ಬೆಂಗಳೂರು: ಸಚಿವ ಆನಂದ್ ಸಿಂಗ್ ಮತ್ತು ಕಾಂಗ್ರೆಸ್ ಶಾಸಕ ಕಂಪ್ಲಿ ಗಣೇಶ್ ನಡುವಿನ ಹಲ್ಲೆ ಪ್ರಕರಣವು ರಾಜಿ ಸಂಧಾನ ಏರ್ಪಟ್ಟಿದ್ದರಿಂದಾಗಿ ಕರ್ನಾಟಕ ಹೈಕೋರ್ಟ್ ಪ್ರಕರಣವನ್ನು ರದ್ದುಪಡಿಸಿದೆ.
ಬಿಜೆಪಿಯ ʼಆಪರೇಷನ್ ಕಮಲʼ ವಿಫಲಗೊಳಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷವು ತನ್ನ ಶಾಸಕರನ್ನು ಬೆಂಗಳೂರಿನ ಬಿಡದಿ ಬಳಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ಇರಿಸಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್‌ನಲ್ಲಿದ್ದ ಆನಂದ್ ಸಿಂಗ್ ಮತ್ತು ಗಣೇಶ್ ನಡುವೆ ಮಾರಾಮಾರಿ ನಡೆದಿತ್ತು. ಘಟನೆಯಲ್ಲಿ ಆನಂದ್ ಸಿಂಗ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ನೇತೃತ್ವದ ಏಕ ಸದಸ್ಯ ಪೀಠವು ಹಲ್ಲೆ ಪ್ರಕರಣದಲ್ಲಿ ಕೊಲೆ ಯತ್ನ ಆರೋಪ ಅನ್ವಯವಾಗುವುದಿಲ್ಲ. ಅಲ್ಲದೇ, ಆರೋಪಿ ಗಣೇಶ್ ಮತ್ತು ಹಲ್ಲೆಗೊಳಗಾದ ಆನಂದ್ ಸಿಂಗ್ ನಡುವೆ ಸಂಧಾನ ಆಗಿರುವ ಹಿನ್ನೆಲೆಯಲ್ಲಿ ಪ್ರಕರಣ ರದ್ದುಪಡಿಸಲಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಬಿಜೆಪಿಯ ಆಪರೇಷನ್ ಕಮಲ ತಡೆಯೊಡ್ಡುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರನ್ನು 2019ರ ಜನವರಿ 18ರಿಂದ ಕೆಲವು ದಿನಗಳ ಕಾಲ ಈಗಲ್‌ಟನ್ ರೆಸಾರ್ಟ್‌ನಲ್ಲಿ ಇರಿಸಲಾಗಿತ್ತು. 2019 ಜನವರಿ 19ರ ರಾತ್ರಿ ಗಣೇಶ್ ಹಾಗೂ ಆನಂದ್ ಸಿಂಗ್ ನಡುವೆ ಮಾರಾಮಾರಿ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆನಂದ್ ಸಿಂಗ್ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಗಣೇಶ್ ವಿರುದ್ಧ ಕೊಲೆ ಯತ್ನದಡಿ ಎಫ್‌ಐಆರ್ ದಾಖಲಿಸಿದ್ದರು.