮ್ಮ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯ. ನಮ್ಮ ಹೋರಾಟದ ಫಲವಾಗಿ ಹಲವಾರು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಿದೆ. ನೆನಗುದಿಗೆ ಬಿದ್ದಿರುವ ನಮ್ಮ ನ್ಯಾಯೋಚಿತವಾದ ಬೇಡಿಕೆಗಳನ್ನು ಪಡೆಯಲು ಹಮಾಲಿ ಕಾರ್ಮಿಕರ ಬಲಿಷ್ಠವಾದ ಚಳುವಳಿ ಕಟ್ಟಲು ಈ ಸಮಾವೇಶ ಸ್ಪೂರ್ತಿಯಾಗಲಿ ಎಂದರು.

ದುಡಿಯುವ ಜನರ ಮಹಾಧರಣಿ ಯಶಸ್ವಿಗೆ ಕರೆ:

ಎಪಿಎಂಸಿ ಉಪಸಮಿತಿ ಸಂಚಾಲಕ ನಿರುಪಾದಿ ಬೆಣಕಲ್ ಮಂಡಿಸಿದ ಕರಡು ಘೋಷಣೆ ಮೇಲೆ ಚರ್ಚೆ ನಡೆದ ನಂತರ ಸಮಾವೇಶ ನಿರ್ಣಯಗಳನ್ನು ಅಂಗಿಕರಿಸಿ, ಎಪಿಎಂಸಿ ಹಮಾಲಿ ಕಾರ್ಮಿಕರ ಬೇಡಿಕೆಗಳ ಕುರಿತು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರ ಅಧ್ಯಕ್ಷತೆಯಲ್ಲಿ ಕೂಡಲೆ ಸಭೆ ನಡೆಸಿ ಚರ್ಚೆ ನಡೆಸಿ ಕ್ರಮವಹಿಸಬೇಕು ಎಂದು ಒತ್ತಾಯಿಸಲಾಗಿದೆ.

ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಪ್ರಸ್ತಾವಿಕವಾಗಿ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ ಪೂಜೇರ, ಕೃಷಿ ಮಾರಾಟ ಮಂಡಳಿ ಕಲಬುರ್ಗಿ ವಿಭಾಗೀಯ ಪ್ರಧಾನ ವ್ಯವಸ್ಥಾಪಕ ಡಾ. ಜಿ.ಕೆ. ವೆಂಕಟೇಶ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೈಬು ಜೈನೇಖಾನ್ ಮಾತನಾಡಿದರು.

ವರ್ತಕರ ಸಂಘದ ಅಧ್ಯಕ್ಷರಾದ ಮದನಲಾಲ್ ಛೋಪ್ರಾ, ವ್ಯಾಪಾರಸ್ಥರಾದ ಸದಾಶಿವ ಕೌಜಲಗಿ, ಬಸವರಾಜ ಕಾರದಗಿ, ಚಂದ್ರು ಶ್ಯಾಮರಾಯನವರ, ಸಂಗಯ್ಯ ವಡೆಯರ, ಬಸಣ್ಣ ಹೂಲಿಕಟ್ಟಿ, ರೈತ ಕಾರ್ಮಿಕ ಮುಖಂಡರಾದ ಎಲ್.ಎಸ್. ನಾಯಕ, ಎಪಿಎಂಸಿ ಕಾರ್ಯದರ್ಶಿ ಕೃಷ್ಣಾನಂದ ನಾಯಕ, ಮುಖಂಡರಾದ ಟಿ. ತಿಪ್ಪೇಸ್ವಾಮಿ, ನಿಂಗಣ್ಣ, ಗುರುಸಿದ್ದಪ್ಪ ಅಂಬಿಗೇರ, ಬಸವಣ್ಣೇಪ್ಪ ನೀರಲಗಿ, ಟಿ. ನಭಿಸಾಬ, ಕಲ್ಲಪ್ಪ ಕಡಬಲ್ಲನವರ, ಎಚ್. ತಿಪ್ಪಯ್ಯ, ಯಂಕಪ್ಪ ಕೆಂಗಲ್, ಮರಿಸ್ವಾಮಿ, ಕೃಷ್ಣಪ್ಪ ನಾಯಕ, ಅಣ್ಣಪ್ಪ ಪೂಜಾರಿ, ಗೀತಾ ಚಕ್ರಸಾಲಿ, ನಾಗರಾಜ ಮಾದರ, ಸಿದ್ದಪ್ಪ ನಡುವಿನಹಳ್ಳಿ, ಮಲ್ಲಿಕಸಾಬ ಬಾಗೂಜಕೊಪ್ಪ ಮುಂತಾದವರು ಉಪಸ್ಥಿತರಿದ್ದರು. ರಾಜ್ಯದ ವಿವಿಧ ಎಪಿಎಂಸಿಗಳಿಂದ ಹದಿನೈದು ನೂರರಷ್ಟು ಹಮಾಲಿ ಕಾರ್ಮಿಕರು ಭಾಗವಹಿಸಿದ್ದರು.

ಬೇಡಿಕೆಗಳು:

  • ಹಮಾಲಿ ಕಾರ್ಮಿಕರ ಬೇಡಿಕೆಗಳು ಸೇರಿದಂತೆ ರೈತ ಕಾರ್ಮಿಕರ ಬೇಡಿಕೆಗಳ ಕುರಿತು ನವೆಂಬರ್ 06 ರಿಂದ 20 ರವರೆಗೆ ಎಲ್ಲ ಕೃಷಿ ಮಾರುಕಟ್ಟೆಗಳಲ್ಲಿ ಪ್ರಚಾರ ಸಭೆಗಳನ್ನು ನಡೆಸುವುದು.
  • ನವೆಂಬರ್ 20 ರಂದು ಎಲ್ಲ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸುವುದು
  • ನವೆಂಬರ್ 27-28 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ರೈತರು ಕಾರ್ಮಿಕರು ನಡೆಸುತ್ತಿರುವ ದೇಶವ್ಯಾಪಿ ಮಹಾ ಧರಣಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವುದು.
  • 2023 ಡಿಸೆಂಬರ್ ಹಾಗೂ 2024ರ ಜನವರಿಯಲ್ಲಿ ಜಿಲ್ಲಾ ಮಟ್ಟದ ಎಪಿಎಂಸಿ ಕಾರ್ಮಿಕರ ಸಮಾವೇಶಗಳನ್ನು ನಡೆಸುವುದು ಮತ್ತು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುವುದು.
  • 2024ರ ಬಜೆಟ್ ಪೂರ್ವದಲ್ಲಿ ರಾಜ್ಯಾದ್ಯಂತ ಬೇಡಿಕೆಗಳ ಈಡೇರಿಸಲು ಹೋರಾಟ ಸಂಘಟಿಸುವುದು.

ವಿಡಿಯೋ ನೋಡಿ:ರೈತ, ಕಾರ್ಮಿಕ, ದಲಿತ, ಕೂಲಿಕಾರರ, ಮಹಿಳೆಯರ ಹಕ್ಕುಗಳಿಗಾಗಿ ಮಹಾಧರಣಿ Janashakthi Media

Donate Janashakthi Media

Leave a Reply

Your email address will not be published. Required fields are marked *