ಹಾವೇರಿ: ರಾಜ್ಯ ರಾಜಕಾರಣದಲ್ಲಿ ಪದೇಪದೇ ಭಾರೀ ರಾಜಕೀಯ ದೊಂಬರಾಟಕ್ಕೆ ಕಾರಣವಾಗುತ್ತಿದ್ದ ರೆಸಾರ್ಟ್ ರಾಜಕಾರಣ ಈಗ ಗ್ರಾಮ ಪಂಚಾಯಿತಿ ಅಧ್ಯಕ್ಷರ ಸ್ಥಾನಕ್ಕೂ ಬಂದು ನಿಂತಿದೆ. ಗ್ರಾಮ ಪಂಚಾಯತಿಯೊಂದರ 9 ಸದಸ್ಯರು ಬರೋಬ್ಬರಿ 40 ದಿನ ಬೆಂಗಳೂರಿನ ರೆಸಾರ್ಟ್ ನಲ್ಲಿ ಉಳಿದುಕೊಂಡು ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ದಿನ ವಿಮಾನದಲ್ಲಿ ವಾಪಸ್ಸಾಗಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮ ಪಂಚಾಯಿತಿಯು ಒಟ್ಟು 13 ಸದಸ್ಯರನ್ನು ಒಳಗೊಂಡಿದೆ. ಪಂಚಾಯಿತಿ ಹಾಲಿ ಅಧ್ಯಕ್ಷ ಮಾಲತೇಶ್ ದುರಗಪ್ಪ ನಾಯರ್ ಅಧಿಕಾರ ವಹಿಸಿಕೊಂಡ ವೇಳೆ ಆಡಳಿತಾವಧಿ ವಿಚಾರದಲ್ಲಿ ನಡೆದ ಒಪ್ಪಂದದಂತೆ 15 ತಿಂಗಳು ಅಧಿಕಾರ ನಡೆಸುವುದಾಗಿ ತಿಳಿಸಿದ್ದರು. ನಂತರ ಆ ಸ್ಥಾನವನ್ನು ಬಿಟ್ಟುಕೊಡುವುದಾಗಿಯೂ ತಿಳಿಸಿದ್ದರು. ಸುರೇಶ್ ತಳಗೇರಿ ಎಂಬುವರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡೋದಾಗಿ ಪ್ರಮಾಣ ಕೂಡಾ ಮಾಡಿದ್ದರು. ಆದರೆ ಮಾಲತೇಶ್ 15 ತಿಂಗಳ ನಂತರ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡದೆ ಸತಾಯಿಸುತ್ತಿದ್ದ. ಹೀಗಾಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಸದಸ್ಯರು ನಿರ್ಧರಿಸಿದ್ದಾರೆ.
ಗ್ರಾಮ ಪಂಚಾಯತಿ ಸದಸ್ಯರು ಬೆಂಗಳೂರಿನ ರೆಸಾರ್ಟ್ ನಲ್ಲಿ 40 ದಿನಗಳನ್ನು ಕಳೆದು, ನಾವು ಯಾರಿಗೂ ಕಮ್ಮಿ ಇಲ್ಲವೆಂಬಂತೆ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಅಲ್ಲಿಂದ ಗ್ರಾಮ ಪಂಚಾಯಿತಿಗೆ ಬಂದ ಪಂಚಾಯಿತಿ ಸದಸ್ಯರ ಗತ್ತು ನೋಡುಗರಿಗೆ ಗಮ್ಮತ್ತು ತರಿಸುವಂತಿತ್ತು. ದೇವರಗುಡ್ಡದ ಗ್ರಾಮ ಪಂಚಾಯತಿ ಅಧ್ಯಕ್ಷ ಮಾಲತೇಶ ದುರಗಪ್ಪ ನಾಯರ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಗ್ರಾಮ ಪಂಚಾಯತಿ ಸದಸ್ಯರು ನಿರ್ಧರಿಸಿ, ಕಾನೂನಿನ ಪ್ರಕಾರ ಅವಿಶ್ವಾಸ ನಿರ್ಣಯ ಮಂಡನೆ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಇಂದು ಸ್ವಗ್ರಾಮಕ್ಕೆ ಆಗಮಿಸಿದರು.
ಒಟ್ಟು 13 ಜನ ಗ್ರಾ.ಪಂ ಸದಸ್ಯರಲ್ಲಿ 9 ಸದಸ್ಯರು ಸಂತೋಷ್ ಭಟ್ ಗುರೂಜಿ ಬಣದವರು, ಇನ್ನುಳಿದ ನಾಲ್ವರು ಬಿಜೆಪಿ ಸದಸ್ಯರಾಗಿದ್ದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಾಲತೇಶ್ ಮಾತಿಗೆ ತಪ್ಪಿದ ಕಾರಣ ಅವಿಶ್ವಾಸ ನಿರ್ಣಯಕ್ಕೆ ನಿರ್ಧಾರ ಮಾಡಲಾಗಿತ್ತು. ಆದರೆ ಮಾಲತೇಶ್ ಸದಸ್ಯರನ್ನು ಹೈಜಾಕ್ ಮಾಡಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಸಂತೋಷ್ ಭಟ್ ಗುರೂಜಿ ಗ್ರಾಮ ಪಂಚಾಯ್ತಿ ಸದಸ್ಯರನ್ನು ಬೆಂಗಳೂರಿನ ರೆಸಾರ್ಟ್‍ಗೆ ಕಳಿಸಿಕೊಟ್ಟಿದ್ದರು.
ಅವಿಶ್ವಾಸ ನಿರ್ಣಯ ಮಂಡನೆ ಪ್ರಕ್ರಿಯೆಯಲ್ಲಿ ಗ್ರಾ.ಪಂ ಸದಸ್ಯರು ಭಾಗಿಯಾಗಿದ್ದು, ತಾಲೂಕು ಉಪ ವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಅವಿಶ್ವಾಸ ನಿರ್ಣಯ ಮಂಡನೆ ಪ್ರಕ್ರಿಯೆ ನಡೆಸಿದ್ದಾರೆ. ಹೊಸ ಅದ್ಯಕ್ಷರ ಆಯ್ಕೆ ಪ್ರಕ್ರಿಯೆ ಬಾಕಿ ಉಳಿದಿದೆ. ಒಟ್ಟಾರೆಯಾಗಿ ಆಪರೇಶನ್ ಕಮಲದ ಮಾದರಿಯಲ್ಲೇ ಆಪರೇಶನ್ ಗ್ರಾಮ ಪಂಚಾಯಿತಿ ಆಗಿದೆ.