ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.1ರಷ್ಟು ಮೀಸಲಾತಿ

ಬೆಂಗಳೂರು : ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರದ ಎಲ್ಲಾ ಉದ್ಯೋಗಗಳಲ್ಲಿಯೂ ಶೇಕಡ 1ರಷ್ಟು ಹುದ್ದೆಗಳನ್ನು ಮೀಸಲಿಡುವುದಾಗಿ ಮಾಹಿತಿ ನೀಡಿರುವ ರಾಜ್ಯ ಸರ್ಕಾರ, ಈಗಾಗಲೇ ಕರಡು ಅಧಿಸೂಚನೆಯನ್ನು ಹೊರಡಿಸಿದ್ದೇವೆ ಎಂದು ಹೈಕೋರ್ಟ್​ಗೆ ತಿಳಿಸಿದೆ.

ಲಿಂಗತ್ವ ಅಲ್ಪಸಂಖ್ಯಾತರಿಗೆ ಹಾಗೂ ಹೆಚ್‍ಐವಿ ಪೀಡಿತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಂಗಮ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಇಂದು ರಾಜ್ಯ ಸರ್ಕಾರ ಈ ಮಾಹಿತಿ ನೀಡಿದೆ.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಿದ್ದ ವಕೀಲ ವಿಜಯಕುಮಾರ್ ಪಾಟೀಲ್ ಅವರು ಪೀಠಕ್ಕೆ ಮಾಹಿತಿ ನೀಡಿ, ಸುಪ್ರೀಂ ಕೋರ್ಟ್ ನಿರ್ದೇಶದನಂತೆ ಸರ್ಕಾರದ ಎಲ್ಲ ಹುದ್ದೆಗಳಲ್ಲಿಯೂ ಶೇ.1ರಷ್ಟು ಹುದ್ದೆಗಳನ್ನು ಲಿಂಗತ್ವ ಅಲ್ಪಸಂಖ್ಯಾತರಿಗೆ ಮೀಸಲಿಡಲು ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಕರ್ನಾಟಕ ನಾಗರಿಕ ಸೇವಾ ನೇಮಕಾತಿ ನಿಯಮ-1977ರ ನಿಯಮ 9ಕ್ಕೆ ತಿದ್ದುಪಡಿ ತಂದು 1(ಡಿ)ಯನ್ನು ಸೇರ್ಪಡೆ ಮಾಡಲಾಗುತ್ತಿದೆ. ಈ ಕುರಿತಂತೆ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಕರಡು ಅಧಿಸೂಚನೆಗೆ ಆಕ್ಷೇಪಣೆಗಳನ್ನು ಸ್ವೀಕರಿಸಿದ ಬಳಿಕ ಅಂತಿಮಗೊಳಿಸಲಾಗುವುದು ಎಂದು ವಿವರಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ಮುಂದಿನ ವಿಚಾರಣೆ ವೇಳೆ ಈ ಕುರಿತಂತೆ ಆದ ಬೆಳವಣಿಗೆಗಳ ಮಾಹಿತಿ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಜುಲೈ 20ಕ್ಕೆ ಮುಂದೂಡಿತು.

ಅರ್ಜಿದಾರರ ಕೋರಿಕೆ: ಸುಪ್ರೀಂಕೋರ್ಟ್ 2014ರಲ್ಲಿ ನೀಡಿರುವ ತೀರ್ಪಿನ ಅನುಸಾರ ಮತ್ತು ರಾಜ್ಯ ಸರ್ಕಾರದ ಟ್ರಾನ್ಸ್​ಜೆಂಡರ್ ನೀತಿ-2017 ಹಾಗೂ ಕೇಂದ್ರ ಸರ್ಕಾರದ ತೃತೀಯಲಿಂಗಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019ರ ಅನುಸಾರ ತೃತೀಯ ಲಿಂಗಿಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲು ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

Donate Janashakthi Media

One thought on “ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.1ರಷ್ಟು ಮೀಸಲಾತಿ

Leave a Reply

Your email address will not be published. Required fields are marked *